ಸೋಮವಾರ, ಡಿಸೆಂಬರ್ 16, 2019
18 °C
ಅಪಹರಣ ಯತ್ನ, ಹಲ್ಲೆ ಪ್ರಕರಣ

ಬಿಎಸ್‌ವೈ ಮನೆಯಲ್ಲಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ವೈ ಮನೆಯಲ್ಲಿ ಶೋಧ

ಬೆಂಗಳೂರು: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ(ಪಿ.ಎ) ವಿನಯ್ ಅಪಹರಣ ಯತ್ನ ಸಂಬಂಧ ಎನ್‌.ಆರ್‌.ಸಂತೋಷ್‌ ಎಂಬುವರ ಪತ್ತೆಗಾಗಿ ಪೊಲೀಸರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ಶನಿವಾರ ರಾತ್ರಿ ಶೋಧ ನಡೆಸಿದರು.

ಯಡಿಯೂರಪ್ಪ ಅವರ ಆಪ್ತ ಸಹಾಯಕರಾದ ಸಂತೋಷ್‌, ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ತಲೆ ಮರೆಸಿಕೊಂಡಿರುವ ಅವರಿಗಾಗಿ ಪೊಲೀಸರ ವಿಶೇಷ ತಂಡವು ಹುಡುಕಾಟ ನಡೆಸಿದೆ.

‘ಡಾಲರ್ಸ್‌ ಕಾಲೊನಿಯಲ್ಲಿರುವ ಯಡಿಯೂರಪ್ಪ ಅವರ ಮನೆಯಲ್ಲಿ ಸಂತೋಷ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ವಿಶೇಷ ತಂಡವು ರಾತ್ರಿ ಮನೆಗೆ ಹೋಗಿ ಶೋಧ ನಡೆಸಿತು. ಆದರೆ, ಅವರು ಅಲ್ಲಿರಲಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಶೋಧ ನಡೆಸಲು ಹೋದಾಗ ಭದ್ರತಾ ಸಿಬ್ಬಂದಿಯು ಒಳಗೆ ಹೋಗಲು ಅವಕಾಶ ನೀಡದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಯಡಿಯೂರಪ್ಪ ಅವರು ಸಹ ಮನೆಯಲ್ಲಿದ್ದರು. ಪ್ರಕರಣದ ಬಗ್ಗೆ ಅವರಿಗೂ ವಿವರಿಸಿ ಪೊಲೀಸರು ವಾಪಸ್ ಬಂದಿದ್ದಾರೆ’ ಎಂದು ಹೇಳಿದರು.

ಕೊಲೆ ಆರೋಪಿಗಳ ಕೈವಾಡ: ‘ಮೂರು ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದಿರುವ ಆರೋಪಿಗಳಿಂದ ಈ ಅಪಹರಣ ಮಾಡಿಸಲು ಸಂತೋಷ್‌ ಪ್ರಯತ್ನಿಸಿದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ’ ಎಂದು ಅಧಿಕಾರಿ ಹೇಳಿದರು.

‘ಘಟನೆ ನಡೆದ ದಿನದಂದು ಆರೋಪಿಗಳನ್ನು ಸಂತೋಷ್‌ ಭೇಟಿಯಾಗಿದ್ದರು. ಬಳಿಕವೇ ಆರೋಪಿಗಳು ಮಹಾಲಕ್ಷ್ಮಿ ಲೇಔಟ್‌ ಬಳಿ ವಿನಯ್‌ ಅವರನ್ನು ತಡೆದು ಅಪಹರಣಕ್ಕೆ ಯತ್ನಿಸಿ, ಹಲ್ಲೆ ಮಾಡಿದ್ದರು’ ಎಂದು ವಿವರಿಸಿದರು.

‘ಸಂತೋಷ್‌ಗಾಗಿ ಹುಡುಕಾಟ ಮುಂದುವರಿದಿದ್ದು, ಅವರು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದರು.

ಕಮಿಷನರ್‌ಗೆ  ಪತ್ರ

‘ಪೊಲೀಸರು ತಡರಾತ್ರಿ ಮನೆಗೆ ಬಂದು ಶೋಧ ನಡೆಸಿದ್ದಕ್ಕೆ ಬೇಸರವಾಗಿದೆ’ ಎಂದು ಯಡಿಯೂರಪ್ಪ, ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

‘ಸಂತೋಷ್‌ ನನ್ನ ಸಂಬಂಧಿ. ಏಳು ವರ್ಷದಿಂದ ನನ್ನ ಜತೆಗೆ ಇದ್ದಾನೆ. ಪ್ರಕರಣದಲ್ಲಿ ಸುಖಾ ಸುಮ್ಮನೇ ಆತನನ್ನು ಎಳೆದುತರಲಾಗುತ್ತಿದೆ.

ಎಸಿಪಿ ನೇತೃತ್ವದ ತಂಡವು ಮನೆಗೆ ಬಂದು, ಸಂತೋಷ್‌ ಮಲಗುವ ಕೊಠಡಿಯಲ್ಲಿ ಶೋಧ ನಡೆಸಿ ವಾಪಸ್‌ ಹೋಯಿತು. ರಾತ್ರಿಯೇ  ಶೋಧ ನಡೆಸುವ ಅನಿವಾರ್ಯತೆ ಏನಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.

‘ತಡರಾತ್ರಿ ನಿಮಗೆ (ಕಮಿಷನರ್‌) ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ. ಬಳಿಕ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌ ಜತೆ ಚರ್ಚಿಸಿದೆ. ಈಗ ನಿಮಗೆ ಪತ್ರದ ಮೂಲಕ ವಿಷಯ ತಿಳಿಸುತ್ತಿದ್ದೇನೆ’ ಎಂದು ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯಿಸಿ (+)