ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಕರ ಹಿಂಸೆ ನಿಗ್ರಹಿಸಿ: ಮತ್ತೆ ಗುಡುಗಿದ ಪ್ರಧಾನಿ ಮೋದಿ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಉಲ್ಲಂಘಿಸುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ  ಮುನ್ನಾ ದಿನ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು.

ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯಗಳಿಗೆ ಸೂಚಿಸಿದರು. ಆದರೆ ಇಂತಹ ಕೃತ್ಯಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕೊಡುವುದರ ವಿರುದ್ಧ ಎಚ್ಚರಿಕೆ ನೀಡಿದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ.

ಹಿಂದೂಗಳು ಗೋವನ್ನು ತಾಯಿಯೆಂದು ಪರಿಗಣಿಸುತ್ತಾರೆ. ಆದರೆ ಜನರು ಕಾನೂನು ಕೈಗೆತ್ತಿಕೊಳ್ಳಲು ಅದು ಕಾರಣವಾಗಬಾರದು. ಕಾನೂನು ಉಲ್ಲಂಘನೆಯ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು.

ಕೆಲವು ಸಮಾಜ ವಿರೋಧಿಗಳು ಗೋರಕ್ಷಣೆಯನ್ನು ಅರಾಜಕತೆ ಹರಡುವ ಮಾಧ್ಯಮ ಮಾಡಿಕೊಂಡಿದ್ದಾರೆ. ಸಾಮರಸ್ಯ ಕದಡುವ ಉದ್ದೇಶ ಹೊಂದಿರುವವರು ಅದರಿಂದ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ.  ಇಂತಹ ಕೃತ್ಯಗಳಿಂದ ದೇಶದ ವರ್ಚಸ್ಸು ಕುಸಿಯುತ್ತದೆ ಎಂದು ಪ್ರಧಾನಿ ಹೇಳಿದರು.

ಒಂದು ತಿಂಗಳಲ್ಲಿ ಎರಡನೇ ಬಾರಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸೆಯ ವಿರುದ್ಧ ಪ್ರಧಾನಿ ಮಾತನಾಡಿದ್ದಾರೆ. ಸಬರಮತಿ ಆಶ್ರಮದಲ್ಲಿ ಜೂನ್‌ 29ರಂದು ಮಾತನಾಡಿದ್ದ ಮೋದಿ ಅವರು, ಗೋರಕ್ಷಣೆ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ಖಂಡಿಸಿದ್ದರು.

ಕೆಲವೇ ದಿನಗಳ ಹಿಂದೆ ದೆಹಲಿ ಸಮೀಪ ರೈಲಿನಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಬಾಲಕನೊಬ್ಬನನ್ನು ಹತ್ಯೆ ಮಾಡಲಾಗಿತ್ತು.

ಸಹಮತ ಮೂಡಬೇಕಿತ್ತು: ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾತನಾಡಿದ ಮೋದಿ ಅವರು, ರಾಷ್ಟ್ರಪತಿ ಆಯ್ಕೆಯಲ್ಲಿ ಸಹಮತ ಸಾಧ್ಯವಾಗಿದ್ದರೆ ಚೆನ್ನಾಗಿತ್ತು ಎಂದರು. ಆದರೆ ಚುನಾವಣಾ ಪ್ರಚಾರದಲ್ಲಿ ಎರಡೂ ಗುಂಪುಗಳು (ಆಡಳಿತ ಮತ್ತು ವಿರೋಧ ಪಕ್ಷಗಳು) ಉನ್ನತ ಮಟ್ಟದ ಘನತೆ ಕಾದುಕೊಂಡಿವೆ. ಅನುಚಿತ ವರ್ತನೆ ಅಥವಾ ಕೆಟ್ಟ ಭಾಷೆಯನ್ನು ಯಾರೂ ಬಳಸಿಲ್ಲ ಎಂಬ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

ಲಾಲುಗೆ ಪರೋಕ್ಷ ಟೀಕೆ: ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಎಲ್ಲರ ಸಹಕಾರ ಕೋರಿದ ಮೋದಿ ಅವರು ಭ್ರಷ್ಟಾಚಾರದ ಹೊಸ ಆರೋಪಕ್ಕೆ ಒಳಗಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರನ್ನು ಪರೋಕ್ಷವಾಗಿ ಕುಟುಕಿದರು.

ಭ್ರಷ್ಟಾಚಾರ ಮಾಡಿದವರನ್ನು ಯಾವ ಕಾರಣಕ್ಕೂ ರಕ್ಷಿಸಬಾರದು. ಭ್ರಷ್ಟಾಚಾರದ ಕಾರಣದಿಂದ ರಾಜಕೀಯ ಮುಖಂಡರೊಬ್ಬರ ವರ್ಚಸ್ಸು ಕುಸಿದಿದೆ ಎಂದು ಹೇಳಿದರು.

ಬೇಗ ಬಜೆಟ್‌ ಮಂಡನೆ ಲಾಭ: ಬಜೆಟನ್ನು ಬೇಗನೆ ಮಂಡಿಸಿದ್ದರಿಂದ ಹಲವು ಪ್ರಯೋಜನಗಳು ಆಗಿವೆ ಎಂದು ಪ್ರಧಾನಿ ಹೇಳಿದರು. ವೆಚ್ಚ ಮಾಡಲು ನಿಗದಿ ಮಾಡಿದ ಮೊತ್ತದ ಶೇ 30ರಷ್ಟನ್ನು ಮುಂಗಾರು ಆರಂಭಕ್ಕೆ ಮೊದಲೇ ವೆಚ್ಚ ಮಾಡಲಾಗಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ನಿಗದಿ ಮಾಡಿದ ಶೇ 49ರಷ್ಟು ಹಣ ಈಗಾಗಲೇ ಖರ್ಚಾಗಿದೆ ಎಂದು ಅವರು  ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಅರ್ಪಿಸಿದರು.  ಒಕ್ಕೂಟ ವ್ಯವಸ್ಥೆಯೊಳಗಿನ ಪರಸ್ಪರ ಸಹಕಾರಕ್ಕೆ ಇದೊಂದು ಮಿರುಗುವ ಉದಾಹರಣೆ ಎಂದರು.

ಗುಲಾಂ ನಬಿ ಆಜಾದ್‌ (ಕಾಂಗ್ರೆಸ್‌), ಶರದ್‌ ಪವಾರ್‌ (ಎನ್‌ಸಿಪಿ), ಸೀತಾರಾಮ್‌ ಯೆಚೂರಿ (ಸಿಪಿಎಂ), ಮುಲಾಯಂ ಸಿಂಗ್‌ ಯಾದವ್‌ (ಎಸ್‌ಪಿ), ಡಿ ರಾಜಾ (ಸಿಪಿಐ), ದೇವೇಗೌಡ (ಜೆಡಿಎಸ್‌) ಸಭೆಯಲ್ಲಿ ಹಾಜರಿದ್ದರು. ಜೆಡಿಯು ಮತ್ತು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಯಾರೊಬ್ಬರೂ ಸಭೆಗೆ ಬಂದಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಟಿಎಂಸಿ ಮತ್ತು ಬಿಜೆಪಿ ನಡುವೆ ಕೆಸರೆರಚಾಟ ನಡೆದಿತ್ತು. ಹಾಗಾಗಿ ಈ ಸಭೆಯನ್ನು ಬಹಿಷ್ಕರಿಸುವುದಾಗಿ ಟಿಎಂಸಿ ಮೊದಲೇ ಹೇಳಿತ್ತು.

ಟೀಕೆ: ಗೋರಕ್ಷಣೆಯ ಹೆಸರಿನಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಉಲ್ಲೇಖಿಸಿದ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿದವು. ಸಂಸತ್‌ ಅಧಿವೇಶನದಲ್ಲಿಯೂ ಈ ವಿಚಾರ ಪ್ರಸ್ತಾಪಿಸಲು ಈ ಪಕ್ಷಗಳು ನಿರ್ಧರಿಸಿವೆ.

ಪ್ರಧಾನಿ ಮಾತು

* ಗೋವಿನ ಜತೆಗೆ ಭಾವನಾತ್ಮಕ ಸಂಬಂಧ ಇದೆ. ರಕ್ಷಿಸಲು ಕಾನೂನು ಇದೆ. ಕಾನೂನು ಕೈಗೆತ್ತಿಕೊಳ್ಳು ವುದು ಸರಿಯಲ್ಲ

* ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ
* ಗೋರಕ್ಷಣೆಯ ಹೆಸರಿನಲ್ಲಿ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು
* ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸುವುದನ್ನು ಎಲ್ಲ ಪಕ್ಷಗಳೂ ಖಂಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT