ಭಾನುವಾರ, ಡಿಸೆಂಬರ್ 15, 2019
17 °C

ಶಾಂತಿಗಾಗಿ ಪಾದಯಾತ್ರೆ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಂತಿಗಾಗಿ ಪಾದಯಾತ್ರೆ: ದೇವೇಗೌಡ

ಹಾಸನ: ‘ಒಂದೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಹತ್ತೂವರೆ ತಿಂಗಳು ದೇಶದ ಪ್ರಧಾನಿಯಾಗಿದ್ದ ವೇಳೆ, ಮಂಗಳೂರು ಘಟನೆಯಂಥ ಒಂದೇ ಒಂದು ಘಟನೆಗೆ ಅವಕಾಶ ನೀಡಿರಲಿಲ್ಲ’ ಎಂದು ಸಂಸದ ಎಚ್.ಡಿ.ದೇವೇಗೌಡ ಬುಧವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಮುಖ್ಯಮಂತ್ರಿ ಆಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದೆ. ಆಗಲೂ ಆರ್ಎಸ್ಎಸ್, ಬಜರಂಗದಳ ಸಂಘಟನೆಗಳು ಇದ್ದವು. ಆಗ ಸಣ್ಣ ಅಹಿತಕರ ಘಟನೆಗೂ ಅವಕಾಶ ಮಾಡಿಕೊಡಲಿಲ್ಲ. ಆದರೆ, ಈಗ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಇದನ್ನೇ ಮುಂದಿಟ್ಟುಕೊಂಡು ಯಾರನ್ನೂ ದೂಷಿಸುವುದಿಲ್ಲ’ ಎಂದರು.

‘ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ ಅವರು ಶಾಂತಿಗಾಗಿ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ. ಜುಲೈ 15ರಂದು ಪಾದಯಾತ್ರೆ ನಡೆಯಬಹುದು. ಇದು ರಾಜಕೀಯ ಕಾರಣಕ್ಕೆ ಅಲ್ಲ. ಇದರಲ್ಲಿ ಎಲ್ಲ ಪಕ್ಷಗಳ ನಾಯಕರು, ವಿವಿಧ ಧರ್ಮಗಳ ಗುರುಗಳು ಭಾಗಿಯಾಗಬಹುದು’ ಎಂದರು.

‘85ನೇ ವಯಸ್ಸಿನಲ್ಲೂ ಎಷ್ಟು ಸಾಧ್ಯವೋ ಅಷ್ಟು ನಡೆಯುತ್ತೇನೆ. ಇದರ ಉದ್ದೇಶ ನಾಡಿನ ಯಾವುದೇ ಮೂಲೆಯಲ್ಲೂ ಮಂಗಳೂರಿನಂಥ ಘಟನೆಗಳು ನಡೆಯಬಾರದು ಎಂಬುದಾಗಿದೆ. ನಾಡಿನ ಹಿತ ಬಯಸುವ ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಭಾಗಿಯಾಗಬಹುದು’ ಎಂದು ಹೇಳಿದರು.

ಕಾವೇರಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿ, ‘ಸ್ವಾತಂತ್ರ್ಯ ಪೂರ್ವದಲ್ಲಿ ನೀರು ಹಂಚಿಕೆ ಸಂಬಂಧ ಆಗಿರುವ 1892 ಮತ್ತು 1924ರ ಒಪ್ಪಂದ ಅಸ್ತಿತ್ವ ಕಳೆದುಕೊಂಡಿದ್ದು, ಅವು ಸಿಂಧುವಾಗಬಾರದು ಎಂಬುದು ನಮ್ಮ ವಾದ. ನೆರೆಯ ನಾಲ್ಕು ರಾಜ್ಯಗಳು ತಮ್ಮ ಅಭಿಪ್ರಾಯ ಹೇಳಬಹುದು. ಹೀಗಾಗಿ 2 ವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ’ ಎಂದು ನುಡಿದರು.

‘ಅಂತಿಮವಾಗಿ ಕೋರ್ಟ್ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡೋಣ. ಅದಕ್ಕೂ ಮುನ್ನವೇ ಸಂಶಯ ವ್ಯಕ್ತಪಡಿಸಬಾರದು. ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಯಾಗಬಹುದು ಎಂಬ    ಭಾವನೆ ಇದೆ. ಈವರೆಗೂ ನಮಗೆ ಆಗಿರುವ  ಅನ್ಯಾಯ ಹೇಳಿದ್ದೇವೆ. ಅದಕ್ಕಿಂತ ಮುಂಚೆ ಊಹಾಪೋಹದ ಮಾತುಗಳನ್ನಾಡುವುದು ಸರಿಯಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)