ಸೋಮವಾರ, ಡಿಸೆಂಬರ್ 16, 2019
26 °C
ಪರ್ಯಾಯ ಬೆಳೆಗಳತ್ತ ರೈತರು ಚಿತ್ತ ಹರಿಸಲು ‘ಕಾಡಾ’ ಅಧ್ಯಕ್ಷರ ಸಲಹೆ

ಭತ್ತದ ಬೆಳೆಗೆ ನೀರು ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭತ್ತದ ಬೆಳೆಗೆ ನೀರು ಅನುಮಾನ

ಶಿವಮೊಗ್ಗ: ಜುಲೈ ಎರಡನೇ ವಾರ ಮುಗಿಯುತ್ತಾ ಬಂದರೂ ಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದ ಕಾರಣ ಅಚ್ಚುಕಟ್ಟು ರೈತರು ಸಾಂಪ್ರದಾಯಿಕ ಭತ್ತದ ಬದಲು ಅರೆ ನೀರಾವರಿ ಬೆಳೆಯತ್ತ ಚಿತ್ತಹರಿಸಬೇಕು ಎಂದು ‘ಕಾಡಾ’ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಸಲಹೆ ನೀಡಿದರು.

ಮುಂಗಾರು ಆರಂಭವಾದ ನಂತರ ನಿರೀಕ್ಷಿತ ಪ್ರಮಾಣದ ನೀರು ಬಂದಿಲ್ಲ.  ಪ್ರಸ್ತುತ ಭದ್ರಾ ಜಲಾಶಯದಲ್ಲಿ 125 ಅಡಿ ಮಾತ್ರ ನೀರು ಸಂಗ್ರಹವಾಗಿದೆ. ರೈತರು ಭತ್ತಕ್ಕೆ ಪರ್ಯಾಯವಾಗಿ ನೇರ ಬಿತ್ತನೆ ಭತ್ತ ಹಾಗೂ ಅರೆ ನೀರಾವರಿ ಬೆಳೆ ಬೆಳೆಯಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಹಿಂದಿನ ವರ್ಷ ಈ ಅವಧಿಯಲ್ಲಿ 140 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 15 ಅಡಿ ಕಡಿಮೆಯಾಗಿದೆ. ನೀರಿನ ಒಳ ಹರಿವೂ ಗಣನೀಯವಾಗಿ ಕ್ಷೀಣಿಸಿದೆ. ಇಂದು ಕೇವಲ 1,641 ಕ್ಯುಸೆಕ್‌ ಒಳ ಹರಿವು ಇದೆ. 

ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 71.53 ಟಿಎಂಸಿ ಅಡಿ.  ಪ್ರಸ್ತುತ 18.37 ಟಿಎಂಸಿ ಅಡಿ ಮಾತ್ರವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 26 ಟಿಎಂಸಿ ನೀರು ಸಂಗ್ರಹವಿತ್ತು ಎಂದು ಕಳವಳ ವ್ಯಕ್ತಪಡಿಸಿದರು.

ಭತ್ತಕ್ಕೆ ಭರವಸೆ ನೀಡಲು ಸಾಧ್ಯವಿಲ್ಲ:  ಈಗಿರುವ ನೀರಿನ ಪ್ರಮಾಣ ನಂಬಿಕೊಂಡು ಭತ್ತ ಬೆಳೆಯಲು ಆಗುವುದಿಲ್ಲ. ನೀರು ಬಿಡುವ ಕುರಿತು ಸದ್ಯದ ಸ್ಥಿತಿಯಲ್ಲಿ ಭರವಸೆ ನೀಡಲು ಸಾಧ್ಯವಿಲ್ಲ.

ಭತ್ತಕ್ಕೆ ಪರ್ಯಾವಾಗಿ ಮೆಕ್ಕೆಜೋಳ ಬಿತ್ತನೆ ಮಾಡಬಹುದು. ಈ ತಿಂಗಳ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿದೆ. ಆಗಸ್ಟ್ ಅಂತ್ಯದವರೆಗೂ ರಾಗಿ ನಾಟಿ ಮಾಡಲು ಸಮಯವಿದೆ. ಮುಂದಿನ ತಿಂಗಳೂ ಮಳೆ ಕೈಕೊಟ್ಟರೆ ಸೆಪ್ಟೆಂಬರ್‌ವರೆಗೂ ಹೆಸರು, ಉದ್ದು, ಅಲಸಂದೆ ದ್ವಿದಳ ಧಾನ್ಯ  ಬಿತ್ತನೆ ಮಾಡಬಹುದು ಎಂದು ಸಲಹೆ ನೀಡಿದರು.

ಕಳೆದ ವರ್ಷ ಮುಂಗಾರು ವಿಳಂಬವಾದರೂ ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆದರೂ, ರೈತರು ಪರ್ಯಾಯ ಬೆಳೆಗಳ ಕುರಿತು ಆಲೋಚಿಸಬೇಕು ಎಂದರು.

ಉಚಿತ ಬಿತ್ತನೆ ಕಿಟ್‌ ವಿತರಣೆ: ಹಿರೇಕೆರೂರು, ರಾಣೆಬೆನ್ನೂರು, ಹೊನ್ನಾಳಿ ತಾಲೂಕಿನ 620 ಹೆಕ್ಟೇರ್ ಪ್ರದೇಶಗಳಲ್ಲಿ ರೈತರಿಗೆ ಪರ್ಯಾಯ ಬೆಳೆ ಪ್ರಾತ್ಯಕ್ಷಿತೆ ಕೈಗೊಳ್ಳಲಾಗಿದೆ.  ಬಿತ್ತನೆ ಬೀಜಗಳ ಕಿಟ್ ಉಚಿತವಾಗಿ ವಿತರಣೆ ಮಾಡಲಾಗಿದೆ.  ಪ್ರತಿ ಹೆಕ್ಟೇರ್‌ಗೆ 15 ಕೆಜಿ ಮೆಕ್ಕೆಜೋಳ, 5 ಕೆಜಿ ತೊಗರಿ, 10 ಕೆಜಿ ಝಿಂಕ್ ಸಲ್ಫೇಟ್ ಮತ್ತು ಎರಡು ಕೆಜಿ ಬೋರಾಕ್ಸ್ ಒಳಗೊಂಡ ಕಿಟ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಲಾಶಯದ ವ್ಯಾಪ್ತಿಯಲ್ಲಿ 1.5 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಇದೆ. ಕಳೆದ ವರ್ಷ ಭತ್ತದ ಬೆಳೆಗೆ 100 ದಿನ ನೀರು ಹರಿಸಲಾಗಿತ್ತು. ಬಲದಂಡೆ ಕಾಲುವೆ ಮೂಲಕ 23 ಟಿಎಂಸಿ

ಹಾಗೂ ಎಡದಂಡೆ ಕಾಲುವೆ ಮೂಲಕ 3ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ಈಗ ಅಷ್ಟೂ ನೀರು ಬಿಡುವ ಪರಿಸ್ಥಿತಿಯಲ್ಲಿ ಪ್ರಾಧಿಕಾರ ಇಲ್ಲ ಎಂದು ಬೇಸರ

ವ್ಯಕ್ತಪಡಿಸಿದರು.

***

ಜಲಾಶಯ ಇರುವ ಪ್ರದೇಶ ಮಲೆನಾಡು ಭಾಗವಾದ ಕಾರಣ ಸದ್ಯಕ್ಕೆ ಮೋಡ ಬಿತ್ತನೆ ಮಾಡುವುದಿಲ್ಲ.  ಇನ್ನೆರಡು ತಿಂಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ.

–ಎಚ್‌.ಎಸ್.ಸುಂದರೇಶ್, ಕಾಡಾ ಅಧ್ಯಕ್ಷ

ಪ್ರತಿಕ್ರಿಯಿಸಿ (+)