ಶುಕ್ರವಾರ, ಡಿಸೆಂಬರ್ 6, 2019
19 °C

ಧೈರ್ಯವಿದ್ದರೆ ಲೋಕಸಭೆಗೆ ಮುತ್ತಿಗೆ ಹಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧೈರ್ಯವಿದ್ದರೆ ಲೋಕಸಭೆಗೆ ಮುತ್ತಿಗೆ ಹಾಕಿ

ಲಿಂಗಸುಗೂರು: ‘ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಿದೆ. ತಾಕತ್ತಿದ್ದರೆ ಬಿಜೆಪಿ ನಾಯಕರು ಲೋಕಸಭೆಗೆ ಮುತ್ತಿಗೆ ಹಾಕಿ ಸಾಲ ಮನ್ನಾ ಮಾಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಸವಾಲು ಹಾಕಿದರು. ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದರೆ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಯಡಿಯೂರಪ್ಪ ಅವರು ಭಾಷಣ ಮಾಡುತ್ತ ಹೊರಟಿದ್ದರು. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ಕರ್ತವ್ಯ ಮುಗಿಸಿದೆ, ಉಳಿದಂತೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ₹ 1 ಲಕ್ಷವನ್ನು ₹ 5ಲಕ್ಷಕ್ಕೆ ಏರಿಸಲಾಗಿದೆ. ಮೃತಪಟ್ಟ ರೈತರ ಪತ್ನಿಗೆ ₹ 2ಸಾವಿರ ಮಾಸಾಶನ, ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ ನೀಡುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರಿಗೆ ನೀಡಿದ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ’ ಎಂದು ಆಹ್ವಾನ ನೀಡಿದರು.

‘ಅಚ್ಛೆ ದಿನ್‌ ಆಯೆಗಾ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಕನಸು ಭಗ್ನವಾಗಿದೆ, ಐಟಿ–ಬಿಟಿಗಳಲ್ಲಿ ಉದ್ಯೋಗ ಭೀತಿ ಎದುರಾಗಿದೆ. ಅಚ್ಛೆ ದಿನ್‌ ನಹಿ ಆಯೆಗಾ’ ಎಂದು ಲೇವಡಿ ಮಾಡಿದರು.

‘ದೇಶದ ಇತರೆ ರಾಜ್ಯಗಳಲ್ಲಿ ವಿಸ್ತಾರಕರ ಹೆಸರಿನಲ್ಲಿ ಕೋಮುಪ್ರಚೋದನೆ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಬಸವಣ್ಣನ ನಾಡಿನಲ್ಲಿ ಅಂತಹ ಕೋಮು ಪ್ರಚೋದನೆಗೆ ಜನತೆ ಅವಕಾಶ ನೀಡುವುದಿಲ್ಲ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಂಬರುವ ದಿನಗಳಲ್ಲಿ ಅವರಪ್ಪನ ಆಣೆಗೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ’ ಎಂದು ಭಾವಾವೇಷದಿಂದ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಕಾರ್ಯಾಧ್ಯಕ್ಷರಾದ ದಿನೇಶ ಗುಂಡುರಾವ್‌, ಎಸ್‌.ಆರ್‌. ಪಾಟೀಲ ಮಾತನಾಡಿ, ‘ಬಿಜೆಪಿ ಮುಖಂಡರು ರಾಜ್ಯದಲ್ಲಿ ಕೀಳುಮಟ್ಟದ ರಾಜಕಾರಣ ನಡೆಸಿದ್ದಾರೆ. ಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರೆ ಮನೆ ಬಾಗಿಲಿಗೆ ತಲುಪಿಸುವ ಮೂಲಕ 2018ರ ಚುನಾವಣೆಯಲ್ಲಿ ಮತ್ತೊಂದು ಬಾರಿ ಅಧಿಕಾರಕ್ಕೆ ಬರಲು ಆಶೀರ್ವದಿಸಬೇಕು’ ಎಂದು ಕೋರಿದರು.

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಮುಂದಿನ ದಿನಗಳಲ್ಲಿ ನಾರಾಯಣಪುರ ಬಲದಂಡೆ ನಾಲೆ ಅಧುನಿಕರಣಕ್ಕೆ ಹೆಚ್ಚಿನ ಹಣ ನೀಡಲಾಗುವುದು’ ಎಂದು ಹೇಳಿದರು. ಸಂಸದ ಬಿ.ವಿ. ನಾಯಕ, ಶಾಸಕರಾದ ಸತೀಶ ಜಾರಕಿಹೊಳಿ, ಎನ್‌.ಎಸ್‌. ಬೋಸರಾಜ್‌, ಪ್ರತಾಪಗೌಡ ಪಾಟೀಲ, ಹಂಪನಗೌಡ ಬಾದರ್ಲಿ ಮಾತನಾಡಿದರು.

ಶಾಸಕರಾದ ಹಂಪಯ್ಯ ನಾಯಕ, ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಅಮರೇಶ್ವರ ನಾಯಕ, ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್‌, ರಜಾ ರಾಯಪ್ಪ ನಾಯಕ, ಮುಖಂಡರಾದ ಡಿ.ಎಸ್‌. ಹೂಲಗೇರಿ, ಭೂಪನಗೌಡ ಕರಡಕಲ್‌, ದಾವೂದ್‌ ಮುದಗಲ್‌, ಬಸವಂತರಾಯ ಕುರಿ, ಪಾಮಯ್ಯ ಮುರಾರಿ, ಎಚ್‌.ಬಿ. ಮುರಾರಿ, ಅಮರಗುಂಡಪ್ಪ ಮೇಟಿ ಇದ್ದರು.

* * 

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೋಮು ಗಲಭೆ ಎಬ್ಬಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಇದರಿಂದ ಜನರು ಜಾಗೃತಿ ವಹಿಸಬೇಕು

ಸಿದ್ದರಾಮಯ್ಯ

ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)