ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾನಿಟರಿ ನ್ಯಾಪ್ಕಿನ್‌ ತೆರಿಗೆ ಹೆಚ್ಚಳಕ್ಕೆ ವಿರೋಧ

Last Updated 14 ಜುಲೈ 2017, 7:13 IST
ಅಕ್ಷರ ಗಾತ್ರ

ಕೋಲಾರ: ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ಸ್ಯಾನಿಟರಿ ನ್ಯಾಪ್ಕಿನ್‌ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ಹಾಗೂ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರು, ಮಹಿಳೆಯರಿಗೆ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್‌ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಿಯಲ್ಲ. ಇದು ಮುಂದಾಲೋಚನೆ ಇಲ್ಲದ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜೆಎಂಎಸ್‌ ರಾಜ್ಯ ಘಟಕದ ಅಧ್ಯಕ್ಷೆ ವಿ. ಗೀತಾ ಮಾತನಾಡಿ, ‘ಜಿಎಸ್‌ಟಿ ಜಾರಿ ಕ್ರಮ ಪ್ರಸ್ತಾಪಿಸುವ ವೇಳೆ ಸರ್ಕಾರ ರಾಷ್ಟ್ರೀಯ ಪ್ರಮುಖ ಮತ್ತು ಅತ್ಯಂತ ಅನಿವಾರ್ಯ ಕೌಟುಂಬಿಕ ಅಗತ್ಯ ವಸ್ತುಗಳನ್ನು ತೆರಿಗೆ ವ್ಯವಸ್ಥೆಯಿಂದ ಹೊರಗಿಡುವುದಾಗಿ ಹೇಳಿತ್ತು. ಆದರೆ, ಆ ಭರವಸೆ ಹುಸಿಯಾಗಿದೆ. ತೆರಿಗೆ ಹೆಚ್ಚಳದಿಂದ ಸ್ಯಾನಿಟರಿ ನ್ಯಾಪ್ಕಿನ್‌ ಬೆಲೆ ಏರಿಕೆಯಾಗಿದೆ’ ಎಂದು ಹೇಳಿದರು.

‘ಹಿಂದೂ ಮಹಿಳೆಯರು ಬಳಸುವ ಸಿಂಧೂರ, ಆಭರಣ, ಬಳೆ, ಪೂಜಾ ಸಾಮಗ್ರಿಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟು, ಸ್ಯಾನಿಟರಿ ನ್ಯಾಪ್ಕಿನ್‌ಗೆ ಹೆಚ್ಚಿನ ತೆರಿಗೆ ಹಾಕಿರುವುದು ಖಂಡನೀಯ. ದೇಶದ ಪ್ರತಿ ಮಹಿಳೆಯೂ ಋತುಸ್ರಾವದ ಸಂದರ್ಭದಲ್ಲಿ ಬಳಸುವ ಸ್ಯಾನಿಟರಿ ನ್ಯಾಪ್ಕಿನ್‌ಗಳು ರಾಷ್ಟ್ರೀಯ ಪ್ರಮುಖ ಅಂಶವೆಂಬ ಅಥವಾ ಕೌಟುಂಬಿಕ ಅಗತ್ಯವೆಂಬ ಪ್ರಜ್ಞೆ ಸರ್ಕಾರಕ್ಕೆ ಇಲ್ಲವಾಗಿದೆ. ಮಹಿಳೆಯರ ಸಮಸ್ಯೆ ಅರಿಯುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದರು.

ಕಾಳಜಿ ಇಲ್ಲ: ಸರ್ಕಾರಕ್ಕೆ ಮಹಿಳಾ ಸಮುದಾಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸಾಧಕ ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸದೆ ತರಾತುರಿಯಲ್ಲಿ ತೆರಿಗೆ ಹೆಚ್ಚಿಸಿದೆ. ಸ್ಯಾನಿಟರಿ ನ್ಯಾಪ್ಕಿನ್‌ ಮೇಲಿನ ತೆರಿಗೆಯನ್ನು ಸಂಪೂರ್ಣ ರದ್ದುಪಡಿಸಬೇಕು.

ಜತೆಗೆ ಸುರಕ್ಷಿತ, ಪರಿಸರಸ್ನೇಹಿ ನ್ಯಾಪ್ಕಿನ್‌ಗಳು ಮಹಿಳೆಯರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜೆಎಂಎಸ್‌ ಸದಸ್ಯೆ ಮಂಜುಳಾ, ಎಸ್‍ಎಫ್‍ಐ ಸದಸ್ಯರಾದ ಗಾಯಿತ್ರಿ, ವಿಜಯಲಕ್ಷ್ಮಿ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT