ಬುಧವಾರ, ಡಿಸೆಂಬರ್ 11, 2019
19 °C
ಕೃತಕ ಬುದ್ಧಿಮತ್ತೆ ಕ್ಷೇತ್ರದ ಬೆಂಗಳೂರಿನ ಸ್ಟಾರ್ಟ್‌ಅಪ್‌

ಗೂಗಲ್‌ ಸ್ವಾಧೀನಕ್ಕೆ ‘ಹಳ್ಳಿ ಲ್ಯಾಬ್ಸ್‌’

Published:
Updated:
ಗೂಗಲ್‌ ಸ್ವಾಧೀನಕ್ಕೆ ‘ಹಳ್ಳಿ ಲ್ಯಾಬ್ಸ್‌’

ಬೆಂಗಳೂರು: ಬೆಂಗಳೂರಿನ ಕೃತಕ ಬುದ್ಧಿಮತ್ತೆ (ಎಐ)  ಕ್ಷೇತ್ರದ ಸ್ಟಾರ್ಟ್‌ಅಪ್‌ ಹಳ್ಳಿ ಲ್ಯಾಬ್ಸ್‌ ಅನ್ನು ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ಸ್ವಾಧೀನಪಡಿಸಿಕೊಂಡಿದೆ.

ಸದ್ಯಕ್ಕೆ ಸ್ಥಗಿತಗೊಂಡಿರುವ ಸ್ಟೇಜಿಲ್ಲಾ (Stayzilla) ಸಂಸ್ಥೆಯ ಮಾಜಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಪಂಕಜ್‌ ಗುಪ್ತಾ ಅವರು ಈ ಸ್ಟಾರ್ಟ್‌ಅಪ್‌ನ ಸಹ ಸ್ಥಾಪಕರಾಗಿದ್ದಾರೆ. ಇವರು ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ದೆಹಲಿ)  ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಇದು ಅಸ್ತಿತ್ವಕ್ಕೆ ಬಂದಿತ್ತು. ಈ ಸ್ವಾಧೀನ ಪ್ರಕ್ರಿಯೆಯ ಮೊತ್ತ ಎಷ್ಟು ಎಂಬುದು ತಿಳಿದು ಬಂದಿಲ್ಲ.

ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ಮೈಕ್ರೊಸಾಫ್ಟ್‌, ಫೇಸ್‌ಬುಕ್‌ ಮತ್ತು ಆ್ಯಪಲ್‌, ಕೃತಕ ಬುದ್ಧಿಮತ್ತೆಯ ಸ್ಟಾರ್ಟ್‌ಅಪ್‌ಗಳನ್ನು ಖರೀದಿಸುವ ಪ್ರವೃತ್ತಿ   ಇತ್ತೀಚೆಗೆ ಹೆಚ್ಚುತ್ತಿದೆ. ಅವುಗಳ ಸಾಲಿಗೆ ಈಗ ಹಳ್ಳಿ ಲ್ಯಾಬ್ಸ್‌ ಕೂಡ ಸೇರಿದೆ.

ಹಳೆಯ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್‌) ತಂತ್ರಜ್ಞಾನದ ನೆರವಿನಿಂದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸ್ಟಾರ್ಟ್‌ಅಪ್‌ ಆರಂಭಿಸಲಾಗಿತ್ತು.

ಆನ್‌ಲೈನ್‌ಗೆ ಸೇರ್ಪಡೆಯಾಗಲಿರುವ ಲಕ್ಷಾಂತರ ಹೊಸ ಬಳಕೆದಾರರ ಬಳಕೆಗೆ ಹೊಸ ಸೌಲಭ್ಯಗಳನ್ನು ವಿನ್ಯಾಸ ಮಾಡಲು ಹಳ್ಳಿ ಲ್ಯಾಬ್ಸ್‌ನ ತಂತ್ರಜ್ಞರು ನಮ್ಮ ತಂಡದ ಜತೆ ಕೈಜೋಡಿಸಲಿದ್ದಾರೆ ಎಂದು ಗೂಗಲ್‌ ವಕ್ತಾರ ತಿಳಿಸಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ,  ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ  ಕೃತಕ ಬುದ್ಧಿಮತ್ತೆಯ 34 ಸ್ಟಾರ್ಟ್‌ಅಪ್‌ಗಳನ್ನು  ದೈತ್ಯ ಐ.ಟಿ. ಸಂಸ್ಥೆಗಳು  ಸ್ವಾಧೀನಪಡಿಸಿಕೊಂಡಿವೆ.

ಪ್ರತಿಕ್ರಿಯಿಸಿ (+)