ಶುಕ್ರವಾರ, ಡಿಸೆಂಬರ್ 13, 2019
20 °C

ಪಿಸ್ತೂಲ್ ಮಾರಾಟಕ್ಕೆ ಯತ್ನ ಬಿಹಾರದ ಯುವಕನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಸ್ತೂಲ್ ಮಾರಾಟಕ್ಕೆ ಯತ್ನ ಬಿಹಾರದ ಯುವಕನ ಸೆರೆ

ಬೆಂಗಳೂರು: ಬಿಹಾರದಿಂದ ಪಿಸ್ತೂಲ್ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಮಹಮದ್ ಜಹಾಂಗೀರ್ (28) ಎಂಬುವನನ್ನು ಬಂಧಿಸಿರುವ ಯಲಹಂಕ ಉಪನಗರ ಪೊಲೀಸರು, ಒಂದು ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯವನಾದ ಜಹಾಂಗೀರ್, ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದು ಯಲಹಂಕದ ಜುಡಿಷಿಯಲ್ ಲೇಔಟ್‌ನಲ್ಲಿ ನೆಲೆಸಿದ್ದ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಆತ, ಸೋಮವಾರ ಬ್ಯಾಂಕ್ ಕಾಲೊನಿ ಬಳಿ ಪಿಸ್ತೂಲ್ ಮಾರಲು ಗ್ರಾಹಕರನ್ನು ಹುಡುಕುತ್ತಿದ್ದ. ಆದರೆ, ಅದನ್ನು ಯಾರೂ ಖರೀದಿಸಿರಲಿಲ್ಲ.

ಮರುದಿನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ‘ನಿನ್ನೆ ಮಧ್ಯಾಹ್ನ ಬ್ಯಾಂಕ್ ಕಾಲೊನಿ ರಸ್ತೆಯಲ್ಲಿ ಯುವಕನೊಬ್ಬ ಪಿಸ್ತೂಲ್ ಮಾರುತ್ತಿದ್ದ’ ಎಂದು ಹೇಳಿದ್ದರು.

ಆ ಪ್ರದೇಶದ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಯ ಚಹರೆ ಸಿಕ್ಕಿತು. ಅದನ್ನು ತೋರಿಸಿ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ಆತನ ವಿಳಾಸ ದೊರಕಿತು. ಬುಧವಾರ ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿದಾಗ ಪಿಸ್ತೂಲ್ ಹಾಗೂ ಗುಂಡುಗಳು ಪತ್ತೆಯಾದವು  ಎಂದು ಪೊಲೀಸರು ಹೇಳಿದ್ದಾರೆ.

‘ಬಿಹಾರದಲ್ಲಿದ್ದಾಗ ಆತ್ಮರಕ್ಷಣೆಗಾಗಿ ಪಿಸ್ತೂಲನ್ನು ಖರೀದಿಸಿದ್ದೆ. ಕೆಲಸ ಅರಸಿ ನಗರಕ್ಕೆ ಬರುವಾಗ ಮನೆ ಸಾಮಾನುಗಳ ಜತೆ ಅದನ್ನೂ ತೆಗೆದುಕೊಂಡು ಬಂದಿದ್ದೆ. ಯಾವುದೇ ದುರುದ್ದೇಶದಿಂದ ಪಿಸ್ತೂಲ್ ಇಟ್ಟುಕೊಂಡಿರಲಿಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಜಹಾಂಗೀರ್ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನೇ ಎಂಬ ಬಗ್ಗೆ ಬಿಹಾರ ರಾಜ್ಯ ಅಪರಾಧ ದಾಖಲಾತಿ ಘಟಕಕ್ಕೆ ಮಾಹಿತಿ ಕೋರಿದ್ದೇವೆ ಎಂದು ಡಿಸಿಪಿ ಪಿ.ಎಸ್.ಹರ್ಷ ತಿಳಿಸಿದರು.

ಪ್ರತಿಕ್ರಿಯಿಸಿ (+)