ಮಂಗಳವಾರ, ಡಿಸೆಂಬರ್ 10, 2019
17 °C

ಶಶಿಕಲಾ ಸೆಲ್‌ನಿಂದ ವಿಶೇಷ ಸೌಲಭ್ಯ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಶಿಕಲಾ ಸೆಲ್‌ನಿಂದ ವಿಶೇಷ ಸೌಲಭ್ಯ ವಾಪಸ್

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಅವ್ಯವಹಾರದ ಆರೋಪ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜೈಲಿನಲ್ಲಿ  ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿಗೆ ನೀಡಿದ್ದ ವಿಶೇಷ ಸವಲತ್ತುಗಳ ಪೈಕಿ ಕೆಲವನ್ನು ಹಿಂಪಡೆಯಲಾಗಿದೆ.

‘ಶಶಿಕಲಾ ಅವರಿಗೆ ಹೊರಗಿನ ಆಹಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಹಾಗೆಯೇ, ಪ್ರತ್ಯೇಕವಾಗಿ ಅಡುಗೆ ತಯಾರಿಸುವುದನ್ನೂ ನಿಲ್ಲಿಸಲಾಗಿದೆ. ಅವರ ಕೋಣೆಯಲ್ಲಿದ್ದ ಸಣ್ಣ ಪಾತ್ರೆಯನ್ನು ಸೋಮವಾರ ಸಂಜೆಯೇ ವಾಪಸ್ ಪಡೆದುಕೊಂಡಿದ್ದೇವೆ’ ಎಂದು ಕಾರಾಗೃಹದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಹಾಸಿಗೆ, ಸೊಳ್ಳೆ ಪರದೆ ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆ ಶಶಿಕಲಾ ಕೊಠಡಿಯಲ್ಲಿ ಇಲ್ಲ.  ಸಾಮಾನ್ಯ ಕೈದಿಗಳಂತೆಯೇ ಅವರೂ ಜೈಲಿನ ಆಹಾರ ತಿನ್ನುತ್ತಿದ್ದಾರೆ. ಅಂತೆಯೇ ತೆಲಗಿಯ ಸಹಾಯಕರ ಸಂಖ್ಯೆಯನ್ನು ಒಂದಕ್ಕೆ ಇಳಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಮತ್ತೊಂದು ವಿಡಿಯೊ: ಶಶಿಕಲಾ ಹಾಗೂ ಇಳವರಸಿ ಬಣ್ಣದ ಉಡುಪಿನಲ್ಲಿ ಜೈಲು ಆವರಣದಲ್ಲಿ ಓಡಾಡುವ ಸಿ.ಸಿ ಟಿ.ವಿ ಕ್ಯಾಮೆರಾದ ಮತ್ತೊಂದು ವಿಡಿಯೊ ತುಣುಕು ಮಂಗಳವಾರ ಬಹಿರಂಗವಾಗಿದೆ.

ಆದರೆ, ‘ಶಶಿಕಲಾಗೆ ನ್ಯಾಯಾಲಯ ವಿಧಿಸಿರುವುದು ಸಾಧಾರಣ ಶಿಕ್ಷೆ. ಅವರು ಕಾರಾಗೃಹದ ಮುಖ್ಯ ಅಧೀಕ್ಷಕರ ಅನುಮತಿ ಪಡೆದು ಬಣ್ಣದ ಬಟ್ಟೆ ತೊಡಬಹುದು. ಅನುಮತಿ ನೀಡುವುದು ಅಧಿಕಾರಿಯ ವಿವೇಚನೆಗೆ ಬಿಟ್ಟದ್ದು. ಹಿಂದಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರು ಬಣ್ಣದ ಬಟ್ಟೆ ತೊಡಲು ಶಶಿಕಲಾ ಅವರಿಗೆ ಅನುಮತಿ ಕೊಟ್ಟಿದ್ದರು. ಹೀಗಾಗಿ, ಅದು ನಿಯಮ ಉಲ್ಲಂಘನೆಯಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಶಶಿಕಲಾ ಅವರಿಗೆ ವಿಶೇಷ ಕೊಠಡಿಗಳನ್ನು ನೀಡಲಾಗಿದೆ ಎಂಬ ಆರೋಪವೂ ಸುಳ್ಳು. 200 ಮಹಿಳೆಯರು ಇರಬೇಕಾದ ಬ್ಯಾರಕ್‌ನಲ್ಲಿ ಸದ್ಯ 120 ಮಹಿಳಾ ಕೈದಿಗಳು ಮಾತ್ರ ಇದ್ದಾರೆ. ಕೊಠಡಿಗಳು ಖಾಲಿ ಇರುವುದರಿಂದ ಕೈದಿಗಳು ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಓಡಾಡುವುದು ಸಾಮಾನ್ಯ’ ಎಂದು ಸ್ಪಷ್ಟಪಡಿಸಿದರು.

ಮೊದಲು ಜೈಲು ಕೈಪಿಡಿ ಅಧ್ಯಯನ: ಕಾರಾಗೃಹ ವಿಭಾಗದ ಎಡಿಜಿಪಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ  ಎನ್‌.ಎಸ್.ಮೇಘರಿಕ್, ‘ಮೊದಲು ಜೈಲಿನ ಕೈಪಿಡಿ (ಮ್ಯಾನ್ಯುಯಲ್) ಬಗ್ಗೆ ಅಧ್ಯಯನ ನಡೆಸುತ್ತೇನೆ. ಜತೆಗೆ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳ ಜತೆ ಚರ್ಚೆ ನಡೆಸಿ ವಸ್ತುಸ್ಥಿತಿ ತಿಳಿದುಕೊಳ್ಳುತ್ತೇನೆ. ಆ ನಂತರ ಎಲ್ಲೆಲ್ಲಿ ಸುಧಾರಣೆ ತರಬೇಕೋ, ಅವುಗಳನ್ನು ಪಟ್ಟಿ ಮಾಡಿಕೊಂಡು ಶಿಸ್ತುಬದ್ಧವಾಗಿ ಬದಲಾವಣೆ ತರಲು ಯತ್ನಿಸುತ್ತೇನೆ’ ಎಂದು ಹೇಳಿದರು.

‘ಕುಖ್ಯಾತ ಪಾತಕಿ ಸೈಕೊ ಶಂಕರ್ ಕಾರಾಗೃಹದಿಂದ ಪರಾರಿಯಾದ ನಂತರ ‘ಕಾರಾಗೃಹಗಳ ಸುಧಾರಣೆ’ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆ ಸರ್ಕಾರ ಒಂದು ಸಮಿತಿ ರಚಿಸಿತ್ತು. ಅದರಲ್ಲಿ ನಾನೂ ಇದ್ದೆ. ಹೀಗಾಗಿ, ಜೈಲು ವ್ಯವಸ್ಥೆ ಹಾಗೂ ನಿರ್ವಹಣೆ ಬಗ್ಗೆ ನನಗೆ ಮಾಹಿತಿ ಇದೆ. ಆ ಅನುಭವಗಳನ್ನೇ ಅಳವಡಿಸಿಕೊಂಡು ಕೆಲಸ ಮಾಡುತ್ತೇನೆ’ ಎಂದರು.

‘ಕೈದಿಗಳು ಹಾಗೂ ಕಾರಾಗೃಹದ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಬೇಕು. ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಅದನ್ನು ಬಿಟ್ಟು ಪ್ರತಿಭಟನೆ ಮಾಡುವುದು, ಇಲಾಖೆ ಬಗ್ಗೆ ಹೊರಗಡೆ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಮೇಘರಿಕ್ ಕಿವಿಮಾತು ಹೇಳಿದರು.

ಸಿಟಿಆರ್‌ಎಸ್‌ನಲ್ಲಿ ರೂಪಾ: ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್) ಆಗಿ ವರ್ಗಾವಣೆಯಾಗಿರುವ ಡಿ.ರೂಪಾ, ಮಂಗಳವಾರ ಬೆಳಿಗ್ಗೆ ಬಂದಿಖಾನೆ ಇಲಾಖೆಯಲ್ಲಿನ ತಮ್ಮ ಕಚೇರಿ ಖಾಲಿ ಮಾಡಿದರು. ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿ ಅಧಿಕಾರ ವಹಿಸಿಕೊಂಡರು.

‘ವೃತ್ತಿ ವಿಷಯಕ್ಕೆ ಬಂದಾಗ ಭಾವನಾತ್ಮಕವಾಗಿ ತೆಗೆದುಕೊಳ್ಳಲೇಬಾರದು. ಸರ್ಕಾರ ಯಾವ ವಿಭಾಗಕ್ಕೆ ನಿಯೋಜಿಸಿದರೂ, ನಿಷ್ಠೆಯಿಂದ ಕೆಲಸ ಮಾಡಬೇಕು. ಅದನ್ನೇ ನಾನೂ ಮಾಡಿಕೊಂಡು ಹೋಗುತ್ತೇನೆ. ನನ್ನ ಹೋರಾಟಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ಬೆಂಬಲ ಸೂಚಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಡಿಐಜಿಯನ್ನು ಕೆರಳಿಸಿದ ಆ ವರದಿ?: ‘ಸಕಾಲ’ ಯೋಜನೆಯ ಹೆಚ್ಚುವರಿ ನಿರ್ದೇಶಕರಾಗಿದ್ದ ಡಿ.ರೂಪಾ, ಇದೇ ಜನವರಿಯಲ್ಲಿ ಕಾರಾಗೃಹ ಇಲಾಖೆಗೆ ವರ್ಗವಾಗಿದ್ದರು. ಆದರೆ, ಆರಂಭದಲ್ಲೇ ಅವರು ರಜೆ ಮೇಲೆ ತೆರಳಿದ್ದು ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಯಿತು ಎಂದು ಇಲಾಖೆ ಮೂಲಗಳು ಹೇಳುತ್ತವೆ.

‘ವರ್ಗವಾಗಿ ನಾಲ್ಕೈದು ತಿಂಗಳು ಕಳೆದರೂ, ರೂಪಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ’ ಎಂದು ಡಿಜಿಪಿ ಎಚ್‌.ಎನ್.ಸತ್ಯನಾರಾಯಣರಾವ್ ಅವರು ಇತ್ತೀಚೆಗೆ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದರು. ಈ ವಿಚಾರ ತಿಳಿದು ಕೋಪಗೊಂಡಿದ್ದ ರೂಪಾ, ಅದೇ ಕಾರಣಕ್ಕೆ ಡಿಜಿಪಿ ಅವರ ನಿವೃತ್ತಿ ಅವಧಿ ಸಮೀಪಿಸುತ್ತಿರುವಾಗ ಅಧಿಕಾರ ವಹಿಸಿಕೊಂಡಿದ್ದರು.’

‘ಅಕ್ರಮಗಳನ್ನು ಬಯಲು ಮಾಡಬೇಕೆಂದೇ ಎರಡು ವಾರ ಸತತವಾಗಿ ವಿವಿಧ ಕಾರಾಗೃಹಗಳನ್ನು ಸುತ್ತಿದ ಅವರು, ಆ ಸಂದರ್ಭಗಳಲ್ಲೆಲ್ಲ ಸಿಬ್ಬಂದಿಯನ್ನು ಬಳಸಿಕೊಂಡು ಹ್ಯಾಂಡಿಕ್ಯಾಮ್‌ನಲ್ಲಿ ವಿಡಿಯೊ ಚಿತ್ರೀಕರಣವನ್ನೂ ಮಾಡಿಸಿದ್ದರು. ಈ ಕೆಲಸ ಮುಗಿದ ಬಳಿಕ ‘ಸ್ಫೋಟಕ ವರದಿ’ಯೊಂದನ್ನು ಸೃಷ್ಟಿಸಿ ಡಿಜಿಪಿಗೆ ಸಲ್ಲಿಸಿದ್ದರು. ಆ ನಂತರ ಪರಸ್ಪರ ಆರೋಪ–ಪ್ರತ್ಯಾರೋಪಗಳ ಮೂಲಕ ಮುಂದುವರಿದ ಜಗಳ, ವರ್ಗಾವಣೆ ಹಂತಕ್ಕೆ ಬಂದು ನಿಂತಿತು.’

‘ಸತ್ಯನಾರಾಯಣರಾವ್ ಅವರು ಹಿಂದೆ ಪೂರ್ವ ವಲಯದ ಐಜಿಪಿಯಾಗಿದ್ದಾಗ, ಅವರ ಅಧೀನದಲ್ಲಿ ರೂಪಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದರು. ಆಗ ಕೂಡ ಕರ್ತವ್ಯದ ವಿಚಾರವಾಗಿ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಮತ್ತೆ ಅವರ ಕೈಕೆಳಗೆ ಕೆಲಸ ಮಾಡುವುದು ರೂಪಾ ಅವರಿಗೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕೆ ಬಂದಿಖಾನೆಗೆ ವರ್ಗವಾದರೂ, ಡಿಜಿಪಿ ನಿವೃತ್ತಿ ಹೊಂದುವವರೆಗೂ ಅಧಿಕಾರ ವಹಿಸಿಕೊಳ್ಳದಿರಲು ರೂಪಾ ನಿರ್ಧರಿಸಿದ್ದರು’ ಎನ್ನುತ್ತವೆ ಮೂಲಗಳು.

‘ಈಗ ಅಧಿಕಾರ ವಹಿಸಿಕೊಂಡು 23 ದಿನಗಳಾದರೂ ರೂಪಾ ಡಿಜಿಪಿ ಕಚೇರಿಗೆ ಹೋಗಿದ್ದು ಎರಡು ಬಾರಿ ಮಾತ್ರ. ಏನೇ ಕೆಲಸ ಇದ್ದರೂ ಕಚೇರಿ ಸಹಾಯಕರನ್ನು ಅವರ ಕಚೇರಿಗೆ ಕಳುಹಿಸುತ್ತಿದ್ದರು. ಇಬ್ಬರೂ ಮುಖಾಮುಖಿ ಭೇಟಿಯಾಗಿ ಮಾತನಾಡಿದ್ದನ್ನು ನಾವು ಒಮ್ಮೆಯೂ ನೋಡಲಿಲ್ಲ’ ಎಂದು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾರಾಗೃಹ ಡಿಜಿಪಿಗೆ ಎನ್‌ಎಚ್‌ಆರ್‌ಸಿ ನೋಟಿಸ್‌

ನವದೆಹಲಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 32 ಜನ ಕೈದಿಗಳ ಮೇಲೆ ಹಲ್ಲೆ ನಡೆಸಿ, ರಾತ್ರೋರಾತ್ರಿ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಿರುವ ಕುರಿತು ಮಾಹಿತಿ ನೀಡುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಕಾರಾಗೃಹ ಇಲಾಖೆಯ ಡಿಜಿಪಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಆಯೋಗದ ಅಧ್ಯಕ್ಷ ಎಚ್‌.ಎಲ್‌. ದತ್ತು ಅವರಿಗೆ ಸೋಮವಾರ ಸಲ್ಲಿಸಿದ್ದ ದೂರಿನ ಮೇರೆಗೆ ಈ ನೋಟಿಸ್‌ ಜಾರಿ ಮಾಡಲಾಗಿದೆ.

ಆರೋಪಗಳಿಗೆ ಸಂಬಂಧಿಸಿದಂತೆ ಹಾಗೂ ಕೈದಿಗಳ ಆರೋಗ್ಯ ಸ್ಥಿತಿ ಹಾಗೂ ಅವರನ್ನು ಈಗ ಇರಿಸಲಾಗಿರುವ ಕಾರಾಗೃಹದ ವಿವರವನ್ನೂ ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿ ನಾಲ್ಕು ವಾರಗಳ ಗುಡುವು ವಿಧಿಸಲಾಗಿದೆ.

ಕೈದಿಗಳು ಗುಲಾಮರಲ್ಲ. ಅವರ ಹಕ್ಕನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಕೈದಿಗಳ ಮೇಲೆ ಹಲ್ಲೆ ನಡೆಸಿ, ಗಾಯಗೊಂಡ ಸ್ಥಿತಿಯಲ್ಲೇ ಬೇರೆಡೆ ಸ್ಥಳಾಂತರಿಸಿದ್ದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಯೋಗ ತಿಳಿಸಿದೆ.

ಜೈಲಿನಲ್ಲಿ ಕೈದಿ ಬಣಗಳ ಪ್ರತಿಭಟನೆ

ಜೈಲಿನಲ್ಲಿ ಕೈದಿಗಳ ಎರಡು ಬಣಗಳು ಮಂಗಳವಾರ ಬೆಳಿಗ್ಗೆ ಉಪಾಹಾರ ಬಿಟ್ಟು ಪ್ರತಿಭಟನೆ ಮಾಡಿದವು.

ಒಂದು ಬಣ ರೂಪಾ ಅವರನ್ನು ಬೆಂಬಲಿಸಿದರೆ, ‘ಯಾವುದೇ ಆಧಾರವಿಲ್ಲದೆ, ಡಿಜಿಪಿ ವಿರುದ್ಧ ವರದಿ ಕೊಟ್ಟಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮತ್ತೊಂದು ಗುಂಪು ರೂಪಾ ವಿರುದ್ಧ ಘೋಷಣೆ ಕೂಗಿತು.

ಕೆಲ ಕೈದಿಗಳು, ‘ಹಿಂದಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರು ತಮಗೆ ಆಗದ ಕೈದಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿಸಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅಂತೆಯೇ ಅಧೀಕ್ಷಕಿ ಆರ್.ಅನಿತಾ ಸಹ ಶಶಿಕಲಾಗೆ ವಿಶೇಷ ಸವಲತ್ತುಗಳನ್ನು ಒದಗಿಸಲು ಅವರ ನಿಕಟ ಸಂಬಂಧಿಕರಾದ ಟಿ.ಟಿ.ವಿ ದಿನಕರನ್‌ರಿಂದ ತಿಂಗಳಿಗೆ ₹ 3 ಲಕ್ಷ ಲಂಚ ಪಡೆಯುತ್ತಿದ್ದಾರೆ. ಈಗ ಹೆಚ್ಚಿನ ವಿಚಾರಣೆಗಾಗಿ ತನಿಖಾಧಿಕಾರಿಗಳು ಕಾರಾಗೃಹಕ್ಕೆ ಬರುತ್ತಾರೆಂದು ಶಶಿಕಲಾ ಕೊಠಡಿಯಿಂದ ಕೆಲ ವಸ್ತುಗಳನ್ನು ತೆಗೆದಿದ್ದಾರೆ’ ಎಂದೂ ಆರೋಪಿಸಿದರು.

ಜೈಲು ಅಧಿಕಾರಿಗಳ ಖಡಕ್ ಎಚ್ಚರಿಕೆ ಬಳಿಕ ಮಧ್ಯಾಹ್ನದ ವೇಳೆಗೆ ಕೈದಿಗಳು ಪ್ರತಿಭಟನೆ ಕೈಬಿಟ್ಟು ಬ್ಯಾರಕ್‌ಗಳಿಗೆ ತೆರಳಿದರು.

ಮೊದಲ ದಿನವೇ ಸುಧಾರಣೆ ಹೆಜ್ಜೆ

‘ನ್ಯಾಯಾಲಯದ ಅನುಮತಿ ಪಡೆದವರನ್ನು ಹೊರತುಪಡಿಸಿ ಉಳಿದ ಕೈದಿಗಳು ಹೊರಗಿನಿಂದ ಊಟ ತರಿಸಿಕೊಳ್ಳುವುದಕ್ಕೆ ಮಂಗಳವಾರದಿಂದ ಕಡಿವಾಣ ಬಿದ್ದಿದೆ. ಅಂತೆಯೇ ಮೇಘರಿಕ್ ಸೂಚನೆಯಂತೆ ಪ್ರತಿ ಸೆಲ್‌ನಲ್ಲೂ ಸೂಕ್ಷ್ಮವಾಗಿ ತಪಾಸಣೆ ನಡೆಸಿರುವ ಜೈಲು ಸಿಬ್ಬಂದಿ, ಕೈದಿಗಳು ಅಡಗಿಸಿಟ್ಟಿಕೊಂಡಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ಮೊಬೈಲ್ ಜಾಮರ್‌ ಸರಿಪಡಿಸುವ ಕಾರ್ಯ ಪ್ರಾರಂಭವಾಗಿದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ರಾಜಕೀಯ ಹಸ್ತಕ್ಷೇಪ, ಅಪಕ್ವ ನಡವಳಿಕೆ

ಬೆಂಗಳೂರು: ‘ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ, ಅರ್ಹತೆ ಇಲ್ಲದವರ ನೇಮಕ, ಕೆಲ  ಅಧಿಕಾರಿಗಳ ಅಪಕ್ವ ನಡವಳಿಕೆ ಪರಪ್ಪನ ಅಗ್ರಹಾರ ಕಾರಾಗೃಹದ ಪ್ರಹಸನಕ್ಕೆ ಕಾರಣ’ ಎಂಬ ಆರೋಪ ಕೇಳಿಬಂದಿದೆ.

‘ಪೊಲೀಸ್‌ ಮಹಾ ನಿರ್ದೇಶಕ ಆರ್‌.ಕೆ.ದತ್ತ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟರೆ ಎಲ್ಲವನ್ನು ಸರಿಯಾಗಿ ನಿಭಾಯಿಸಬಲ್ಲರು. ಆದರೆ, ಪ್ರತಿಯೊಂದು ಹಂತದಲ್ಲೂ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಅವರ ಹಸ್ತಕ್ಷೇಪ ಹಿರಿಯ ಅಧಿಕಾರಿಗಳ ಕೈಕಟ್ಟಿದೆ ಎಂಬ ಭಾವನೆ ಇಲಾಖೆಯೊಳಗಿದೆ.

ರಾಜಕೀಯ ಹಸ್ತಕ್ಷೇಪ: ‘ಸರ್ಕಾರದ ಹಸ್ತಕ್ಷೇಪದಿಂದಾಗಿ, ಇಲಾಖೆಯನ್ನು  ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ಇದು ಇವತ್ತಿನ ಸಮಸ್ಯೆ ಅಲ್ಲ.  ಬಹಳ ಹಿಂದಿನಿಂದಲೂ ಇರುವ ಸಮಸ್ಯೆ. ಯಾವುದೇ ಹುದ್ದೆಗೆ ನೇಮಕ ಮಾಡುವಾಗ ವ್ಯಕ್ತಿಯ ಯೋಗ್ಯತೆ ಮತ್ತು ಹಿರಿತನ ಪರಿಗಣಿಸಬೇಕು. ಜಾತಿ, ಧರ್ಮ ಅಥವಾ ಬೇರೆ ಕಾರಣಗಳಿಂದ ನೇಮಕ ಮಾಡುವುದರಿಂದ ಇಂತಹ ಸ್ಥಿತಿ ಉದ್ಭವಿಸುತ್ತಿದೆ’ ಎನ್ನುತ್ತಾರೆ ನಿವೃತ್ತ ಡಿಜಿಪಿ ಎಸ್‌.ಟಿ.ರಮೇಶ್‌.

ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣರಾವ್‌ ಮತ್ತು ಡಿಐಜಿ ರೂಪಾ ಪ್ರಕರಣದಲ್ಲಿ  ಅನುಭವದ ಮೇಲೆ ಹೇಳಬಹುದಾದರೆ, ರಾವ್‌ ಅವರು ಅತ್ಯಂತ ಹಿರಿಯ ಅಧಿಕಾರಿ, ರೂಪಾ ಅವರು ರಾವ್‌ಗಿಂತ ಸೇವೆಯಲ್ಲಿ 15 ವರ್ಷ ಚಿಕ್ಕವರು. ಹೊಂದಾಣಿಕೆಯಿಂದ ಕೆಲಸ ಮಾಡಬಹುದಿತ್ತು’ ಎಂದು ಹೇಳಿದರು.

ರೂಪಾ ಅವರು ಕಾರಾಗೃಹ ಇಲಾಖೆಗೆ ಹೊಸಬರು. ಅಧಿಕಾರ ಸ್ವೀಕರಿಸಿದ 20 ದಿನಗಳಲ್ಲೇ ವರದಿ ತಯಾರಿಸಿದ್ದಾರೆ. ಅಲ್ಪ ಸಮಯದಲ್ಲಿ ಎಲ್ಲವನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯ? ಲೋಪ ಕಂಡು ಬಂದರೆ ತಮ್ಮ ಹಿರಿಯ ಅಧಿಕಾರಿ ಜತೆ ಚರ್ಚಿಸಿ  ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ. ರೂಪಾ ಅವರು ಸ್ವಲ್ಪ ಪಕ್ವತೆಯಿಂದ  ವರ್ತಿಸಬಹುದಿತ್ತು’ ಎಂದು ಅವರು ಹೇಳಿದರು.

ವದಂತಿಯನ್ನೇ ವರದಿಯಾಗಿ ನೀಡಬಹುದೆ?: ‘ಶಶಿಕಲಾ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ವದಂತಿ ಕಾರಣ ದೂರು ಕೊಟ್ಟಿದ್ದಾಗಿ ರೂಪಾ ಹೇಳಿದ್ದಾರೆ. ಕೇವಲ ವದಂತಿ ಆಧಾರದ ಮೇಲೆ ವರದಿ ತಯಾರಿಸಲು ಸಾಧ್ಯವೆ. ತಪ್ಪು ನಡೆದಿದೆ ಎಂದು ಅನ್ನಿಸಿದ್ದರೆ ಪೊಲೀಸ್ ಮಹಾ ನಿರ್ದೇಶಕ ಆರ್‌.ಕೆ.ದತ್ತ  ಅಥವಾ ಗೃಹ ಕಾರ್ಯದರ್ಶಿ ಅವರಿಗೆ ವರದಿ ನೀಡಬಹುದಿತ್ತು’ ಎಂದು ನಿವೃತ್ತ  ಡಿಜಿಪಿ  ಪಿ. ಕೋದಂಡ ರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದ ಹಿಂದೆ ಎರಡು–ಮೂರು ಸಾಧ್ಯತೆಗಳಿವೆ. ಅವುಗಳೆಂದರೆ, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಸಹಿಸಲಾರದೆ ಮಾಹಿತಿ ಸಂಗ್ರಹಿಸಿ ಕಳುಹಿಸಿರಬಹುದು. ಜೈಲು ಅಧಿಕಾರಿಯಾಗಿ ಮುಂದುವರಿಯಲು ಬಯಸದೇ ವರ್ಗಾವಣೆ ಮಾಡಿಸಿಕೊಳ್ಳಲು ಈ ಮಾರ್ಗ ಹಿಡಿದಿರಬಹುದು. ಜೈಲು ಅಧೀಕ್ಷಕರನ್ನು ನಿಭಾಯಿಸಲಾಗದೆ ಅಧಿಕಾರ ಚಲಾಯಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ. ಜೈಲು ಇಲಾಖೆಗೆ ವರ್ಗಾವಣೆ ಆದ ಎರಡು ತಿಂಗಳ ಬಳಿಕ ರೂಪಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ’  ಎಂದರು ಅವರು.

‘ಗೃಹ ಮಂತ್ರಿಗೆ ಸಲಹೆಗಾರರ (ಕೆಂಪಯ್ಯ) ಅಗತ್ಯ ಏನಿದೆ. ಅವರಿಗೆ ಮಂತ್ರಿಗಳಿಗೆ ಸರಿಸಮಾನವಾದ ಸ್ಥಾನವನ್ನು ನೀಡಲಾಗಿದೆ. ಯಾವ ಮಹಾಪಂಡಿತರು ಎಂದು ನೇಮಿಸಿಕೊಳ್ಳಲಾಗಿದೆ. ಗೃಹ ಇಲಾಖೆಯಲ್ಲಿ ಯಾರು ಯಾರಿಗೆ ಯಾವ ಆದೇಶ ಕೊಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ, ಗೃಹ ಇಲಾಖೆ ಮತ್ತು ಸಲಹೆಗಾರರ ಮಧ್ಯೆ ಸಮನ್ವಯವೇ ಕಾಣುತ್ತಿಲ್ಲ. ಆಗಿರುವ ಅನಾಹುತ ಸರಿಪಡಿಸಲು ದತ್ತ ಅವರಿಗೆ ಅಧಿಕಾರ ಕೊಡುವುದು ಸೂಕ್ತ. ಅದಕ್ಕೆ ಸರ್ಕಾರ ಸಿದ್ಧವಿದೆಯೇ ಎಂಬ  ಸಂದೇಹ ಮೂಡುತ್ತದೆ’ ಎಂದು ಕೋದಂಡರಾಮಯ್ಯ ಹೇಳಿದರು. ‘ಪರಪ್ಪನ ಅಗ್ರಹಾರ ಮಾತ್ರವಲ್ಲ, ರಾಜ್ಯದ ಎಲ್ಲ ಜೈಲುಗಳಲ್ಲಿಯೂ ನಡೆಯಬಾರದ್ದು ನಡೆಯುತ್ತಿರುವುದು ಗುಟ್ಟಿನ ಸಂಗತಿಯಲ್ಲ. ರಾಜಕಾರಣ ಮತ್ತು ಪೊಲೀಸ್‌ ಮಧ್ಯೆ ಇದ್ದ ಲಕ್ಷ್ಮಣ ರೇಖೆ ಮಾಯವಾಗಿರುವುದೇ ಇದಕ್ಕೆ ಕಾರಣ’ ಎಂದರು.

ಎಚ್.ಎಸ್‌. ರೇವಣ್ಣ ಬಂದಿಖಾನೆ ಡಿಐಜಿ

ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಮುಜುಗರದಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ಸರ್ಕಾರ ಬಂದಿಖಾನೆ ಡಿಐಜಿ ಹುದ್ದೆಗೆ ಎಚ್.ಎಸ್‌. ರೇವಣ್ಣ ಅವರನ್ನು ನೇಮಕ ಮಾಡಿದೆ.

ಕೃಷ್ಣ ಕುಮಾರ್ ವರ್ಗಾವಣೆಯಿಂದ ತೆರವಾಗಿದ್ದ  ಕಾರಾಗೃಹ ಮುಖ್ಯ ಅಧೀಕ್ಷಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ರೇವಣ್ಣಗೆ ವಹಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಸರಿಯಾಗಿ ನಿಭಾಯಿಸಬಹುದಿತ್ತು

ಜೈಲು ಪ್ರಕರಣ ಮತ್ತು ದಕ್ಷಿಣ ಕನ್ನಡದ ಕೋಮುಗಲಭೆ ವೃತ್ತಿಪರವಾಗಿ ನಿಭಾಯಿಸಬಹುದಿತ್ತು ಎಂದು ನಿವೃತ್ತ  ಡಿಜಿಪಿ ಅಜಯ್‌ಕುಮಾರ್‌ ಸಿಂಗ್‌ ಅಭಿಪ್ರಾಯಪಟ್ಟರು.

‘ಜೈಲು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಅಲ್ಲಿಂದ ಎತ್ತಂಗಡಿ ಮಾಡಿರುವುದು ಸರಿಯಾದ ಕ್ರಮ. ಯಾರೇ ಒಬ್ಬರನ್ನು ಉಳಿಸಿಕೊಂಡಿದ್ದರೂ ನಿಷ್ಪಕ್ಷ ತನಿಖೆಗೆ ಕಷ್ಟವಾಗುತಿತ್ತು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)