ಶುಕ್ರವಾರ, ಡಿಸೆಂಬರ್ 13, 2019
17 °C

ಶಿಲ್ಪಿಗಳನ್ನು ಸೃಷ್ಟಿಸುವ ವಿಶಿಷ್ಟ ಗುರುಕುಲ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಶಿಲ್ಪಿಗಳನ್ನು ಸೃಷ್ಟಿಸುವ ವಿಶಿಷ್ಟ ಗುರುಕುಲ

ಡದಿ ಸಮೀಪದ ಜೋಗರದೊಡ್ಡಿಯಲ್ಲಿ ಇರುವ ಕರಕುಶಲ ತರಬೇತಿ ಸಂಸ್ಥೆಯ ಪ್ರಶಾಂತ ಆವರಣ ಪ್ರವೇಶಿಸುತ್ತಿದ್ದಂತೆ ಕಿವಿಗೊಟ್ಟು ಕೇಳಿದರೆ ಕಲ್ಲಿಗೆ ಉಳಿಯಿಂದ ಬಡಿಯುವ ಸದ್ದು ಸಣ್ಣಗೆ ಕೇಳಿ ಬರುತ್ತದೆ. ಸದ್ದು ಬರುವುದನ್ನು ಹುಡುಕಿಕೊಂಡು ಹತ್ತಿರ ಹೋದರೆ, ಯುವ ಕಲಾವಿದರು ತನ್ಮಯತೆಯಿಂದ ಕಲ್ಲು ಕೆತ್ತನೆಯ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತದೆ.

ಎದುರಿಗೆ ಬಿಳಿ ಹಾಳೆ ಮೇಲೆ ತಾವೇ ಬಿಡಿಸಿದ್ದ ಚಿತ್ರಪಟವನ್ನು ಪ್ರಮಾಣ ಬದ್ಧವಾಗಿ ಕಲ್ಲಿನಲ್ಲಿ ಮೂಡಿಸುವ ಸೂಕ್ಷ್ಮ ಕೆತ್ತನೆ ಕಾರ್ಯದಲ್ಲಿ ಮಗ್ನರಾಗಿರುವ ಅವರು ಹತ್ತಿರ ಬಂದವರನ್ನು ತಲೆ ಎತ್ತಿ ಕೂಡ ನೋಡುವುದಿಲ್ಲ. ವಿವರಣೆ ಕೇಳಿದರೆ ಮಾತ್ರ ಮಾತನಾಡುತ್ತಾರೆ. ಕರ್ನಾಟಕದವರಲ್ಲದೆ, ಮಹಾರಾಷ್ಟ್ರ, ದೂರದ ಮಣಿಪುರದಿಂದ ಬಂದವರೂ ಅಲ್ಲಿ ಕಲ್ಲು ಮತ್ತು ಮರದಲ್ಲಿ ಕಲಾಕೃತಿಗಳಿಗೆ ಜೀವ ತುಂಬುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ.

18 ತಿಂಗಳಕಾಲ ಗುರುಕುಲ ಮಾದರಿಯಲ್ಲಿ ಇಲ್ಲಿ ಪರಿಪೂರ್ಣ ತರಬೇತಿ ಪಡೆದು ಅವರು ಹೊಸ ಬದುಕು ಕಟ್ಟಿಕೊಳ್ಳಲು ಹೊರ ಬೀಳುತ್ತಾರೆ. ಹಲವಾರು ಕಾರಣಗಳಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಕರಕುಶಲ ಕಲೆಗಳನ್ನು ಉಳಿಸಿ – ಬೆಳೆಸುವ ಸದುದ್ದೇಶದಿಂದ ಈ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕತೆ ಜತೆ ಜತೆಗೆ ವಿಶಿಷ್ಟ ಬಗೆಯ ಕಲಾಕೃತಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಮನೆ, ಕಚೇರಿಗಳ ಒಳಾಂಗಣ ವಿನ್ಯಾಸಗಳಿಗೆ ವಿಶೇಷ ಮೆರುಗು ನೀಡಲು ಕರಕುಶಲ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಕುಶಲಕರ್ಮಿಗಳಿಗೆ ಕೈತುಂಬ ಕೆಲಸವೂ ಸಿಗುತ್ತಿದೆ.

ಒಳಾಂಗಣ ವಿನ್ಯಾಸದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಇಲ್ಲಿಯ ಕಲಿಕಾರ್ಥಿಗಳನ್ನು ಕ್ಯಾಂಪಸ್‌ ಆಯ್ಕೆ ಮಾದರಿಯಲ್ಲಿ ತಮ್ಮಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಇಲ್ಲವೆ ತಾವು ಗುತ್ತಿಗೆ ಪಡೆದ ಕೆಲಸಗಳಲ್ಲಿ ಇವರಿಗೆ ಅವಕಾಶ ಕೊಟ್ಟು, ಹಣ ಗಳಿಕೆಗೆ ನೆರವಾಗುತ್ತಾರೆ.

ಹೀಗಾಗಿ ಈ ಕರಕುಶಲ ಕಲಾ ಕ್ಷೇತ್ರವು ಸೃಜನಶೀಲ ಯುವಕ – ಯುವತಿಯರನ್ನು ಕೈಬೀಸಿ ಕರೆಯುತ್ತಿದೆ. ಸ್ವಂತ ಉದ್ಯೋಗ ಆರಂಭಿಸಲು ವಿಪುಲ ಅವಕಾಶಗಳ ಹೆಬ್ಬಾಗಿಲನ್ನೂ ತೆರೆದಿದೆ.

ಕಲ್ಲು, ಮರದ ಕೆತ್ತನೆ (ಕಾಷ್ಟ ಶಿಲ್ಪ), ಲೋಹ ಶಿಲ್ಪ ಮತ್ತು ಮಣ್ಣಿನಿಂದ ತಯಾರಿಸುವ ಆಕೃತಿಗಳ ಕುಂಭ ಕಲೆಗಳನ್ನು ಶಾಸ್ತ್ರೋಸ್ತ್ರವಾಗಿ ಕಲಿಸುವ ವಿಶಿಷ್ಟ ಗುರುಕುಲ ಇದಾಗಿದೆ. ಹಲವು ಕಲಾ ಶಾಲೆಗಳ ದುಬಾರಿ ಶಿಕ್ಷಣ ವೆಚ್ಚವನ್ನು ಭರಿಸಲಾಗದವರಿಗೆ ಈ ಕೇಂದ್ರ ಆಶಾಕಿರಣವಾಗಿದೆ.‌

ಕೆನರಾ ಬ್ಯಾಂಕ್‌ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಯೋಜನೆಯಡಿ ಈ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಕಲಾವಿದರ ಹೊಸ ಪೀಳಿಗೆಯನ್ನೇ ಸೃಷ್ಟಿಸಿದ ಖ್ಯಾತಿ ಈ ಸಂಸ್ಥೆಯದು.

ಗ್ರಾಮೀಣ ಪ್ರದೇಶದಲ್ಲಿನ ಅಪರೂಪದ ಕಲೆಯು ಯಾವುದೇ ಕಾರಣಕ್ಕೂ ನಶಿಸಿ ಹೋಗದಂತೆ, ಕಲಾವಿದರಿಗೆ ಉತ್ತೇಜನ ನೀಡಲು 1991ರಲ್ಲಿ ಈ ಕೇಂದ್ರ ಆರಂಭಿಸಲಾಯಿತು. ಸಂಸ್ಥೆಯು ಬೆಳ್ಳಿಹಬ್ಬ ಆಚರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಕುಲಕಸುಬುಗಳಾದ ಸಾಂಪ್ರದಾಯಿಕ ಶಿಲ್ಪ, ಕುಂಭ ಕಲೆಯಿಂದ ಅನೇಕರು ತೊಂಬತ್ತರ ದಶಕದಲ್ಲಿ ವಿಮುಖರಾಗುತ್ತಿದ್ದಾಗ ಈ ಕಲೆಗಳಿಗೆ ಆಶ್ರಯ ಕಲ್ಪಿಸಿ, ಬಡ ಕುಟುಂಬಗಳ ಕಲಾವಿದರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ನಡೆಸುವಷ್ಟು ಅರ್ಹತೆ ಪಡೆಯಲು ನೆರವಾಗುವ ದೃಷ್ಟಿಯಿಂದ ಈ ತರಬೇತಿ ಕೇಂದ್ರ ಆರಂಭಿಸಲಾಗಿತ್ತು. ಇಪ್ಪತ್ತೈದು ವರ್ಷಗಳಲ್ಲಿ ಈ ಕೇಂದ್ರ ಹಲವಾರು ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ.

ಕಲಾಕ್ಷೇತ್ರದಲ್ಲಿಯೇ ಮುಂದುವರೆಯಲು ಇಚ್ಛಿಸುವವರಿಗೆ ರಾಜ್ಯದಲ್ಲಿ ಆಗ ಸಾಕಷ್ಟು ಶಿಕ್ಷಣ ಸಂಸ್ಥೆಗಳೂ ಇದ್ದಿರಲಿಲ್ಲ. ಬೆರಳೆಣಿಕೆಯಷ್ಟು ಇದ್ದ ಸಂಸ್ಥೆಗಳಲ್ಲಿನ ಶಿಕ್ಷಣ ಆರ್ಥಿಕವಾಗಿ ದುರ್ಬಲರಾದವರಿಗೆ ಕೈಗೆಟುಕುತ್ತಿರಲಿಲ್ಲ. ಅಂತಹ ಕೊರತೆಯನ್ನು ಈ ತರಬೇತಿ ಕೇಂದ್ರ ತುಂಬಿಕೊಟ್ಟಿತ್ತು.

ಇದು ನಾಡಿನ ಹೊಸ ತಲೆಮಾರಿನ ಶಿಲ್ಪಿಗಳನ್ನು ಸಿದ್ಧಪಡಿಸುವ ಸುಸಜ್ಜಿತ ಗರಡಿ ಮನೆಯಾಗಿ ಕಲಾ ತುಡಿತದ ಯುವಕರನ್ನು ಚುಂಬಕದಂತೆ ಸೆಳೆಯುತ್ತಿದೆ. ಬೆಳ್ಳಿ ಹಬ್ಬ ಆಚರಿಸಿ ಮುನ್ನಡೆದಿರುವ ಈ ಗುರುಕುಲ ಮಾದರಿಯ ಆದರ್ಶ ತರಬೇತಿ ಕೇಂದ್ರವು ಕಲಾವಿದರ ಪಾಲಿಗೆ ಹೆಮ್ಮೆಯ ತಾಣವಾಗಿದೆ.

ಮಾಹಿತಿಗೆ ಸಂಪರ್ಕಿಸಿ: 99001 58885

***

18 ತಿಂಗಳ ಉಚಿತ ತರಬೇತಿ

ಅನೇಕರಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ಸಿ ನಂತರ ಮುಂದೇನು ಎಂಬ ಚಿಂತೆ ಸಹಜವಾಗಿ ಕಾಡುತ್ತದೆ. ಅವರಲ್ಲಿ ಕಲೆ ಬಗ್ಗೆ ಆಸಕ್ತಿ, ತಣಿಯದ ಕುತೂಹಲ ಇದ್ದರೆ ಅಂತಹವರು ಈ ಶಿಲ್ಪಕಲಾ ಶಿಕ್ಷಣ ತರಬೇತಿಗೆ ಸೇರಬಹುದು. ಇಲ್ಲಿ ತರಬೇತಿ ಉದ್ದೇಶಕ್ಕೆ ಸೇರುವವರಿಗೆ ಶಿಕ್ಷಣ, ವಸತಿ, ಊಟ, ಸಮವಸ್ತ್ರ, ಟೂಲ್ಸ್ ಕಿಟ್, ಕಚ್ಚಾವಸ್ತು ಇವೆಲ್ಲವನ್ನೂ ಉಚಿತವಾಗಿ ನೀಡಲಾಗುವುದು. ಪ್ರತಿಯೊಬ್ಬ ಕಲಿಕಾರ್ಥಿಗೆ ಇಲ್ಲಿ ₹ 1.50 ಲಕ್ಷದಷ್ಟು ವೆಚ್ಚ ಮಾಡಲಾಗುತ್ತಿದೆ.

ಊಟ, ವಸತಿ, ಕಚ್ಚಾ ಸಾಮಗ್ರಿ (ಕಿಟ್‌) ಎಲ್ಲವೂ ಇಲ್ಲಿ ಉಚಿತ

ಕುಂಭಕಲೆ ತರಬೇತಿ ಅವಧಿ – 6 ತಿಂಗಳು

ಮರ, ಕಲ್ಲಿನ ಕೆತ್ತನೆ, ಲೋಹ ಶಿಲ್ಪ ವಿಭಾಗದಲ್ಲಿನ ತರಬೇತಿ ಅವಧಿ 18 ತಿಂಗಳು

ವಯೋಮಿತಿ 18 ರಿಂದ 35

ವಿದ್ಯಾರ್ಥಿನಿಯರಿಗೂ ಅವಕಾಶ ಇದೆ. ಆದರೆ, ಅವರು ಕೇಂದ್ರದ ಸಮೀಪದಲ್ಲಿ ಸ್ವಂತ ವೆಚ್ಚದಲ್ಲಿ ವಸತಿ ಸೌಲಭ್ಯ ಮಾಡಿಕೊಳ್ಳಬೇಕು. ಊಟ– ತಿಂಡಿಯನ್ನು ಕೇಂದ್ರದಲ್ಲಿಯೇ ಉಚಿತವಾಗಿ ಪಡೆಯಬಹುದು. ಇಬ್ಬರು ಬೋಧಕರು ಇಲ್ಲಿಯೇ ನೆಲೆಸಿರುತ್ತಾರೆ. ಕಲಿಕೆ ಮತ್ತು ಬೋಧನೆಗೆ ನಿರ್ದಿಷ್ಟ ಸಮಯ ನಿಗದಿ ಇಲ್ಲ. ಗುರುಕುಲ ಮಾದರಿಯಲ್ಲಿ ಕಲಿಕೆ ಪ್ರಕ್ರಿಯೆ ಇರುತ್ತದೆ. ಭಾನುವಾರ ರಜೆ ಇರಲಿದೆ.

ಪ್ರತಿಕ್ರಿಯಿಸಿ (+)