ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌, ಉಪಾಧ್ಯಕ್ಷೆ ಕಿತ್ತಾಟ: ಕಚೇರಿಗೆ ಬೀಗ!

ರಾಮನಗರದ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಕಚೇರಿ ಬಂದ್: ದಿನವಿಡೀ ಹೊರಗೆ ನಿಂತ ಸಿಬ್ಬಂದಿ
Last Updated 14 ಜುಲೈ 2017, 20:32 IST
ಅಕ್ಷರ ಗಾತ್ರ

ರಾಮನಗರ: ಅಧಿಕಾರಿ ಜೊತೆಗಿನ ವೈಮಸ್ಯದಿಂದಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯೇ ಇಲ್ಲಿನ ಜಿ.ಪಂ. ಭವನದಲ್ಲಿರುವ ಪಂಚಾಯತ್‌ರಾಜ್ ಎಂಜಿನಿಯರಿಂಗ್‌ ಕಚೇರಿಗೆ ಬೀಗ ಹಾಕಿಸಿದ ಪ್ರಸಂಗ ನಡೆಯಿತು. ಶುಕ್ರವಾರ ಸಂಜೆ ಹೊತ್ತಿಗೆ ಕೀಲಿ ಪಡೆದು ಬೀಗ ತೆರೆಯಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್ ಅವರು ತಮ್ಮ ಬೆಂಬಲಿಗರಿಗೆ ಪಂಚಾಯತ್‌ರಾಜ್‌ ಕಚೇರಿಗೆ ಬೀಗ ಹಾಕುವಂತೆ ಸೂಚಿಸಿದ್ದು, ಗುರುವಾರ ಸಂಜೆಯೇ ಕಚೇರಿಗೆ ಬೀಗ ಹಾಕಿ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು, 10.30 ಗಂಟೆಯಾದರೂ ಬಾಗಿಲು ತೆರೆಯಲಿಲ್ಲ. ಈ ಕುರಿತು ವಿಚಾರಿಸಲಾಗಿ ಉಪಾ ಧ್ಯಕ್ಷೆಯ ಕಡೆಯವರು ಬೀಗ ಹಾಕಿ ಹೋಗಿರುವುದಾಗಿ ತಿಳಿದುಬಂತು. ಈ ಕಚೇರಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ದಿಕ್ಕು ತೋಚದ ಅವರು ಕಚೇರಿಯ ಹೊರಭಾಗದ ಒಂದು ಮೂಲೆಯಲ್ಲಿ ಕುಳಿತರು.

ಪ್ರತಿಭಟನೆ: ವಿಷಯ ತಿಳಿದು ಜೆಡಿಎಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಉಪಾಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರು. ‘ಜನಪ್ರತಿನಿಧಿಯಾಗಿದ್ದು ಜವಾಬ್ದಾರಿ ತೋರಬೇಕಾದವರೇ ತಮ್ಮ ವೈಯಕ್ತಿಕ ಜಗಳದಿಂದಾಗಿ ಸರ್ಕಾರಿ ಕಚೇರಿಗೇ ಬೀಗ ಹಾಕಿಸಿ ಕರ್ತವ್ಯಕ್ಕೆ ಅಡ್ಡಿಸಿರುವುದು ಖಂಡನೀಯ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ದಿವ್ಯಾ ಅವರ ಈ ವರ್ತನೆ ಪ್ರಜಾತಂತ್ರ ವಿರೋಧಿ ನಡೆಯಾಗಿದೆ. ಕೂಡಲೇ ಅವರು ಕ್ಷಮೆ ಯಾಚಿಸಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಯುವ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ಮೂರ್ತಿ ಇತರರು ಒತ್ತಾಯಿಸಿದರು.

ಸಿಇಒ ಭೇಟಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಯ್ಯ ಅವರ ಕಾರ್ಯವೈಖರಿ ಬಗ್ಗೆ ಗುರುವಾರ ಸಂಜೆ ಉಪಾಧ್ಯಕ್ಷೆ ದಿವ್ಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬೆಳಿಗ್ಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ಆದರೆ ಏಕಾಏಕಿ ಕಚೇರಿಗೆ ಬೀಗ ಹಾಕಲಾಗಿದೆ.

ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಹೇಳಿದರು.

**

ಇಬ್ಬರ ನಡುವಿನ ಸಮಸ್ಯೆ ಏನು?

ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಯ್ಯ ಹಾಗೂ ದಿವ್ಯಾ ಗಂಗಾಧರ್‌ ಅವರ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇತ್ತು. ಮಾಗಡಿ ವಿಭಾಗದ ಎಂಜಿನಿಯರ್‌ ಒಬ್ಬರ ವರ್ಗಾವಣೆ ಸಂಬಂಧ ಉಪಾಧ್ಯಕ್ಷರ ಬೇಡಿಕೆಗೆ ಅಧಿಕಾರಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿ ಗುರುವಾರ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ ನಾಗಯ್ಯ ‘ಬೇಕಿದ್ದರೆ ಕಚೇರಿಗೆ ಬೀಗ ಹಾಕಿಸಿ’ ಎಂದಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಉಪಾಧ್ಯಕ್ಷೆ ಬೀಗ ಹಾಕಲು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು ಎನ್ನಲಾಗಿದೆ.

**

ದೂರು ದಾಖಲು

ಸರ್ಕಾರಿ ಸಿಬ್ಬಂದಿ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಿ.ಪಂ, ಉಪಾಧ್ಯಕ್ಷೆ ದಿವ್ಯಾ ವಿರುದ್ಧ ರಾಮನಗರ ಟೌನ್‌ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.

‘ಬೆಳಿಗ್ಗೆ ಬಂದು ನೋಡಿದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ಅದನ್ನು ತೆರೆಯಲೂ ಅಡ್ಡಿಪಡಿಸಲಾಯಿತು. ಇದಕ್ಕೆ ಕಾರಣರಾದ ದಿವ್ಯಾ ಮತ್ತು ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಇ.ಇ. ನಾಗಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

**

ಇಲಾಖೆಯ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ಕಚೇರಿಗೆ ಬೀಗ ಹಾಕಿ ಎಂದು ನಾನೇ ಹೇಳಿದ್ದೆ
-ದಿವ್ಯಾ ಗಂಗಾಧರ್‌,
ಉಪಾಧ್ಯಕ್ಷೆ, ಜಿಲ್ಲಾ ಪಂಚಾಯಿತಿ

**

ಬೆಳಿಗ್ಗೆ ಇಲ್ಲಿಗೆ ಬಂದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ
-ನಾಗಯ್ಯ,
ಇ.ಇ. ಎಂಜಿನಿಯರಿಂಗ್‌ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT