ಶುಕ್ರವಾರ, ಡಿಸೆಂಬರ್ 13, 2019
20 °C

ಜೈಲಿನಿಂದಲೇ ಬೆದರಿಕೆ ಹಾಕುತ್ತಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಲಿನಿಂದಲೇ ಬೆದರಿಕೆ ಹಾಕುತ್ತಿದ್ದವರ ಬಂಧನ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಅಲ್ಲಿಂದಲೇ ಉದ್ಯಮಿ ಹಾಗೂ ಬಿಲ್ಡರ್‌ಗಳನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಮೂವರು ಆರೋಪಿಗಳನ್ನು ಕೆ.ಆರ್‌.ಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 

ಮೋಹನ್, ಆಂಜನೇಯರೆಡ್ಡಿ ಹಾಗೂ ರಾಘವೇಂದ್ರ ಬಂಧಿತರು. ಇನ್ನೊಬ್ಬ ಆರೋಪಿ ಎಚ್‌.ಕೆ.ಪ್ರತಾಪ್‌ ತಲೆಮರೆಸಿಕೊಂಡಿದ್ದಾರೆ. ಇವರು ಪಾಲಿಕೆ ಸದಸ್ಯೆ ಮಂಜುಳಾದೇವಿ ಅವರ ಪತಿ ಶ್ರೀನಿವಾಸ್‌ ಅವರನ್ನು ಕೊಲೆ ಮಾಡಿದ್ದ ಆರೋಪದಡಿ ಜೈಲು ಸೇರಿದ್ದರು.

ಜೈಲನ್ನೇ ತಮ್ಮ ಅಡ್ಡೆ ಮಾಡಿಕೊಂಡಿದ್ದ ಆರೋಪಿಗಳು, ಕೆ.ಆರ್‌. ಪುರದ ಕಾರು ಶೋರೂಂ ಮಾಲೀಕ ಚಂದ್ರಶೇಖರ್ ಎಂಬುವರಿಗೆ ₹8 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು.

ಹಣ ನೀಡದೇ ಇದ್ದಾಗ, ಪ್ರತಾಪ್ ಜಾಮೀನು ಮೇಲೆ ಹೊರಬಂದು ಸಹಚರರ ಮೂಲಕ ಚಂದ್ರಶೇಖರ್‌ ಪುತ್ರ ಗಿರೀಶ್‌ ಮೇಲೆ ಹಲ್ಲೆ ನಡೆಸಿದ್ದರು. ಶೋರೂಂಗೆ ನುಗ್ಗಿ ₹5 ಲಕ್ಷ ನಗದು ಹಾಗೂ ಕಾರನ್ನು ಕದ್ದುಕೊಂಡು ಹೋಗಿದ್ದರು.

‘ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡವಿದ್ದು, ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಡಿಸಿಪಿ ನಾರಾಯಣ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)