ಭಾನುವಾರ, ಡಿಸೆಂಬರ್ 8, 2019
21 °C

ಸಮಗ್ರ ಪರಿಶೀಲನೆ ಬಳಿಕವೇ ಕುಲಾಂತರಿ ಸಾಸಿವೆ ತಳಿ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಗ್ರ ಪರಿಶೀಲನೆ ಬಳಿಕವೇ ಕುಲಾಂತರಿ ಸಾಸಿವೆ ತಳಿ ಬಳಸಿ

ನವದೆಹಲಿ: ಕುಲಾಂತರಿ ಸಾಸಿವೆ ತಳಿಯನ್ನು ಕೃಷಿ ಉದ್ದೇಶಕ್ಕೆ ಬಳಸುವ ನಿರ್ಧಾರ ಕೈಗೊಳ್ಳುವ ಮೊದಲು ಅದರ ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಬಳಕೆಯ ನಿರ್ಧಾರ ಕೈಗೊಂಡ ನಂತರ ಅದರಿಂದಾಗುವ ದುಷ್ಪರಿಣಾಮಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಕುಲಾಂತರಿ ಸಾಸಿವೆ ತಳಿಯನ್ನು ಬೆಳೆ ಉದ್ದೇಶದಿಂದ ರೈತರಿಗೆ ನೀಡುವ ಬಗ್ಗೆ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತು.

ಈ ತಳಿಯನ್ನು ರೈತರಿಗೆ ನೀಡುವ ಬಗ್ಗೆ (ವಾಣಿಜ್ಯ  ಬಳಕೆಗೆ ಬಿಡುಗಡೆ) ಯಾವಾಗ ನಿರ್ಧಾರ ಕೈಗೊಳ್ಳಲಾಗುವುದು ಎಂಬುದನ್ನು ಒಂದು ವಾರದೊಳಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ ಅವರಿದ್ದ ನ್ಯಾಯ ಪೀಠದ ಮುಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ಕಾರದ ಪರವಾಗಿ ಹೇಳಿಕೆ ನೀಡಿದರು.

ಕುಲಾಂತರಿ ಸಾಸಿವೆಯನ್ನು ರೈತರಿಗೆ ನೀಡುವುದಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಪರಿಶೀಲಿಸ ಲಾಗುತ್ತಿದ್ದು, ಸಂಬಂಧಪಟ್ಟವರಿಂದ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡುವುದಕ್ಕೆ ನೀಡಲಾಗಿದ್ದ ತಡೆಯನ್ನು  ಸುಪ್ರೀಂ ಕೋರ್ಟ್ ಕಳೆದ ವರ್ಷದ ಅಕ್ಟೋಬರ್ 17ರಂದು ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು. ಈ ತಳಿಯನ್ನು ಕೃಷಿ ಉದ್ದೇಶಕ್ಕೆ ಬಿಡುಗಡೆ ಮಾಡುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂದು ಕೋರ್ಟ್ ಸೂಚಿಸಿತ್ತು.

ನಿಯಮ ಪಾಲಿಸಿಲ್ಲ: ಬಿತ್ತನೆಗೆ ಮೊದಲು ಜೈವಿಕ ಸುರಕ್ಷತೆಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬುದು ನಿಯಮ. ಆದರೆ ಸರ್ಕಾರ ಹಾಗೆ ಮಾಡದೆ ವಿವಿಧ ಹೊಲಗಳಲ್ಲಿ ಪ್ರಾಯೋಗಿಕ  ಬಿತ್ತನೆ ಮಾಡಿದೆ ಎಂದು ಅರ್ಜಿದಾರರಾದ ಅರುಣಾ ರಾಡ್ರಿಗಸ್ ಪರ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.

ಇದಲ್ಲದೆ ಪ್ರಾಯೋಗಿಕ ಬಿತ್ತನೆಗೂ ಮುನ್ನ ನಡೆಸಬೇಕಾದ ವಿವಿಧ ಪರೀಕ್ಷೆಗಳನ್ನೂ ಮಾಡಲಿಲ್ಲ ಎಂದು ಹೇಳಿದರು.

ಕುಲಾಂತರಿ ಸಾಸಿವೆಗೆ ಸಂಬಂಧಿಸಿದ ನಿಯಂತ್ರಣ ವ್ಯವಸ್ಥೆಯು ಗೊಂದಲಕಾರಿ ಆಗಿದೆ ಮತ್ತು 10 ವರ್ಷಗಳಲ್ಲಿ ವಿವಿಧ ಪರೀಕ್ಷೆ ಮಾಡಿದ ನಂತರ ಈ ತಳಿಯ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ತಾಂತ್ರಿಕ ಪರಿಣತರ ಸಮಿತಿಯ ವರದಿ ಹೇಳಿದೆ ಎಂದು ಭೂಷಣ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ತಾಂತ್ರಿಕ ಪರಿಣತರ ಸಮಿತಿಯ ವರದಿಯ ಆಧಾರದ ಮೇಲೆ ಅರ್ಜಿದಾರ ರಾಡ್ರಿಗಸ್ ಅವರು ಕುಲಾಂತರಿ ಎಚ್‌ಟಿ ಸಾಸಿವೆಯ ಪ್ರಾಯೋಗಿಕ ಬಿತ್ತನೆ ಮತ್ತು ವಾಣಿಜ್ಯ ಬಳಕೆಯ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)