ಭಾನುವಾರ, ಡಿಸೆಂಬರ್ 15, 2019
23 °C

ಜೈಲು ಡಿಜಿಪಿ ವಿರುದ್ಧ ಸಾಕ್ಷ್ಯನಾಶ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಲು ಡಿಜಿಪಿ ವಿರುದ್ಧ ಸಾಕ್ಷ್ಯನಾಶ ಆರೋಪ

ಬೆಂಗಳೂರು: ‘ಕೇಂದ್ರ ಕಾರಾಗೃಹದ ಅಕ್ರಮದ ಬಗ್ಗೆ  ಮೊದಲನೇ ವರದಿ ನೀಡಿದ್ದ ಬಳಿಕ  ನೀವು (ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣ ರಾವ್‌) ಆರೋಪಗಳಿಗೆ ಸಂಬಂಧ ಪಟ್ಟ ಸಾಕ್ಷ್ಯಗಳನ್ನು ನಾಶ ಮಾಡಿದ್ದೀರಿ. ಇದಕ್ಕೆ ನೀವೇ ಉತ್ತರಿಸಿ, ಸಾಕ್ಷ್ಯಗಳನ್ನು ಹುಡುಕಿಕೊಡಬೇಕು’ ಎಂದು ಡಿಐಜಿ ಡಿ.ರೂಪಾ, ಡಿಜಿಪಿಗೆ ಶನಿವಾರ ಮತ್ತೊಂದು ವರದಿ ಸಲ್ಲಿಸಿದ್ದಾರೆ.

‘ಕೇಂದ್ರ ಕಾರಾಗೃಹಕ್ಕೆ ಜುಲೈ 10ರಂದು ಬೆಳಿಗ್ಗೆ ಭೇಟಿ ಕೊಟ್ಟು ಬಂದ ಬಳಿಕ  ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳು ಹಾಗೂ ಹಲವು ಸಾಕ್ಷ್ಯಗಳು ನಾಶವಾಗಿವೆ. ಕೆಳಹಂತದ ಅಧಿಕಾರಿಗಳನ್ನು ಬಳಸಿಕೊಂಡು ನೀವೇ (ಡಿಜಿಪಿ) ಈ ರೀತಿ ಮಾಡಿರುವ ಅನುಮಾನವಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ’ ಎಂದು ವರದಿಯಲ್ಲಿ ಪ್ರಶ್ನಿಸಿರುವುದಾಗಿ  ಗೊತ್ತಾಗಿದೆ.

‘ಅಂದು ಬೆಳಿಗ್ಗೆಯಿಂದ ಸಂಜೆ 6.30 ರವರೆಗೂ ಜೈಲಿನಲ್ಲಿದ್ದು, ಸಿಬ್ಬಂದಿ ಹಾಗೂ ಕೈದಿಗಳನ್ನು ಮಾತನಾಡಿಸಿದ್ದೇನೆ. ಈ ಎಲ್ಲ ಸಂಗತಿಗಳನ್ನು ಸಿಬ್ಬಂದಿ ಮೂಲಕ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿಸಿದ್ದೆ. ಆ ದೃಶ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ಕೊಡುವುದಾಗಿ ಜೈಲು ಅಧೀಕ್ಷಕ ಕೃಷ್ಣಕುಮಾರ್‌ ತಿಳಿಸಿದ್ದರು’

‘ಮರುದಿನವೂ ಅವರು ಪೆನ್‌ಡ್ರೈವ್‌ ಕೊಟ್ಟಿರಲಿಲ್ಲ. ಈ ನಡುವೆಯೇ ಆ ಪೆನ್‌ಡ್ರೈವ್‌ನಲ್ಲಿದ್ದ ದೃಶ್ಯಗಳನ್ನು ನೀವೇ (ಡಿಜಿಪಿ) ನೋಡಿದ್ದೀರಾ ಎಂದು ಗೊತ್ತಾಗಿದೆ.’

‘ನಾನು ಒತ್ತಾಯ ಮಾಡಿದ್ದರಿಂದ ಎರಡು ದಿನಗಳ ನಂತರ ಜೈಲು ಅಧೀಕ್ಷಕರು, ಆ ಪೆನ್‌ಡ್ರೈವ್‌ ತಂದುಕೊಟ್ಟಿದ್ದಾರೆ. ಆರಂಭದಲ್ಲಿ ಪರಿಶೀಲಿಸಿದಾಗ ಅದು ಖಾಲಿ ಇತ್ತು.  ಅದನ್ನು ಪ್ರಶ್ನಿಸಿ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದರಿಂದ ಮರುದಿನ  ಇನ್ನೊಂದು ಪೆನ್‌ಡ್ರೈವ್‌್ ಕೊಟ್ಟಿದ್ದಾರೆ’ ಎಂದು ವರದಿಯಲ್ಲಿ ಬರೆಯಲಾಗಿದೆ.

‘ಆ ಪೆನ್‌ಡ್ರೈವ್‌ನಲ್ಲಿದ್ದ ಶೇ 30ರಷ್ಟು ವಿಡಿಯೊಗಳು ಅಳಿಸಿಹೋಗಿವೆ. ಶಶಿಕಲಾ ಹಾಗೂ ಅಬ್ದುಲ್‌ ಕರೀಂಲಾಲ್‌ ತೆಲಗಿಗೆ ನೀಡುತ್ತಿರುವ ವಿಶೇಷ ಆತಿಥ್ಯದ ದೃಶ್ಯಗಳು ಅದರಲ್ಲಿದ್ದವು’ ಎಂದು ವರದಿಯಲ್ಲಿ ರೂಪಾ ಅಭಿಪ್ರಾಯಪಟ್ಟಿದ್ದಾರೆ.

ಜೈಲು ಅಧಿಕಾರಿ ಹೇಳಿಕೆ ದಾಖಲು: ‘ಡಿಜಿಪಿ ಮೇಲಿರುವ ಲಂಚದ ಆರೋಪ ಹಾಗೂ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಜೈಲಿನ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಅದನ್ನು ಸಹ ಈ ವರದಿಯೊಂದಿಗೆ ಲಗತ್ತಿಸಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

‘ವಿಡಿಯೊ ಸಹಿತ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಈ ವರದಿಯೊಂದಿಗೆ ನೀಡಿದ್ದೇನೆ. ಇದರ ಆಧಾರದಲ್ಲಿ  ತಪ್ಪಿತಸ್ಥರ ವಿರುದ್ಧ  ಕ್ರಮ ಜರುಗಿಸಿ ಎಂದು ಕೋರುತ್ತೇನೆ. ನೀವೇ ಖುದ್ದು ತನಿಖೆ ನಡೆಸಿದರೂ ಸಹಕರಿಸುತ್ತೇನೆ’ ಎಂದು ರೂಪಾ ಬರೆದಿರುವುದಾಗಿ ಗೊತ್ತಾಗಿದೆ.

ತನಿಖೆ ನಡೆಸಿದರೆ ಲಂಚದ ವಿಷಯವೂ ಬಯಲು: ‘ಮೊದಲ ವರದಿಯಲ್ಲಿ ತಿಳಿಸಿದಂತೆ ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ₹ 2 ಕೋಟಿ ಲಂಚ ಪಡೆಯಲಾಗಿದೆ ಎಂಬುದು ಕಾರಾಗೃಹಗಳ ಇಲಾಖೆಯ ಪ್ರತಿಯೊಬ್ಬರಿಗೂ ಗೊತ್ತಿದೆ. ಆ ಬಗ್ಗೆ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಶಶಿಕಲಾಗೆ ವಿಶೇಷ ಅಡುಗೆ ಮನೆ, ಆಕೆಯ ಭೇಟಿಗೆ ವಿಶೇಷ ಕೊಠಡಿ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಕಾರಾಗೃಹದ ಕೆಲ ಸಿಬ್ಬಂದಿ ಹೇಳಿದ್ದಾರೆ. ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ. ಆ ಬಗ್ಗೆ ದಾಖಲೆಗಳನ್ನು ಅವರೇ ಕೊಟ್ಟಿದ್ದಾರೆ. ಹೀಗಾಗಿ ಈ ವಿಷಯವನ್ನು ನಿಮ್ಮ (ಡಿಜಿಪಿ) ಗಮನಕ್ಕೆ ತರುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಡಿಜಿಪಿ ಕೈಗೆ ವರದಿ ಸಲ್ಲಿಕೆ: ಜುಲೈ 12ರಂದು ಡಿಜಿಪಿ ಸತ್ಯನಾರಾಯಣರಾವ್‌ ಅವರ ಆಪ್ತ ಸಹಾಯಕರ ಕೈಗೆ ಡಿಐಜಿ ರೂಪಾ ವರದಿ ಸಲ್ಲಿಸಿದ್ದರು.  ಅದು ಮರುದಿನ ಡಿಜಿಪಿಗೆ ತಲುಪಿತ್ತು.  ಅದೇ ಕಾರಣಕ್ಕಾಗಿ ರೂಪಾ, ಶನಿವಾರ ಮಧ್ಯಾಹ್ನ ಖುದ್ದಾಗಿ ಡಿಜಿಪಿಯನ್ನು ಭೇಟಿಯಾಗಿ ವರದಿ ನೀಡಿದರು.

ಶೇಷಾದ್ರಿ ರಸ್ತೆಯಲ್ಲಿರುವ ಕಾರಾಗೃಹಗಳ ಇಲಾಖೆಯ ಕಚೇರಿಯಲ್ಲಿರುವ ತಮ್ಮ ಕೊಠಡಿಗೆ ಬೆಳಿಗ್ಗೆ 11 ಗಂಟೆಗೆ ಬಂದಿದ್ದ ಅವರು, ಒಂದು ಗಂಟೆಗೂ ಹೆಚ್ಚು ಕಾಲ  ಅಲ್ಲಿಯೇ ಕುಳಿತು ವರದಿಯನ್ನು ಅಂತಿಮಗೊಳಿಸಿದರು.

ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಡಿಜಿಪಿ ಸತ್ಯನಾರಾಯಣ ಅವರಿದ್ದ ಕೊಠಡಿಗೆ ಹೋಗಿ ವರದಿ ಕೊಟ್ಟು, ಮೂರೇ ನಿಮಿಷದಲ್ಲೇ ಹೊರಬಂದರು.

ಬಳಿಕ ತಮ್ಮ ಆಪ್ತ ಸಹಾಯಕರ ಮೂಲಕ ವರದಿಯ ಪ್ರತಿಗಳನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಅವರಿಗೂ  ಕಳುಹಿಸಿಕೊಟ್ಟರು. ಮಧ್ಯಾಹ್ನ ಊಟಕ್ಕೆಂದು ಕೊಠಡಿಯಿಂದ ಹೊರಬಂದ ರೂಪಾ, ‘ವರದಿ ಕೊಟ್ಟಿದ್ದೇನೆ’ ಎಂದಷ್ಟೇ ಹೇಳಿ ಹೊರಟು ಹೋದರು. ಅವರ ಹಿಂದೆಯೇ ಬಂದ ಡಿಜಿಪಿ ಸತ್ಯನಾರಾಯಣರಾವ್‌, ವರದಿ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.

ಬೆಂಗಳೂರಿಗೆ ಬಂದ ತನಿಖಾಧಿಕಾರಿ

ಕಾರಾಗೃಹದ ಅಕ್ರಮ ಹಾಗೂ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಲು ನೇಮಕಗೊಂಡಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌, ಶನಿವಾರ ಸಂಜೆ ಬೆಂಗಳೂರಿಗೆ ಬಂದಿದ್ದಾರೆ. ನಿವೃತ್ತಿ ಬಳಿಕ ಅವರು ದೆಹಲಿಯಲ್ಲಿ ವಾಸವಿದ್ದರು. ಮುಖ್ಯಮಂತ್ರಿ ಅವರ ಆದೇಶದನ್ವಯ ರಾಜ್ಯಕ್ಕೆ ವಾಪಸ್‌ ಬಂದಿದ್ದು, ಸೋಮವಾರದಿಂದ ತನಿಖೆ ಆರಂಭಿಸಲಿದ್ದಾರೆ ಎಂದು ಗೊತ್ತಾಗಿದೆ.

ಜೈಲಿಗೆ ಡಿಜಿಪಿ–ಡಿಐಜಿ ಭೇಟಿ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮದ ಬಗ್ಗೆ  ಡಿಐಜಿ ಡಿ.ರೂಪಾ ಹಾಗೂ ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣರಾವ್‌ ನಡುವಿನ ತಿಕ್ಕಾಟ  ಮುಂದುವರಿದಿದ್ದು, ಅವರಿಬ್ಬರು ಶನಿವಾರ ಜೈಲಿಗೆ ಪ್ರತ್ಯೇಕವಾಗಿ ಭೇಟಿ ನೀಡಿದರು. ಈ ವೇಳೆ ಜೈಲಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಡಿಜಿಪಿ ಸತ್ಯನಾರಾಯಣರಾವ್‌ ಜೈಲಿಗೆ ಭೇಟಿ ಕೊಟ್ಟರು. ಈ ವೇಳೆ ಅಧಿಕಾರಿಗಳು ಹಾಗೂ ಕೈದಿಗಳ ಜತೆ ಮಾತುಕತೆ ನಡೆಸಿದರು ಎಂದು ಗೊತ್ತಾಗಿದೆ.

‘ಜುಲೈ 10ರಂದು ಜೈಲಿಗೆ ಭೇಟಿ ನೀಡಿದ್ದ ಡಿಐಜಿ ಡಿ.ರೂಪಾ ದಿನಚರಿ ಪುಸ್ತಕದಲ್ಲಿ ಕೆಲ ಅಂಶಗಳನ್ನು ಬರೆದಿದ್ದರು. ಅವುಗಳನ್ನು ಡಿಜಿಪಿ ಪರಿಶೀಲಿಸಿದ್ದಾರೆ. ಜತೆಗೆ ಅದರ ಪ್ರತಿಯನ್ನೂ ಸಂಗ್ರಹಿಸಿದ್ದಾರೆ’ ಎಂದು ಜೈಲಿನ ಮೂಲಗಳು ತಿಳಿಸಿವೆ. ಜೈಲಿನಿಂದ ಹೊರಬಂದ ಡಿಜಿಪಿ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟುಹೋದರು.

ಇದಾದ ನಂತರ, ಮಧ್ಯಾಹ್ನ 3.30ರ ಸುಮಾರಿಗೆ ಡಿಐಜಿ ಡಿ.ರೂಪಾ ಅವರೂ ಜೈಲಿಗೆ ಭೇಟಿ ನೀಡಿದರು. ಪರಪ್ಪನ ಅಗ್ರಹಾರ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಜತೆ ಜೈಲಿನ ಒಳಗೆ ಹೋದ ಅವರು, ಕೆಲ ಸಿಬ್ಬಂದಿಯನ್ನು ಭೇಟಿ ಮಾಡಿದರು.

ಕಾರಾಗೃಹದ ಆವರಣದಲ್ಲಿ ರೂಪಾ ಸಂಚರಿಸುತ್ತಿದ್ದ ವೇಳೆ ಬ್ಯಾರಕ್‌ನಲ್ಲಿದ್ದ ಕೆಲ ಕೈದಿಗಳು, ಅವರ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ಬಿಗಡಾಯಿಸುವ ಲಕ್ಷಣಗಳು ಗೋಚರಿಸಿದ್ದರಿಂದ  ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಜೈಲಿನ ಬಳಿ ಹೋಗಿ ನಿಂತಿದ್ದರು. 

ಸಂಜೆ 5.30 ಗಂಟೆಯ ಸುಮಾರಿಗೆ ಜೈಲಿನಿಂದ ಹೊರಬಂದ ಅವರು, ಅಲ್ಲಿಂದ ಪರಪ್ಪನ ಅಗ್ರಹಾರ ಠಾಣೆಗೆ ತೆರಳಿದರು. ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕೈದಿ ಮೇಲೆ ಅಧೀಕ್ಷಕರಿಂದ ಹಲ್ಲೆ ಆರೋಪ: ‘ರೂಪಾ ಅವರಿಗೆ ಮಾಹಿತಿ ನೀಡಿದ್ದಕ್ಕಾಗಿ ತಮ್ಮ ಪತಿ ರಾಮಮೂರ್ತಿ ಮೇಲೆ ಜೈಲು ಅಧೀಕ್ಷಕ ಕೃಷ್ಣಕುಮಾರ್‌ ಹಲ್ಲೆ ಮಾಡಿದ್ದಾರೆ’ ಎಂದು ಪತ್ನಿ ಅನಿತಾ ದೂರಿದ್ದಾರೆ. ರಾಮಮೂರ್ತಿ ಅವರು ಶಿಕ್ಷೆ ಅನುಭವಿಸುತ್ತಿರುವ ಕೈದಿ.

ಜೈಲಿನ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಅವರು, ‘ಕೊರಳು ಪಟ್ಟಿ ಹಿಡಿದು ಎಳೆದಾಡಿ ಅಧೀಕ್ಷಕರು ಹಲ್ಲೆ ನಡೆಸಿದ್ದಾರೆ. ಸಹ ಕೈದಿಗಳೇ ಅವರನ್ನು ರಕ್ಷಿಸಿದ್ದಾರೆ. ಮಧ್ಯಾಹ್ನ ಪತಿಯನ್ನು ಭೇಟಿಯಾಗಲು ಬಂದಿದ್ದೆ. ಈ ವೇಳೆ ಹಲ್ಲೆಯ ವಿಷಯ ಗೊತ್ತಾಗಿದೆ’ ಎಂದು ಅನಿತಾ ಅವರು ಹೇಳಿದರು.

‘15 ವರ್ಷಗಳಿಂದ ಪತಿ ಜೈಲಿನಲ್ಲಿ ಇದ್ದಾರೆ. ಅಲ್ಲಿಯ ಅಕ್ರಮಗಳ ಬಗ್ಗೆ ರೂಪಾ ಅವರಿಗೆ ತಿಳಿಸಿದ್ದಕ್ಕೆ ಅಧೀಕ್ಷರು ಈ ರೀತಿ ಮಾಡಿದ್ದಾರೆ. ಅದಕ್ಕೆ ದಾಖಲೆಗಳೂ ನನ್ನ ಬಳಿ ಇವೆ’ ಎಂದು ತಿಳಿಸಿದರು.

‘ನ್ಯಾಯಾಂಗ ವಿಚಾರಣೆಯಾಗಲಿ’

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಲಂಚ ಪ್ರಕರಣ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಸಬೇಕು ಎಂದು ಶಾಸಕ ಆರ್. ಅಶೋಕ್ ಒತ್ತಾಯಿಸಿದರು.

‘ಕಾರಾಗೃಹದ ಡಿಐಜಿ ಡಿ.ರೂಪಾ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ  ಅನೇಕ ಸ್ಫೋಟಕ ಸತ್ಯಗಳು ಬಹಿರಂಗಗೊಂಡಿವೆ. ಕೈದಿಗಳಿಗೆ ರಾಜಾತಿಥ್ಯ ನೀಡಲು ಜೈಲಿನ ಹಿರಿಯ ಅಧಿಕಾರಿಗಳು ಲಂಚ ಪಡೆದಿರುವ ಪ್ರಕರಣ ಬಯಲಾಗಿದೆ. ನ್ಯಾಯಾಂಗ ವಿಚಾರಣೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ’ ಎಂದು ಅವರು ಶನಿವಾರ  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪರಪ್ಪನ ಅಗ್ರಹಾರದಲ್ಲಿರುವ ಅಧಿಕಾರಿಗಳು ಹಣದ ಆಸೆಗೆ ಬಲಿಯಾಗಿರುವುದರಿಂದ ಕೈದಿಗಳಿಗೆ ಮದ್ಯ, ಡ್ರಗ್ಸ್‌, ಮನೆಯ ಊಟ ಹೀಗೆ ಎಲ್ಲ ಸವಲತ್ತುಗಳು ಸಿಗುತ್ತಿವೆ. ಇದನ್ನು ನಿಯಂತ್ರಿಸದಿದ್ದರೆ ಮುಂದೊಂದು ದಿನ ಅಪರಾಧಿಗಳು ಜೈಲೇ ಸುರಕ್ಷಿತ ಸ್ಥಳ ಎಂದು ನಿರ್ಧರಿಸಿದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು.

‘ಜೈಲಿನ ಅಧಿಕಾರಿಗಳ ಲಂಚ ಪ್ರಕರಣದಲ್ಲಿ ತಮಿಳುನಾಡಿನ ವಿ. ಶಶಿಕಲಾ ಅವರನ್ನು ಹರಕೆಯ ಕುರಿ ಮಾಡುವ ಬದಲು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಕಾರಾಗೃಹದಲ್ಲಿನ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ, ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಪ್ರಮಾಣಿಕ ಅಧಿಕಾರಿಗಳು ಮುಂದಾದರೆ ಅವರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತದೆ. ಮುಖ್ಯಮಂತ್ರಿ ನಿರ್ಲಕ್ಷ್ಯವೇ ಇದೆಲ್ಲವುಗಳಿಗೆ ಕಾರಣ ಎಂದರು. ಜನರಿಗೆ ಹಲವು ಭಾಗ್ಯ ನೀಡಿರುವುದಾಗಿ ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ, ‘ಜೈಲಿನಲ್ಲಿರುವರಿಗೆ ‘ಸಕಲ ಸೌಭಾಗ್ಯ ನೀಡಲಿ’ ಎಂದು ವ್ಯಂಗ್ಯ ಮಾಡಿದರು.

ಕೈದಿಗಳ ಪ್ರತಿಭಟನೆ

ಡಿಜಿಪಿ ಹಾಗೂ ಡಿಐಜಿ ಪರ  ಎರಡು ಗುಂಪುಗಳಾಗಿರುವ ಕೈದಿಗಳು, ಶನಿವಾರ ರಾತ್ರಿ  ಕಾರಾಗೃಹದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಪರಸ್ಪರ ಘೋಷಣೆ ಕೂಗಿದರು. 

ಮುಂಜಾಗ್ರತಾ ಕ್ರಮವಾಗಿ ಆಗ್ನೇಯ ವಿಭಾಗದ ಪೊಲೀಸರು, ಕಾರಾಗೃಹಕ್ಕೆ ಬಂದು ಭದ್ರತೆ ಒದಗಿಸಿದರು.

ಈ ಬಗ್ಗೆ ಮಾತನಾಡಿದ ಡಿಸಿಪಿ ಬೋರಲಿಂಗಯ್ಯ, ‘ಜೈಲು ಅಧೀಕ್ಷಕರು ಭದ್ರತೆ ನೀಡುವಂತೆ ಕೋರಿದ್ದರಿಂದ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)