ಸೋಮವಾರ, ಡಿಸೆಂಬರ್ 16, 2019
26 °C
ಇನ್ನಷ್ಟು ಗಿಡಗಳನ್ನು ನೆಡಲು ತೋಟಗಾರಿಕಾ ಇಲಾಖೆ ಸಿದ್ಧತೆ, ಕಳೆದೊಂದು ವರ್ಷದಿಂದ ವಿವಿಧ ದೇಶಗಳ ತಳಿ ಸಂಗ್ರಹ

ಲಾಲ್‌ಬಾಗ್‌ನಲ್ಲಿ ಸ್ವಾಗತಿಸಲಿವೆ ವಿದೇಶಿ ಸಸ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಲ್‌ಬಾಗ್‌ನಲ್ಲಿ ಸ್ವಾಗತಿಸಲಿವೆ ವಿದೇಶಿ ಸಸ್ಯಗಳು

ಬೆಂಗಳೂರು: ಇನ್ನು ಮುಂದೆ ನೀವು ಲಾಲ್‌ಬಾಗ್‌ಗೆ ಭೇಟಿ ನೀಡಿದರೆ ವಿದೇಶಿ ಸಸ್ಯಗಳು ನಿಮ್ಮನ್ನು ಸ್ವಾಗತಿಸಲಿವೆ!

ಹೌದು, ಲಾಲ್‌ಬಾಗನ್ನು ಮತ್ತಷ್ಟು ಆಕರ್ಷಣೆಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಪ್ರಸಕ್ತ ಉದ್ಯಾನದಲ್ಲಿ 2,500 ಪ್ರಭೇದದ ಸಸ್ಯಗಳಿವೆ.  ಈ ಮಳೆಗಾಲಕ್ಕೆ 1,436  ಹೊಸ ಗಿಡಗಳನ್ನು ನೆಡಲು ಇಲಾಖೆ ಸಿದ್ಧತೆ ನಡೆಸಿದೆ.  ಇದರಲ್ಲಿ 196 ವಿದೇಶಿ ಸಸಿಗಳು ಸೇರಿವೆ.

ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್‌, ‘ಈಗಾಗಲೇ 600 ಕಡೆ ಗುಂಡಿಗಳನ್ನು ತೆಗೆಯಲಾಗಿದೆ.  ಗೊಬ್ಬರ ಮತ್ತು ಮಣ್ಣನ್ನು ಹಾಕಿ ನೆಲವನ್ನು ಸಿದ್ಧಪಡಿಸುತ್ತಿದ್ದೇವೆ. ಇನ್ನು ಕೆಲ ದಿನಗಳಲ್ಲಿ ಸಸಿಗಳನ್ನು ನೆಡಲು ಪ್ರಾರಂಭಿಸುತ್ತೇವೆ’ ಎಂದು ಹೇಳಿದರು.

‘ಲಾಲ್‌ಬಾಗ್‌ಗೆ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಅದರ ಸ್ಮರಣಾರ್ಥ ಸಸಿಗಳನ್ನು ನೆಟ್ಟಿದ್ದರು. ಅವುಗಳಲ್ಲಿ 86 ತಳಿಗಳು ನಶಿಸಿ ಹೋಗಿವೆ. ಅವುಗಳಲ್ಲಿ 48 ಸಸ್ಯ ಪ್ರಬೇಧಗಳನ್ನು ಮತ್ತೆ ನೆಡಲು ಚಿಂತನೆ ನಡೆಲಾಗುತ್ತಿದೆ’ ಎಂದು ತಿಳಿಸಿದರು.

ಒಂದು ವರ್ಷದಿಂದ ತಯಾರಿ: ‘ಲಾಲ್‌ಬಾಗ್‌ಗೆ ವಿಭಿನ್ನ ಸಸ್ಯಗಳನ್ನು ಪರಿಚಯಿಸಬೇಕು ಎಂದು ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದೇವೆ. 7 ತಿಂಗಳಿಂದ ಹಂತ ಹಂತವಾಗಿ ನಮಗೆ ಸಸಿಗಳು ಬರುತ್ತಿವೆ. ಬೇರೆ ದೇಶಗಳಿಂದ ಹಾಗೂ ನಮ್ಮ ದೇಶದ ವಿವಿಧ ಭಾಗಗಳಿಂದ ಸುಮಾರು 1,300 ಸಸಿಗಳು ಈಗಾಗಲೇ ಸಂಗ್ರಹವಾಗಿವೆ.’

‘ಸಸಿಗಳು ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಲು ಅಗತ್ಯವಾಗುವಂತೆ ಕೆಲವು ದಿನ ಅವುಗಳನ್ನು ಸಂಪೂರ್ಣ ನೆರಳಿನಲ್ಲಿ ಇಡಲಾಗಿದೆ. ನಂತರ ತಿಳಿ ಬಿಸಿಲಿಗೆ ಪರಿಚಯಿಸಿದೆವು. ಈಗ  ಅವುಗಳನ್ನು ಸಂಪೂರ್ಣ ಬಿಸಿಲಿನಲ್ಲಿ ಇರಿಸಲಾಯಿತು. ಸ್ಥಳೀಯ ಸಸ್ಯಗಳ ರೀತಿಯಲ್ಲಿಯೇ ಅವು ಸಹ ಬೆಳೆಯುತ್ತಿವೆ’ ಎಂದು ವಿವರಿಸಿದರು.

45 ಹುಲ್ಲುಗಾವಲಿಗೆ ವೈಜ್ಞಾನಿಕವಾಗಿ ಹಂಚಿಕೆ: ‘ಲಾಲ್‌ಬಾಗ್‌ನಲ್ಲಿ 45 ವಿಧದ ಹುಲ್ಲುಗಾವಲುಗಳಿವೆ. ಈಗ ತರಿಸಿರುವ ಸಸಿಗಳನ್ನು ಆಯಾ ಜಾತಿಗೆ ಸೇರಿದ ಹುಲ್ಲುಗಾವಲಿನಲ್ಲಿ ನೆಡಬೇಕು. ಅಲ್ಲದೆ, ಅವುಗಳ ಬೆಳವಣಿಗೆ ಹಾಗೂ ಸ್ಥಳಾವಕಾಶವನ್ನೂ ಪರಿಗಣಿಸಬೇಕಾಗುತ್ತದೆ. ಹೀಗೆ ವೈಜ್ಞಾನಿಕವಾಗಿ ಪರಿಶೀಲನೆ ಕೆಲಸ ನಡೆಯುತ್ತಿದೆ’ ಎಂದರು.

‘ಹೆಚ್ಚು ನೀರು ಬೇಡುವ ಸಸಿಗಳಿಗೆ ಮಣ್ಣಿನ ಜತೆ, ನೀರನ್ನು ಹೆಚ್ಚು ಹಿಡಿದುಕೊಳ್ಳುವ ‘ಕೊಕೊ ಪೀಟ್‌’ ಎಂಬ ಪದಾರ್ಥವನ್ನು ಮಿಶ್ರಣ ಮಾಡುತ್ತೇವೆ. ಉಳಿದಂತೆ ಎಲ್ಲಾ ಸಸಿಗಳಿಗೂ ಸಾಮಾನ್ಯ ಗೊಬ್ಬರವನ್ನೇ ಹಾಕುತ್ತೇವೆ. ಸಿಹಿ ನೀರು ಮ್ಯಾಂಗ್ರೋಸ್‌ಗಳ ಅರ್ಧ ಬೇರು ನೀರಿನಲ್ಲಿ ಇರಬೇಕು. ಅಂತಹ ಗಿಡಗಳನ್ನು ಕೆರೆಗಳ ಪಕ್ಕದಲ್ಲಿ ಹಾಕುತ್ತೇವೆ’ ಎಂದು ಮಾಹಿತಿ ನೀಡಿದರು.

ಯಾವ ದೇಶಗಳಿಂದ ಸಸಿಗಳು ಬಂದಿವೆ?

ಚೀನಾ, ದಕ್ಷಿಣ ಅಮೆರಿಕ, ಸ್ಪೇನ್‌,  ಮ್ಯಾನ್ಮಾರ್, ಆಸ್ಟ್ರೇಲಿಯಾ, ಬ್ರೆಜಿಲ್‌,   ಜಾವಾ, ಮಲಾಯ, ಈಸ್ಟ್‌ ಇಂಡೀಸ್‌ (ಆಗ್ನೇಯಾ ಏಷ್ಯಾದಲ್ಲಿನ ಪ್ರದೇಶ), ಕ್ಯೂಬಾ, ಮೆಕ್ಸಿಕೊ, ಶ್ರೀಲಂಕಾ, ಜಪಾನ್‌, ನ್ಯೂಜಿಲೆಂಡ್‌, ಸೌದಿ ಅರೇಬಿಯಾ, ಅರ್ಜೆಂಟೀನಾದಿಂದ ಸಸಿಗಳನ್ನು ತರಿಸಲಾಗಿದೆ.

ಅಂಕಿ ಅಂಶ

1,436

ಈ ವರ್ಷದಲ್ಲಿ ನೆಡುತ್ತಿರುವ ಒಟ್ಟು ಸಸ್ಯಗಳು

196

ವಿದೇಶಿ ತಳಿಗಳು

35

ದೇಶಿ ತಳಿಗಳು

ಪ್ರತಿಕ್ರಿಯಿಸಿ (+)