ಭಾನುವಾರ, ಡಿಸೆಂಬರ್ 8, 2019
25 °C
ಭಾರತೀಯ ವಿವಾಹ ವ್ಯವಸ್ಥೆಯ ವಿಪರ್ಯಾಸಕ್ಕೆ ಕೈಗನ್ನಡಿ

ದಂಧೆಯಲ್ಲಿ ವಿವಾಹಿತ ಮಹಿಳೆಯರೇ ಹೆಚ್ಚು

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ದಂಧೆಯಲ್ಲಿ ವಿವಾಹಿತ ಮಹಿಳೆಯರೇ ಹೆಚ್ಚು

ಬೆಂಗಳೂರು: ವಿವಾಹ ಬಂಧನಕ್ಕೆ ಒಳಗಾದ ಹೆಣ್ಣು ಮಕ್ಕಳು ಲೈಂಗಿಕ ದಂಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲೂ  ಬಹುತೇಕ ಮಹಿಳೆಯರು ಗಂಡನಿದ್ದರೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ಈ ವಸ್ತುಸ್ಥಿತಿ ಭಾರತೀಯ ವಿವಾಹ ವ್ಯವಸ್ಥೆಯ ವಿಪರ್ಯಾಸಕ್ಕೆ ಕೈಗನ್ನಡಿ’ ಎಂದು ಜಯಮಾಲಾ ನೇತೃತ್ವದ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿ ವ್ಯಾಖ್ಯಾನಿಸಿದೆ.

ವಿವಾಹ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಒಂದು ಚೌಕಟ್ಟಿನ ಒಳಗೆ ಲೈಂಗಿಕ ಮತ್ತು ವಂಶಾಭಿವೃದ್ಧಿಯ ಅಗತ್ಯಗಳನ್ನು ಪೂರೈಸಿಕೊಳ್ಳಲಾಗುತ್ತದೆ. ಅದಕ್ಕೆ ಹೊರತಾಗಿಯೂ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಕೆಯಾಗುವುದು ಅನೈತಿಕ ಸಂಬಂಧ.

ದಂಧೆಯಲ್ಲಿರುವ ಅವಿವಾಹಿತೆಯರ ಪ್ರಮಾಣ ಶೇ 6ರಷ್ಟು ಮಾತ್ರ. ಆದರೆ, ಶೇ 38.4ರಷ್ಟು ಲೈಂಗಿಕ ಕಾರ್ಯಕರ್ತೆಯರು ಗಂಡನಿದ್ದರೂ ಪರಪುರುಷರಿಗೆ ದೇಹ ಸುಖ ನೀಡುವ ವೃತ್ತಿಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, ಈ ದಂಧೆಯಲ್ಲಿ ಎರಡನೇ ಪತ್ನಿಯರು ಶೇ 2.2ರಷ್ಟು ಇದ್ದಾರೆ.

ವಿವಾಹಿತರನ್ನು ಹೊರತುಪಡಿಸಿದರೆ, ವಿಚ್ಛೇದಿತರು, ವಿಧವೆಯರು, ಪರಿತ್ಯಕ್ತೆಯರು ಅಂದಾಜು ಶೇ 40ರಷ್ಟು ಇದ್ದಾರೆ. ಈ ಅಂಕಿಅಂಶಗಳು ಸಮಿತಿ ಸದಸ್ಯರನ್ನು ಚಕಿತಗೊಳಿಸಿವೆ.

ಮತ್ತಷ್ಟು ಅಧ್ಯಯನದ ಬಳಿಕ ಲಭ್ಯವಾದ ಮಾಹಿತಿಯನ್ನು ಕ್ರೋಡೀಕರಿಸಿದಾಗ, ಈ ವಿಷವರ್ತುಲ ಸೇರಿರುವ ಮಹಿಳೆಯರಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿರುವುದು ಗಮನಕ್ಕೆ ಬಂದಿದೆ. ಹೆಣ್ಣಿಗೆ 18 ವರ್ಷ  ತುಂಬುವ ಮೊದಲೇ ಆಕೆಗಿಂತ ವಯಸ್ಸಿನಲ್ಲಿ ತುಂಬಾ  ಹಿರಿಯನಾದ  ಪುರುಷನ ಜೊತೆ ಮದುವೆ ಮಾಡುತ್ತಾರೆ.

ಗಂಡ ತೀರಿಕೊಂಡರೆ ಒಂಟಿಯಾಗುವ ಇಂಥ ಮಹಿಳೆಯರು, ಮಕ್ಕಳನ್ನು ಸಾಕುವ ಸಲುವಾಗಿ ಈ ದಂಧೆಗೆ ಇಳಿಯುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಾರೆ. 18 ವರ್ಷದ ಬಳಿಕ ಮದುವೆಯಾದ ಶೇ 42.9ರಷ್ಟು ಮಂದಿ ಈ ದಂಧೆಯಲ್ಲಿ ಇದ್ದಾರೆ.

ಹೆಣ್ಣು ಮಕ್ಕಳ ಮದುವೆ ನಿರ್ಧಾರದಲ್ಲಿ ಪಾಲಕರ ಆಯ್ಕೆ (ಶೇ 69.5) ಮತ್ತು ಬಲವಂತದ ಮದುವೆ ( 8.3) ಹೆಚ್ಚಿದೆ. ವಿಚ್ಛೇದನ ಪಡೆಯಲು ಮತ್ತು ಗಂಡನಿಂದ ದೂರವಾಗಲು ಒತ್ತಾಯದ ಮದುವೆಯೂ ಕಾರಣವಾಗಿದೆ. ಲೈಂಗಿಕ ಕಾರ್ಯಕತೆಯರ ಸಂಖ್ಯೆ ಹೆಚ್ಚಲು ಪರೋಕ್ಷವಾಗಿ ಇದೂ ಅವಕಾಶ ಮಾಡಿಕೊಟ್ಟಿದೆ. ಶೆ 20.4ರಷ್ಟು ಮಹಿಳೆಯರು ಮಾತ್ರ ಮದುವೆ ವಿಷಯದಲ್ಲಿ ಸ್ವಂತ ಆಯ್ಕೆ, ನಿರ್ಧಾರ ತೆಗೆದುಕೊಳ್ಳುತ್ತಾರೆ. ದಂಧೆಯಲ್ಲಿ ಇರುವವರ ಅಸಹಾಯಕತೆ ಸೂಚಿ ಇದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಮನೆಕೆಲಸ ಮತ್ತು ಕೂಲಿ ಕೆಲಸ ಮಾಡುವವರು  ಈ ವೃತ್ತಿಯ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡುತ್ತಾರೆ. ಇವರಿಗೆ ಹೆಚ್ಚು ಆದಾಯ ಗಳಿಸುವ ಉದ್ಯೋಗ ಇಲ್ಲದಿರುವುದು ಮತ್ತು ಹಣದ ಅಗತ್ಯ ಇದಕ್ಕೆ ಕಾರಣ. ಶಿಕ್ಷಣ, ಕೌಶಲ ಮತ್ತು ತರಬೇತಿ ಕೊರತೆಯಿಂದ ಬೇರೆ ವೃತ್ತಿಗೆ ಹೋಗುವ ಅವಕಾಶವೂ ಈ ಮಹಿಳೆಯರಿಗೆ ಇಲ್ಲ ಎಂದು ವರದಿ ಹೇಳಿದೆ.

ದಂಧೆಯಲ್ಲಿ ತೊಡಗಿಸಿಕೊಂಡವರಲ್ಲಿ 25ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಶೇ 80ರಷ್ಟು ಇದ್ದಾರೆ ಎನ್ನುವ ಅಂಶ ಅಧ್ಯಯನದ ವೇಳೆ ಗಮನಕ್ಕೆ ಬಂದಿದೆ. 18 ವಯಸ್ಸಿನ ಒಳಗಿನ ಹೆಣ್ಣು ಮಕ್ಕಳನ್ನೂ ಈ ದಂಧೆಗೆ ತಳ್ಳಿರುವುದು, 40 ವಯಸ್ಸು ದಾಟಿದ ಬಳಿಕ ಲೈಂಗಿಕ ವೃತ್ತಿ ನಿರತರ ಸಂಖ್ಯೆಯಲ್ಲಿ ಇಳಿಮುಖ ಆಗಿರುವುದನ್ನು ಅಂಕಿಅಂಶಗಳು ತೋರಿಸುತ್ತವೆ.

ಈ ದಂಧೆಯಲ್ಲಿರುವ ಹೆಚ್ಚಿನವರು ಅನಕ್ಷರಸ್ಥರು ಮತ್ತು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದವರು. ಎಸ್‌ಎಸ್ಎಲ್‌ಸಿ, ಪಿಯುಸಿ ಮತ್ತು ಪದವಿ ಪಡೆದವರ ಸಂಖ್ಯೆ ಶೇ 12ರಷ್ಟು ಮಾತ್ರ.

ಲೈಂಗಿಕ ವೃತ್ತಿ ನಿರತರಲ್ಲಿ ಬಹುಪಾಲು ಮಹಿಳೆಯರು ಒಂಟಿಯಾಗಿ ಕುಟುಂಬ ಸಾಕುತ್ತಾರೆ. ಗಂಡ ಇದ್ದರೆ ಅವನ ಖರ್ಚು ಕೂಡಾ ನಿಭಾಯಿಸುತ್ತಾರೆ. ಗಂಡ ಇಲ್ಲದಿದ್ದರೆ ‘ಪಾರ್ಟನರ್‌’ಗಳೆಂದು ಪರ ಪುರುಷರನ್ನು ಸಂಗಾತಿಯಾಗಿ ಇರಿಸಿಕೊಳ್ಳುತ್ತಾರೆ.

ಗಂಡನೆಂದು ತೋರಿಸಿ ಮನೆ ಬಾಡಿಗೆ ಪಡೆಯಲು, ಮಕ್ಕಳಿಗೆ ಅಪ್ಪನೆಂದು ತೋರಿಸಲು, ಭಾವನಾತ್ಮಕ ಆಸರೆಗೆ, ಕೆಲವೊಮ್ಮೆ ದಲ್ಲಾಳಿಗಳಾಗಿ ‘ಪಾರ್ಟನರ್‌’ಗಳನ್ನು ಬಳಸುವವರೂ ಇದ್ದಾರೆ.  ‘ಪಾರ್ಟನರ್‌’ಗಳ ಕುಟುಂಬವನ್ನೂ ಈ ದಂಧೆಯಿಂದ ಬಂದ ಸಂಪಾದನೆಯಿಂದ ಸಾಕುವವರಿದ್ದಾರೆ. ಸ್ಥಳೀಯ ರೌಡಿಗಳೂ ‘ಪಾರ್ಟನರ್‌’ಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತದೆ ವರದಿ.

ಒಂದಷ್ಟು ಸಂಪಾದಿಸಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಈ ದಂಧೆಗೆ ಬಂದ ಮಹಿಳೆಯರೂ ಇದ್ದಾರೆ. ಅಂಥವರು ಮಕ್ಕಳು ಮತ್ತು ಮನೆಯವರಿಗೆ ತಮ್ಮ ವೃತ್ತಿ ಗೊತ್ತಾಗದಂತೆ ಗೋಪ್ಯವಾಗಿ ಇಟ್ಟಿದ್ದಾರೆ. ಅಂಥವರು ತಮ್ಮ ಮಕ್ಕಳನ್ನು ತವರು ಮನೆಯಲ್ಲೋ, ಸಂಬಂಧಿಕರ ಮನೆಯಲ್ಲೋ, ಹಾಸ್ಟೆಲ್‌ನಲ್ಲೋ ಇರಿಸಿ ಓದಿಸುತ್ತಾರೆ.

ಆದರೆ, ಅಮ್ಮನ ‘ವೃತ್ತಿ’ ಬಗ್ಗೆ ಗೊತ್ತಾಗುತ್ತಲೇ ಮಕ್ಕಳು ದೂರವಾದ ಪ್ರಕರಣಗಳು ಸಾಕಷ್ಟಿವೆ. ‘ನೀನು ದಂಧೆ ಬಿಡು. ನಾವು ಸಾಕುತ್ತೇವೆ’ ಎಂದು ಮಕ್ಕಳು ಹೇಳಿರುವ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಇವೆ ಎಂದೂ ಸಮಿತಿ ಹೇಳಿದೆ.

‘ನಮಗೆ ಈ ದಂಧೆ ಇಷ್ಟವಿಲ್ಲ. ಆದರೆ ಇದರಿಂದ ತಪ್ಪಿಸಿಕೊಳ್ಳಲು ನಮಗೆ ಸಾಧ್ಯವೂ ಇಲ್ಲ. ಈ ಜಾಲಕ್ಕೆ ಬಿದ್ದು ಆಗಿದೆ. ಇದಕ್ಕೆ ಒಗ್ಗಿದ್ದೇವೆ. ಒಪ್ಪಿಕೊಂಡಿದ್ದೇವೆ...’ ಎಂದು ಹಲವು ಲೈಂಗಿಕ ವೃತ್ತಿ ನಿರತರು ಸಮಿತಿ ಮುಂದೆ ಹೇಳಿಕೊಂಡಿದ್ದಾರೆ.

ದಂಧೆಗೆ ಇಳಿದ ಮಹಿಳೆ ಬಳಿಕ ಅದರಿಂದ ಹೊರಬರಲು ಬಯಸಿದರೂ ಹೊರಬರಲಾಗದ ಸ್ಥಿತಿ ಇಲ್ಲಿದೆ. ಈ ವಿಷವರ್ತುಲದಿಂದ ಹೊರಬಂದು, ಜೀವನಕ್ಕಾಗಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರುವ ಮಹಿಳೆಯರನ್ನು ಗಿರಾಕಿಗಳು ಅಲ್ಲಿಗೂ ಬಂದು ದಂಧೆಗೆ ಆಹ್ವಾನಿಸಿರುವ ಉದಾಹರಣೆಗಳಿವೆ ಎಂದೂ ವರದಿ ಹೇಳಿದೆ.

‘ಬಿಡಬೇಕೆಂದರೂ ಗಿರಾಕಿಗಳು ಬಿಡುವುದಿಲ್ಲ...’

ಲೈಂಗಿಕ ವೃತ್ತಿಯಲ್ಲಿ ನಿರತರಾದ ಬೆಂಗಳೂರು ಗ್ರಾಮಾಂತರ ಪ್ರದೇಶದ ಮಹಿಳೆ ಮನೆಯವರ ಇಚ್ಛೆಯಂತೆ 13 ವರ್ಷಕ್ಕೇ ಮದುವೆಯಾದಳು. 17ನೇ ವಯಸ್ಸಿಗೆ ಇಬ್ಬರು ಮಕ್ಕಳ ತಾಯಿಯಾದಳು. ಆಕೆಯ ಗಂಡ ಇಲ್ಲದ ಸಮಯ ನೋಡಿಕೊಂಡು,  ಹೊರ ಜಗತ್ತಿನ ಅರಿವೇ ಇಲ್ಲದ ಆಕೆಯನ್ನು, ಗಂಡನ ಅಕ್ಕ, ‘ಇಂಥವರು ಬರುತ್ತಾರೆ, ಅವರ ಜೊತೆ ಇರು’ ಎಂದು ಹೇಳುತ್ತಿದ್ದಳು. ಪ್ರತಿಭಟಿಸಿದಾಗ ಹೊಡೆಯುತ್ತಿದ್ದಳು. ಬೇರೆ ದಾರಿ ಕಾಣದೆ ದಂಧೆಗೆ ಇಳಿದಳು. ಈಗ ಈ ದಂಧೆ ಬಿಡಬೇಕೆಂದರೂ ಗಿರಾಕಿಗಳು ಆಕೆಯನ್ನು ಬಿಡುವುದಿಲ್ಲ ಎಂದು ಸಮಿತಿಯ ಮುಂದೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.

ರಾಜ್ಯದಲ್ಲೂ ರೆಡ್‌ಲೈಟ್‌ ಪ್ರದೇಶ

ಲೈಂಗಿಕ ವೃತ್ತಿನಿರತರು ರಾಜ್ಯದಾದ್ಯಂತ ಚದುರಿದ್ದರೂ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇವರ ಸಂಖ್ಯೆ ಹೆಚ್ಚು ಇದೆ. 

ಬಾಗಲಕೋಟೆಯ ಚಿಮ್ಮಡ, ರಬಕವಿ ಮತ್ತು ಜಮಖಂಡಿಯಲ್ಲಿ ಲೈಂಗಿಕ ದಂಧೆ ನಡೆಯುವ ‘ರೆಡ್‌ ಲೈಟ್‌’ (ಕೆಂಪು ದೀಪ) ಪ್ರದೇಶಗಳೇ ಇವೆ.  ಇಲ್ಲಿಂದ ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್‌, ಪುಣೆ, ಮುಂಬೈಗೆ ದಂಧೆ ಮಾಡಲು ಆಗಾಗ ಹೋಗಿ ಬರುವ ಮತ್ತು ಅಲ್ಲಿಯೇ ನೆಲೆಸಿ ದಂಧೆ ಮಾಡಿಕೊಂಡು ಮರಳಿ ಬರುವವರೂ ಇದ್ದಾರೆ.

ಈ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರಿಂದ ಹಿಡಿದು 60ರ ಅಂಚಿನಲ್ಲಿರುವ ಮಹಿಳೆಯರೂ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವುದನ್ನು ಅಧ್ಯಯನ ಸಮಿತಿ ಗುರುತಿಸಿದೆ. 

*

(ನಾಳಿನ ಸಂಚಿಕೆಯಲ್ಲಿ– ಲೈಂಗಿಕ ವೃತ್ತಿಗೆ ಜಾತಿ, ಧರ್ಮ, ಭಾಷೆಯ ಹಂಗಿಲ್ಲ!)

ಪ್ರತಿಕ್ರಿಯಿಸಿ (+)