ಭಾನುವಾರ, ಡಿಸೆಂಬರ್ 15, 2019
23 °C
ದಶಕಗಳಿಂದ ಆರದ ಮತೀಯ ದ್ವೇಷದ ಜ್ವಾಲೆ

ಆಗಾಗ ಗಲಭೆಗೆ ಕಿಡಿ ಹೊತ್ತಿಸುವ ಕಲ್ಲಡ್ಕ

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಆಗಾಗ ಗಲಭೆಗೆ ಕಿಡಿ ಹೊತ್ತಿಸುವ ಕಲ್ಲಡ್ಕ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಪುಟ್ಟ ಊರು ‘ಕಲ್ಲಡ್ಕ’ದ ಹೆಸರು ಕೇಳಿದರೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯದ ಜನರ ಕಿವಿ ನೆಟ್ಟಗಾಗುತ್ತದೆ. ಪೊಲೀಸರಂತೂ ಈ ಊರೆಂದರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಐದು ದಶಕಗಳ ಹಿಂದೆ ಶಾಂತವಾಗಿದ್ದ ಕಲ್ಲಡ್ಕ ಈಗ ಕೋಮು ದಳ್ಳುರಿಯ ತವರಾಗಿ ಬದಲಾಗಿದೆ. ಕರಾವಳಿಯನ್ನು ಆತಂಕಕ್ಕೆ ಸಿಲುಕಿಸುವ ಕೋಮುದಳ್ಳುರಿಯ ಕಿಡಿಗಳು ಬಹುಪಾಲು ಇಲ್ಲಿಂದಲೇ ಸ್ಫೋಟಿಸುತ್ತವೆ ಎಂಬುದು ಇದಕ್ಕೆ ಕಾರಣ.

ಗೋಳ್ತಮಜಲು ಮತ್ತು ಬಾಳ್ತಿಲ ಗ್ರಾಮಗಳ ನಡುವೆ ಹಂಚಿಹೋಗಿರುವ ಕಲ್ಲಡ್ಕದಲ್ಲಿ ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಇದೆ. ಮೇ 26ರಂದು ಯುವಕರ ಗುಂಪೊಂದು ಯುವಕರ ಮತ್ತೊಂದು ಗುಂಪಿನ ಮೇಲೆ ಎರಗಿ ಒಬ್ಬನಿಗೆ ಚೂರಿ ಇರಿಯುವುದರೊಂದಿಗೆ ರಂಝಾನ್‌ ಮಾಸ ಆಚರಣೆಯ ಸಂದರ್ಭದಲ್ಲೇ ಹಿಂದೂಗಳು– ಮುಸ್ಲಿಮರ ನಡುವೆ ದ್ವೇಷದ ಕಿಡಿ ಹೊತ್ತಿಕೊಂಡಿತ್ತು. ಈ ಪುಟ್ಟ ಊರಿನಲ್ಲಿ 53 ದಿನಗಳ ಹಿಂದೆ ಎದ್ದ ಕೋಮು ದಳ್ಳುರಿ ಇನ್ನೂ ಆರಿಲ್ಲ. ಅಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಯುತವಾಗಿ ಹೇಳುವ ಧೈರ್ಯ ಪೊಲೀಸರು ಸೇರಿದಂತೆ ಯಾರಿಗೂ ಇಲ್ಲವಾಗಿದೆ.

ಕಲ್ಲಡ್ಕದಲ್ಲಿ ಹೊತ್ತಿದ ಮತೀಯ ದ್ವೇಷದ ಕಿಡಿ 53 ದಿನಗಳಲ್ಲಿ 30 ಕಿ.ಮೀ. ದೂರದ ಮಂಗಳೂರು ನಗರದವರೆಗೂ ಹಬ್ಬಿದೆ. ಈ ಅವಧಿಯಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮತೀಯ ದ್ವೇಷದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ 39 ಪ್ರಕರಣಗಳು ದಾಖಲಾಗಿವೆ.

ಈ ಪೈಕಿ ಎಸ್‌ಡಿಪಿಐ ಕಾರ್ಯಕರ್ತ ಮೊಹಮ್ಮದ್ ಅಶ್ರಫ್‌ ಕೊಲೆ ಪ್ರಕರಣ ಮತೀಯ ದ್ವೇಷದ ಕಾರಣಕ್ಕಾಗಿಯೇ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಕುಮಾರ್‌ ಕೊಲೆ ಪ್ರಕರಣದ ಹಿಂದಿರುವ ನೈಜ ಕಾರಣ ಇನ್ನಷ್ಟೇ ಹೊರಬರಬೇಕಿದೆ. ಆದರೆ, ಶರತ್‌ ಸಾವು ಮತೀಯ ದ್ವೇಷದ ಜ್ವಾಲೆಯನ್ನೇ ಸ್ಫೋಟಿಸಿದೆ.

‘46 ವರ್ಷಗಳ ಹಿಂದೆ ಮೊದಲ ಬಾರಿಗೆ ಕಲ್ಲಡ್ಕದಲ್ಲಿ ಕೋಮು ದ್ವೇಷದ ಹಿಂಸಾ ಕೃತ್ಯಗಳು ನಡೆದಿದ್ದವು. ಆ ನಂತರದ ಎರಡು ದಶಕಗಳ ಕಾಲ ಕೆಲವು ಘಟನೆಗಳು ನಡೆದಿದ್ದವು. 1990ರ ನಂತರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತೀಯ ಘರ್ಷಣೆಗಳು ನಡೆದಿವೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಆದಾಗ ಹಲವು ತಿಂಗಳ ಕಾಲ ಕಲ್ಲಡ್ಕ ಪ್ರಕ್ಷುಬ್ಧವಾಗಿತ್ತು.

1998ರ ಸುರತ್ಕಲ್‌ ಕೋಮು ಗಲಭೆಯ ಸಮಯದಲ್ಲೂ ಇಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿತ್ತು. ನಾಲ್ಕೂವರೆ ದಶಕದ ಅವಧಿಯಲ್ಲಿ ಕಲ್ಲಡ್ಕದಲ್ಲಿ ನಡೆದಿರುವ ಮತೀಯ ಘರ್ಷಣೆಗಳಿಗೆ ಸಂಬಂಧಿಸಿದಂತೆ ನೂರಾರು ಪ್ರಕರಣಗಳು ದಾಖಲಾಗಿವೆ’ ಎಂದು ಬಂಟ್ವಾಳ ವೃತ್ತದಲ್ಲಿ ದೀರ್ಘ ಕಾಲ ಕೆಲಸ ನಿರ್ವಹಿಸಿರುವ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಊರು ಇಬ್ಭಾಗವಾಗುತ್ತದೆ: ಕಲ್ಲಡ್ಕದಲ್ಲಿ ಈಗ ಹಿಂದೂಗಳು ಮತ್ತು ಮುಸ್ಲಿಮರ ಸಂಖ್ಯೆ ಬಹುಪಾಲು ಸಮಬಲದಲ್ಲಿದೆ. ಪಟ್ಟಣದ ಕೆಳಗಿನ ಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ. ಮೇಲಿನ ಪೇಟೆಯಲ್ಲಿ ಬಹುಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಮೊದಲು ಎಲ್ಲ ಕಡೆಯೂ ಹಿಂದೂಗಳದ್ದೇ ಪ್ರಾಬಲ್ಯವಿತ್ತು. ಈಗ ಪೇಟೆಯ ಒಂದು ಭಾಗದ ವಾಣಿಜ್ಯ ಚಟುವಟಿಕೆಗಳ ಮೇಲೆ ಮುಸ್ಲಿಮರ ಹಿಡಿತ ಬಲವಾಗಿದೆ. ಸಣ್ಣ ಕಾರಣಕ್ಕೆ ಮತೀಯ ದ್ವೇಷ ಸ್ಫೋಟಗೊಂಡರೂ ಊರು ಇಬ್ಭಾಗವಾಗುತ್ತದೆ.

ಹಿಂದೂಗಳು ತಮ್ಮ ಪ್ರಾಬಲ್ಯದ ಪ್ರದೇಶದಲ್ಲಿ ಗುಂಪುಗೂಡಿದರೆ, ಮುಸ್ಲಿಮರು ಅವರ ಹಿಡಿತವಿರುವ ಪ್ರದೇಶದಲ್ಲಿ ಒಟ್ಟಾಗುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಬಂಟ್ವಾಳ ಠಾಣೆಯಿಂದ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ಅಹಿತಕರ ಘಟನೆಗಳು ನಡೆದುಹೋಗಿರುತ್ತವೆ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ತುಕಡಿಯೊಂದನ್ನು ಕೆಲವು ವರ್ಷಗಳಿಂದ ಕಲ್ಲಡ್ಕದಲ್ಲೇ ಇರಿಸಲಾಗಿದೆ. ಆದರೆ, ಅದನ್ನು ಲೆಕ್ಕಿಸದೇ ಕಲ್ಲು ತೂರಾಟ, ಚೂರಿ ಇರಿತಗಳು ನಡೆಯುವ ಹಂತಕ್ಕೆ ಈ ಪಟ್ಟಣ ಬದಲಾಗಿದೆ.

‘ವಾಹನ ಗುಂಡಿಗೆ ಬಿದ್ದಾಗ ಕೆಸರು ಸಿಡಿದದ್ದಕ್ಕೆ, ಅಂಗಡಿಯಿಂದ ಕೊಳೆತ ಟೊಮೆಟೊ ಎಸೆಯುವಾಗ ಮೈಮೇಲೆ ಬಿದ್ದಿದ್ದಕ್ಕೆ, ವಾಹನಗಳ ಡಿಕ್ಕಿ ಸಂಭವಿಸಿದ್ದಕ್ಕೆ ಇಲ್ಲಿ ಕೋಮು ಗಲಭೆಗಳು ನಡೆದ ಉದಾಹರಣೆಗಳಿವೆ. ವೈಯಕ್ತಿಕ ನೆಲೆಯಲ್ಲಿ ಸಂಭವಿಸುವ ಘಟನೆಗಳನ್ನು ಮತೀಯ ದ್ವೇಷ ಬಿತ್ತಲು ಬಳಸಿಕೊಳ್ಳಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಲ್ಲಡ್ಕದಲ್ಲಿರುವ ಎರಡೂ ಸಮುದಾಯದ ಯುವಕರು ಎಲ್ಲ ಘಟನೆಗಳನ್ನೂ ಕೋಮು ಸಂಬಂಧಿ ನೆಲೆಯಲ್ಲೇ ನೋಡುತ್ತಾರೆ. ಘರ್ಷಣೆಯ ಅವಕಾಶಕ್ಕಾಗಿ ಕಾಯುತ್ತಿರುವವರೇ ಹೆಚ್ಚುತ್ತಿದ್ದಾರೆ’ ಎನ್ನುತ್ತಾರೆ ಪೊಲೀಸರು.

ನಿಯಂತ್ರಣಕ್ಕೆ ಸಿಗದ ಬಿ.ಸಿ.ರೋಡ್‌: ಯಾವಾಗಲೂ ಕಲ್ಲಡ್ಕದಲ್ಲಿ ಮತೀಯ ಘರ್ಷಣೆ ಆರಂಭವಾಗುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಅದರ ಬಿಸಿ ತಗುಲುವುದು ಬಿ.ಸಿ.ರೋಡ್‌ ಪ್ರದೇಶಕ್ಕೆ. ಮಂಗಳೂರು, ಬೆಳ್ತಂಗಡಿ, ಪುತ್ತೂರು, ವಿಟ್ಲದಿಂದ ಇಲ್ಲಿಗೆ ನೇರ ಸಂಪರ್ಕವಿದೆ. ಘರ್ಷಣೆಯ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲ ಕಡೆಗಳಿಂದಲೂ ಇಲ್ಲಿಗೆ ಜನ ದೌಡಾಯಿಸುತ್ತಾರೆ. ನಂತರ ಅಲ್ಲಿಂದ ಫರಂಗಿಪೇಟೆ, ಕೈಕಂಬ, ಅಡ್ಯಾರ್‌ವರೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದೇ ದುಸ್ತರ ಎಂಬಂತಾಗುತ್ತದೆ.

ಪೊಲೀಸರಿಗೆ ನಿದ್ದೆ ಇಲ್ಲ

ಕಲ್ಲಡ್ಕದಲ್ಲಿ ನಡೆಯುವ ಗಲಭೆಗಳು ಬಹುತೇಕ ಸಂದರ್ಭಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ವರ್ಗಾವಣೆಗೆ ಕಾರಣವಾಗುತ್ತವೆ. ಈ ಬಾರಿಯೂ ಎಸ್‌ಪಿ, ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ, ಬಂಟ್ವಾಳ ವೃತ್ತದ ಇನ್‌ಸ್ಪೆಕ್ಟರ್‌ ಸೇರಿದಂತೆ ಹಲವರ ವರ್ಗಾವಣೆಗೆ ಇಲ್ಲಿನ ಗಲಭೆಯೇ ಕಾರಣವಾಯಿತು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬಂಟ್ವಾಳ ವೃತ್ತಕ್ಕೆ ಬರಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇಬ್ಬರು ಇನ್‌ಸ್ಪೆಕ್ಟರ್‌ಗಳು ಮತ್ತು ಒಬ್ಬ ಡಿವೈಎಸ್‌ಪಿ ವರ್ಗಾವಣೆ ಆದೇಶವಿದ್ದರೂ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದರು. ಅವರ ಬದಲಿಗೆ ಬೇರೆಯವರನ್ನು ನಿಯೋಜಿಸಲಾಗಿದೆ.

(ಮುಂದುವರಿಯುವುದು)

ಪ್ರತಿಕ್ರಿಯಿಸಿ (+)