ಭಾನುವಾರ, ಡಿಸೆಂಬರ್ 8, 2019
25 °C

‘ಕೂಡಲೇ ಸರ್ಕಾರಿ ಕಟ್ಟಡ ಖಾಲಿ ಮಾಡಿ’

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

‘ಕೂಡಲೇ ಸರ್ಕಾರಿ ಕಟ್ಟಡ ಖಾಲಿ ಮಾಡಿ’

ಬಾಗಲಕೋಟೆ: ಕಲಾದಗಿಯ ಮೊರಾರ್ಜಿ ವಸತಿ ಶಾಲೆ ಸ್ಥಳಾಂತರಕ್ಕೆ ತಾಲ್ಲೂಕಿನ ಯಡಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿರುವ ಮೂರು ಖಾಸಗಿ ಶಾಲೆಗಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ.

‘ಬಾಡಿಗೆ ಆಧಾರದ ಮೇಲೆ ನಡೆಸುತ್ತಿರುವ ಕಟ್ಟಡಗಳನ್ನು ಕೂಡಲೇ ಖಾಲಿ ಮಾಡುವಂತೆ ಕಳೆದ ಜೂನ್‌ 14ರಂದು ಮೊದಲ ನೋಟಿಸ್ ನೀಡಲಾಗಿತ್ತು. ಗುರುವಾರ ಮತ್ತೊಮ್ಮೆ ಮೌಖಿಕ ಸೂಚನೆ ನೀಡಲಾಗಿದೆ’ ಎಂದು ಯಡಹಳ್ಳಿ ಪುನರ್ವಸತಿ ಕೇಂದ್ರದ ಗುರುಬಸವ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ನೀಲಪ್ಪ ಗಾಣಿಗೇರ ತಿಳಿಸಿದರು.

ಯಡಹಳ್ಳಿ ಹಾಗೂ ಸೋರಕೊಪ್ಪ ಪುನರ್ವಸತಿ ಕೇಂದ್ರಗಳಲ್ಲಿನ ಸರ್ಕಾರಿ ಕಟ್ಟಡಗಳಲ್ಲಿ ಅಖಂಡೇಶ್ವರ ಮಾಧ್ಯಮಿಕ ಶಾಲೆ, ಗುರುಬಸವ ಪಬ್ಲಿಕ್ ಶಾಲೆ ಹಾಗೂ ಮಂಜುನಾಥ ಶಾಲೆ ಕಾರ್ಯನಿರ್ವಹಿಸುತ್ತಿವೆ. ಮೂರು ಶಾಲೆಗಳಲ್ಲಿ ಕಲಾದಗಿ, ತುಳಸಿಗೇರಿ, ದೇವನಾಳ, ಸಂಶಿ, ಕೆರೂರು,ಮಮಟಗೇರಿ, ಹೂಲಿಗೇರಿ, ಸೀಮಿಕೇರಿ, ಮುರನಾಳ, ಗದ್ದನಕೇರಿಯ 600ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಈ ವರ್ಷ ಅವಕಾಶ ನೀಡಲಿ: ‘ನಮಗೆ ಜೂನ್ ಮಧ್ಯಭಾಗದಲ್ಲಿ ಕಟ್ಟಡ ಖಾಲಿ ಮಾಡಲು ನೋಟಿಸ್ ನೀಡಲಾಗಿದೆ. ಆದರೆ ಅಷ್ಟೊತ್ತಿಗೆ ಶಾಲೆಯಲ್ಲಿ ದಾಖಲಾತಿ ಪೂರ್ಣಗೊಂಡಿದೆ. ಈಗ ದಿಢೀರನೆ ಕಟ್ಟಡ ಖಾಲಿ ಮಾಡುವಂತೆ ಸೂಚನೆ ನೀಡಿದರೆ ಎಲ್ಲಿಗೆ ಹೋಗುವುದು. ಮಕ್ಕಳ ಭವಿಷ್ಯವೇನು ಎಂದು ಗಾಣಿಗೇರ ಪ್ರಶ್ನಿಸುತ್ತಾರೆ. ನಾವು ಉತ್ತಮವಾಗಿ ನಿರ್ವಹಣೆ ಮಾಡಿದ ಕಾರಣ ಕಟ್ಟಡಗಳು ಸುಸ್ಥಿತಿಯಲ್ಲಿ ಉಳಿದುಕೊಂಡಿವೆ. ಇದೊಂದು ವರ್ಷ ಇಲ್ಲಿಯೇ ಶಾಲೆ ನಡೆಸಲು ಅವಕಾಶ ನೀಡಲಿ’ ಎಂದು ಹೇಳುತ್ತಾರೆ.

ಬಾಡಿಗೆ ಹೆಚ್ಚಳ: ‘ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್‌ವಸತಿ ಹಾಗೂ ಪುನರ್‌ ನಿರ್ಮಾಣ ವಿಭಾಗದ ಉಸ್ತುವಾರಿಯಲ್ಲಿರುವ 12 ಕೊಠಡಿಗಳ ಶಾಲಾ ಕಟ್ಟಡವನ್ನು ಗುರುಬಸವ ಶಾಲೆಗೆ ಮಾಸಿಕ ₹ 3,500 ಬಾಡಿಗೆ ನಿಗದಿ ಮಾಡಲಾಗಿದೆ. ಈಗ ಅದನ್ನು ಮಾಸಿಕ 23.500ಕ್ಕೆ ಹೆಚ್ಚಳಗೊಳಿಸಿ 79 ತಿಂಗಳಿಗೆ ಪೂರ್ವಾನ್ವಯವಾಗುವಂತೆ ₹ 17,09, 500 ಪಾವತಿ ಮಾಡುವಂತೆ ಏಪ್ರಿಲ್‌ ತಿಂಗಳಲ್ಲಿ ನೋಟಿಸ್ ನೀಡಲಾಗಿದೆ. ಕಟ್ಟಡ ಖಾಲಿ ಮಾಡಿಸುವುದಾಗಿದ್ದರೆ ಬಾಡಿಗೆ ಹೆಚ್ಚಳಗೊಳಿಸಿ ನೋಟಿಸ್ ನೀಡಿದ್ದಾರೆ. ಅದನ್ನು ನಂಬಿಕೊಂಡು ಇಲ್ಲಿಯೇ ಶಾಲೆ ಮುಂದುವರೆಸಿದ್ದೇವೆ’ ಎಂದು ಗಾಣಿಗೇರ ಅಳಲು ತೋಡಿಕೊಳ್ಳುತ್ತಾರೆ.

ಸ್ಥಳಾಂತರ ಅನಿವಾರ್ಯ?: ‘ಕಲಾದಗಿಯ ಮೊರಾರ್ಜಿ ವಸತಿ ಶಾಲೆಯನ್ನು ಬಾಡಿಗೆ ಕಟ್ಟಡದಿಂದ ಬೇರೆಡೆಗೆ ಸ್ಥಳಾಂತರ ಮಾಡದಂತೆ ಮೊದಲಿಂದಲೂ ಅಧಿಕಾರಿಗಳ ಮೇಲೆ ರಾಜಕೀಯ ಮುಖಂಡರೊಬ್ಬರು ಒತ್ತಡ ಹಾಕುತ್ತಾ ಬಂದಿದ್ದಾರೆ. ಇದರಿಂದ ಶಾಲೆ ಸ್ಥಳಾಂತರಿಸುವ ಹಲವು ವರ್ಷಗಳ ಪ್ರಯತ್ನಕ್ಕೆ ಹಿನ್ನಡೆಯಾಗಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ. ‘ಹಿಂದೆ ಸ್ಥಳೀಯ ಪ್ರಭಾವಗಳ ಕಾರಣ ಸುಮ್ಮನೆ ಇರುತ್ತಿದ್ದೆವು. ಆದರೆ ಈಗ ಶಾಲೆ ಸ್ಥಳಾಂತರ ಅನಿವಾರ್ಯವಾಗಿದೆ.

ಶಿಥಿಲಗೊಂಡಿರುವ ಬಾಡಿಗೆ ಕಟ್ಟಡದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಳವಳ ವ್ಯಕ್ತಪಡಿಸಿದೆ.  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಿಗೆ ಸ್ಪಷ್ಟನೆ ಕೇಳಿ ಪತ್ರ ಬರೆಯಲಾಗಿದೆ. ಜೊತೆಗೆ ಮಕ್ಕಳ ರಕ್ಷಣಾ ಆಯೋಗಕ್ಕೂ ದೂರು ನೀಡಲಾಗಿದೆ. ಹಾಗಾಗಿ ಈ ಬಾರಿ ಸ್ಥಳಾಂತರಿಸಲೇಬೇಕಿದೆ. ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾಪಂಚಾಯ್ತಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಬೂಬು ಸರಿಯಲ್ಲ, ಖಾಲಿ ಮಾಡಲಿ..

‘ಯಡಹಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಸರ್ಕಾರಿ ಕಟ್ಟಡಗಳನ್ನು ಖಾಲಿ ಮಾಡುವಂತೆ ಎರಡು ವರ್ಷಗಳಿಂದಲೂ ಮೂರು ಶಾಲೆಗಳ ಆಡಳಿತ ಮಂಡಳಿಯ ವರಿಗೆ ಹೇಳುತ್ತಲೇ ಬಂದಿದ್ದೇವೆ. ಮೌಖಿಕ ಸೂಚನೆಗೆ ಅವರು ಮಣಿಯದ ಕಾರಣ ಅನಿವಾರ್ಯವಾಗಿ ನೋಟಿಸ್ ನೀಡಿದ್ದೇವೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್ ಸುರಳಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಕ್ಕೆ ಅಗತ್ಯವಿದ್ದಾಗ ಕಟ್ಟಡ ಖಾಲಿ ಮಾಡಿಕೊಡುವುದಾಗಿ ಮೊದಲೇ ಆಡಳಿತ ಮಂಡಳಿ ಯವರು ಬರೆದುಕೊಟ್ಟಿದ್ದಾರೆ. ಈಗ ಸಬೂಬು ಹೇಳಿದರೆ ಕೇಳಲಾಗು ವುದಿಲ್ಲ. ಕಲಾದಗಿಯ ಬಾಡಿಗೆ ಕಟ್ಟಡದಲ್ಲಿ ಮೊರಾರ್ಜಿ ವಸತಿ ಶಾಲೆ ನಡೆಯುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಇಲ್ಲಿಗೆ ಸ್ಥಳಾಂತರಿಸಬೇಕಿದೆ.

ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಂಡ ಮೇಲೆ ಅಗತ್ಯ ಸೌಕರ್ಯ ಕಲ್ಪಿಸುವುದು ಅವರ ಜವಾಬ್ದಾರಿ.  ಅಗತ್ಯ ಬಿದ್ದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾ ಗುವುದು’ ಎಂದು ವಿಕಾಸ್ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)