ಭಾನುವಾರ, ಡಿಸೆಂಬರ್ 8, 2019
21 °C

ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣದ ಜಾಗ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣದ ಜಾಗ ಬದಲು

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ನಾಗವಾರ– ಗೊಟ್ಟಿಗೆರೆ ಮಾರ್ಗದಲ್ಲಿ (ರೀಚ್‌ 6) ನಾಗವಾರ– ಡೇರಿವೃತ್ತ ನಡುವಿನ ಸುರಂಗ ಮಾರ್ಗದ  ನಕ್ಷೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ವೆಬ್‌ಸೈಟ್‌ನಲ್ಲಿ (http://kannada.bmrc.co.in) ಪ್ರಕಟಿಸಿದೆ.

ಈ ಹಿಂದೆ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ನಿಗಮವು ಪ್ರಕಟಿಸಿರುವ ನಕ್ಷೆ ಪ್ರಕಾರ  ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣವು ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಸುಮಾರು 300 ಮೀಟರ್‌ ದೂರದಲ್ಲಿರಲಿದೆ.  ನ್ಯೂಬ್ಯಾಂಬೂ ಬಜಾರ್‌ ರಸ್ತೆ ಹಾಗೂ ಧನಕೋಟಿ ರಸ್ತೆ ನಡುವೆ, ಅಬ್ದುಲ್ಲ ಬ್ಯಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದೆ. ಈ ಮೈದಾನ ಬಿಬಿಎಂಪಿ ಸ್ವತ್ತು.

‘ಈ ಹಿಂದೆ ಗುರುತಿಸಿದ್ದ ಸ್ಥಳದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ಹೆಚ್ಚು ಭೂಸ್ವಾಧೀನ ನಡೆಸಬೇಕಾಗಿತ್ತು. ಈಗ ನಾವು ಬಿಬಿಎಂಪಿ ಜಾಗವನ್ನು ಬಳಸಿಕೊಳ್ಳಲಿದ್ದೇವೆ. ಇಲ್ಲಿ ಮೈದಾನ ಇದೆ.   ಕಟ್ಟಡಗಳನ್ನು ನೆಲಸಮ ಮಾಡುವ ಪ್ರಮೇಯವೂ ಎದುರಾಗದು.     ಇಲ್ಲಿ ಜನರಿಗೂ ಸಮಸ್ಯೆ ಇಲ್ಲ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು. ಶಿವಾಜಿನಗರದಲ್ಲೂ ಬಿಎಂಟಿಸಿ ಬಸ್‌ ಟರ್ಮಿನಲ್‌ನ ಪಕ್ಕದ ಬಿಬಿಎಂಪಿ ಮೈದಾನದ ಅಡಿಯಲ್ಲಿ ಸುರಂಗ ಮಾರ್ಗದ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದೆ.  

2020ರ ಒಳಗೆ ಎರಡನೇ ಹಂತದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಿರುವ ನಿಗಮ ಈ ಸುರಂಗ ಮಾರ್ಗದ ಕಾಮಗಾರಿಗೆ ಇತ್ತೀಚೆಗಷ್ಟೇ ಟೆಂಡರ್‌ ಆಹ್ವಾನಿಸಿತ್ತು.  ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿತ್ತು. 

ಸುರಂಗ ಮಾರ್ಗದ ಕಾಮಗಾರಿಗೆ ಒಟ್ಟು ₹ 5047.56 ಕೋಟಿ ವೆಚ್ಚ ಆಗಲಿದೆ. ಇದಕ್ಕೆ ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಸಾಲ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ.  ಗೊಟ್ಟಿಗೆರೆ–ನಾಗಾವಾರ ಮಾರ್ಗ ದಲ್ಲಿ     ಗೊಟ್ಟಿಗೆರೆ–  ಸ್ವಾಗತ್ ರಸ್ತೆ ಕ್ರಾಸ್‌ ವರೆಗೆ 7.5 ಕಿ.ಮೀ ಉದ್ದ ಎತ್ತರಿಸಿದ ಮಾರ್ಗವೂ ನಿರ್ಮಾಣವಾಗಲಿದೆ. ಈ ಮಾರ್ಗದ ₹ 575.52 ಕೋಟಿ ವೆಚ್ಚದ ಕಾಮಗಾರಿಗೆ ನಿಗಮವು ಮಾರ್ಚ್‌ ತಿಂಗಳಲ್ಲಿ ಟೆಂಡರ್‌ ಆಹ್ವಾನಿಸಿತ್ತು. ಎತ್ತರಿಸಿದ ಮಾರ್ಗದಲ್ಲಿ ಏಳು ನಿಲ್ದಾಣಗಳು ನಿರ್ಮಾಣವಾಗಲಿವೆ.

ಕಾಮರಾಜ ರಸ್ತೆಯ ಕೆಳಗೆ ಎಂ.ಜಿ.ರಸ್ತೆ ನಿಲ್ದಾಣ

ಎಂ.ಜಿ.ರಸ್ತೆ ರಸ್ತೆಯಲ್ಲಿ ಈಗಿರುವ ಮೆಟ್ರೊ ನಿಲ್ದಾಣದ ಕೆಳಗೆ ಸುರಂಗ ಮಾರ್ಗದ ನಿಲ್ದಾಣ ನಿರ್ಮಾಣವಾಗುವುದಿಲ್ಲ.  ಅದರ ಬದಲು ಮಾಣೆಕ್ ಷಾ ಪರೇಡ್‌ ಮೈದಾನದ ಪಕ್ಕದಲ್ಲಿ, ಕಾಮರಾಜ ರಸ್ತೆಯ ಕೆಳಗಡೆ ಸುರಂಗ ಮಾರ್ಗದ ನಿಲ್ದಾಣ ನಿರ್ಮಾಣವಾಗಲಿದೆ. ಈಗಿರುವ ನಿಲ್ದಾಣಕ್ಕೂ ಸುರಂಗ ಮಾರ್ಗದ ನಿಲ್ದಾಣಕ್ಕೂ ಸುಮಾರು 50 ಮೀಟರ್‌ ಅಂತರ ಇರಲಿದೆ.

ಈ ನಿಲ್ದಾಣಕ್ಕೆ  ಒಂದು ಪ್ರವೇಶ ದ್ವಾರ   ಎಂ.ಜಿ.ರಸ್ತೆ ಕಡೆಯಿಂದ,  ಇನ್ನೊಂದು ಕಾಮರಾಜ ರಸ್ತೆ ಕಡೆಯಿಂದ ಹಾಗೂ ಇನ್ನೆರಡು ಪ್ರವೇಶ ದ್ವಾರಗಳು ಕಬ್ಬನ್‌ ರಸ್ತೆ ಕಡೆ ಇರಲಿವೆ.

ಪ್ರತಿಕ್ರಿಯಿಸಿ (+)