ಬುಧವಾರ, ಡಿಸೆಂಬರ್ 11, 2019
25 °C
ದೇವನಹಳ್ಳಿಯಲ್ಲಿ ಬಿಜೆಪಿ ಮುಖಂಡ ಆರ್. ಆಶೋಕ್‌ ಆರೋಪ

‘ರೇವ್‌ ಪಾರ್ಟಿ ಕೇಂದ್ರಗಳಾದ ಜೈಲುಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೇವ್‌ ಪಾರ್ಟಿ ಕೇಂದ್ರಗಳಾದ ಜೈಲುಗಳು’

ದೇವನಹಳ್ಳಿ: ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಜೈಲುಗಳು ರೇವ್ ಪಾರ್ಟಿ ಕೇಂದ್ರಗಳಾಗಿವೆ ಎಂದು ಬಿಜೆಪಿ ಹಿರಿಯ ಮುಖಂಡ ಆರ್. ಆಶೋಕ್‌ ಆರೋಪಿಸಿದರು.

ದೇವನಹಳ್ಳಿ ಬೈಪಾಸ್ ರಸ್ತೆ ಬಳಿ ಸೋಮವಾರ ಗ್ರಾಮ ವಾಸ್ತವ್ಯ ಹೂಡಲು ಬಂದ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಐಪಿಎಸ್ ಅಧಿಕಾರಿ ರೂಪಾ, ನಿಷ್ಠಾವಂತಿಕೆ, ಪ್ರಾಮಾಣಿಕತೆ ಉಳ್ಳವರು. ಶೇ 100ರಷ್ಟು ಸತ್ಯವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಹೀಗಿದ್ದರೂ ಅಕ್ರಮ ನಡೆಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದೆ ಅವರನ್ನೇ ಬೆಂಬಲಿಸುವ ಸರ್ಕಾರದ ಕ್ರಮ ನಾಚಿಕೆಗೇಡು ಎಂದು ದೂರಿದರು.

ಜೈಲುಗಳಲ್ಲಿ ಶ್ರೀಮಂತ ಕೈದಿಗಳಿಗೆ ಮತ್ತು ಬಡ ಕೈದಿಗಳಿಗೆ ತಾರತಮ್ಯ ಭಾವನೆಯಿಂದ ಕಾಣಲಾಗುತ್ತಿದೆ. ಎರಡು ಕೋಟಿ ಹಣ ಯಾರಿಂದ ಯಾರಿಗೆ ಸಂದಾಯವಾಗಿದೆ ಎಂಬುದು ತನಿಖೆ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಶಶಿಕಲಾ ಮತ್ತು ನಕಲಿ ಛಾಪಾ ಕಾಗದ ಪ್ರಕರಣದ ರೂವಾರಿ ತೆಲಗಿ ಅವರನ್ನು ಜೈಲು ಅಧಿಕಾರಿಗಳು ಐಶಾರಾಮ ರೀತಿಯಲ್ಲಿ ಇರಲು ಬಿಟ್ಟಿದ್ದಾರೆ ಎಂದರು.

ಡಿವೈಎಸ್‌ಪಿ ಗಣಪತಿ, ಜಿಲ್ಲಾಧಿಕಾರಿ ಶಿಖಾ, ವಿಚಾರದಲ್ಲಿ ಸರ್ಕಾರ ಗೂಂಡಾಗಳಂತೆ ವರ್ತಿಸುತ್ತಿದೆ. ನಿಷ್ಠಾವಂತ ಅಧಿಕಾರಿಗೆ ಬೆಲೆ ಇಲ್ಲ. ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲೇ ಉತ್ತಮ ಶಿಸ್ತುಬದ್ಧ ಇಲಾಖೆ ಎಂದು ಹೆಸರು ಗಳಿಸಿತ್ತು. ಪ್ರಸ್ತುತ ಇಲಾಖೆಗೆ ಕಪ್ಪು ಚುಕ್ಕಿ ಬಿದ್ದಿದೆ ಎಂದರು.

ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಸಾರ್ವಜನಿಕರು  ನಗುವಂತಾಗಿದೆ ಎಂದರು.

ಸಂಸದ ಎಂ.ವೀರಪ್ಪ ಮೊಯಿಲಿ ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆಯಿಂದ ನೀರು ತರುತ್ತೇನೆ ಎಂದು ಹೇಳಿ ಕಾಮಗಾರಿ ಆರಂಭದ ಮೂಲದಲ್ಲಿ ಶಂಕುಸ್ಥಾಪನೆ ಮಾಡದೆ ಚಿಕ್ಕಬಳ್ಳಾಪುರದಲ್ಲಿ ಮಾಡಿದ್ದರ ಉದ್ದೇಶ ವೇನು ಎಂದು ಕೇಳಿದರು.

ಚೆಕ್ ಡ್ಯಾಂ ನಿರ್ಮಾಣ ಮಾಡುವುದಕ್ಕಿಂತ ಮೊದಲೆ ಪೈಪ್ ಖರೀದಿಗೆ ಟೆಂಡರ್ ಕರೆದು ಕೋಟ್ಯಂತರ ರೂಪಾಯಿ ಅಕ್ರಮ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ಹಿರಿಯ ಮುಖಂಡರಾದ ಜಿ.ಚಂದ್ರಣ್ಣ, ಡಿ.ಆರ್ ನಾರಾಯಣ ಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜ್‌ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ಕೇಶವ, ಮುಖಂಡ ರಮೇಶ್ ಕುಮಾರ್ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಶ್ರೀನಿವಾಸ್ ಇದ್ದರು.

**

ಎತ್ತಿನಹೊಳೆ ವಿಷಯದಲ್ಲಿ ವೀರಪ್ಪ ಮೊಯಿಲಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಇನ್ನೊಂದು ವರ್ಷದಲ್ಲಿ ಬಯಲು ಸೀಮೆಗೆ ನೀರು ಹರಿಸಲಿ.

-ಆರ್.ಅಶೋಕ್‌,  ಬಿಜೆಪಿ  ಮುಖಂಡ

ಪ್ರತಿಕ್ರಿಯಿಸಿ (+)