ಶುಕ್ರವಾರ, ಡಿಸೆಂಬರ್ 13, 2019
20 °C

ವಿದ್ಯಾರ್ಥಿ ನಾಯಕತ್ವದಿಂದ ಉಪರಾಷ್ಟ್ರಪತಿ ಗಾದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿ ನಾಯಕತ್ವದಿಂದ ಉಪರಾಷ್ಟ್ರಪತಿ ಗಾದಿಗೆ

ಹೈದರಾಬಾದ್‌: ಮುಪ್ಪವರಪು ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆಂಧ್ರ ಪ್ರದೇಶದಿಂದ ಈ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಉತ್ತಮ ವಾಗ್ಮಿಯಾಗಿರುವ ವೆಂಕಯ್ಯ ಅವರು ಆಂಧ್ರ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿ ಗಮನ ಸೆಳೆದಿದ್ದರು.

ವೆಂಕಯ್ಯ ಅವರು 1949ರ ಜುಲೈ 1ರಂದು ನೆಲ್ಲೂರು ಜಿಲ್ಲೆಯ ಚಾವಟಪಾಲೆಂ ಎಂಬಲ್ಲಿ ಜನಿಸಿದರು. ತಂದೆ ರಂಗಯ್ಯ ಮತ್ತು ತಾಯಿ ರಮಣಮ್ಮ ಅವರದ್ದು ಕೃಷಿ ಕುಟುಂಬ. ಆಂಧ್ರ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಅಂತರರಾಷ್ಟ್ರೀಯ ಕಾನೂನಿನಲ್ಲಿ ಅವರು ಪದವಿ ಪಡೆದಿದ್ದಾರೆ.

ಅವರು 1978 ಮತ್ತು 1983ರಲ್ಲಿ  ನೆಲ್ಲೂರು ಜಿಲ್ಲೆಯ ಉದಯಗಿರಿ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ತಮ್ಮ ತವರು ಆಂಧ್ರ ಪ್ರದೇಶದ ಬಗ್ಗೆ ವೆಂಕಯ್ಯ ಅವರು ಹೆಚ್ಚಿನ ಒಲವು ಹೊಂದಿದ್ದರೂ ತೆಲುಗು ಮಾತನಾಡುವ ಆಂಧ್ರ ಮತ್ತು ತೆಲಂಗಾಣಗಳೆರಡಲ್ಲೂ ಅವರ ಬಗ್ಗೆ ಜನರಿಗೆ ಪ್ರೀತಿ, ಗೌರವ ಇದೆ. ರಾಜ್ಯ  ವಿಭಜನೆ ಸಂದರ್ಭದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಅವರು ಒತ್ತಾಯಿಸಿದ್ದರು.  ನಂತರದ ದಿನಗಳಲ್ಲಿ ಅವರು ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿದ್ದರು.

ಆಂಧ್ರ ಪ್ರದೇಶಕ್ಕೆ ಕೇಂದ್ರದಿಂದ ಅಗತ್ಯ ನೆರವು ದೊರಕಿಸಿಕೊಟ್ಟ ಕಾರಣಕ್ಕಾಗಿ ಅಲ್ಲಿನ ಆಡಳಿತಾರೂಢ ಟಿಡಿಪಿ, ವೆಂಕಯ್ಯ ಅವರಿಗೆ ಸನ್ಮಾನ  ಮಾಡಿತ್ತು. ಅವರು ಸಕ್ರಿಯ ರಾಜಕೀಯದಿಂದ ನಿರ್ಗಮಿಸುವುದು ಆಂಧ್ರಕ್ಕೆ ದೊಡ್ಡ ಹಿನ್ನಡೆ ಎಂದು ಟಿಡಿಪಿಯ ಒಂದು ವರ್ಗ ಭಾವಿಸಿದೆ.

1970ರ ದಶಕದಲ್ಲಿ ನಡೆದ ಅಖಂಡ ಆಂಧ್ರ ಚಳವಳಿಯ (ಜೈ ಆಂಧ್ರ) ಮುಂಚೂಣಿಯಲ್ಲಿ ವೆಂಕಯ್ಯ ಇದ್ದರು. ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ನೀಡುವುದಕ್ಕಾಗಿಯೇ ಸ್ವರ್ಣ ಭಾರತ ಟ್ರಸ್ಟ್‌ ಎಂಬ ಸಂಸ್ಥೆಯನ್ನು ಅವರು ನಡೆಸುತ್ತಿದ್ದಾರೆ. ಇದು ತೆಲಂಗಾಣದಲ್ಲಿಯೂ ಇತ್ತೀಚೆಗೆ ತನ್ನ ಕೆಲಸ ಆರಂಭಿಸಿದೆ. ವೆಂಕಯ್ಯ ಅವರ ಹೆಂಡತಿ ಹೆಸರು ಉಷಾ, ಮಕ್ಕಳು ಹರ್ಷವರ್ಧನ್‌ ಮತ್ತು ದೀಪಾ.

ಇಷ್ಟವಿರಲಿಲ್ಲ: ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ವೆಂಕಯ್ಯ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗಿದೆ. ಸಕ್ರಿಯ ರಾಜಕಾರಣದಿಂದ ದೂರವಾಗಬೇಕು ಎಂಬುದು ಇದಕ್ಕೆ ಕಾರಣ. ಆದರೆ ಪಕ್ಷದ ಹಿತಾಸಕ್ತಿಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ವೆಂಕಯ್ಯ ಮನವೊಲಿಸಿದರು ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

* 2002: ಎರಡು ವರ್ಷಗಳ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ಜನನ: ಜುಲೈ 1, 1949

* ಸ್ಥಳ: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚಾವಟಪಾಲೆಂ

* ಶಿಕ್ಷಣ: ವಿ.ಆರ್‌. ಹೈಸ್ಕೂಲ್‌, ನೆಲ್ಲೂರು

* ಪದವಿ: ವಿ.ಆರ್‌. ಕಾಲೇಜು, ನೆಲ್ಲೂರು

* ಕಾನೂನು ಪದವಿ: ಆಂಧ್ರ ಯೂನಿವರ್ಸಿಟಿ ಕಾಲೇಜ್‌ ಆಫ್‌ ಲಾ, ವಿಶಾಖಪಟ್ಟಣ

* 1974: ಜಯಪ್ರಕಾಶ್ ನಾರಾಯಣ್‌ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯ ಸಂಚಾಲಕರಾಗಿ ರಾಜಕೀಯ ಜೀವನ ಆರಂಭ

* 1978 ಮತ್ತು 1983: ಉದಯಗಿರಿ ಕ್ಷೇತ್ರದಿಂದ ಆಂಧ್ರಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆ

* 1998, 2004, 2010 ಮತ್ತು 2016: ರಾಜ್ಯಸಭಾ ಸದಸ್ಯರಾಗಿ ಆಯ್ಕೆ

ಕೇಂದ್ರ ಸಚಿವ ಸ್ಥಾನಮಾನ

* 1999: ಗ್ರಾಮೀಣಾಭಿವೃದ್ಧಿ ಸಚಿವ

* 2014: ನಗರಾಭಿವೃದ್ಧಿ, ಗೃಹ ನಿರ್ಮಾಣ ಮತ್ತು ನಗರ ಬಡತನ ನಿರ್ಮೂಲನೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ

* 2016: ನಗರಾಭಿವೃದ್ಧಿ, ಗೃಹ ನಿರ್ಮಾಣ ಮತ್ತು ನಗರ ಬಡತನ ನಿರ್ಮೂಲನೆ ಜೊತೆಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೊಣೆ

ಮೂರು ಬಾರಿ ಕರ್ನಾಟಕದಿಂದ ಆಯ್ಕೆಯಾದ ವೆಂಕಯ್ಯ ನಾಯ್ಡು

ಬೆಂಗಳೂರು: ಎಂ. ವೆಂಕಯ್ಯನಾಯ್ಡು ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಮೂರು ಬಾರಿ  ಆಯ್ಕೆಯಾಗಿದ್ದರು.

1998, 2004 ಮತ್ತು 2010 ರಲ್ಲಿ  ರಾಜ್ಯವನ್ನು ಪ್ರತಿನಿಧಿಸಿದ್ದರು. ನಾಲ್ಕನೇ ಬಾರಿಯೂ ಕರ್ನಾಟಕದಿಂದಲೇ ಆಯ್ಕೆ ಬಯಸಿದ್ದರು. ಆದರೆ, ಕನ್ನಡ ಪರ ಸಂಘಟನೆಗಳ ವಿರೋಧದಿಂದ ರಾಜಸ್ಥಾನಕ್ಕೆ ವಲಸೆ ಹೋದರು. ಆದರೂ ಅವರು ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

ರಾಜ್ಯಸಭಾ ಚುನಾವಣೆ ಪೂರ್ವ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ   ರಾಜ್ಯದಿಂದಲೇ ಸ್ಪರ್ಧಿಸುವ ಆಸಕ್ತಿ ವ್ಯಕ್ತಪಡಿಸಿದ್ದರು.

‘ನಾನು ನೇಪಥ್ಯದ ನಾಯಕನಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ಎಲ್ಲೂ ನಾನು ಸಾಧನೆ ಮಾಡಿದ್ದೇನೆ ಎಂದು ಪಟ್ಟಿ ಕೊಡಲು ಹೋಗಲಿಲ್ಲ. ನಾನು ಮಾಡಿದ ಕೆಲಸಗಳ ‘ಕೀರ್ತಿ’ ಇಲ್ಲಿನ ಪಕ್ಷದ ನಾಯಕರಾದ ಯಡಿಯೂರಪ್ಪ, ಅನಂತಕುಮಾರ್‌, ಸದಾನಂದಗೌಡ, ಶೆಟ್ಟರ್‌ ಮುಂತಾದವರಿಗೆ ಸಿಗಬೇಕು. ಇಲ್ಲಿಂದ ಸ್ಪರ್ಧಿಸಬೇಕು ಎಂಬುದು ಬಯಕೆ’ ಎಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರತಿಕ್ರಿಯಿಸಿ (+)