ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೇರಿಗೆ ಬರುವರೇ ತುಂಗೆ, ವರದೆ?

Last Updated 17 ಜುಲೈ 2017, 6:46 IST
ಅಕ್ಷರ ಗಾತ್ರ

ಹಾವೇರಿ: ಈಗಾಗಲೇ ಶೇ 50ರಷ್ಟು ಮಳೆ ಕೊರತೆ ಉಂಟಾಗಿದ್ದು, ಸತತ ನಾಲ್ಕನೇ ವರ್ಷದ ‘ಭೀಕರ ಬರ’ದ ಅಪಾಯ ಕಾಡುತ್ತಿದೆ. ಹೀಗಾಗಿ ನಗರದ ಕೆರೆಗಳಿಗೆ ನದಿ ನೀರು ತುಂಬಿಸುವುದೇ ಪರಿಹಾರವಾಗಿದ್ದು, ಈ ಕಾರ್ಯಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಅಭಿವೃದ್ಧಿಗಿಂತ ಹೆಚ್ಚಾಗಿ ಸಮಸ್ಯೆ ಮೂಲಕವೇ ಸುದ್ದಿ ಮಾಡುವ ಹಾವೇರಿಯಲ್ಲಿ ಈ ಬಾರಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ತೀವ್ರವಾಗಿತ್ತು.

ತುಂಗಭದ್ರಾ ನದಿಯ ಕೆಂಚಾರಗಟ್ಟಿ ಹಾಗೂ ವರದಾ ನದಿಯ ಕರ್ಜಗಿಯಿಂದ ನಗರಕ್ಕೆ ನೀರು ಪೂರೈಸಲು ಜಾಕ್‌ವೆಲ್‌ಗಳಿವೆ. ತುಂಗಾಭದ್ರಾದಲ್ಲಿ ಜೂನ್ 18 ಹಾಗೂ  ವರದಾ ನದಿಯಲ್ಲಿ ಜುಲೈ ಮೊದಲ ವಾರದಲ್ಲಿ ನೀರಿನ ಹರಿವು ಆರಂಭಗೊಂಡಿವೆ. ನದಿ ಮೇಲ್ಭಾಗದ ಪ್ರದೇಶದಲ್ಲಿ ಮಳೆಯಾದ ಕಾರಣ ಹರಿವು ಹೆಚ್ಚಿದೆ. ಆದರೆ, ನಗರದ ಹೆಗ್ಗೇರಿ ಕೆರೆಗೆ ಇನ್ನೂ ನೀರು ಹರಿಸಿಲ್ಲ.

‘ಮೋತಿ ತಲಾಬ್ ಹಾಗೂ ನಾಗನೂರ ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭಗೊಂಡಿದೆ. ಆದರೆ, ಆಡಳಿತದ ನಿರ್ಲಕ್ಷ್ಯದಿಂದ ಜಿಲ್ಲಾ ಕೇಂದ್ರವಾದ ಹೆಗ್ಗೇರಿ ಕೆರೆಗೆ ನೀರು ಹರಿಸುತ್ತಿಲ್ಲ?’ ಎಂದು ಬಿಜೆಪಿ ಮುಖಂಡ ವಿಜಯಕುಮಾರ್‌ ಚಿನ್ನಿಕಟ್ಟಿ ಆರೋಪಿಸುತ್ತಾರೆ.

‘ನಗರದ ಕೆರೆಗಳು, ಕೊಳವೆಬಾವಿ ಬತ್ತಿದ ಕಾರಣ ಈ ಬಾರಿ ನೀರಿನ ಬೇಡಿಕೆ ಹೆಚ್ಚಿತ್ತು. ನದಿಗಳಿಂದ ಬರುವ ನೀರನ್ನು ಶುದ್ಧೀಕರಿಸಿ ಜನತೆಗೆ ನೀಡಲಾಗುತ್ತಿದೆ. ನಗರದ ಸಮಸ್ಯೆ ಬಗೆಹರಿದ ತಕ್ಷಣವೇ ಹೆಗ್ಗೇರಿ ಕೆರೆಗೆ ಬಿಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರಯ್ಯ ತಿಳಿಸಿದ್ದಾರೆ. 

‘ಪ್ರಾಯೋಗಿಕವಾಗಿ ಅಕ್ಕನ ಹೊಂಡಕ್ಕೆ ನೀರು ಬಿಟ್ಟಿದ್ದೇವೆ. ನಗರದೊಳಗಿನ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಂಡಿದ್ದೇವೆ’ ಎಂದರು. ‘ತಾಂತ್ರಿಕ ಅಡಚಣೆಗಳನ್ನು ನಿವಾರಿಸಿಕೊಂಡು ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುವುದು. ಸದ್ಯ ನಮ್ಮ ಪೈಪ್‌ಲೈನ್‌ನಿಂದ ಕೆಲವು ಗ್ರಾಮಗಳು ನೀರು ಪಡೆಯುತ್ತಿದ್ದು, ಅವರ ಜೊತೆಯೂ ಮಾತುಕತೆ ನಡೆಸಲಾಗುವುದು’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ತಿಳಿಸಿದರು.

ಸಮಪಾಲು: ಹಾವೇರಿ ನಗರಸಭೆಯಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್ 13 ಸ್ಥಾನಗಳನ್ನು ಹೊಂದಿವೆ. ಮೂರು ಬಾರಿಯೂ ಬಿಜೆಪಿ ಸದಸ್ಯರ ‘ಪರೋಕ್ಷ’ ಬೆಂಬಲದಲ್ಲೇ ಕಾಂಗ್ರೆಸಿಗರು ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ. ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರು, ಬಿಜೆಪಿಯಿಂದ ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದಾರೆ. 

‘ಎರಡೂ ಪಕ್ಷಗಳು ಆಡಳಿತದಲ್ಲಿ ಇದ್ದರೂ, ನಗರದ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ’ ಎಂದು ಜನತೆ ದೂರುತ್ತಾರೆ. ‘ಜಿಲ್ಲಾ ಕೇಂದ್ರದಲ್ಲಿ ಇನ್ನೂ ಒಂದು ‘ರಂಗ ಮಂದಿರ’ ಅಥವಾ ‘ಮಲ್ಟಿಫ್ಲೆಕ್ಸ್’ ಇಲ್ಲ. ಆದರೆ, ಜನರಿಗೆ ರಾಜಕಾರಣಿಗಳ ಹೇಳಿಕೆ, ಪ್ರತಿಭಟನೆಗಳೇ ಮನೋರಂಜನೆಯಾಗಿದೆ. ಒಗ್ಗಟ್ಟಾಗಿ ನಗರ ಅಭಿವೃದ್ಧಿ ಪಡಿಸುವ ಯೋಜನೆಯೇ ಇಲ್ಲದಾಗಿದೆ’ ಎಂದು ನಗರ ನಿವಾಸಿ ಶಿವಯೋಗಿ ಬಿ. ಬೇಸರ ವ್ಯಕ್ತಪಡಿಸಿದರು.

ಪ್ರಾಯೋಗಿಕವಾಗಿ ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುತ್ತಿದೆ. ಒಣಗಿದ ಕೆರೆ ಪಾತ್ರವೇ ನೀರು ಹೀರಿಕೊಳ್ಳುತ್ತಿದೆ. ಇದನ್ನು ಪರಿಶೀಲಿಸಿ ಕಾಯಂ ನೀರು ಹರಿಸಲಾಗುವುದು
ಗಣೇಶ ಬಿಷ್ಟಣ್ಣನವರ
ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT