ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ನೇತೃತ್ವದ ಹನಿಟ್ರ್ಯಾಪ್ ಗ್ಯಾಂಗ್ ಬಂಧನ

ಕನ್ನಡ ಚಿತ್ರದ ನಾಯಕ ನಟನನ್ನು ಅಪಹರಿಸಿ ಸುಲಿಗೆ
Last Updated 13 ಜುಲೈ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರದ ನಾಯಕ ನಟನಿಂದ ಹಣ ಹಾಗೂ 2 ಐ–ಫೋನ್‌ಗಳನ್ನು ಸುಲಿಗೆ ಮಾಡಿದ್ದ ಯುವತಿ ನೇತೃತ್ವದ 8 ಮಂದಿಯ  ‘ಹನಿಟ್ರ್ಯಾಪ್ ಗ್ಯಾಂಗ್’ ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದಿದೆ.

ಮೈಸೂರಿನ ಎನ್‌.ಆರ್.ಮೊಹಲ್ಲಾದ ದಿವ್ಯಾ (19), ಕಾಮಾಕ್ಷಿಪಾಳ್ಯದ ತಿಲಕ್ ಅಲಿಯಾಸ್ ರೆಬಲ್ (24), ಮಾಗಡಿ ರಸ್ತೆಯ ಲೋಕೇಶ್ (27), ಚಿಕ್ಕಸಂದ್ರದ ಮಂಜುನಾಥ್ (21), ಹೇರೋಹಳ್ಳಿಯ ಕಿರಣ್ (24), ಪುನೀತ್ (22), ಮದನ್ (24) ಹಾಗೂ ಸುಮಂತ್ (21) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಿವ್ಯಾ ಅವರಿಗೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ತಿಲಕ್‌ನ ಪರಿಚಯವಾಗಿತ್ತು. ನಂತರ ಪರಿಚಿತ ಹುಡುಗರನ್ನು ಸೇರಿಸಿಕೊಂಡು ವ್ಯವಸ್ಥಿತ ಗ್ಯಾಂಗ್ ಕಟ್ಟಿದ ತಿಲಕ್, ದಿವ್ಯಾ ಅವರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡಲು ಪ್ರಾರಂಭಿಸಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಅಂತೆಯೇ ನಂದಿನಿಲೇಔಟ್‌ನಲ್ಲಿ ನೆಲೆಸಿರುವ ನಟರೊಬ್ಬರ ಮೊಬೈಲ್ ಸಂಖ್ಯೆ ಪಡೆದ ದಿವ್ಯಾ, ಅವರಿಗೆ ಕರೆ ಮಾಡಿ, ‘ನನಗೂ ಅಭಿನಯ ಗೊತ್ತು. ನಿಮ್ಮ ಚಿತ್ರದಲ್ಲಿ ಒಂದು ಅವಕಾಶ ಕೊಡಿ. ಬೇಕಿದ್ದರೆ ಎಲ್ಲ ರೀತಿಯಲ್ಲೂ ನಿಮ್ಮೊಂದಿಗೆ ಸಹಕರಿಸುತ್ತೇನೆ’ ಎಂದು ಪೀಡಿಸಲು ಆರಂಭಿಸಿದ್ದರು. ಮೊದ ಮೊದಲು ಆ ಕರೆಯನ್ನು ನಿರ್ಲಕ್ಷ್ಯಿಸಿದ್ದ ನಟ, ಕಾಟ ವಿಪರೀತವಾದಾಗ ಭೇಟಿಯಾಗಲು ನಿರ್ಧರಿಸಿದ್ದರು.’

‘ಜುಲೈ 6ರ ಮಧ್ಯಾಹ್ನ 2.30ರ ಸುಮಾರಿಗೆ ಕರೆ ಮಾಡಿದ್ದ ದಿವ್ಯಾ, ಬಾಗಲಗುಂಟೆ ಮುಖ್ಯರಸ್ತೆಯಲ್ಲಿ ಇರುವುದಾಗಿ ತಿಳಿಸಿದ್ದರು. ತಕ್ಷಣ ನಟ ಕಾರಿನಲ್ಲಿ ಆ ಸ್ಥಳಕ್ಕೆ ತೆರಳಿದ್ದರು.’

‘ಈ ವೇಳೆ ಇನ್ನೊಂದು ಕಾರಿನಲ್ಲಿ ಕುಳಿತಿದ್ದ ದಿವ್ಯಾ, ನಟನನ್ನು ಮಾತುಕತೆಗೆ ಕರೆದಿದ್ದರು. ಅವರು ವಾಹನ ಹತ್ತುತ್ತಿದ್ದಂತೆಯೇ ಉಳಿದ ಅರೋಪಿಗಳು ಸಹ ಕಾರನ್ನು ಹತ್ತಿ ಚಾಕುವಿನಿಂದ ಬೆದರಿಸಿದ್ದರು. ನಂತರ ಅವರನ್ನು ಅಪಹರಿಸಿಕೊಂಡು ಪೀಣ್ಯ 8ನೇ ಮೈಲಿ ಮಾರ್ಗವಾಗಿ ತಿಪ್ಪೇನಹಳ್ಳಿಗೆ ಕರೆದೊಯ್ದಿದ್ದು, ಶೆಡ್‌ವೊಂದರಲ್ಲಿ ಕೂಡಿ ಹಾಕಿದ್ದರು.’

‘ಅಲ್ಲಿ ಕೈ–ಕಾಲು ಕಟ್ಟಿ ಹಾಕಿ ಇಡೀ ದಿನ ಅವರಿಗೆ ಚಿತ್ರಹಿಂಸೆ ನೀಡಿದ್ದ ಆರೋಪಿಗಳು, ₹ 15 ಸಾವಿರ ನಗದು, ಎರಡು ಐ–ಫೋನ್ ಹಾಗೂ ನಾಲ್ಕು ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡು ಮರುದಿನ ಬೆಳಿಗ್ಗೆ ಬಿಟ್ಟು ಕಳುಹಿಸಿದ್ದರು. ನಂತರ ನಟ ಬಾಗಲಗುಂಟೆ ಠಾಣೆಗೆ ಬಂದು ದೂರು ಕೊಟ್ಟಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

₹ 1,000 ಕ್ಕೆ ಬಾಡಿಗೆ ಪಡೆದಿದ್ದ
‘ನನ್ನ ಗೆಳೆಯ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದಾನೆ. ಅವರಿಬ್ಬರೂ ಒಂದು ದಿನ ಉಳಿದುಕೊಳ್ಳಲು ನಿಮ್ಮ ಶೆಡ್ ಬಾಡಿಗೆ ಕೊಡಿ. ₹ 1,000 ಬಾಡಿಗೆ ಕೊಡುತ್ತೇನೆ’ ಎಂದು ಶೆಡ್ ಮಾಲೀಕರಿಗೆ ತಿಳಿಸಿ ತಿಲಕ್ ಅದನ್ನು ಬಾಡಿಗೆ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಿಬ್ಬರಿಗೂ ಹನಿಟ್ರ್ಯಾಪ್

‘ದಿವ್ಯಾ ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಪಡೆದು ತನಿಖೆ ಪ್ರಾರಂಭಿಸಿದೆವು. ಪೀಣ್ಯ ಸಮೀಪದ ಟವರ್‌ನಿಂದಲೇ ಅವರ ಮೊಬೈಲ್ ಸಂಪರ್ಕ ಪಡೆಯುತ್ತಿತ್ತು. ಆ ಸುಳಿವು ಆಧರಿಸಿ ನೆಲಗೆದರಹಳ್ಳಿಯಲ್ಲಿ ಮೊದಲು ಅವರನ್ನೇ ವಶಕ್ಕೆ ಪಡೆದೆವು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಆಧರಿಸಿ ಉಳಿದವರನ್ನು ಬಂಧಿಸಿದೆವು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನಗರದ ಇನ್ನಿಬ್ಬರೂ ವ್ಯಾಪಾರಿಗಳಿಗೂ ಹನಿಟ್ರ್ಯಾಪ್ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ವ್ಯಾಪಾರಿಗಳು ದೂರು ಕೊಡುವ ಗೋಜಿಗೆ ಹೋಗಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT