ಬುಧವಾರ, ಫೆಬ್ರವರಿ 19, 2020
24 °C

ಪ್ರಥಮಾರ್ಧದಲ್ಲಿ ಮಿಂಚಿದ ಬಾಲಿವುಡ್‌ ಸುಂದರಿಯರು

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಪ್ರಥಮಾರ್ಧದಲ್ಲಿ ಮಿಂಚಿದ ಬಾಲಿವುಡ್‌ ಸುಂದರಿಯರು

ದೀಪಿಕಾ ಪಡುಕೋಣೆ

ಇವರೂ ಈ ವರ್ಷ ಹಾಲಿವುಡ್‌ ಹಾದಿ ಹಿಡಿದಿದ್ದಾರೆ. ‘xxx: ರಿಟರ್ನ್‌ ಆಫ್‌ ಜಾಂಡರ್‌ ಕೇಜ್’ ಎಂಬ ಹಾಲಿವುಡ್‌ ಸಿನಿಮಾದಲ್ಲಿ ‘ಸೆರೆನಾ ಉಂಗುರ್’ ಎಂಬ ಸೀಕ್ರೆಟ್‌ ಏಜೆಂಟ್‌ ಪಾತ್ರದಲ್ಲಿ ಅವರು ಮಿಂಚಿದ್ದರು. ಬಾಲಿವುಡ್‌ನ ‘ರಾಬ್ತಾ’ ಸಿನಿಮಾದ ವಿಶೇಷ ಗೀತೆಯೊಂದರಲ್ಲಿ ಕುಣಿದು ಪ್ರೇಕ್ಷಕರನ್ನು ರಂಜಿಸಿದ್ದರು. ಈಗ ಐತಿಹಾಸಿಕ ಚಿತ್ರ ಪದ್ಮಾವತಿಯಲ್ಲಿ ಪದ್ಮಿನಿಯಾಗಿ ನಟಿಸುತ್ತಿದ್ದಾರೆ.

ಕಂಗನಾ ರನೋಟ್

‘ತನು ವೆಡ್ಸ್‌ ಮನು’ ಚಿತ್ರದ ನಂತರ ಕಂಗನಾ ಹೇಳಿಕೊಳ್ಳುವಂತಹ ಯಶಸ್ವಿ ಸಿನಿಮಾ ಸಿಗಲಿಲ್ಲ. ಭಾರೀ ಬಜೆಟ್‌ನ ‘ರಂಗೂನ್‌’ ಚಿತ್ರದಲ್ಲಿ ಅವರು ಸೈಫ್‌ ಅಲಿಖಾನ್ ಮತ್ತು ಶಾಹಿದ್‌ ಕಪೂರ್‌ ಜೊತೆ ನಟಿಸಿದ್ದರು. ಕೆಲವು ಹಸಿಬಿಸಿ ದೃಶ್ಯಗಳಲ್ಲಿ ಅವರು ಮಿಂಚಿ ಸುದ್ದಿ ಮಾಡಿದರು. ಆದರೆ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ನೀಡಲಿಲ್ಲ. ಝಾನ್ಸಿ ಲಕ್ಷ್ಮೀಬಾಯಿ ಪಾತ್ರದಲ್ಲಿ ನಟಿಸುತ್ತಿರುವ ‘ಮಣಿಕರ್ಣಿಕ’ ಮತ್ತು ‘ಸಿಮ್ರನ್‌’ ಚಿತ್ರಗಳು ಪ್ರಸ್ತುತ ಅವರ ಕೈಯಲ್ಲಿವೆ.

ಶ್ರದ್ಧಾ ಕಪೂರ್

ಎರಡು ಪ್ರೇಮಕಥಾ ಸಿನಿಮಾದಲ್ಲಿ ಶ್ರದ್ಧಾ ಕಪೂರ್‌ ಕಾಣಿಸಿಕೊಂಡರು. ಆದಿತ್ಯರಾಯ್‌ ಕಪೂರ್‌ ಜೊತೆ ನಟಿಸಿದ ‘ಓಕೆ ಜಾನು’ ಚಿತ್ರ ನಿರಾಸೆಗೊಳಿಸಿತು. ಅರ್ಜುನ್‌ ಕಪೂರ್‌ ಜೊತೆ ನಟಿಸಿದ ‘ಹಾಫ್‌ ಗರ್ಲ್‌ಫ್ರೆಂಡ್‌’ ಚಿತ್ರದಲ್ಲಿ ಒಂದು ಹಾಡು ಕೂಡ ಹಾಡಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಂತ ಹಿಟ್‌ ಸಾಧಿಸಲಿಲ್ಲ. ಪ್ರಸ್ತುತ ‘ಹಸೀನಾ’ ಚಿತ್ರದಲ್ಲಿ ದಾವೂದ್‌ ಇಬ್ರಾಹಿಂ ಸೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಪ್ಸಿ ಪನ್ನು

‘ಬೇಬಿ’ ಚಿತ್ರಕ್ಕೆ ಸೀಕ್ವೆಲ್ ಆಗಿ ಬಂದ ತಾಪ್ಸಿ, ‘ನಾಮ್‌ ಷಬಾನಾ’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು. ಇನ್ನು ‘ರನ್ನಿಂಗ್‌ ಶಾದಿ’ ಚಿತ್ರದಲ್ಲಿ ತುಂಟ ಹುಡುಗಿಯಾಗಿ, ‘ಘಾಜಿ ಅಟ್ಯಾಕ್‌’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದರು. ‘ಜುಡ್ವಾ–2’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

ಯಾಮಿ ಗೌತಮಿ

ಹೃತಿಕ್‌ ರೋಷನ್ ಜೊತೆ ನಟಿಸುವ ಅವಕಾಶ ‘ಕಾಬಿಲ್’ ಚಿತ್ರದ ಮೂಲಕ ಯಾಮಿ ಗೌತಮಿ ಅವರಿಗೆ ಸಿಕ್ಕಿತು. ಅಂಧೆಯಾಗಿ ಸವಾಲಿನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಲ್ಲದೆ ‘ಸರ್ಕಾರ್‌–3’ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಜೊತೆ ಬೆಳ್ಳಿ ತೆರೆ ಹಂಚಿಕೊಳ್ಳುವ ಸದವಕಾಶವೂ ಅವರಿಗೆ ದೊರೆಯಿತು.

ಇನ್ನೂ ಹಲವರು...

ಮಹಿಳಾ ಪ್ರಧಾನ ಪಾತ್ರದಲ್ಲಿ ತೆರೆಕಂಡ ‘ನೂರ್‌’ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಪತ್ರಕರ್ತೆಯಾಗಿ ಮಿಂಚಿದರು. ಆದರೆ ಚಿತ್ರ ನಿರಾಸೆಗೊಳಿಸಿತು.

‘ರಯೀಸ್‌’ ಸಿನಿಮಾದಲ್ಲಿ ಮಹೀರಾ ಖಾನ್, ‘ಮಾತ್ರ್‌’ ಸಿನಿಮಾದಲ್ಲಿ ರವೀನಾ ಟಂಡನ್‌, ‘ಜಾಲಿ ಎಲ್‌ಎಲ್‌ಬಿ–2’ ಚಿತ್ರದಲ್ಲಿ ಹುಮಾ ಖುರೇಷಿ, ‘ಮೇರಿ ಪ್ಯಾರಿ ಬಿಂದು’ ಸಿನಿಮಾದಲ್ಲಿ ಪರಿಣೀತಿ ಚೋಪ್ರಾ, ‘ಬೆಹನ್ ಹೋಗಿ ತೇರಿ ತೋ’ ಚಿತ್ರದಲ್ಲಿ ಶ್ರುತಿ ಹಾಸನ್‌, ‘ರಬ್ತಾ’ ಸಿನಿಮಾದಲ್ಲಿ ಕೃತಿ ಸೆನನ್, ‘ಅನಾರ್ಕಲಿ ಆಫ್‌ ಆರಾ’ ಸಿನಿಮಾದಲ್ಲಿ ಸ್ವರ ಭಾಸ್ಕರ್‌, ‘ಕಮಾಂಡೊ–2’ ಚಿತ್ರದಲ್ಲಿ ಆದಾ ಶರ್ಮಾ, ‘ಮೆಷಿನ್‌’ ಸಿನಿಮಾದಲ್ಲಿ ಕೈರಾ ಅಡ್ವಾನಿ ಅಭಿಮಾನಿಗಳನ್ನು ರಂಜಿಸಿದರು..

ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಈ ಪ್ರಥಮಾರ್ಧದ ಬಾಲಿವುಡ್‌ನ ಒಂದು ಚಿತ್ರದಲ್ಲೂ ಕಾಣಿಸಲಿಲ್ಲ. ಆದರೆ ಹಾಲಿವುಡ್‌ನ ‘ಬೇವಾಚ್‌’ ಸಿನಿಮಾದಲ್ಲಿ ಮಿಂಚಿ ಈ ಕೊರತೆಯನ್ನು ನೀಗಿಸಿದ್ದಾರೆ. ಅಲ್ಲದೆ ‘ಸರ್ವನ್‌’ ಎಂಬ ಪಂಜಾಬಿ ಚಿತ್ರವನ್ನು ನಿರ್ಮಿಸಿ ಅಲ್ಲಿಯೂ ಯಶಸ್ಸು ಗಳಿಸಿದ್ದಾರೆ.

ಆಲಿಯಾ ಭಟ್‌
‘ಬದ್ರಿನಾಥ್‌ ಕಿ ದುಲ್ಹಾನಿಯಾ’ ಚಿತ್ರದಲ್ಲಿ ವರುಣ್‌ ಧವನ್‌ಗೆ ಜೋಡಿಯಾದ ಆಲಿಯಾ ಭಟ್‌ ಈ ವರ್ಷ ಮತ್ತೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

ವಿದ್ಯಾಬಾಲನ್
ವಿದ್ಯಾಬಾಲನ್‌ ‘ಬೇಗಮ್ ಜಾನ್‌’ ಚಿತ್ರದಲ್ಲಿ ಹಕ್ಕುಗಳಿಗಾಗಿ ಹೋರಾಡುವ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಪ್ರಶಂಸೆ ದೊರೆಯುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲೂ ಸುಮಾರಾಗಿ ಸದ್ದು ಮಾಡಿತ್ತು. ಪ್ರಸ್ತುತ ಅವರು ‘ತುಮ್ಹಾರಿ ಸುಲು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)