ಶನಿವಾರ, ಡಿಸೆಂಬರ್ 7, 2019
16 °C
ಗುಂಡಿಬೈಲು ಶಾಲೆ ನೂತನ ಕಟ್ಟಡ ಶಿಲಾನ್ಯಾಸ– ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ

ವಿದ್ಯೆ ಜತೆ ಮಕ್ಕಳಿಗೆ ಸಂಸ್ಕಾರ ಕಲಿಸಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯೆ ಜತೆ ಮಕ್ಕಳಿಗೆ ಸಂಸ್ಕಾರ ಕಲಿಸಿರಿ

ಉಡುಪಿ: ‘ವಿದ್ಯೆಯ ಜತೆಗೆ ಒಳ್ಳೆಯ ಸಂಸ್ಕಾರವನ್ನೂ ಕಲಿತ ವಿದ್ಯಾರ್ಥಿಯಿಂದ ಮಾತ್ರ ಸಮಾಜಕ್ಕೆ ಒಳ್ಳೆಯದಾಗಲು ಸಾಧ್ಯ’ ಎಂದು ಸೋದೆ ಮಠ ವಿಶ್ವವಲ್ಲಭ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುಂಡಿಬೈಲು ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ  ಶಾಲೆ ನೂತನ ಕಟ್ಟಡ ಶಿಲಾನ್ಯಾಸದ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

‘ಇಂದು ವಿದ್ಯಾವಂತರು ಕೂಡ ಸಮಾಜಕೆ ಮಾರಕವಾಗುವಂತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉನ್ನತ ಪದವಿ ಪಡೆದ ಅನೇಕ ಮಂದಿ ಸಂಸ್ಕಾರದ ಕೊರತೆಯಿಂದ, ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ನೋಡುತ್ತೇವೆ. ಸಮಾಜಕ್ಕೆ ಸಂಸ್ಕಾರವಂತ ಪ್ರಜೆಗಳ ಅಗತ್ಯವಿದೆ. ಯಾವಾಗ ನಾವು ವಿದ್ಯೆಯ ಜೊತೆಗೆ ಸಂಸ್ಕಾರವನ್ನೂ ನೀಡುತ್ತೇವೆಯೋ ಆಗ ಒಳ್ಳೆಯ ನಾಗರಿಕ ಸಮಾಜಕ್ಕೆ ಸಿಗುತ್ತಾನೆ’ ಎಂದರು.

‘ಮನುಷ್ಯನ ಮುಖದಲ್ಲಿ ಹೇಗೆ ಎರಡು ಕಣ್ಣುಗಳು ಮುಖ್ಯವೋ ಅಂತೆಯೇ ಒಂದು ಊರಿಗೆ ಶಾಲೆ ಹಾಗೂ ದೇಗುಲ ಮುಖ್ಯ. ಈ ಎರಡು ಉತ್ತಮವಾಗಿದ್ದರೆ ಇಡೀ ಊರು ಸುಭಿಕ್ಷೆಯಿಂದ ಕೂಡಿರುತ್ತದೆ’ ಎಂದರು.

ಆಶೀರ್ವಚನ ನೀಡಿದ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ‘ಪ್ರಸಕ್ತ ಆಗುತ್ತಿರುವ ಬದಲಾವಣೆಗಳಿಗೆ ಪೂರಕವಾಗಿ ಶಾಲೆಗೆ ಕಾಯಕಲ್ಪ ನೀಡಲಾಗುತ್ತಿದೆ. ದೇಗುಲ, ಮಸೀದಿ ಚರ್ಚ್ ಜೀಣೋದ್ಧಾರಕ್ಕೆ ಭಕ್ತರು ಸಹಾಯ ಮಾಡಲು ಒಂದಾಗುತ್ತಾರೋ, ಅಂತಯೇ ಪ್ರತಿಯೊಂದು ಶಾಲೆಗಳ ನಿರ್ಮಾಣಕ್ಕೆ ದೇಶ,ವಿದೇಶಗಳಲ್ಲಿರುವ ಸ್ಥಳೀಯರು ಒಂದಾಗಬೇಕು’ ಎಂದರು.

ನಗರಸಭೆ ಸದಸ್ಯೆ ಗೀತಾ ಶೇಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ್ , ಗುಂಡಿಬೈಲು ಕನ್ನಡ  ಹಿರಿಯ ಪ್ರಾಥಮಿಕ ಶಾಲೆ ಮುಖ್ಯಸ್ಥೆ ಮಾಲತಿ , ಇಂಗ್ಲಿಷ್ ಮಾಧ್ಯಮ ಶಾಲೆ ಮುಖ್ಯಸ್ಥೆ ಕಮಲಿನಿ ಇದ್ದರು.

ಪ್ರತಿಕ್ರಿಯಿಸಿ (+)