ಭಾನುವಾರ, ಡಿಸೆಂಬರ್ 15, 2019
21 °C

ರಾಯರಡ್ಡಿ ಕಚೇರಿ ಮುಂದೆ ಜೆಡಿಎಸ್‌ ಶಾಸಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯರಡ್ಡಿ ಕಚೇರಿ ಮುಂದೆ ಜೆಡಿಎಸ್‌ ಶಾಸಕರ ಧರಣಿ

ಬೆಂಗಳೂರು:  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿರುವ  ಅತಿಥಿ  ಉಪನ್ಯಾಸಕರನ್ನೇ ಈ ವರ್ಷವೂ ಮುಂದುವರಿಸುವಂತೆ ಒತ್ತಾಯಿಸಿ ವಿಧಾನಪರಿಷತ್‌ ಜೆಡಿಎಸ್‌ ಸದಸ್ಯರು ಸೋಮವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕಚೇರಿ ಮುಂದೆ ಧರಣಿ ನಡೆಸಿದರು.

ಸಚಿವರ ಕಚೇರಿ ಮುಂದೆ ಕುಳಿತ ಕೆ.ಟಿ. ಶ್ರೀಕಂಠೇಗೌಡ, ರಮೇಶ್‌ಬಾಬು ಮತ್ತು ಆರ್‌.ಚೌಡರೆಡ್ಡಿ ಅವರು, ‘ಆನ್‌ಲೈನ್‌ ಮೂಲಕ ಅತಿಥಿ ಉಪನ್ಯಾಸಕರನ್ನು ಹೊಸದಾಗಿ ನೇಮಕಾತಿ ಮಾಡಲು ಹೊರಡಿಸಿರುವ ಆದೇಶವನ್ನು ಕೂಡಲೇ  ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರದ ನಿರ್ಧಾರದಿಂದ  3,000 ಕ್ಕೂ  ಹೆಚ್ಚು  ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇವರು ಅತ್ಯಂತ ಕಡಿಮೆ ವೇತನಕ್ಕೆ (₹11,000) ದುಡಿಯುತ್ತಿದ್ದಾರೆ’ ಎಂದು ರಮೇಶ್‌ ಬಾಬು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಅತಿಥಿ ಉಪನ್ಯಾಸಕರು ಅರೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರಿಗೇ ಇವರಿಗಿಂತ ಹೆಚ್ಚಿನ ವೇತನ ಸಿಗುತ್ತಿದೆ. ಇಂತಹ ಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬೀಳುವ ಸ್ಥಿತಿಯನ್ನು ಸೃಷ್ಟಿಸಬೇಡಿ’ ಎಂದು ಒತ್ತಾಯಿಸಿದರು.  ‘ಈಗ 2034 ಸಹಾಯಕ ಪ್ರಾಧ್ಯಾಪಕರ ನೇಮಕ ಆಗುತ್ತಿದ್ದು, ಈ ನೇಮಕಕ್ಕೆ ನಮ್ಮ ವಿರೋಧ ಇಲ್ಲ. 13,000 ಖಾಲಿ ಹುದ್ದೆಗಳಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕೈಬಿಡಬಾರದು ಎಂಬುದಷ್ಟೇ ನಮ್ಮ ಕಳಕಳಿ’ ಎಂದರು.

ಶ್ರೀಕಂಠೇಗೌಡ ಮಾತನಾಡಿ, ‘ಎಂಫಿಲ್‌ ಪದವಿಯನ್ನು ಪಿಎಚ್‌.ಡಿ, ನೆಟ್‌, ಸ್ಲೆಟ್‌ ಪದವಿಗಳಿಗೆ ಸಮಾನವಾಗಿ ಪರಿಗಣಿಸಿ ಎಲ್ಲ  ಅತಿಥಿ ಉಪನ್ಯಾಸಕರಿಗೂ ಸಮಾನ ವೇತನ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಸಂಬಳ ಸಹಿತ ಮೂರು ತಿಂಗಳ ಹೆರಿಗೆ ರಜೆ ನೀಡಬೇಕು’  ಎಂದು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ಈಗಿರುವ ಕಾನೂನು ತೊಡಕಿನ ನಿವಾರಣೆಗಾಗಿ ತಜ್ಞರ ಸಮಿತಿಗೆ  ಆಗ್ರಹಿಸಿದರು.

ಅತಿಥಿ ಉಪನ್ಯಾಸಕರ ಪ್ರತಿಭಟನೆ

ಈ ಮಧ್ಯೆ, ತಮ್ಮ ಸೇವೆ ಮುಂದುವರಿಸುವಂತೆ ಆಗ್ರಹಿಸಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಸೋಮವಾರವೂ ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರುವವರೆಗೆ ಇಲ್ಲಿಯ ಸ್ವಾತಂತ್ರ್ಯ ಉದ್ಯಾನದಲ್ಲಿ  ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಂಘದ ಅಧ್ಯಕ್ಷ ಎನ್‌. ಶ್ರೀನಿವಾಸಚಾರ್‌ ಎಚ್ಚರಿಸಿದರು.

ನೇಮಕಾತಿಗೆ ತಾತ್ಕಾಲಿಕ ತಡೆ

‘ಹೊಸ ಆಯ್ಕೆ  ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗುವುದು. ಈ ಸಮಸ್ಯೆಗೆ ಸಂಬಂಧಿಸಿದಂತೆ ಇದೇ ವಾರ ಸಭೆ ಕರೆಯುವುದಾಗಿ’  ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ  ಜಾವಿದ್‌ ಅಖ್ತರ್‌ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)