ಶನಿವಾರ, ಡಿಸೆಂಬರ್ 7, 2019
24 °C

ಪಾದಚಾರಿ ಮಾರ್ಗದಲ್ಲಿ ಗುಂಡಿಗಳ ಕಾರುಬಾರು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಪಾದಚಾರಿ ಮಾರ್ಗದಲ್ಲಿ ಗುಂಡಿಗಳ ಕಾರುಬಾರು!

ಬೆಳಗಾವಿ: ಇಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಅಲ್ಲಲ್ಲಿ ಉಂಟಾಗಿರುವ ಗುಂಡಿ ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅತ್ಯಧಿಕ ಜನಸಂದಣಿಯ, ಪ್ರಮುಖ ವೃತ್ತಗಳಲ್ಲಿರುವ ಪಾದಚಾರಿ ಮಾರ್ಗ ಗಳಲ್ಲಿ ಅವ್ಯವಸ್ಥೆ ಕಂಡುಬಂದಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿ ಸುವುದು ಖಚಿತ ಎನ್ನುವಂತಹ ಸ್ಥಿತಿ ಇಲ್ಲಿನದಾಗಿದೆ.

ರಾಣಿ ಚನ್ನಮ್ಮ ವೃತ್ತದ ಅಲ್ಲಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸ ಲಾಗಿದೆ. ಒಳಚರಂಡಿಯ ಮೇಲೆ ಕಟ್ಟಲಾಗಿರುವ ಈ ಮಾರ್ಗದಲ್ಲಿ ಒಂದಲ್ಲಾ ಮೂರ್ನಾಲ್ಕು ಗುಂಡಿಗಳು ಬಾಯ್ತೆರೆದಿವೆ. ನಗರದ ವಿವಿಧೆಡೆಯಿಂದ ಹಾಗೂ ಹಳ್ಳಿಗಳಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ಬರುವ ಬಹುತೇಕ ಮಂದಿ ಈ ವೃತ್ತದ ಮೂಲಕವೇ ಬರುತ್ತಾರೆ. ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ವಿವಿಧ ಸಂಘಟನೆಗಳವರು ಇಲ್ಲಿ ಪ್ರತಿಭಟನೆಯನ್ನೂ ನಡೆಸುತ್ತಾರೆ.

ಕೆಲವೊಮ್ಮ ಈ ಫುಟ್‌ಪಾತ್‌ ನಲ್ಲಿಯೇ ಕೆಲ ಸಂಘಟನೆಗಳವರು ಮೆರವಣಿಗೆಯಲ್ಲಿ ಬರುವುದೂ ಕಂಡುಬರುತ್ತದೆ. ಜಿಲ್ಲಾಸ್ಪತ್ರೆಗೆ ಹೋಗುವುದಕ್ಕೆ ಹಿರಿಯನಾಗರಿಕರೂ ಇಲ್ಲಿ ಓಡಾಡುತ್ತಾರೆ. ಈ ಮಾರ್ಗಗಳ ಪರಿಚಯ ಇರುವವರು ಗುಂಡಿಗಳನ್ನು ದಾಟಿ ಹೋಗಬಹುದು. ಆದರೆ, ಬೇರೆ ಊರುಗಳಿಂದ ಬಂದವರು ಆಯತಪ್ಪಿ ಗುಂಡಿಯೊಳಕ್ಕೆ ಬಿದ್ದರೆ ಗಾಯಗೊಂಡೋ, ಮೂಳೆ ಮುರಿದುಕೊಂಡೋ ಆಸ್ಪತ್ರೆ ಸೇರಬೇಕಾಗುತ್ತದೆ.

ಹಲವೆಡೆ ಇದೇ ಸ್ಥಿತಿ: ಇದು ಒಂದು ವೃತ್ತದ ಸ್ಥಿತಿಯಲ್ಲ. ಹಲವು ವೃತ್ತಗಳಲ್ಲಿ ಇದೇ ರೀತಿಯ ದುಸ್ಥಿತಿ ಇದೆ. ಕೆಲವೆಡೆ ಸಮರ್ಪಕ ಮಾರ್ಗವೇ ಪಾದಚಾರಿಗಳಿಗೆ ಇಲ್ಲ. ಇದ್ದರೂ  ಅದು ಪಾದಚಾರಿ ಸ್ನೇಹಿಯಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಹೃದಯಭಾಗದ ಪ್ರಮುಖ ವೃತ್ತದಲ್ಲಿಯೇ ಇರುವ ಈ ಅವ್ಯವಸ್ಥೆಯನ್ನು ಗಮನಿಸಿ, ಸರಿಪಡಿಸುವುದಕ್ಕೆ ನಗರಪಾಲಿಕೆಯವರು ಮುಂದಾಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಹೆಚ್ಚಿನ ಪ್ರಯಾಣಿಕರು ಸೇರುವ ಇನ್ನೊಂದು ವೃತ್ತವೆಂದರೆ ಅದು ಸಂಭಾಜಿ ವೃತ್ತ. ಇಲ್ಲಿನ ಬಸ್‌ ತಂಗುದಾಣದ ಬಳಿ ತಗ್ಗು ಪ್ರದೇಶ ಇರುವುದರಿಂದ ಮಳೆ ನೀರು ಸಂಗ್ರಹಗೊಳ್ಳುತ್ತದೆ. ಇಲ್ಲಿನ ಆಟೊ ಚಾಲಕರು ತಮ್ಮ ಆಟೊಗಳನ್ನು ನಿಲ್ಲಿಸಿಕೊಳ್ಳುವುದಕ್ಕೆ ಅನುಕೂಲವಾಗಲೆಂದು ಪಾದಚಾರಿ ಮಾರ್ಗದಲ್ಲಿಯೇ ಗುಂಡಿಯನ್ನು ತೋಡಿ, ಸಂಗ್ರಹವಾಗುವ ನೀರು ಸಮೀಪದ ಚರಂಡಿಗೆ ಹರಿಯುವಂತೆ ಮಾಡಿದ್ದಾರೆ. ಇದರಿಂದ ಪಾದಚಾರಿಗಳಿಗೆ ಓಡಾಡುವುದಕ್ಕೆ ತೊಂದರೆಯಾಗಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಇಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಕೆಲ ಮಹಿಳೆಯರು ಹಾಗೂ ಮಕ್ಕಳು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಉಂಟು.

ಲಿಂಗರಾಜ ಕಾಲೇಜು ರಸ್ತೆಯ ಪೊಲೀಸ್‌ ಲೈನ್‌ ರಸ್ತೆಯಲ್ಲಿ ಚರಂಡಿಯ ಮೇಲೆ ಹಾಕಿದ್ದ ಕಾಂಕ್ರೀಟ್‌ ಕಿತ್ತು ಬಂದಿದೆ. ದೊಡ್ಡದಾದ ಗುಂಡಿ ಇಲ್ಲಿ ನಿರ್ಮಾಣವಾಗಿದೆ. ಸಮೀಪದಲ್ಲಿರುವ ವಿವಿಧ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ.

ದುರ್ವಾಸನೆ  ತಪ್ಪಿಸಲು ಆಗ್ರಹ

ನಗರದ ಕಾಲೇಜು ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋದರೆ ದುರ್ವಾಸನೆ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಈ ಮಾರ್ಗದ ಕೆಳಗೆ ಚರಂಡಿ ಇದೆ. ಅಲ್ಲಲ್ಲಿ ತ್ಯಾಜ್ಯದಿಂದಾಗಿ ನೀರು ಹರಿಯದೆ ನಿಂತುಬಿಟ್ಟಿರುತ್ತದೆ. ಇದರಿಂದಾಗಿ ಇಡೀ ಮಾರ್ಗವೇ ಗಬ್ಬೆದ್ದು ನಾರುತ್ತಿರುತ್ತದೆ.

ಕೆಲವೆಡೆ ಗುಂಡಿಗಳೂ ಇವೆ. ಅನಾಹುತ ಸಂಭವಿಸುವುದಕ್ಕೆ ಮುನ್ನವೇ ಸ್ಥಳೀಯ ಸಂಸ್ಥೆಯವರು ಗುಂಡಿಗಳನ್ನು ಮುಚ್ಚಬೇಕು. ತ್ಯಾಜ್ಯ ತೆರವುಗೊಳಿಸಿ ದುರ್ವಾಸನೆ ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರತಿಕ್ರಿಯಿಸಿ (+)