ಶುಕ್ರವಾರ, ಡಿಸೆಂಬರ್ 6, 2019
21 °C

ಸ್ಥಳ ಗುರುತಿಸಲು ಗ್ರಾಮಸ್ಥರ ಅಸಹಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಥಳ ಗುರುತಿಸಲು ಗ್ರಾಮಸ್ಥರ ಅಸಹಕಾರ

ಕುಶಾಲನಗರ: ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗಾಗಿ ಮಂಜೂರಾಗಿರುವ ಜಾಗವನ್ನು ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಲು ಗುರುವಾರ ಬಂದಿದ್ದ ಕಂದಾಯ ಅಧಿಕಾರಿಗಳಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಬಂದಿದ್ದ ಕಂದಾಯ ಅಧಿಕಾರಿಗಳು ಹಾಗೂ ಸರ್ವೇ ಇಲಾಖಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧಕ್ಷೆ ಹಾಗೂ ಸದಸ್ಯರನ್ನು ಗುಮ್ಮನಕೊಲ್ಲಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಜಾಗವನ್ನು ಪರೀಶಿಲಿಸಲು ಯತ್ನಿಸಿದರು. ಆದರೆ, ಗ್ರಾಮಸ್ಥರ ಅಸಹಕಾರದಿಂದ ಸ್ಥಳ ಪರಿಶೀಲನೆ ಸಾಧ್ಯವಾಗದ್ದರಿಂದ ವಾಪಸ್ಸಾದರು.

ಘಟನೆ ವಿವರ: ಕಸವಿಲೇವಾರಿಗೆ ಸೂಕ್ತ ಜಾಗ ಗುರುತಿಸಿ ಅದನ್ನು ಮಂಜೂರು ಮಾಡಿಕೊಡುವಂತೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಮಾಡಿದ್ದರು.

ಅದರಂತೆ, ಜಿಲ್ಲಾಧಿಕಾರಿ ಅವರು ಗುಮ್ಮನಕೊಲ್ಲಿ ಗ್ರಾಮದ ಸರ್ವೇ ನಂ 5/1 ಪಿ ಯಲ್ಲಿ ತಲಾ 1 ಎಕರೆ ಕಸವಿಲೇವಾರಿಗೆ, ನಿವೇಶನ ರಹಿತರಿಗೆ ಹಾಗೂ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿ ಆದೇಶ ಹೊರಡಿಸಿದ್ದರಿಂದ ಮುಳ್ಳುಸೋಗೆ ಗ್ರಾ.ಪಂ.ಹೆಸರಿಗೆ ಆರ್.ಟಿ.ಸಿ  ಕೂಡ ಮಾಡಲಾಗಿದೆ.

ಅರ್‌ಟಿಸಿ ಪ್ರಕಾರ ಪಂಚಾಯಿತಿಗೆ ಮಂಜೂರಾಗಿರುವ ಜಾಗವನ್ನು ಗುರುತಿಸಿ ಸರಹದ್ದು ಗುರುತಿಸಿಕೊಂಡು ವಂತೆ ಒತ್ತಾಯಿಸಿ ಮುಳ್ಳುಸೋಗೆ ಗ್ರಾ.ಪಂ.ಆಡಳಿತ ಮಂಡಳಿ ಗುರುವಾರ ದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿ ದ್ದರಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಹಶೀಲ್ದಾರ್ ಮಹೇಶ್ ನೇತೃ ತ್ವದ ತಂಡ ಸ್ಥಳ ಪರಿಶೀಲನೆಗೆ ಬಂದಿತ್ತು.

ಅಲ್ಲದೆ, ಅವರು ಸ್ಥಳ ಗುರುತಿಸಿ ಕೊಡುವುದಾಗಿ ಪ್ರತಿಭಟನಾ ನಿರತರ ಮನವೊಲಿಸಿದ್ದರಿಂದ  ಗ್ರಾ.ಪಂ ಅಧ್ಯಕ್ಷೆ ಭವ್ಯಾ, ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ ಸದಸ್ಯರು ಪ್ರತಿಭಟನೆ ಕೈಬಿಟ್ಟು, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ತೆರಳಿದರು.

ಆದರೆ, ಕಂದಾಯ ಅಧಿಕಾರಿಗಳು ಈ ಹಿಂದೆ ಸರ್ವೇ ಮಾಡಿದ ಜಾಗವನ್ನು ಬಿಟ್ಟು ಸರ್ವೆ ನಂ 5/7ರ ಬಳಿ ಇರುವ ಕಲ್ಲುಬೆಟ್ಟ ಜಾಗವನ್ನು ತೋರಿಸಿ ಇದೇ ಜಾಗ ಮಂಜೂರಾಗಿರುವುದು ಎಂದು ಹೇಳಿದರು.

ಈ ವೇಳೆ ಗ್ರಾ.ಪಂ.ಸದಸ್ಯರು ಪಂಚಾಯಿತಿಗೆ ಮಂಜೂರಾಗಿರುವ ಜಾಗ ಇದಲ್ಲ. ಸರಿಯಾದ ಜಾಗವನ್ನು ಗುರುತಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಗ್ರಾ.ಪಂ.ಮಾಜಿ ಸದಸ್ಯ ರಾಜೇಶ್ ಹಾಗೂ ಎಂ.ವಿ.ಹರೀಶ್ ಕಸ ಹಾಕಲು ಜಾಗ ತೋರಿಸಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಇದರಿಂದ ಆಕ್ರೋಶಗೊಂಡ ಕಂದಾಯ ಅಧಿಕಾರಿ ನಂದಕುಮಾರ್  ಮಾಹಿತಿ ತಿಳಿಯದೆ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆಯಿತು. ಅಲ್ಲದೇ, ಜಾಗ ಪತ್ತೆ ಹಚ್ಚಲು ಅಧಿಕಾರಿಗಳಿಗೆ ಗ್ರಾಮಸ್ಥರು ಅಸಹಕಾರದಿಂದ ಸಾಧ್ಯವಾಗಲಿಲ್ಲ. ಭೂಮಾಪನ ಅಧಿಕಾರಿ ಹರಿಶ್ಚಂದ್ರ ಅವರು ನಕ್ಷೆ ಮೂಲಕ ಜಾಗ ಪತ್ತೆ ಗುರುತಿಸಲು ಮುಂದಾಗ ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಇಲ್ಲಿ ಕಸಹಾಕಲು ಜಾಗ ನೀಡಬೇಡಿ. ನಾವು ಇಲ್ಲಿ ಕಸ ಹಾಕಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಗೊಂದಲಕ್ಕೆ ಒಳಗಾದ ಕಂದಾಯ ಅಧಿಕಾರಿಗಳು ಜಾಗ ಗುರುತಿಸುವ ಕಾರ್ಯವನ್ನು ಅರ್ಧಕ್ಕೆ ಕೈಬಿಟ್ಟು ಹಿಂತಿರುಗಿದರು. ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಗ್ರಾ.ಪಂ. ಸದಸ್ಯ ಸಂತೋಷ್ ಅವರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಪ್ರತಿಕ್ರಿಯಿಸಿ (+)