ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಹೆಸರು: ಬೇಡ, ಬೆಂಗಳೂರು
ನನ್ನ ವಯಸ್ಸು 32, ಕೇಂದ್ರ ಸರ್ಕಾರದ ಉದ್ಯೋಗಿ. ₹ 9,424 , ಎನ್.ಪಿ.ಎಸ್. ಕಡಿತವಾಗಿ ₹ 46,000 ಕೈಗೆ ಸಿಗುತ್ತದೆ. ನನ್ನ ಉಳಿತಾಯ ₹ 2,500 ಸಿಪ್, ಚೀಟಿ ₹ 5,000 (20 ತಿಂಗಳು), ಎಲ್ಐಸಿ ₹ 10,000 (ವರ್ಷಕ್ಕೆ), ತಿಂಗಳ ಖರ್ಚು ₹ 1,400, ನನ್ನ ಕುಟುಂಬ ನಾನು, ನನ್ನ ಹೆಂಡತಿ, 1 ವರ್ಷದ ಮಗು, ತಂದೆ ತಾಯಿ. ಮುಂದಿನ ಭವಿಷ್ಯಕ್ಕೆ ಉತ್ತಮ ಉಳಿತಾಯ ಯೋಜನೆ ಹೇಗಿರಬೇಕು?

ಉತ್ತರ: ನಿಮ್ಮ ಅಭಿಮಾನಕ್ಕೆ ವಂದನೆಗಳು. ತೆರಿಗೆ ಉಳಿಸುವ ಸಿಪ್ ಆದಲ್ಲಿ, ವಾರ್ಷಿಕ ವರಮಾನ ನೋಡಿ ಮುಂದುವರೆಸಿ (3 ವರ್ಷ Lock In Period) ಇರುತ್ತದೆ. ಚಿಟ್‌ಫಂಡ್ ಖಾಸಗಿಯಾದಲ್ಲಿ ಅವಧಿ ಮುಗಿದ ನಂತರ ಮುಂದುವರೆಸುವುದು ಸೂಕ್ತವಲ್ಲ. ಪ್ರಾರಂಭದಲ್ಲಿ ಚೆನ್ನಾಗಿ ನಡೆದರೂ, ಕೊನೆಯತನಕ ನಡೆಯುತ್ತದೆ ಎನ್ನುವ ಭರವಸೆ ಇರಲಾರದು. ಎಲ್ಐಸಿ ಕನಿಷ್ಠ ₹ 2,000 (ವಾರ್ಷಿಕ ₹ 24,000) ಈಗ ಇರುವ ಪಾಲಿಸಿ ಸೇರಿಸಿ ಮಾಡಿರಿ. ನಿಮ್ಮ ಆದಾಯಕ್ಕೆ ಇಷ್ಟು ಅವಶ್ಯವಿದೆ. ನೀವು ಈ ಕೆಳಗಿನಂತೆ ತಿಂಗಳಿಗೆ ಉಳಿತಾಯ ಮಾಡಿರಿ.

ನೀವು ನಾನು ತಿಳಿಸಿದಂತೆ ಉಳಿತಾಯವನ್ನು ಮಾಡಿದಲ್ಲಿ, ಆದಾಯ ತೆರಿಗೆ ಸೆಕ್ಷನ್ 80ಸಿ. ಗರಿಷ್ಠ ಲಾಭ (₹1.50 ಲಕ್ಷ) ಪಡೆಯಬಹುದು. ಜೊತೆಗೆ ಎಲ್ಲವೂ ಭದ್ರವಾದ ಹಾಗೂ ಉತ್ತಮ ವರಮಾನ ಬರುವ ಹೂಡಿಕೆಗಳಾಗಿದ್ದು ಜೀವನದ ಮುಂದಿನ ದಿವಸಗಳು ಸಮೃದ್ಧಿಯಿಂದ ಕೂಡಿರುತ್ತವೆ.

ನಿಮಗೆ ಹಿರಿಯ ನಾಗರಿಕರಾದ ತಂದೆ–ತಾಯಿಗಳು ಇರುವುದರಿಂದ, ನಿಮ್ಮ ಎಲ್ಲಾ ಕುಟುಂಬದವರು ಸೇರಿ ಒಂದು ಆರೋಗ್ಯ ವಿಮೆ (Health Insurance) ಸಿಂಡಿಕೇಟ್ ಬ್ಯಾಂಕ್‌ನ ಸಿಂಡ್ ಆರೋಗ್ಯ ಯೋಜನೆಯ ಅಡಿಯಲ್ಲಿ ಮಾಡಿರಿ. ಇದು Floater Policy ಯಾಗಿದ್ದು ಆಸ್ಪತ್ರೆಗೆ ಯಾರಾದರೊಬ್ಬರು ಸೇರಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಇನ್ಸುರನ್ಸ್ ಕಾರ್ಡ್ ತೋರಿಸಿ ವಿಮಾ ಮೊತ್ತದೊಳಗೆ, ನಗದು ರಹಿತ (Cash Less) ಸೇವೆ ಪಡೆಯಬಹುದು. ಒಟ್ಟಿನಲ್ಲಿ ₹ 5 ಲಕ್ಷ ಆರೋಗ್ಯ ವಿಮೆ ಇಳಿಸಿರಿ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.


ಕೃಷ್ಣೇಗೌಡ, ಮಂಡ್ಯ
ನನ್ನ ವಯಸ್ಸು 48, ಒಟ್ಟು ಸಂಬಳ ₹ 48,970. ಸರ್ಕಾರಿ ನೌಕರ. ಜಿಪಿಎಫ್, ಕೆಜಿಐಡಿ, ಎಲ್ಐಸಿ, ಜಿಐಸಿ, ಪಿಎಲ್ಐ, ಗೃಹಸಾಲ, ಖಾಸಗಿ ಚೀಟಿ ಸೇರಿ ₹ 27,350 ಕಡಿತವಾಗುತ್ತದೆ. ಮನೆ ಖರ್ಚು ₹ 8,000, ಮಕ್ಕಳ ಓದು ತಿಂಗಳಿಗೆ ₹ 6,000. ಎಲ್ಲಾ ಹೋಗಿ ₹ 2,400 ಉಳಿಯುತ್ತದೆ. ನನಗೆ ಮಂಡ್ಯದಲ್ಲಿ ಸ್ವಂತ ಮನೆ ಇದೆ. ಮೈಸೂರು ಸಿಟಿ ಸಮೀಪ ₹ 80,000 ಕೊಟ್ಟು ನಿವೇಶನ ಕೊಳ್ಳಲು ಕೆಜಿಐಡಿ ಹಾಗೂ ಬ್ಯಾಂಕ್ ಸಾಲ ಪಡೆದಿದ್ದೇನೆ. ತೆರಿಗೆ ₹ 4,200 ವಾರ್ಷಿಕವಾಗಿ ಕಟ್ಟಿದ್ದೇನೆ. ತೆರಿಗೆ ಉಳಿಸಲು ಹಾಗೂ ಹಣ ಉಳಿಸಲು ಏನು ಮಾಡಬೇಕು?

ಉತ್ತರ: ನೀವು ಸರ್ಕಾರಿ ನೌಕರರಾಗಿದ್ದು, ನಿಮ್ಮ ವಯಸ್ಸು 48 ಎನ್ನುವುದನ್ನು ಗಮನಿಸಿದಾಗ ನಿಮಗೆ ನಿವೃತ್ತಿಯ ನಂತರ ಪಿಂಚಣಿ ಇದೆ ಎನ್ನುವುದು ಖಚಿತವಾಯಿತು. ಆದಾಯ ತೆರಿಗೆ ಉಳಿಸಲು ಸೆಕ್ಷನ್ 80.ಸಿ. ಆಧಾರದ ಮೇಲೆ ಇರುವ ಗರಿಷ್ಠ ಮಿತಿ ₹ 1.50 ಲಕ್ಷ ಮಾತ್ರ. ಈ ಮಿತಿ ಈಗಾಗಲೇ ನೀವು ದಾಟಿದ್ದೀರಿ. ಮನೆ ಖರ್ಚು ಬರೇ ₹ 8,000 ಮಾಡಿ ಸಂಬಳದ ಸಿಂಹ ಪಾಲು ನೀವು ಈಗಾಗಲೇ ಉಳಿತಾಯಕ್ಕೆ ಮುಡುಪಾಗಿಟ್ಟಿದ್ದೀರಿ.

ಈ ವಿಚಾರದಲ್ಲಿ ನಿಮಗೆ ನನ್ನ ಅಭಿನಂದನೆಗಳು. ನಿಮಗೆ ಸ್ವಂತ ಮನೆ ಹಾಗೂ ಒಂದು ನಿವೇಶನ ಕೂಡಾ ಇರುವುದರಿಂದ ಇನ್ನು ಸ್ಥಿರ ಆಸ್ತಿ ಹೂಡಿಕೆ ಅವಶ್ಯವಿಲ್ಲ. ಎಲ್ಲಾ ಹೋಗಿ ನೀವು ಇಂದು ಉಳಿಸಬಹುದಾದ ಹಣ ₹ 2,400 ಮಾತ್ರ. ಇದು ಒಂದಲ್ಲಾ ಒಂದು ಖರ್ಚಿಗೆ ಬೇಕಾಗುತ್ತದೆ. ನಿಮ್ಮ ಇಂದಿನ ಪರಿಸ್ಥಿತಿಯಲ್ಲಿ, ವಾರ್ಷಿಕ ಇನ್‌ಕ್ರಿಮೆಂಟ್‌, ಅರ್ಧ ವಾರ್ಷಿಕ ಡಿ.ಎ., ಹೀಗೆ ಪಡೆಯುವ ಸಂಬಳ ಹೆಚ್ಚಳದಲ್ಲಿ ಶೇ 50, ನೀವು ನಿಮ್ಮ ಹೆಂಡತಿ ಹೆಸರಿನಲ್ಲಿ ಜಂಟಿಯಾಗಿ ಆರ್.ಡಿ. ಮಾಡಿರಿ. ಈ ಪ್ರಕ್ರಿಯೆ ನಿವೃತ್ತಿ ತನಕವೂ ಮುಂದುವರೆಸಿರಿ. ಈ ಯೋಜನೆ ಹೊರ ನೋಟಕ್ಕೆ ಸಣ್ಣದಾದರೂ, ನಿವೃತ್ತಿಯಲ್ಲಿ ದೊಡ್ಡ ಮೊತ್ತ ತರುತ್ತದೆ.

ವಿಜಯಾ, ಹುಬ್ಬಳ್ಳಿ
ಗೃಹಿಣಿ. ವಯಸ್ಸು 40. ಮನೆಯಲ್ಲಿಯೇ ಹೊಲಿಗೆ, ಟ್ಯೂಷನ್‌ನ್ನಿಂದ ₹ 5–6 ಸಾವಿರ ಗಳಿಸುತ್ತೇನೆ. ಪತಿ ಖಾಸಗಿ ಉದ್ಯೋಗಿ ಸಂಬಳ ಹಾಗೂ ಕೃಷಿ ಆದಾಯದಿಂದ ಜೀವನ ನಡೆಯುತ್ತದೆ. ಅದರಲ್ಲೂ 2–3 ಸಾವಿರ ಉಳಿಯುತ್ತದೆ. ನಾನು ಪ್ರತೀ ತಿಂಗಳೂ ₹ 5,000 ತುಂಬುತ್ತೇನೆ. ನನ್ನ 16 ವರ್ಷದ ಒಟ್ಟು ಉಳಿತಾಯ ₹ 7.50 ಲಕ್ಷ. ಇದನ್ನು ಎಫ್.ಡಿ. ಮಾಡಿದ್ದೇನೆ. ನನ್ನ ಪ್ರಶ್ನೆ: (1) ನಾನು ಇನ್ನು ಮುಂದೆ ಟ್ಯೂಷನ್ ಹಾಗೂ ಹೊಲಿಗೆ ಹಣವನ್ನು ನಗದು ರಹಿತವಾಗಿಯೇ ಪಡೆಯಬೇಕೆ? (2) ನಗದನ್ನು ಸ್ವೀಕರಿಸಿ ಮೊದಲಿನಂತೆ ಠೇವಣಿ ಮಾಡಬಹುದೇ. (3) ನಾನು ರಿಟರ್ನ್ ಫೈಲ್ ಮಾಡಬೇಕೇ?

ಉತ್ತರ: ನಗದು ರಹಿತ ವ್ಯವಹಾರದ ವಿಚಾರದಲ್ಲಿ ನಿಮಗೆ ಗೊಂದಲ ಉಂಟಾಗಿರುವುದು ಸಹಜ. ಆದರೆ, ಹೊಲಿಗೆ–ಟ್ಯೂಷನ್ ಇವುಗಳಿಂದ ನೀವು ಪಡೆಯುವ ಮಾಸಿಕ ₹ 5–6 ಸಾವಿರ ಚೆಕ್ ಮುಖಾಂತರ ಪಡೆಯಬೇಕಾದರೆ, ನಿಮ್ಮ ಹತ್ತಿರ ಯಾರೂ ಬರಲಾರರು. ಈ ವ್ಯವಸ್ಥೆ ನಿಮಗೆ ಅನ್ವಯವಾಗುವುದಿಲ್ಲ. ಧೈರ್ಯಮಾಡಿ ನಿಮ್ಮ ಉದ್ಯೋಗ ಮುಂದುವರಿಸಿರಿ ಹಾಗೂ ನಗದು ಹಣ ಬಂದಾಗಲೆಲ್ಲಾ ಬ್ಯಾಂಕಿಗೆ ಕಟ್ಟಿ ₹ 5,000 ಆಗುತ್ತಲೇ ಅವಧಿ ಠೇವಣಿ ಮಾಡಿರಿ. ನಿಮಗೆ ಈ ಹಣದ ಬಡ್ಡಿ ಅವಶ್ಯವಿಲ್ಲ.

ಈ ಕಾರಣದಿಂದಾಗಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ಚಕ್ರಬಡ್ಡಿಯಲ್ಲಿ ಹಣ ವೃದ್ಧಿಸಿಕೊಳ್ಳಿ. ಇದಕ್ಕಿಂತ ನೀವು ಪ್ರತೀ ತಿಂಗಳು ₹ 5,000 ಆರ್.ಡಿ. ಮಾಡಿದರೆ ಇನ್ನೂ ಕ್ಷೇಮ. ನಿಮ್ಮಂತಹ ಜಾಣ ಗೃಹಿಣಿಯರು ದೇಶದ ಆಸ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ನಿಮಗೆ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯವಿಲ್ಲ. ನಿಮ್ಮ ಸಣ್ಣ ಆದಾಯದಲ್ಲಿ ನೀವು ಹಣ ಉಳಿಸಿ ಕುಟುಂಬದ ಏಳಿಗೆಗೆ ಪಾತ್ರರಾಗಿದ್ದೀರಿ. ನಿಮಗೆ ಅಭಿನಂದನೆಗಳು. ವಿ.ಸೂ: ₹ 2 ಲಕ್ಷಕ್ಕೂ ಮಿಗಿಲಾಗಿ ನಗದು ವ್ಯವಹಾರ ಮಾಡುವವರಿಗೆ ‘ನಗದು ರಹಿತ’ ನಿರ್ಬಂಧ ಅನ್ವಯಿಸುತ್ತದೆ.

ಶಶಿ ಪಾಟೀಲ್, ಬೆಂಗಳೂರು
ನನ್ನ ಮಗನ ವಾರ್ಷಿಕ ಆದಾಯ ₹ 3.8 ಲಕ್ಷ. ₹ 10,000 ತಿಂಗಳಿಗೆ ಉಳಿಸಲು ಹಾಗೂ ತೆರಿಗೆ ವಿನಾಯಿತಿ ಪಡೆಯಲು ಏನು ಮಾಡಬೇಕು?

ನಿಮ್ಮ ಮಗನಿಗೆ ₹ 2.50 ಲಕ್ಷ ಆದಾಯದ ತನಕ ಆದಾಯ ತೆರಿಗೆ ಬರುವುದಿಲ್ಲ. ₹ 1.30ಕ್ಕೆ ತೆರಿಗೆ ಕೊಡ ಬೇಕಾಗುತ್ತದೆ. ಇವರು ಸೆಕ್ಷನ್ 80ಸಿ ಆಧಾರದ ಮೇಲೆ ವಾರ್ಷಿಕ ಗರಿಷ್ಠ ₹ 1.50 ಲಕ್ಷ ಈ ಕೆಳಗಿನಂತೆ ಉಳಿಸಲು ಹೇಳಿ ಹಾಗೂ ಇದರಿಂದ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆಯಿರಿ.

ವಾರ್ಷಿಕವಾಗಿ ಉಳಿಸುವ ಹಣ ಪಿ.ಪಿ.ಎಫ್‌. ₹ 90,000 (ತಿಂಗಳಿಗೆ ₹ 7,500) ವಿಮೆ– ₹ 60,000 (ತಿಂಗಳಿಗೆ ₹ 5,000 ) 1,50,000 ವಿಮೆ, ಎಲ್‌ಐಸಿಯವರ ಜೀವನ ಆನಂದ ಪಾಲಿಸಿಯಲ್ಲಿ ಮಾಡಲಿ. ಪಿಪಿಎಫ್‌, ಅಂಚೆ ಕಚೇರಿಯಲ್ಲಿ ಅಥವಾ ಎಸ್‌ಬಿಐನಲ್ಲಿ ಮಾಡಲಿ ವರ್ಷಾಂತ್ಯಕ್ಕೆ ₹ 1.50 ಲಕ್ಷ ಒಮ್ಮೆಲೇ ಕಟ್ಟುವುದು ಕಷ್ಟವಾಗುತ್ತದೆ. ₹ 5000 ಎಲ್‌ಐಸಿ ಪ್ರೀಮಿಯಂ, ಸಂಬಳದಿಂದ ಕಡಿತ ಮಾಡುವಂತೆ (ಸಂಬಳ ಸೇವಿಂಗ್ಸ್‌ ಸ್ಕೀಂ) ಮಾಡಲಿ ಹಾಗೂ ಪಿಪಿಎಫ್‌ ಸಲುವಾಗಿ ₹ 7,500 ಆರ್‌ಡಿ ಒಂದು ವರ್ಷಕ್ಕೆ ಮಾಡಲಿ. ಹೀಗೆ ಮಾಡಿದಲ್ಲಿ ತೆರಿಗೆ ವಿನಾಯತಿ ಪಡೆಯುವುದರ ಜೊತೆಗೆ ಉತ್ತಮ ಹೂಡಿಕೆ ಮಾಡಿದಂತಾಗುತ್ತದೆ.

ವಿನೋದ್‌. ಎನ್‌., ಮುದ್ದೆಬಿಹಾಳ
ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 72. ತಿಂಗಳ ಪಿಂಚಣಿ ₹ 27,000. ಮನೆಯಲ್ಲಿ ನನ್ನ ಹೆಂಡತಿ (58) ಎರಡು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದಾರೆ. ನನ್ನ ಹೆಸರಿನಲ್ಲಿ ಶ್ರೀರಾಮ್‌ ಫೈನಾನ್ಸ್‌ನಲ್ಲಿ ₹ 15 ಲಕ್ಷ ಎಸ್‌ಬಿಐನಲ್ಲಿ ₹ 17.7 ಲಕ್ಷ ಅವಧಿ ಠೇವಣಿ ಇದೆ. 15ಎಚ್‌ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸುತ್ತಿದ್ದೇನೆ. ₹ 2 ಲಕ್ಷದಂತೆ, 2 ಶ್ರೀರಾಮ್‌ ಲೈಫ್‌ ಇನ್ಶುರನ್ಸ್‌ನಲ್ಲಿ ಒಮ್ಮೆಲೇ ತುಂಬುವ ಯೋಜನೆಯಲ್ಲಿ ಹಾಕಿದ್ದೇನೆ. ನನಗೆ ಪಿತ್ರಾರ್ಜಿತ 30 ಎಕರೆ ಜಮೀನು ಹಾಗೂ ಒಂದು ಮನೆ ಇದೆ. ತೆರಿಗೆ ಉಳಿಸಲು ಹಾಗೂ ಉಳಿತಾಯದ ಬಗೆ ಹೇಗೆ?

ಉತ್ತರ: ನೀವು ಹಿರಿಯನಾಗರಿಕರಾದ್ದರಿಂದ ವಾರ್ಷಿಕ ಆದಾಯ ₹ 3 ಲಕ್ಷದ ತನಕ ತೆರಿಗೆ ಬರುವುದಿಲ್ಲ. ನೀವು ಆದಾಯ ತೆರಿಗೆಗೆ ಒಳಗಾಗುವುದರಿಂದ 15ಎಚ್‌ ನಮೂನೆ ಫಾರಂ ಬ್ಯಾಂಕಿಗೆ ಕೊಡಲು ಬರುವುದಿಲ್ಲ. ನಿಮ್ಮ ಠೇವಣಿ ಮೇಲಿನ ಬಡ್ಡಿಯಲ್ಲಿ ಬ್ಯಾಂಕು ತೆರಿಗೆ ಮುರಿಯಬೇಕಾಗುತ್ತದೆ. ನಿಮ್ಮ ಒಟ್ಟು ಆದಾಯದಲ್ಲಿ ಕೃಷಿ ಆದಾಯ ಸೆಕ್ಷನ್‌ 10(1) ಆಧಾರದ ಮೇಲೆ ವಿನಾಯತಿ ಪಡೆದಿರುತ್ತದೆ. ಕೃಷಿ ಆದಾಯ ಹೊರತುಪಡಿಸಿ, ಪಿಂಚಣಿ ಬ್ಯಾಂಕ್‌ ಠೇವಣಿ ಬಡ್ಡಿ ಸೇರಿಸಿ, ₹ 3 ಲಕ್ಷ ಕಳೆದು ತೆರಿಗೆ ಸಲ್ಲಿಸಿರಿ ಹಾಗೂ 31–7–2017 ರೊಳಗೆ ತೆರಿಗೆ ರಿಟರ್ನ್‌ ಚಾರ್ಟರ್ಡ್‌ ಅಕೌಂಟಂಟ್‌ ಮುಖಾಂತರ ಸಲ್ಲಿಸಿ ನಿಶ್ಚಿಂತರಾಗಿರಿ. ಇದೇ ವೇಳೆ ನೀವು ವಾರ್ಷಿಕವಾಗಿ ₹ 1.50 ಲಕ್ಷ 5 ವರ್ಷಗಳ ಅವಧಿಗೆ, ಬ್ಯಾಂಕ್‌ ಠೇವಣಿ ಮಾಡಿದಲ್ಲಿ, ₹ 4.50 ಲಕ್ಷ ವಾರ್ಷಿಕ ಆದಾಯದ ತನಕವೂ ತೆರಿಗೆ ವಿನಾಯತಿ ಪಡೆಯಬಹುದು. ತೆರಿಗೆ ಉಳಿಸಲು ಪ್ರತೀ ವರ್ಷ ₹ 1.50 ಲಕ್ಷ ಹೀಗೆ ಠೇವಣಿ ಮಾಡಬೇಕಾಗುತ್ತದೆ.

ಹೆಸರು–ಊರು–ಬೇಡ
ಪ್ರಶ್ನೆ: ನನ್ನ ಅಳಿಯ ಅಪಘಾತದಿಂದ ನಿಧನರಾದರು. ಇದರಿಂದ ನನ್ನ ಮಗಳಿಗೆ ₹ 7 ಲಕ್ಷ ಬಂದಿದ್ದು ಈಗ ಅದು ₹ 10 ಲಕ್ಷವಾಗಿದೆ. ಈ ಹಣ ಅವಳ ಹೆಸರಿಗಿದ್ದರೆ, ಸಹಪಾಠಿಗಳು ಅಥವಾ ಇತರರು ಸಾಲ ಕೇಳಿ ಮುಂದೆ ಹಣ ಬಾರದಿರಬಹುದು ಎನ್ನುವ ಹೆದರಿಕೆಯಿಂದ ನನ್ನ ಹೆಸರಿಗೆ ಇಟ್ಟು ಬರುವ ಬಡ್ಡಿ ಅವಳ ಉಳಿತಾಯ ಖಾತೆಗೆ ಜಮಾ ಮಾಡುತ್ತಿದ್ದೇನೆ. ನಾನು ನಿವೃತ್ತ ನೌಕರ. ವಯಸ್ಸು 68. ನನಗೆ ₹ 11,500 ಪಿಂಚಣಿ ಬರುತ್ತದೆ. ನಮ್ಮಿಬ್ಬರ ಹೆಸರಿನಲ್ಲಿ ಜಂಟಿಯಾಗಿ ಸುಮಾರು ₹ 20 ಲಕ್ಷ ಠೇವಣಿ ಇದೆ. ನನಗೆ ಆದಾಯ ತೆರಿಗೆ ಬರುತ್ತಿದೆಯೇ ಹಾಗೂ ರಿಟರ್ನ್‌ ತುಂಬ ಬೇಕೇ?.

ಉತ್ತರ: ನಿಮಗೆ ಒಬ್ಬಳೇ ಮಗಳು ಎಂದು ಭಾವಿಸುತ್ತೇನೆ. ಇವಳಲ್ಲದೆ ಬೇರೆ ಮಕ್ಕಳಿರುವಲ್ಲಿ, ನಿಮ್ಮ ಕಾಲಾ ನಂತರ, ನಿಮ್ಮ ಮಗಳ ಠೇವಣಿ ನಿಮ್ಮ ಹೆಸರಿನಲ್ಲಿದ್ದರೂ, ಉಳಿದವರಿಗೆ ಹಕ್ಕು ಬರುತ್ತದೆ. ಆದಾಯ ತೆರಿಗೆ ವಿಚಾರದಿಂದಲೂ, ಮಗಳ ಠೇವಣಿ ನಿಮ್ಮ ಹೆಸರಿನಲ್ಲಿ ಇರಿಸಿದ್ದು ಸರಿಯಲ್ಲ. ಹಣ ನಿಮ್ಮ ಮಗಳಿಗೆ ಸೇರಿದ್ದಾದರೂ, ಬಡ್ಡಿ ಅವಳ ಖಾತೆಗೆ ಜಮಾ ಆಗುತ್ತಿದ್ದರೂ, ಹೀಗೆ ಬರುವ ಬಡ್ಡಿ ನಿಮ್ಮ ಆದಾಯಕ್ಕೆ ಸೇರಿಸಬೇಕಾಗುತ್ತದೆ.

ನಿಮ್ಮ ಮಗಳ ಹೆಸರಿನಲ್ಲಿ ಠೇವಣಿ ಇರಿಸಿದರೆ, ಬೇರೆಯವರು ಕೇಳಿ ಪಡೆಯಬಹುದು ಎನ್ನುವ ಭಯವಿರುವಲ್ಲಿ, ನಿಮ್ಮ ಮಗಳು ಹಾಗೂ ನೀವು ಸೇರಿ ಜಂಟಿಯಾಗಿ ಠೇವಣಿ ಮಾಡಿರಿ. ಒಂದು ವೇಳೆ ಯಾರಾದರೂ ಹಣ ನಿಮ್ಮ ಮಗಳ ಹತ್ತಿರ ಕೇಳುವಲ್ಲಿ, ಅಂತಹ ಸಂದರ್ಭದಲ್ಲಿ ನಿಮ್ಮ ಸಹಿ ಇಲ್ಲದೆ, ಮಗಳು ಹಣ ತೆಗೆಯಲು ಬರುವುದಿಲ್ಲ. ನಿಮ್ಮ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ವಾರ್ಷಿಕವಾಗಿ ₹ 3 ಲಕ್ಷ ದಾಟುವ ತನಕ ನಿಮಗೆ ತೆರಿಗೆ ಭಯವಿಲ್ಲ ಹಾಗೂ ರಿಟರ್ನ್‌ ತುಂಬುವ ಅವಶ್ಯವೂ ಇಲ್ಲ.

ಪ್ರದೀಪ್‌. ಬಿ.ಜಿ., ಶಿವಮೊಗ್ಗ
ಪ್ರಶ್ನೆ: ನನ್ನ ವಯಸ್ಸು 23, ಮೂರು ತಿಂಗಳ ಹಿಂದೆ ರೈಲ್ವೆಯಲ್ಲಿ ‘ಡಿ’ ದರ್ಜೆ ನೌಕರನಾಗಿ ಸೇರಿದ್ದೇನೆ. ತಿಂಗಳ ಸಂಬಳ ₹ 20,000. ನಮ್ಮ ತಂದೆಯಿಂದ ನನಗೂ ನನ್ನ ಅಣ್ಣನಿಗೂ 8 ಎಕರೆ ಜಮೀನು ಬಂದಿದೆ. ಉಳಿತಾಯ, ಮುಂದೆ ಮದುವೆ, ಮನೆ ಕಟ್ಟಿಸುವುದು ಈ ವಿಚಾರಗಳಲ್ಲಿ ಮಾರ್ಗದರ್ಶನ ಬೇಕಾಗಿದೆ. ಎನ್‌ಪಿಎಸ್‌ ₹ 1836 ಕಟ್ಟುತ್ತಿದ್ದು, ಉದ್ಯೋಗ ಬದಲಾಯಿಸಿದರೆ ಹಣ ವಾಪಾಸು ಸಿಗಬಹುದೇ ಅಥವಾ ಮುಂದುವರಿಸಬಹುದೇ? ಮನೆಕಟ್ಟಲು ಸಾಲ ಸಿಗಬಹುದೇ ಅಥವಾ ಹೊಲದ ಮೇಲೆ ಸಾಲ ಪಡೆಯಬಹುದೆ?

ಉತ್ತರ: ನಿಮ್ಮ ಸಂಬಳದಲ್ಲಿ ಎನ್‌.ಪಿ.ಎಸ್‌. ಹೊರತುಪಡಿಸಿ ಬೇರಾವ ಕಡಿತ ಇದ್ದಂತೆ ಕಾಣುವುದಿಲ್ಲ.ನಿಮಗೆ ಕನಿಷ್ಠ ₹10 ಲಕ್ಷದ ಜೀವವಿಮಾ ಅಗತ್ಯವಿದೆ. ಎಲ್‌ಐಸಿಯ ‘ಜೀವನ ಆನಂದ’ ಪಾಲಿಸಿ ಮಾಡಿಸಿರಿ. ಸದ್ಯ ನೀವು ಆದಾಯ ತೆರಿಗೆಗೆ ಒಳಗಾಗದಿದ್ದರೂ, ಮುಂದೆ ತೆರಿಗೆ ಕೊಡಬೇಕಾಗುತ್ತದೆ. ಈ ವಿಚಾರ ಮನಸ್ಸಿನಲ್ಲಿಟ್ಟುಕೊಂಡು ಒಂದು ಪಿಪಿಎಫ್‌ ಖಾತೆ ಪ್ರಾರಂಭಿಸಿರಿ ಹಾಗೂ ನಿಮ್ಮ ಮದುವೆಗಾಗಿ ಆರ್‌ಡಿ ಕೂಡಾ ಮಾಡಿರಿ. ನೀವು ಕ್ರಮವಾಗಿ ತಿಂಗಳಿಗೆ ವಿಮೆಗೆ ₹ 2000, ಪಿಪಿಎಫ್‌ಗೆ ₹ 5000 ಹಾಗೂ ಆರ್‌ಡಿಗೆ ₹ 5000 ಮುಡುಪಾಗಿಡಿ.

ಇನ್ನು ಉಳಿಯುವ ₹ 6000 (ಎನ್‌ಪಿಎಸ್‌ ಕಡಿತದ ನಂತರ) ನಿಮ್ಮ ಖರ್ಚಿಗೆ ಬಳಸಿರಿ. ಸ್ವಂತ ಮನೆ ನಿರ್ಮಿಸಲು, ಸ್ವಲ್ಪ ಸಮಯ ಕಾಯಬೇಕಾದೀತು. ಜಮೀನಿನ ಮೇಲೆ ಮನೆ ಕಟ್ಟಲು ಸಾಲ ದೊರೆಯುವುದಿಲ್ಲ. ಯಾವುದೇ ಕಾರಣಕ್ಕೆ ಜಮೀನು ಮಾರಾಟ ಮಾಡಬೇಡಿ. ಎನ್‌ಪಿಎಸ್‌ ಉದ್ಯೋಗ ಬದಲಾಯಿಸಿದರೂ ಮುಂದುವರಿಸಬಹುದು. ಮಧ್ಯದಲ್ಲಿ ಮಾತ್ರ ಹಿಂದಕ್ಕೆ ಒಡೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT