ಸೋಮವಾರ, ಡಿಸೆಂಬರ್ 9, 2019
26 °C

ಶ್ರೀನಿವಾಸನ್, ಶಾ ವಿರುದ್ಧ ಕಿಡಿ

Published:
Updated:
ಶ್ರೀನಿವಾಸನ್, ಶಾ ವಿರುದ್ಧ ಕಿಡಿ

ನವದೆಹಲಿ :  ಕ್ರಿಕೆಟ್ ಆಡಳಿತ ಸುಧಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯು ಮಾಡಿರುವ ಶಿಫಾರಸುಗಳ ಜಾರಿಗೆ  ಬಿಸಿಸಿಐ ಪದಚ್ಯುತ ಪದಾಧಿಕಾರಿಗಳಾದ ಎನ್‌. ಶ್ರೀನಿವಾಸನ್ ಮತ್ತು ನಿರಂಜನ್ ಶಾ ಅವರು ತಡೆಯೊಡ್ಡುತ್ತಿದ್ದಾರೆ ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸುಪ್ರೀಂ  ಕೋರ್ಟ್‌ಗೆ ವರದಿ ಸಲ್ಲಿಸಿದೆ.

ಮೂರು ತಿಂಗಳಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಸಿಒಎ ವರದಿ ನೀಡಬೇಕೆಂದು ಕೋರ್ಟ್‌ ಈಚೆಗೆ ಸೂಚಿಸಿತ್ತು. ಅದಕ್ಕೆ  ಉತ್ತರವಾಗಿ ಸಿಒಎ ವಿಸ್ತ್ರೃತ ವರದಿ ಸಲ್ಲಿಸಿದೆ.

2014ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆರೋಪಿಯಾಗಿದ್ದ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. 70 ವರ್ಷ ದಾಟಿದವರು ಬಿಸಿಸಿಐ ಆಡಳಿತದಲ್ಲಿ ಇರಬಾರದು ಎಂಬ ಲೋಧಾ ಸಮಿತಿ ಶಿಫಾರಸಿನ ಅನ್ವಯ ನಿರಂಜನ್ ಶಾ ಅವರು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಬಿಸಿಸಿಐ ಸಾಮಾನ್ಯ ಸಭೆ ಮತ್ತು ಶಿಫಾರಸುಗಳ ಜಾರಿಗೆ ತರುವ ಕಾರ್ಯದಲ್ಲಿ ಶ್ರೀನಿವಾಸನ್ ಪರ ರಾಜ್ಯ ಸಂಸ್ಥೆಗಳು ತಡೆಯೊಡ್ಡುತ್ತಿವೆ. ಇದು ಸಿಒಎ ಅಸಮಾಧಾನಕ್ಕೆ ಕಾರಣವಾಗಿದೆ.

ವರದಿಯಲ್ಲಿ ಉಲ್ಲೇಖಿಸಿರುವ ಒಂಬತ್ತನೇ ಅಂಶದಲ್ಲಿ ಈ ಬಗ್ಗೆ ವಿವರಣೆ ನೀಡಲಾಗಿದೆ.

‘ಜೂನ್ 26ರಂದು ನಡೆದಿದ್ದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಎನ್. ಶ್ರೀನಿವಾಸನ್ ಮತ್ತು ನಿರಂಜನ್ ಶಾ ಅವರು ಕ್ರಮವಾಗಿ ತಮಿಳುನಾಡು ಕ್ರಿಕೆಟ್ ಸಂಸ್ಥೆ ಮತ್ತು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಗಳನ್ನು ಪ್ರತಿನಿಧಿಸಿದ್ದರು.  ಇಡೀ ಸಭೆಯನ್ನೇ ಅವರು ಹೈಜಾಕ್ ಮಾಡಲು ಪ್ರಯತ್ನಿಸಿದರು. ಪದಾಧಿಕಾರಿಗಳ ಸ್ಥಾನದಿಂದ ಪದಚ್ಯುತಗೊಂಡ ನಂತರವೂ ಅವರು ದುರುದ್ದೇಶದಿಂದ ಸಭೆಗಳಿಗೆ ಹಾಜರಾಗುತ್ತಿದ್ದಾರೆ. ನಿಯಮಗಳ ಜಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ.  ಒಂದೊಮ್ಮೆ ಲೋಧಾ ಸಮಿತಿ ಶಿಫಾರಸುಗಳು ಸಂಪೂರ್ಣವಾಗಿ ಜಾರಿಯಾದರೆ ಇಂತಹವರು ಮೂಲೆಗುಂಪಾಗುವುದು ಖಚಿತ.  ಆ ಭಯದಿಂದಲೇ ಶಿಫಾರಸುಗಳು ಜಾರಿಯಾಗದಂತೆ ಬೇರೆ ಬೇರೆ ರೀತಿಯಲ್ಲಿ  ತಡೆಯೊಡ್ಡುತ್ತಿದ್ದಾರೆ’ ಎಂದು ಸಿಒಎ ದೂರಿದೆ.

‘ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ  ಕಳೆದ ಮೂರು ತಿಂಗಳಲ್ಲಿ ಬಿಸಿಸಿಐ ಪದಾಧಿಕಾರಿಗಳು ಮತ್ತು ಸದಸ್ಯರಲ್ಲಿ ಅರಿವು ಮೂಡಿಸಲಾಗಿದೆ. ನೂತನ ನಿಯಮಾವಳಿಯ ಜಾರಿಗಾಗಿ ಮೇ 6 ಮತ್ತು ಜೂನ್ 25ರಂದು ಎರಡು ಬಾರಿ ಸಭೆ ನಡೆಸಲಾಗಿದೆ. ಎಲ್ಲರಲ್ಲಿಯೂ ಸಹಮತ ತರಲು ನಿರಂತರ ಪ್ರಯತ್ನ ನಡೆಸಲಾಗಿದೆ’ ಎಂದು ಸಿಒಎ ಹೇಳಿದೆ.

‘ಅನರ್ಹಗೊಂಡ ಸದಸ್ಯರಿಗೆ ಸ್ಥಾನ ಕಲ್ಪಿಸಲು ರಾಜ್ಯ ಸಂಸ್ಥೆಗಳು ವಾಮಮಾರ್ಗ ಹುಡುಕುತ್ತಿವೆ. ನಿರಂಜನ್ ಶಾ ಅವರು ಸೌರಾಷ್ಟ್ರ ಸಂಸ್ಥೆಯ ಸದಸ್ಯರಾಗಷ್ಟೇ ಇದ್ದರೂ  ಬಿಸಿಸಿಐ ವಿಶೇಷ ಸಭೆಗೆ ಹಾಜರಾಗುತ್ತಾರೆ.  ಅವರಿಗೆ ವಿಶೇಷ ಆಹ್ವಾನವನ್ನೂ ಬಿಸಿಸಿಐನ ನೀಡುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ. ಆದರೆ ಅವರನ್ನು ನಿಷೇಧಿಸಲು ಸ್ಪಷ್ಟವಾದ ನಿರ್ದೇಶನ ನೀಡುವ ನಿಯಮದ ಅಗತ್ಯವಿದೆ’ ಎಂದು ಸಿಒಎ  ಅಭಿಪ್ರಾಯಪಟ್ಟಿದೆ.

‘ಹಿತಾಸಕ್ತಿ ಸಂಘರ್ಷ ಪ್ರಕರಣಗಳನ್ನು ನಿಭಾಯಿಸಲು ಒಂಬುಡ್ಸ್‌ಮನ್  ನೇಮಕ  ಮಾಡುವ  ಅವಶ್ಯಕತೆ ಇದೆ’ ಎಂದು ಉಲ್ಲೇಖಿಸಿದೆ.

ಬಿಸಿಸಿಐ ಹಂಗಾಮಿ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರ ಕಾರ್ಯಶೈಲಿಯನ್ನು ಬಿಸಿಸಿಐ ಶ್ಲಾಘಿಸಿದೆ. ಆದರೆ ಶ್ರೀನಿವಾಸನ್ ಆಪ್ತ, ಖಜಾಂಚಿ ಅನಿರುದ್ಧ ಚೌಧರಿ ಅವರು ‘ಮೂಕಪ್ರೇಕ್ಷಕ’ ರಂತೆ  ವರ್ತಿಸುತ್ತಿದ್ದಾರೆಂದು ವ್ಯಂಗ್ಯ ಮಾಡಿದೆ.

ಸಿಎಸಿ ಕಾರ್ಯಕ್ಕೆ ಶ್ಲಾಘನೆ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಅವರನ್ನು ನೇಮಕ ಮಾಡಿರುವುದು ಸೂಕ್ತವಾಗಿದೆ ಎಂದು ಸಿಒಎ ಮೆಚ್ಚುಗೆ ವ್ಯಕ್ತಪಡಿಸಿದೆ.

‘ಸಚಿನ್ ತೆಂಡೂಲ್ಕರ್, ಸೌರವ್‌ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಸಿಎಸಿಯು 2019ರ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಕೋಚ್ ಆಯ್ಕೆ ಮಾಡಿದ್ದಾರೆ. ಎಲ್ಲ ಆಯಾಮಗಳಿಂದಲೂ ಇದು ಸೂಕ್ತವಾದ ಕ್ರಮ’ ಎಂದು ಸಿಒಎ ತಿಳಿಸಿದೆ.

‘ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್ ಮತ್ತು ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಆಡುವ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ನೇಮಕವೂ ಸಮಂಜಸವಾಗಿದೆ’ ಎಂದು ಸಿಒಎ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಿತಿಯಲ್ಲಿ ಕಪಿಲ್ ದೇವ್

ಲೋಧಾ ಶಿಫಾರಸುಗಳ ಅನ್ವಯ ರಚಿಸಲಾಗುತ್ತಿರುವ ನಿವೃತ್ತ ಕ್ರಿಕೆಟಿ ಗರ ಸಮಿತಿಯ ರೂಪುರೇಷೆ ಸಿದ್ಧಗೊಳಿಸಲು ನಾಲ್ವರು ಆಟಗಾ ರರ ಸಮಿತಿಗೆ ಕಪಿಲ್ ದೇವ್ ಅವರನ್ನು ನೇಮಕ ಮಾಡಬೇಕು ಎಂದು ಸಿಒಎ ಸೂಚಿಸಿದೆ.

ಈ ಸಮಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಆಟಗಾರರಾದ ಅನ್ಷುಮನ್ ಗಾಯಕವಾಡ್, ಭರತ್ ರೆಡ್ಡಿ, ಜಿ.ಕೆ. ಪಿಳ್ಳೈ ಅವರ ಹೆಸರುಗಳನ್ನು ಸೂಚಿಸಿದೆ.

ಕೆಲವು ದಿನಗಳ ಹಿಂದೆ ಈ ಸಮಿ ತಿಗೆ  ಜಿ.ಕೆ. ಪಿಳ್ಳೈ, ಮೊಹಿಂದರ್ ಅಮರನಾಥ್, ಡಯಾನಾ ಎಡುಲ್ಜಿ ಮತ್ತು ಅನಿಲ್ ಕುಂಬ್ಳೆ ಅವರನ್ನು ನೇಮಿಸುವಂತೆ ಸಿಒಎ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್‌ಗೆ ನೀಡಿರುವ ವರದಿ ಯಲ್ಲಿ ಬದಲಾದ ಪಟ್ಟಿಯನ್ನು ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)