ಸೋಮವಾರ, ಡಿಸೆಂಬರ್ 16, 2019
17 °C

ಸೌಕರ್ಯ ವಂಚಿತ ಚೋಕ್ಲಾನಾಯಕ ತಾಂಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಕರ್ಯ ವಂಚಿತ ಚೋಕ್ಲಾನಾಯಕ ತಾಂಡಾ

ಕಮಲಾಪುರ: ಸಮೀಪದ ಚೋಕ್ಲಾನಾಯಕ ತಾಂಡಾದ ಜನ ಮೂಲಸೌಕರ್ಯಗಳಿಲ್ಲದೆ ನಲುಗುತ್ತಿದ್ದಾರೆ. ಎತ್ತರ ಪ್ರದೇಶಲ್ಲಿರುವ ಈ ತಾಂಡಾ ರಾಷ್ಟ್ರೀಯ ಹೆದ್ದಾರಿಯಿಂದ 4 ಕಿಲೊ ಮೀಟರ್‌ ಅಂತರದಲ್ಲಿದೆ. ಆದರೆ, ಈ 4 ಕಿಲೊ ಮೀಟರ್‌ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ತುಂಬಾ ತಗ್ಗು– ಗುಂಡಿಗಳು ಬಿದ್ದಿವೆ. ರಸ್ತೆಯುದ್ದಕ್ಕೂ ಜಲ್ಲಿ ಕಂಕರ್‌ ಹರಡಿವೆ. ಅನೇಕ ಬಾರಿ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ.

‘ತಾಂಡಾದಲ್ಲಿ 5ನೇ ತರಗತಿವರೆಗೆ ಶಾಲೆ ಇದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಮಲಾಪುರಕ್ಕೆ ಹೋಗಬೇಕು. ಹದಗೆಟ್ಟ ರಸ್ತೆಯಿಂದಾಗಿ ವಾಹನ ಸಂಚಾರ ವ್ಯವಸ್ಥೆ ಇಲ್ಲ. ಶಿಕ್ಷಣ ಇಲಾಖೆಯ ಬೈಸಿಕಲ್‌ಗಳು ಮುರಿದು ಮೂಲೆಗುಂಪಾಗಿವೆ. ಹೀಗಾಗಿ ಮಕ್ಕಳು ಕಾಲ್ನಡಿಗೆಯಲ್ಲೆ ಶಾಲೆಗೆ ತೆರಳುತ್ತಿದ್ದಾರೆ. ಇದರಿಂದ ಶಾಲೆಗೆ ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ’ ಎನ್ನುತ್ತಾರೆ ತಾಂಡಾ ನಿವಾಸಿಗಳು.

‘ಶಾಲೆಯಲ್ಲಿ 45 ಮಕ್ಕಳಿದ್ದು, 2 ಶಾಲಾ ಕೊಠಡಿಗಳಿವೆ. ಒಂದು ಕೊಠಡಿಯನ್ನು ಎತ್ತರದ ಪ್ರದೇಶಲ್ಲಿ ನಿರ್ಮಿಸಿದರೆ ಇನ್ನೊಂದನ್ನು ಕೆಳ ಮಟ್ಟದಲ್ಲಿ ನಿರ್ಮಿಸಲಾಗಿದೆ. ಎರಡರ ಮಧ್ಯ ರಸ್ತೆ ಇದೆ. 5ನೇ ತರಗತಿ ವರೆಗಿನ ಮಕ್ಕಳು ಚಿಕ್ಕವರಾಗಿರುವುದರಿಂದ ಎತ್ತರದ ಪ್ರದೇಶಲ್ಲಿ ಏರಲಾಗದೆ ಕಾಲು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ರಸ್ತೆ ಮಧ್ಯದಲ್ಲಿರುವುದರಿಂದ ವಾಹನ, ದನಕರುಗಳ ಓಡಾಡುತ್ತಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ. ರಸ್ತೆ ತೆರವುಗೊಳಿಸಿ ಶಾಲೆಗೆ ಕಂಪೌಂಡ್‌ ನಿರ್ಮಿಸಿಕೊಡಬೇಕು. ಶಾಲಾ ಆವರಣ ಸಮತಟ್ಟಾಗಿಸಲು ಮುರುಮ್‌ ಭರ್ತಿ ಮಾಡಬೇಕು. ಸಮುದಾಯ ಭವನದಲ್ಲಿ ಬಿಸಿಯೂಟ ತಯಾರು ಮಾಡಲಾಗುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. 

ಪ್ರತ್ಯೇಕ ಬಿಸಿಯೂಟದ ಕೋಣೆ ನಿರ್ಮಿಸಿ ಕೊಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ ರಾಠೋಡ್‌ ಒತ್ತಾಯಿಸಿದ್ದಾರೆ. ‘ತಾಂಡಾದ ಕೆಲವು ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದ ತಾಂಡಾದ ತುಂಬಾ ಗಬ್ಬು ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಅನಾರೋಗ್ಯ ಉಂಟಾಗುತ್ತಿದೆ. ಕೂಡಲೇ ತಾಂಡಾಲ್ಲಿ ಚರಂಡಿ ನಿರ್ಮಿಸಬೇಕು’ ಎಂದು ಪ್ರಭು ರಾಠೋಡ, ವಿನೋದ ರಾಠೋಡ್‌, ಪಾಂಡು ರಾಠೋಡ, ಥಾವರು ರಾಠೋಡ್‌ ಅವರು ಆಗ್ರಹಿಸಿದ್ದಾರೆ.

ಅಂಗನವಾಡಿ ಸಮಸ್ಯೆ: ‘ಅಂಗನವಾಡಿ ಕಾರ್ಯಕರ್ತೆ ವಾರದಲ್ಲಿ ಕೇವಲ 3 ಬಾರಿ ಮಾತ್ರ ಬರುತ್ತಾರೆ. ಇವರ ಮೂಲಕ ಬರುವ ಸರ್ಕಾರದ ಯೋಜನೆ ಬಗ್ಗೆ ಮಹಿಳೆಯರ ಮಾಹಿತಿ ಕೊಡುವುದಿಲ್ಲ. ಮಕ್ಕಳಿಗೆ ಸಮರ್ಪಕ ಆಹಾರ ಕೊಡುವುದಿಲ್ಲ. ಗರ್ಭಿಣಿಯರು, ಮಕ್ಕಳಿಗೆ ಬರುವ ಯಾವುದೇ ಸೌಲತ್ತು ಒದಗಿಸುವುದಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ ರಾಠೋಡ್‌ ದೂರಿದ್ದಾರೆ. ‘ಸಂಬಂಧಪಟ್ಟವರಿಗೆ ಈ ಅವ್ಯವಸ್ಥೆ ಬಗ್ಗೆ ತಿಳಿಸಿದ್ದೇನೆ. ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)