ಶುಕ್ರವಾರ, ಡಿಸೆಂಬರ್ 13, 2019
20 °C

ಆಧಾರ್‌: ಸಂವಿಧಾನ ಪೀಠದಲ್ಲಿ 18, 19ರಂದು ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಆಧಾರ್‌: ಸಂವಿಧಾನ ಪೀಠದಲ್ಲಿ 18, 19ರಂದು ವಿಚಾರಣೆ

ನವದೆಹಲಿ: ಆಧಾರ್‌ಗೆ ಸಂಬಂಧಿಸಿದ ದೂರುಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚಿಸಿದೆ.

ಆಧಾರ್‌ ಕಡ್ಡಾಯದಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರು ಸೇರಿದಂತೆ ಆಧಾರ್‌ಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಸಂವಿಧಾನ ಪೀಠ ಇದೇ 18 ಮತ್ತು 19ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

‘ಈ ವಿಸ್ತೃತ ಪೀಠದಲ್ಲಿ ಎಷ್ಟು ಜನ ನ್ಯಾಯಮೂರ್ತಿಗಳು ಇರಬೇಕು ಎಂದು ಬಯಸುತ್ತೀರಿ’ ಎಂದು  ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ಅವರು ಪ್ರಶ್ನಿಸಿದರು. 

ಇದಕ್ಕೆ ಒಮ್ಮತದಿಂದ ‘ಐವರು ನ್ಯಾಯಮೂರ್ತಿಗಳ  ಸಂವಿಧಾನ ಪೀಠ ಸಾಕು’ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಮತ್ತು ಅರ್ಜಿದಾರರ ಪರ ವಕೀಲ ಶ್ಯಾಮ್‌ ದಿವಾನ್‌ ಒಪ್ಪಿಗೆ ಸೂಚಿಸಿದರು. ಜತೆಗೆ ಆಧಾರ್‌ಗೆ ಸಂಬಂಧಿಸಿದ ಪ್ರಕರಣಗಳಿಗೆ ಶೀಘ್ರ ಪರಿಹಾರ ಸೂಚಿಸುವಂತೆ ಅವರು ಮನವಿ ಮಾಡಿದರು.

ಆಧಾರ್ ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರದ ವಿರುದ್ಧ  ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಸಲ್ಲಿಸಲಾಗಿರುವ ಮೂರು ಅರ್ಜಿಗಳ ವಿಚಾರಣೆ ಸಂವಿಧಾನ ಪೀಠಕ್ಕೆ ವರ್ಗಾವಣೆಯಾಗಲಿದೆ.

ಹಿನ್ನೆಲೆ: ಆಧಾರ್‌ಗೆ ಸಂಬಂಧಿಸಿದ ದೂರುಗಳನ್ನು ವಿಸ್ತೃತ ಪೀಠವೇ ನಿರ್ಧರಿಸಲಿ ಎಂಬ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಆದೇಶವನ್ನು ಅಟಾರ್ನಿ ಜನರಲ್‌ ಮತ್ತು ದಿವಾನ್‌ ಅವರು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ವಿಸ್ತೃತ ಪೀಠದಲ್ಲಿ ಎಷ್ಟು ನ್ಯಾಯಮೂರ್ತಿಗಳಿರಬೇಕು ಎಂಬುದನ್ನು ಮುಖ್ಯ ನ್ಯಾಯಮೂರ್ತಿ ನಿರ್ಧರಿಸಲಿ ಎಂದು ತ್ರಿಸದಸ್ಯ ಪೀಠ  ಹೇಳಿತ್ತು.

ಇದಕ್ಕೂ ಮೊದಲು ಅಂದರೆ ಜೂನ್‌ 27ರಂದು ಇಬ್ಬರು ನ್ಯಾಯಮೂರ್ತಿಗಳ ಪೀಠ, ಆಧಾರ್‌ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರದ ಅಧಿಸೂಚನೆ ವಿರುದ್ಧ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ‘ಆಧಾರ್‌ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಜನ ಏಕೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬೇಕು’ ಎಂದು ಪೀಠ ಪ್ರಶ್ನಿಸಿತ್ತು.

ಪ್ರತಿಕ್ರಿಯಿಸಿ (+)