ಶನಿವಾರ, ಡಿಸೆಂಬರ್ 7, 2019
16 °C

ಕೋರ್ಟ್‌ ಸಮಯ ಹಾಳು: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರ್ಟ್‌ ಸಮಯ ಹಾಳು: ಆಕ್ಷೇಪ

ಬೆಂಗಳೂರು: ‘ನ್ಯಾಯಮೂರ್ತಿಗಳನ್ನು ಸ್ವಾಗತಿಸುವ, ಬೀಳ್ಕೊಡುವ ಅಥವಾ ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಹೈಕೋರ್ಟ್‌ಗೆ ಆಮಂತ್ರಿಸುವ ಪರಿಪಾಠ ಕಕ್ಷಿದಾರರ ಹಿತರಕ್ಷಣೆಗೆ ವಿರುದ್ಧವಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ.ಎಂ.ನಟರಾಜ್‌ ಆಕ್ಷೇಸಿದ್ದಾರೆ.

‘ಕೋರ್ಟ್ ಕಲಾಪ ನಡೆಯುವ ಸಮಯದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ ಮತ್ತು ಇಲ್ಲಿಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನೂ ಆಹ್ವಾನಿಸಲಾಗಿರುತ್ತದೆ. ಇದರಿಂದ ಕಾರ್ಯಕ್ರಮ ನಡೆಯುವ ಇಡೀ ದಿನ ಕೋರ್ಟ್ ಕಲಾಪ ದಿಂದ ವಂಚಿತವಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ನಿಟ್ಟಿನಲ್ಲಿ ನಾನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ 2016ರ ಜೂನ್‌ 6ರಂದು ನೀಡಿದ್ದ  ಸಲಹೆ ಈತನಕ ಕಾರ್ಯಗತವಾಗಿಲ್ಲ’ ಎಂದೂ ನಟರಾಜ್‌ ‘ಪ್ರಜಾವಾಣಿ’ಗೆ ವಿವರಿಸಿದ್ದಾರೆ.

ಸಾಂಪ್ರದಾಯಿಕ ಪರಿಪಾಠ: ‘ಯಾವುದೇ ನ್ಯಾಯಮೂರ್ತಿ ಇಲ್ಲಿಗೆ ವರ್ಗವಾಗಿ ಬಂದರೆ ಅವರಿಗೆ  ಕೋರ್ಟ್‌ ಹಾಲ್‌ ಸಂಖ್ಯೆ 1ರಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ಅಂತೆಯೇ ಯಾವುದೇ ನ್ಯಾಯಮೂರ್ತಿ ನಿವೃತ್ತರಾಗುತ್ತಿದ್ದರೆ ಅವರಿಗೆ ಕೊನೆ ದಿನ ರಾಜ್ಯ ವಕೀಲರ ಪರಿಷತ್‌ ವತಿಯಿಂದ  ಇಲ್ಲಿಯೇ ಬೀಳ್ಕೊಡಲಾಗುತ್ತದೆ. ಅದೇ ರೀತಿ ಶ್ರದ್ಧಾಂಜಲಿ ಕಾರ್ಯಕ್ರಮಗಳಿಗೂ ನ್ಯಾಯಾಧೀಶರನ್ನು ಆಹ್ವಾನಿಸಲಾಗುತ್ತಿದೆ.

ಈ ಪರಿಪಾಠಕ್ಕೆ ಸಿಟಿ ಸಿವಿಲ್ ಕೋರ್ಟ್‌, ಮೆಯೊ ಹಾಲ್‌, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಅರೆ ನ್ಯಾಯಿಕ ಪ್ರಾಧಿಕಾರಗಳ ನ್ಯಾಯಾಧೀಶರಿಗೆ ಆಮಂತ್ರಣ ನೀಡಲಾಗಿರುತ್ತದೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿರುತ್ತದೆ.

ಆ ದಿನ ನ್ಯಾಯಾಧೀಶರು ತಮ್ಮ ದೈನಂದಿನ ಕೋರ್ಟ್ ಕಲಾಪಗಳನ್ನು ಬದಿಗೊತ್ತಿಯೇ ಬರಬೇಕಾಗುತ್ತದೆ. ಮತ್ತು ಇದು, ಅವರ ದುಡಿಮೆಯ ಇಡೀ ದಿನವನ್ನು ನುಂಗಿ ಹಾಕುತ್ತದೆ. ಇದರಿಂದ ಕಕ್ಷಿದಾರನಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ಈ ಬಗ್ಗೆ ಹಿರಿಯ ವಕೀಲರು ಗಮನ ಹರಿಸುತ್ತಿಲ್ಲ’ ಎಂದು ನಟರಾಜ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಇಂತಹ ಕಾರ್ಯಕ್ರಮಗಳನ್ನು ಕೋರ್ಟ್ ಕಲಾಪ ಮುಗಿದ ಮೇಲೆ ಅಥವಾ ಕಲಾಪ ಆರಂಭವಾಗುವುದಕ್ಕೂ ಮುನ್ನವೇ ನಡೆಸುವುದು ಒಳಿತು’ ಎಂಬುದು ನಟರಾಜ್‌ ಅವರ ಸಲಹೆ.

ಇದನ್ನೆಲ್ಲಾ ಸಿ.ಜೆ ನಿರ್ಧರಿಸಬೇಕು...

ಈ ಕುರಿತಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅಶೋಕ ನಿಜಗಣ್ಣವರ್‌ ಅವರನ್ನು ಪ್ರಶ್ನಿಸಿದಾಗ, ‘ಇಂತಹ ವಿಷಯಗಳನ್ನು ಏನಿದ್ದರೂ ಮುಖ್ಯ ನ್ಯಾಯಮೂರ್ತಿಗಳೇ ನಿರ್ಧರಿಸುತ್ತಾರೆ. ಈ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ನಾಳೆ ನ್ಯಾಯಮೂರ್ತಿ ಬಿ.ಮನೋಹರ್‌ಗೆ ಬೀಳ್ಕೊಡುಗೆ

‘ನ್ಯಾಯಮೂರ್ತಿ ಬಿ. ಮನೋಹರ್ ಅವರಿಗೆ ಬುಧವಾರ (ಜು.19)  ರಾಜ್ಯ ವಕೀಲರ ಪರಿಷತ್‌ ವತಿಯಿಂದ ಬೀಳ್ಕೊಡುಗೆ ನೀಡಲಾಗುತ್ತಿದೆ’ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಕಚೇರಿಯ ಪ್ರಕಟಣೆ ತಿಳಿಸಿದೆ.

* ಈಗಾಗಲೇ ವಿಚಾರಣೆಗೆ ಬಾಕಿ ಇರುವ ಮೊಕದ್ದಮೆಗಳ ಸಂಖ್ಯೆ ಬೆಟ್ಟದಷ್ಟಿದೆ. ಹೀಗಿರುವಾಗ ಕೋರ್ಟ್ ಸಮಯ ಪೋಲು ಮಾಡಿದರೆ ಅದಕ್ಕೆ ಯಾರು ಹೊಣೆ?

–ಕೆ.ಎಂ.ನಟರಾಜ್‌, ಹೆಚ್ಚುವರಿ ಸಾಲಿಸಿಟರ್ ಜನರಲ್

ಮುಖ್ಯಾಂಶಗಳು

* ಕಕ್ಷಿದಾರರ ಹಿತರಕ್ಷಣೆಗೆ ವಿರುದ್ಧ

* ಕಳೆದ ವರ್ಷ ನೀಡಿದ್ದ ಸಲಹೆ ಪರಿಗಣಸಿಲ್ಲ

* ನಷ್ಟ ಭರಿಸುವವರು ಯಾರು..?

ಪ್ರತಿಕ್ರಿಯಿಸಿ (+)