ಶನಿವಾರ, ಡಿಸೆಂಬರ್ 7, 2019
25 °C

ಲೈಂಗಿಕ ವೃತ್ತಿಗೆ ಜಾತಿ, ಧರ್ಮ, ಭಾಷೆ ಹಂಗಿಲ್ಲ!

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಲೈಂಗಿಕ ವೃತ್ತಿಗೆ ಜಾತಿ, ಧರ್ಮ, ಭಾಷೆ ಹಂಗಿಲ್ಲ!

ಬೆಂಗಳೂರು: ಒಂದು ಮೊಬೈಲ್‌ಗಾಗಿ, ಒಂದು ಚೆಂದದ ಡ್ರೆಸ್ಸಿಗಾಗಿ, ಒಂದಿಷ್ಟು ಪಾಕೆಟ್‌ ಮನಿಗಾಗಿ ಲೈಂಗಿಕ ವೃತ್ತಿಗೆ ಬಂದ ಹರೆಯದ ಹುಡುಗಿಯರಿದ್ದಾರೆ. ವಿಚಿತ್ರವೆಂದರೆ, ಈ ಹದಿಹರೆಯದ ಹುಡುಗಿಯರು ಮಧ್ಯವಯಸ್ಸಿನ ಗಿರಾಕಿಗಳನ್ನು ನಿಭಾಯಿಸುತ್ತಿದ್ದರೆ, ಯುವಕರು ಮಧ್ಯವಯಸ್ಸಿನ ಲೈಂಗಿಕ ವೃತ್ತಿ ನಿರತರನ್ನು ಬಯಸುತ್ತಾರಂತೆ.

ಈ ‘ಸಂಬಂಧ’ಕ್ಕೆ ಜಾತಿ, ಧರ್ಮ, ಭಾಷೆ ಅಡ್ಡಿ ಆಗಿಲ್ಲ. ಈ ಯಾವುದೂ ದಂಧೆನಿರತರ ರಕ್ಷಣೆಗೂ ಬಂದಿಲ್ಲ. ಲೈಂಗಿಕ ವೃತ್ತಿನಿರತರ ಆದಾಯದಿಂದಲೇ ಹಲವು ಹಳ್ಳಿಗಳಲ್ಲಿ ಅನ್ನ ಕುದಿಯುತ್ತಿದೆ ಎಂಬ ವಸ್ತುಸ್ಥಿತಿಯನ್ನು ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿ ಬಯಲು ಮಾಡಿದೆ.

ಎಲ್ಲ ಸಮುದಾಯಗಳಲ್ಲೂ ಲೈಂಗಿಕ ವೃತ್ತಿ ನಿರತರಿದ್ದಾರೆ. ಆರ್ಥಿಕ ಸಂಕಷ್ಟ, ಬಡತನದ ಬವಣೆ ಎಲ್ಲ ಸಮಾಜಗಳಲ್ಲಿ, ಹೆಣ್ಣು ಮಕ್ಕಳನ್ನು ಯಾವುದೇ ತಾರತಮ್ಯ ಇಲ್ಲದೆ ಈ ದಂಧೆಗೆ ತಳ್ಳಿದೆ. ಜಾತಿ ಮತ್ತು ಧರ್ಮದ ರಕ್ಷಣೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ಲೈಂಗಿಕ ವೃತ್ತಿ ನಿರತರು, ನಿತ್ಯದ ಬದುಕಿಗಾಗಿ ಹೋರಾಡುವ ಸ್ಥಿತಿ ಇದೆ ಎಂದೂ ಸಮಿತಿ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಸಾಮಾಜಿಕವಾಗಿ ಜಾತಿ ಶ್ರೇಣೀಕರಣದ ಅತ್ಯಂತ ತಳಸ್ತರದಲ್ಲಿರುವ, ಕೆಳಜಾತಿಯ ಹೆಣ್ಣು ಮಕ್ಕಳು ಈ ದಂಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಹಿಂದುಳಿದ ಜಾತಿಗೆ ಸೇರಿದವರಿದ್ದಾರೆ. ಮೇಲ್ಜಾತಿಯ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಎನ್ನುವುದನ್ನು ಸಮಿತಿ ದಾಖಲಿಸಿದ ಅಂಕಿಅಂಶಗಳು ಸಾಬೀತುಪಡಿಸುತ್ತವೆ.

ಮಾದಿಗ, ಬೇಡ, ನಾಯಕ ಹೀಗೆ ತಳಜಾತಿಯ ಹೆಣ್ಣು ಮಕ್ಕಳನ್ನು ದೇವರಿಗೆ ಅರ್ಪಿಸುವ ದೇವದಾಸಿ ಪದ್ಧತಿ ಬಹಳ ಹಿಂದಿನಿಂದಲೇ ಇದೆ. ಸಂಪ್ರದಾಯದ ಹೆಸರಿನಲ್ಲಿ ಸಣ್ಣ ವಯಸ್ಸಿಗೆ ಮುತ್ತು ಕಟ್ಟಿಸಿಕೊಂಡು ದೇವದಾಸಿಯರಾದ  ಹೆಣ್ಣು ಮಕ್ಕಳು ಮುಂದೆ ಮದುವೆ ಆಗುವಂತಿಲ್ಲ. ಋತುಮತಿಯಾದ ಹೆಣ್ಣು ಮಕ್ಕಳನ್ನು ಆ ಊರಿನ ಮೇಲ್ಜಾತಿಯವರು ಉಡಿ ತುಂಬುವ ಶಾಸ್ತ್ರ ಮಾಡಿ ಜೊತೆಗೆ ಇಟ್ಟುಕೊಳ್ಳುವುದು ಪದ್ಧತಿ.

ಜೊತೆಗೆ ಇಟ್ಟುಕೊಂಡವ ಬಿಟ್ಟು ಹೋದರೆ ಅಥವಾ ಮೃತಪಟ್ಟರೆ ಆಕೆಗೆ ಲೈಂಗಿಕ ದಂಧೆಯಿಂದಲೇ ಜೀವನ ಸಾಗಿಸಬೇಕಾದ ದುರಂತ ಸ್ಥಿತಿ ಇದೆ. ಪ್ರಸ್ತುತ ಸಂದರ್ಭದಲ್ಲಿ ಮುತ್ತು ಕಟ್ಟಿಸಿಕೊಳ್ಳುವುದು ಲೈಂಗಿಕ ದಂಧೆಗೆ ಪರವಾನಗಿ ಕೊಟ್ಟಂತೆ ಆಗಿದೆ. ದೇವದಾಸಿ ಆಗದೆಯೂ ಕೆಳಜಾತಿಯ ಸಾಕಷ್ಟು ಹೆಣ್ಣು ಮಕ್ಕಳು ಈ ದಂಧೆಗೆ ಬಂದಿದ್ದಾರೆ.

ರಾಜ್ಯದಲ್ಲಿ ಲೈಂಗಿಕ ವೃತ್ತಿ ನಿರತರಲ್ಲಿ ಹಿಂದೂ ಧರ್ಮದ ಮಹಿಳೆಯರ ಸಂಖ್ಯೆ ಹೆಚ್ಚು ಇದೆ. ಅನಂತರದ ಸ್ಥಾನದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಮಹಿಳೆಯರಿದ್ದಾರೆ. ಈ ಪೈಕಿ ಹೆಚ್ಚಿನವರು ಕನ್ನಡಿಗರು. ಉಳಿದಂತೆ ತೆಲುಗು  ಉರ್ದು ಮಾತನಾಡುವವರಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಲೈಂಗಿಕ ವೃತ್ತಿನಿರತರ ವಲಸೆ ನಿರಂತರ ನಡೆಯುತ್ತಿದೆ. ಮೀರಜ್‌ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಾರೆ. ಇದು ಲೈಂಗಿಕ ವೃತ್ತಿ ನಿರತರನ್ನು ಎಚ್‌ಐವಿ ಸೋಂಕಿನ ಅಪಾಯಕ್ಕೆ ಸಿಲುಕಿಸುತ್ತದೆ. ವೇಶ್ಯಾಗೃಹಗಳಲ್ಲಿ ಕರ್ನಾಟಕದ ಇತರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದ ಮಹಿಳೆಯರೂ ಇದ್ದಾರೆ. ಅವರೆಲ್ಲ ತಮ್ಮ ಗುರುತು ಮರೆಮಾಚಿಕೊಂಡು ಇರಬೇಕಾದ ಒತ್ತಡದಲ್ಲಿದ್ದಾರೆ ಎಂಬ ಅಂಶ ಅಧ್ಯಯನದಿಂದ ಗೊತ್ತಾಗಿದೆ.

ಕೃಷಿ ಬಿಕ್ಕಟ್ಟಿನಿಂದ ಹಳ್ಳಿಗಳಲ್ಲಿ ಕೃಷಿ ಕೆಲಸಗಳಿಗೆ ಅವಕಾಶ ಕಡಿಮೆಯಾಗಿದೆ. ಪರಂಪರಾಗತ ನೇಕಾರಿಕೆ, ಕುಂಬಾರಿಕೆ ವೃತ್ತಿಗಳು ನಶಿಸುತ್ತಿವೆ. ಅಂಥ ಕುಲಕಸುಬು ನಂಬಿದ ಕುಟುಂಬಗಳ ಹೆಣ್ಣು ಮಕ್ಕಳು ಅನಿವಾರ್ಯವಾಗಿ ದಂಧೆಗೆ ಇಳಿಯುತ್ತಾರೆ.

ಊರಿನಲ್ಲಿ ತುಂಬ ಕುಲೀನ ಎಂದು ಕರೆಸಿಕೊಳ್ಳುವವರು ತೀರಾ ಅಸಹಾಯಕರಾಗಿ ದಂಧೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೆಚ್ಚಿನ ಹಣ ಸಂಪಾದಿಸಬೇಕೆಂದು ಈ ದಂಧೆಗೆ ಬಂದ ಮಹಿಳೆಯರೂ ಇದ್ದಾರೆ. ಈ ಮಹಿಳೆಯರು ತಮ್ಮದೇ ಸಣ್ಣ ಗುಂಪು ಕಟ್ಟಿಕೊಂಡು ಗಿರಾಕಿಗಳನ್ನು ಆಯ್ಕೆ ಮಾಡಿಕೊಂಡು ಸುರಕ್ಷಿತವಾಗಿ ದಂಧೆ ನಡೆಸುತ್ತಾರೆ. ಕೆಲವರು ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾರೆ.

ದಂಧೆ ಮಾಡುವುದನ್ನು ಚಿತ್ರೀಕರಿಸಿ ಬೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುವ ಹುಡುಗರೂ ಇದ್ದಾರೆ. ಒಟ್ಟಿನಲ್ಲಿ ಲೈಂಗಿಕ ವೃತ್ತಿ ನಿರತರ ಬದುಕಿಗೆ ಜಾತಿ, ಧರ್ಮ, ಭಾಷೆ ಇವು ಯಾವುದೂ ಘನತೆಯನ್ನು ತಂದುಕೊಟ್ಟಿಲ್ಲ. ಈ ಸ್ಥಿತಿ, ಸಮಸಮಾಜ ನಿರ್ಮಾಣದ ಘೋಷವಾಕ್ಯಗಳನ್ನೇ ಪರಿಹಾಸ್ಯ ಮಾಡಿದಂತಿದೆ ಎಂದು  ಅಧ್ಯಯನ ಸಮಿತಿ ವಿಶ್ಲೇಷಿಸಿದೆ.

‘ತಪ್ಪು ಅಂತ ಗೊತ್ತು. ಆದರೆ, ಅನಿವಾರ್ಯ'

ಜಾತಿ ಮತ್ತು ಬಡತನದ ಬವಣೆ ಮೂಲನಿವಾಸಿಗಳಲ್ಲಿ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ಕುಟುಂಬಗಳಲ್ಲಿ ಉಂಟು ಮಾಡುವ ದುರಂತಗಳಿಗೆ ಉಡುಪಿ ಜಿಲ್ಲೆಯ ಲೈಂಗಿಕ ವೃತ್ತಿ ನಿರತಳೊಬ್ಬಳ ಕಥೆ ಸಾಕ್ಷಿ.

26 ವಯಸ್ಸಿನ ಆಕೆ, ಕೊರಗ ಸಮುದಾಯಕ್ಕೆ ಸೇರಿದವಳು. ಪಿಯುಸಿವರೆಗೆ ಓದಿದ್ದಾಳೆ. 17ನೇ ವರ್ಷಕ್ಕೆ ಮದುವೆಯಾಗಿದೆ. ಅವಳ ಒಬ್ಬ ತಮ್ಮ ಕೂಲಿ ಕೆಲಸ ಮಾಡುತ್ತಾನೆ. ಕಷ್ಟದ ಬದುಕು. ಅಮ್ಮ ಎಚ್‌ಐವಿ ಬಾಧಿತೆ.

ಕೆಲವು ವರ್ಷ ಕೊರಗರಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು. ಆ ಮೇಲೆ ಆ ಸಂಸ್ಥೆ ನಿಂತುಹೋಯಿತು. ಹೀಗಾಗಿ ಯಾವುದೇ ಆದಾಯ ಇಲ್ಲದೆ ಅವಳು ಈ ದಂಧೆಗೆ ಬಂದಿದ್ದಾಳೆ. ಇದೇ ದಂಧೆ ಮಾಡುತ್ತಿದ್ದುದರಿಂದಲೇ ಆಕೆಯ ತಾಯಿಗೆ ಎಚ್ಐವಿ ಸೋಂಕು ತಗಲಿತ್ತು.

ಬುಟ್ಟಿ ಹೆಣೆಯುವ ಮೂಲಕ ತಾಯಿಗೆ ಸಿಗುವ ಆದಾಯ ಒಂದು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ. ಜೊತೆಗೆ ತಾಯಿ ಬೆನ್ನು ನೋವಿನಿಂದ ನರಳುತ್ತಿದ್ದಳು. ಅಲ್ಲದೆ, ಬುಟ್ಟಿಗೆ ಮಾರುಕಟ್ಟೆ ಇಲ್ಲದೇ ಇದ್ದುದರಿಂದ ಸಂಪಾದನೆಗೆ ಬೇರೆ ಯಾವುದೇ ದಾರಿ ಇಲ್ಲ.

‘ಕಾರ್ಖಾನೆಯಿಂದ ಗೋಡಂಬಿ ಸುಲಿಯಲು ತಂದರೂ ಒಂದು ದಿನಕ್ಕೆ ₹ 30ಕ್ಕಿಂತ ಹೆಚ್ಚು ಸಂಪಾದಿಸಲು ಆಗುತ್ತಿರಲಿಲ್ಲ. ಅವಸರದಿಂದ ಸುಲಿದರೆ ತಾಯಿಯ ಕೈಗೆ ಗಾಯವಾಗಿ ರಕ್ತ ಸುರಿಯುತ್ತಿತ್ತು’ ಎಂದು ಅವಳು ಕಣ್ಣೀರಿಟ್ಟಳು.

‘ಇದು ತಪ್ಪು ಅಂತ ಗೊತ್ತು. ಆದರೆ ಅನಿವಾರ್ಯ. ನಮ್ಮ ಜನರಿಗೆ ಯಾರೂ ಇಲ್ಲ. ಹೆದ್ದಾರಿಯಿಂದ ಟ್ರಕ್‌ ಚಾಲಕರು ನಮ್ಮವರು ಹೆಚ್ಚು ಇರುವ ಕುಂದಾಪುರದ ಕೆಲವು ಕಡೆ ಬರುತ್ತಾರೆ. ಎಚ್‌ಐವಿ ಹಬ್ಬಿಸುತ್ತಾರೆ. ನಮ್ಮವರೆಲ್ಲ ಎಚ್‌ಐವಿಯಿಂದ ನಾಶವಾಗುತ್ತಿದ್ದಾರೆ’ ಎಂದೂ ನೊಂದುಕೊಂಡಳು.

ಪೊಲೀಸರಿಂದ ಅಸಹ್ಯ ನಿಂದನೆ

ಲೈಂಗಿಕ ವೃತ್ತಿ ನಿರತರಲ್ಲಿ ಸಾಮೂಹಿಕವಾಗಿ ಅತ್ಯಾಚಾರಕ್ಕೆ ಒಳಗಾದವರೂ ಇದ್ದಾರೆ. ಒಬ್ಬನೇ ಬರುತ್ತೇನೆ ಎಂದು ಹೇಳಿ ಗಿರಾಕಿ ಹೋದ ಬಳಿಕ, 4–5 ಜನ ಹಿಂಬಾಲಿಸಿಕೊಂಡು ಬಂದು ಅತ್ಯಾಚಾರ ಎಸಗಿದ ಪ್ರಕರಣಗಳು ಹಲವು ಇವೆ. ಆದರೆ, ಇಂಥ ಘಟನೆಯನ್ನು ಅತ್ಯಾಚಾರ ಆರೋಪದ ಅಡಿ ದೂರು ದಾಖಲಿಸಿ, ಕ್ರಮಕೈಗೊಳ್ಳದಿರುವುದು ಪೊಲೀಸರ ನಿರ್ಲಕ್ಷ್ಯಕ್ಕೆ ನಿದರ್ಶನ ಎಂದು ವರದಿ ಗುರುತಿಸಿದೆ.

ದೂರು ಕೊಡುವ ಬಗ್ಗೆ ವಿಚಾರಿಸಿದಾಗ ಕೆಲವರು, ‘ಪೊಲೀಸರ ಬಳಿಗೆ ಹೋಗಲು ಭಯ’ ಎಂದು ಹೇಳಿದರೆ, ‘ಯಾರಿಗೂ ಹೇಳಬಾರದು ಎಂದು ಊರಿನ ಪುಡಿ ರೌಡಿಗಳು ಧಮಕಿ ಹಾಕಿದರು’ ಎಂದೂ ಕೆಲವರು ಹೇಳಿದ್ದಾರೆ. ಇನ್ನೂ ಕೆಲವು ಮಹಿಳೆಯರು ಪೊಲೀಸರಿಗೆ ದೂರು ಕೊಡಲು ಹೋದಾಗ, ‘ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ’ ಎಂದರು. ‘ನಿಮ್ಮ ಮೇಲೆ ಹೀಗಲ್ಲದೆ ಮತ್ತೆ ಹೇಗೆ ಏರಲು ಸಾಧ್ಯ?’ ಎಂದು ಪೊಲೀಸರು ಅಸಹ್ಯವಾಗಿ ನಿಂದಿಸಿದ ಪರಿಣಾಮ ಅವಮಾನಕ್ಕೆ ಒಳಗಾಗಿ ವಾಪಸು ಬಂದ ಪ್ರಕರಣಗಳೂ ಇವೆ. ಅಷ್ಟೇ ಅಲ್ಲ, ಪೊಲೀಸರಿಂದಲೇ ಅತ್ಯಾಚಾರಕ್ಕೆ ಒಳಗಾದ ಹಲವು ಪ್ರಕರಣಗಳಿವೆ ಎನ್ನುತ್ತದೆ ವರದಿ.

(ನಾಳಿನ ಸಂಚಿಕೆಯಲ್ಲಿ ‘ನೆಲೆ ಇಲ್ಲದ ಬದುಕು; ಕುಟುಂಬ ಸಾಕಲು ದಂಧೆ’)

ಪ್ರತಿಕ್ರಿಯಿಸಿ (+)