ಭಾನುವಾರ, ಡಿಸೆಂಬರ್ 8, 2019
24 °C
ಪಕ್ಷ ತೊರೆಯುವ ವದಂತಿ ಸುಳ್ಳು, ಬಿಜೆಪಿಯಿಂದಲೇ ಸ್ಪರ್ಧೆ– ಹಿರಿಯ ಮುಖಂಡ ನರಸಿಂಹಸ್ವಾಮಿ ಮಾಹಿತಿ

ಜೆಡಿಎಸ್‌ ಅಪ್ಪ–ಮಕ್ಕಳ, ಸೂಟ್‌ಕೇಸ್ ಪಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್‌ ಅಪ್ಪ–ಮಕ್ಕಳ, ಸೂಟ್‌ಕೇಸ್ ಪಕ್ಷ

ದೊಡ್ಡಬಳ್ಳಾಪುರ: ‘ನಾನು ಜೆಡಿಎಸ್ ಸೇರುತ್ತೇನೆ ಎನ್ನುವುದು ಕೇವಲ ವದಂತಿ. ಅದೆಲ್ಲಾ ನನ್ನ ತೇಜೋವಧೆಗೆ ಮಾಡುತ್ತಿರುವ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯಿಂದಲೇ  ಸ್ಪರ್ಧಿಸುತ್ತೇನೆ’ ಎಂದು ಮುಖಂಡ ಜೆ. ನರಸಿಂಹಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಬಾರಿ ತಂದೆ ಆರ್‌.ಎಲ್‌. ಜಾಲಪ್ಪ ಅವರ ಆಶೀರ್ವಾದ ಇದೆ. ಹೀಗಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗುರಿಯಾದ 150 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಪೈಕಿ ಕೆಲವು ಶಾಸಕರು ತಾಲ್ಲೂಕಿನಿಂದ ಗೆಲ್ಲಲಿದ್ದಾರೆ’ ಎಂದರು.

‘ಜೆಡಿಎಸ್‌ ಅಪ್ಪ–ಮಕ್ಕಳ ಪಕ್ಷ. ಇದೆಲ್ಲಕ್ಕೂ ಮಿಗಿಲಾಗಿ ಸೂಟ್‌ಕೇಸ್  ಪಕ್ಷ ಎನ್ನುವುದನ್ನು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮೊಮ್ಮಗನೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ’ ಎಂದರು.

‘ನಾನು ಬಿಜೆಪಿಗೆ ಸೇರ್ಪಡೆಯಾದಾಗ ಇಲ್ಲಿನ ಹಿರಿಯ ಬಿಜೆಪಿ ಮುಖಂಡರಾದ ಕೆ.ಎಂ. ಹನುಮಂತರಾಯಪ್ಪ ಸೇರಿದಂತೆ ಎಲ್ಲರೂ ಆತ್ಮೀಯವಾಗಿ ಬರ ಮಾಡಿಕೊಂಡು ಉತ್ತಮ ಸಹಕಾರ ನೀಡಿದ್ದಾರೆ’ ಎಂದರು.

‘ನಮ್ಮಲ್ಲಿ ಹಳೆಯ ಬಿಜೆಪಿ, ಹೊಸ ಬಿಜೆಪಿ ಎನ್ನುವ ಭೇದ ಭಾವ ಇಲ್ಲ. ಯಾವುದೇ ಅಪನಂಬಿಕೆ ಇಲ್ಲದೆ ಕೆಲಸ ಮಾಡುತ್ತೇನೆ’ ಎಂದರು.

ಆಗಸ್ಟ್ 25ರಿಂದ ಪ್ರಚಾರ: ಆಗಸ್ಟ್‌ 25ರ ಗೌರಿ ಹಬ್ಬದ ದಿನದಿಂದ ತಾಲ್ಲೂಕಿನಲ್ಲಿ ಅಧಿಕೃತವಾಗಿ ಪಕ್ಷ ಸಂಘಟನೆ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ ಆಡಳಿತದಲ್ಲಿನ ಜನಪ್ರಿಯ ಯೋಜನೆಗಳ ಪ್ರಚಾರವನ್ನು ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯದಲ್ಲಿ ಅದೇ ದಿನ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸ ಲಾಗುವುದು ಎಂದರು.

ತಾಲ್ಲೂಕಿನ ಪ್ರತಿ  ಬೂತ್‌ ಸಮಿತಿಯಲ್ಲೂ ಎಲ್ಲ ಜಾತಿ, ವರ್ಗದ ಜನರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುತ್ತಿದ್ದು  ಒಂದು ವಾರದಲ್ಲಿ ಅಂತಿಮಗೊಳ್ಳಲಿದೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ. ನಾರಾಯಣಸ್ವಾಮಿ, ನಗರ ಅಧ್ಯಕ್ಷ ಕೆ.ಎಚ್‌. ವೆಂಕಟರಾಜು, ರಾಷ್ಟ್ರೀಯ ಪರಿಷತ್‌ ಸದಸ್ಯ ಜೋ.ನ. ಮಲ್ಲಿಕಾರ್ಜುನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಶಂಕರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎನ್‌. ಹನುಮಂತೇಗೌಡ, ಮುಖಂಡರಾದ ಬಿ.ಸಿ. ನಾರಾಯಣಸ್ವಾಮಿ, ಟಿ.ವಿ. ಲಕ್ಷ್ಮೀನಾರಾಯಣ್‌, ಕೆ.ಎಂ. ಕೃಷ್ಣಮೂರ್ತಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್‌ ಹಾಜರಿದ್ದರು.

**

ಕೋಟಿಗಳ ಲೆಕ್ಕದಲ್ಲಿ  ಎಲ್ಲಿ ಕೆಲಸ ಆಗಿವೆ

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಮಾತನಾಡಿ, ‘ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರು ಒಂದೊಂದು ಸಭೆಯಲ್ಲಿ ಒಂದೊಂದು ರೀತಿಯ ಕೋಟಿ ಲೆಕ್ಕಗಳನ್ನು ಹೇಳುತ್ತ ತಿರುಗುತ್ತಿದ್ದಾರೆ. ಆದರೆ ಕೋಟಿಗಳ ಲೆಕ್ಕದಲ್ಲಿ ಕೆಲಸಗಳು ಎಲ್ಲಿ ಆಗಿವೆ ಎನ್ನುವುದು ಮಾತ್ರ ಕಾಣುತ್ತಿಲ್ಲ’ ಎಂದರು.

‘ಇನ್ನು ಜೆಡಿಎಸ್‌ನಲ್ಲಿ ಶಾಸಕ ಸ್ಥಾನದ ಅಭ್ಯರ್ಥಿ ಯಾರು ಎನ್ನುವುದೇ ಇನ್ನೂ  ಸ್ಪಷ್ಟವಾಗದೇ ಗೊಂದಲದಲ್ಲಿ ಮುಳುಗಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)