ಭಾನುವಾರ, ಡಿಸೆಂಬರ್ 15, 2019
21 °C

ಹೈನುಗಾರಿಕೆಯಿಂದ ತಿಂಗಳಿಗೆ ₹ 40 ಸಾವಿರ ಗಳಿಕೆ

ಬಸವರಾಜ್‌ ಎಸ್‌.ಪ್ರಭಾ Updated:

ಅಕ್ಷರ ಗಾತ್ರ : | |

ಹೈನುಗಾರಿಕೆಯಿಂದ ತಿಂಗಳಿಗೆ ₹ 40 ಸಾವಿರ ಗಳಿಕೆ

ಭಾಲ್ಕಿ: ಮಳೆಯನ್ನೇ ಅವಲಂಬಿಸಿಕೊಂಡು ಒಣ ಕೃಷಿ ಮಾಡುವ ಬಹುತೇಕ ರೈತರು ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳಿಂದ ಪ್ರತಿವರ್ಷ ಉತ್ತಮ ಫಸಲು ಪಡೆಯಲು ಸಾಧ್ಯವಾಗದೆ ಕಷ್ಟದಲ್ಲಿರುವ ಪರಿಸ್ಥಿತಿ ಇದೆ. ಕೃಷಿಯಲ್ಲಿ ಲಾಭವಿಲ್ಲ ಎಂದು ಹೇಳುವ ರೈತರೇ ಹೆಚ್ಚು.  ಆದರೆ, ತಾಲ್ಲೂಕಿನ ನೇಳಗಿ ಗ್ರಾಮದ ಪ್ರಗತಿಪರ ರೈತ ಅರುಣಕುಮಾರ ಹೀರಣ್ಣಾ  ಒಂದು ಎಕರೆ ಹೊಲದಲ್ಲಿ ಹುಲ್ಲನ್ನು ಬೆಳೆದು, ಹೈನುಗಾರಿಕೆ ನಡೆಸಿ  ಕೈತುಂಬಾ ಹಣವನ್ನು ಸಂಪಾದಿಸಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

‘ಸುಮಾರು 12 ಎಕರೆ ಹೊಲದಲ್ಲಿ ಕಬ್ಬು, ತೊಗರಿ, ಉದ್ದು, ಸೋಯಾ, ಜೋಳ, ಕಡಲೆ ಬೆಳೆಯಲು ಪ್ರಯತ್ನಿಸಿದ್ದೆ, ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಗಳನ್ನು ಬರಲಿಲ್ಲ. ನೀರಾವರಿ ಮೂಲಕವಾದರೂ ಬಂಪರ್‌ ಬೆಳೆ ಪಡೆಯಬೇಕು ಎಂದು ಎರಡು ಕೊಳವೆ ಬಾವಿ ಕೊರೆಸಿದೆ. ಕಳೆದ ವರ್ಷ ಹೊರತುಪಡಿಸಿ ಹಿಂದಿನ ಮೂರು ವರ್ಷ ಸಂಪೂರ್ಣ ಮಳೆ ಆಗಿರಲಿಲ್ಲ. ಇದರಿಂದ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯಿತ್ತು. ಹೀಗಾಗಿ, ಕೃಷಿ ಕಾರ್ಯದಲ್ಲಿ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು. ಆಗ ಹೈನುಗಾರಿಕೆ ಕಡೆಗೆ ಆಸಕ್ತಿ ಬೆಳೆಸಿಕೊಂಡೆ. ನಾನು ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಕಾರ್ಯದಲ್ಲಿ ಆಸಕ್ತಿ ಹೊಂದಿದ್ದೆ’ ಎನ್ನುತ್ತಾರೆ ಪದವಿಧರ ರೈತ ಅರುಣಕುಮಾರ ಹೀರಣ್ಣಾ .

1 ಜೆರ್ಸಿ (ಎಚ್‌ಎಫ್‌) ಆಕಳಿನಿಂದ ಹೈನುಗಾರಿಕೆ ಆರಂಭಿಸಿದೆ. ಈಗ ನನ್ನ ಬಳಿ 8 ಆಕಳು, 11 ಕರುಗಳಿವೆ. ಒಂದು ಎಕರೆ ಪ್ರದೇಶದಲ್ಲಿ ಹುಲ್ಲು ಬೆಳೆದು ಪ್ರತಿದಿನ ₹ 1,700 ಸಂಪಾದಿಸುತ್ತಿದ್ದೇನೆ. ಗಣಿಕೆ ಹುಲ್ಲಿನ ಬೀಜದಿಂದ ಹುಲ್ಲು ಬೆಳೆದಿದ್ದೇನೆ. ಇದು ಒಂದು ಸಾರಿ ಬಿತ್ತನೆ ಮಾಡಿದರೆ ಮೂರು ವರ್ಷ ನಿರಂತರ ಹುಲ್ಲು ಪಡೆಯಬಹುದು. ಆಕಳುಗಳು ನಿತ್ಯ ಮುಂಜಾನೆ 30, ಸಂಜೆ 30 ಲೀಟರ್‌ ಹಾಲು ಕೊಡುತ್ತವೆ. ಪ್ರತಿದಿನ ಆಕಳುಗಳಿಗೆ ಒಂದು ಸಾವಿರ ಲೀಟರ್‌ ನೀರು, ಸುಮಾರು 400 ಕೆ.ಜಿ ಹುಲ್ಲು ಬೇಕು. ಆಕಳುಗಳು ಹೆಚ್ಚಿನ ಹಾಲು ಕೊಡಬೇಕು ಎಂದು  ಸೋಯಾ, ಮೆಕ್ಕೆಜೋಳ, ಹತ್ತಿಕಾಳು, ಅಕ್ಕಿ, ಗೋಧಿ, ಬಾರ್ಲಿ, ನಂದಿನಿ ಗೋಲ್ಡ್‌  ಪೌಡರ್‌ ನೀಡುವೆ ಎಂದು ಹೈನುಗಾರಿಕೆಯ ಗುಟ್ಟು ಬಿಟ್ಟುಕೊಟ್ಟರು.

ಪ್ರತಿ ಲೀಟರ್‌ ಹಾಲಿನ ದರ ₹ 24 ಸಹಾಯ ಧನ ₹ 5 ಸೇರಿಸಿ ನಿತ್ಯ ಅಂದಾಜು ₹ 1700 ಸಂಪಾದಿಸುತ್ತೇನೆ. ತಿಂಗಳಿಗೆ ₹ 9 ಸಾವಿರ ಆಕಳಿನ ವ್ಯವಸ್ಥೆಗೆ ಖರ್ಚು ಮಾಡುತ್ತೇನೆ. ನಿವ್ವಳ ₹ 38 ರಿಂದ 40 ಸಾವಿರ ತಿಂಗಳಿಗೆ ಗಳಿಸುತ್ತೇನೆ. ಹೈನುಗಾರಿಕೆಗೆ ನಾನು ಮೀಸಲಿಡುವುದು ದಿನದ ನಾಲ್ಕು ಗಂಟೆ ಮಾತ್ರ. ಇನ್ನು ಉಳಿದ 11 ಎಕರೆ ಭೂಮಿಯಲ್ಲಿ ಕಬ್ಬು, ಹೆಸರು, ಉದ್ದು, ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತೇನೆ ಎಂದು ವಿವರಿಸುತ್ತಾರೆ ಹೀರಣ್ಣಾ. ‘ಹೊಲದಲ್ಲಿ ಸ್ವಲ್ಪ ನೀರು ಲಭ್ಯ ಇರುವ ರೈತರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ನಿತ್ಯ ಕೈಯಲ್ಲಿ ಹಣವನ್ನು ಕಾಣಬಹುದು ಜೊತೆಗೆ ಕೃಷಿಯಲ್ಲಿ ನಷ್ಟ ಅನುಭವಿಸಿದರು ಹೈನುಗಾರಿಕೆಯಿಂದ ಜೀವನ ಸಾಗಿಸಬಹುದು’ ಎನ್ನುತ್ತಾರೆ ಅರುಣಕುಮಾರ ಹೀರಣ್ಣಾ.

* * 

ರೈತರು ವಿಭಿನ್ನವಾಗಿ ಯೋಚಿಸಿ ಕೃಷಿ ಕಾಯಕದಲ್ಲಿ ತೊಡಗಿದರೆ ತಿಂಗಳಿಗೆ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಹಣ ಗಳಿಸಿ ಸಂತೃಪ್ತ ಜೀವನ ನಡೆಸಬಹುದು

ಅರುಣಕುಮಾರ ಹೀರಣ್ಣಾ

ಪ್ರಗತಿಪರ ರೈತ

 

ಪ್ರತಿಕ್ರಿಯಿಸಿ (+)