ಸೋಮವಾರ, ಡಿಸೆಂಬರ್ 9, 2019
26 °C

ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ: ‘ನೀರಿನ ಲಭ್ಯತೆ ಪರಿಗಣಿಸದ ನ್ಯಾಯಮಂಡಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ: ‘ನೀರಿನ ಲಭ್ಯತೆ ಪರಿಗಣಿಸದ ನ್ಯಾಯಮಂಡಳಿ’

ನವದೆಹಲಿ: ದಶಕವೊಂದರಲ್ಲಿ ಐದು ವರ್ಷ ಮಾತ್ರ ಕಾವೇರಿ ನದಿ ತುಂಬಿ ಹರಿಯುತ್ತದೆ. ಮಿಕ್ಕ ಐದು ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗುವುದೇ ಇಲ್ಲ. ಈ ಅಂಶವನ್ನು ಕಾವೇರಿ ಜಲವಿವಾದ ನ್ಯಾಯಮಂಡಳಿಯು ಅರ್ಥೈಸಿಕೊಳ್ಳದೇ ನೀರು ಹಂಚಿಕೆ ಮಾಡಿದೆ ಎಂದು ಕರ್ನಾಟಕವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಾವೇರಿ ಕಣಿವೆಯ ರಾಜ್ಯಗಳು ಸಲ್ಲಿಸಿರುವ ಸಿವಿಲ್‌ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದೆದುರು ಮಂಗಳವಾರ ರಾಜ್ಯದ ಪರ ವಾದ ಮಂಡಿಸಿದ ವಕೀಲ ಮೋಹನ್‌ ಕಾತರಕಿ ಈ  ಕುರಿತು ಗಮನ ಸೆಳೆದರು.

‘ರಾಜ್ಯದಲ್ಲಿರುವ ಕಾವೇರಿ ಕಣಿವೆ ವ್ಯಾಪ್ತಿಯ ಒಟ್ಟು 48 ತಾಲ್ಲೂಕುಗಳ ಪೈಕಿ 20 ತಾಲ್ಲೂಕುಗಳಲ್ಲಿ ಸದಾ ಬರ ಇರುತ್ತದೆ. ಬರಪೀಡಿತ ಪ್ರದೇಶಗಳಲ್ಲಿನ ನೀರಾವರಿ ಪ್ರದೇಶವನ್ನು ಹೆಚ್ಚಿಸಬೇಕಿದೆ ಎಂಬ ರಾಜ್ಯದ ಬೇಡಿಕೆಯನ್ನು ಮನ್ನಿಸದ ನ್ಯಾಯಮಂಡಳಿ, ನಮಗೆ ಕಡಿಮೆ ಪ್ರಮಾಣದ ನೀರನ್ನು ಹಂಚಿಕೆ ಮಾಡಿತು’ ಎಂದು ಹೇಳಿದರು.

ಇದೇ ಅಂಶವನ್ನು ಮುಂದಿರಿಸಿದ ತಮಿಳುನಾಡಿನ ಮನವಿಯನ್ನು ಮನ್ನಿಸಿದ ನ್ಯಾಯಮಂಡಳಿಯು, ಅಲ್ಲಿನ ಬರಪೀಡಿತ ಪ್ರದೇಶಗಳಲ್ಲಿ ನೀರಾವರಿ ಪ್ರದೇಶ ವಿಸ್ತರಿಸಿ ಅಭಿವೃದ್ಧಿಪಡಿಸಿ ನೆರವಿಗೆ ಬರಲು ಅಧಿಕ ಪ್ರಮಾಣದ ನೀರು ಒದಗಿಸಿತು. ಆದರೆ, ಅಲ್ಲಿರುವ ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಸಲ್ಲಿಸಲಾಗಿದ್ದ ವರದಿಯ ಸತ್ಯಾಸತ್ಯತೆಯನ್ನು ಅವಲೋಕಿಸಲೇ ಇಲ್ಲ ಎಂದು ಅವರು ದೂರಿದರು.

ಮದ್ರಾಸ್‌ ಸರ್ಕಾರ ಹಾಗೂ ಮೈಸೂರು ಸಂಸ್ಥಾನಗಳ ನಡುವೆ 1924ರಲ್ಲಿ ಆಗಿದ್ದ ಒಪ್ಪಂದದ ಪ್ರಕಾರ ರಾಜ್ಯದಲ್ಲಿನ ಕಾವೇರಿ ಕಣಿವೆ ಪ್ರದೇಶದಲ್ಲಿ 7 ಲಕ್ಷ ಎಕರೆ ಪ್ರದೇಶವನ್ನು ನೀರಾವರಿ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಬೇಕಿತ್ತು. ಆದರೆ, ಅಂದಾಜು 5.20 ಲಕ್ಷ ಎಕರೆ ಪ್ರದೇಶವನ್ನು ನಿರ್ಲಕ್ಷಿಸುವ ಮೂಲಕ ಸತತ 50 ವರ್ಷಗಳ ಕಾಲ ಅನ್ಯಾಯ ಎಸಗಲಾಯಿತು. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಅಂದಾಜು 28 ಲಕ್ಷ ಎಕರೆ ಭೂಮಿಯು ನೀರಾವರಿ ಪ್ರದೇಶವಾಗಿ ಅಭಿವೃದ್ಧಿ ಸಾಧಿಸಿತು. 1974ರಲ್ಲಿ ಈ ಕುರಿತು ದೂರು ಸಲ್ಲಿಸಿ, ಒಪ್ಪಂದದ ಮರು ಪರಿಶೀಲನೆಗೆ ಆಗ್ರಹಿಸಿದ ನಂತರವೇ ಕಾವೇರಿ ಜಲವಿವಾದ ತಾರಕಕ್ಕೇರಿತು ಎಂದು ಅವರು ವಿವರಿಸಿದರು.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಮೀಕ್ಷೆಯ ವರದಿ ಪ್ರಕಾರ, ಕಾವೇರಿಯ 90 ಟಿಎಂಸಿ ಅಡಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿತ್ತು. ಆದರೂ ರಾಜ್ಯದಲ್ಲಿ ನೀರಿನ ಬಳಕೆಗೆ ಅವಕಾಶ ದೊರೆಯಲಿಲ್ಲ. ಅಂತರ್ಜಲದ ಲಭ್ಯತೆಯ ಕುರಿತೂ ತಮಿಳುನಾಡು ಸರ್ಕಾರ ನ್ಯಾಯಮಂಡಳಿಗೆ ತಪ್ಪು ಮಾಹಿತಿಯನ್ನೇ ಒದಗಿಸುವ ಮೂಲಕ ಲಾಭ ಮಾಡಿಕೊಂಡಿತು. ವಾರ್ಷಿಕ 30 ಟಿಎಂಸಿ ಅಡಿ ಅಂತರ್ಜಲ ನೀರು ಲಭ್ಯವಿದ್ದರೂ 20 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ ಎಂಬ ವರದಿ ನೀಡುವ ಮೂಲಕ ಹೆಚ್ಚು ನೀರನ್ನು ಪಡೆಯಲಾಗಿದೆ. ಕರ್ನಾಟಕದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿನ ಅಂತರ್ಜಲ ನೀರಿನ ಲಭ್ಯತೆಯು ತೀರ ಕಡಿಮೆ ಎಂದು ಅವರು ಹೇಳಿದರು.

ಕಾವೇರಿ ನೀರಿನ ವೈಜ್ಞಾನಿಕ ಬಳಕೆಯ ಕುರಿತು ತಮಿಳುನಾಡು ಸರ್ಕಾರ ನ್ಯಾಯಮಂಡಳಿಗೆ ನಿಖರ ಮಾಹಿತಿಯನ್ನೇ ನೀಡಲಿಲ್ಲ. ಆದರೂ ನ್ಯಾಯಮಂಡಳಿಯು ವಾರ್ಷಿಕವಾಗಿ ಲಭ್ಯವಿರುವ 740 ಟಿಎಂಸಿ ಅಡಿ ನೀರಿನಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಆ ರಾಜ್ಯಕ್ಕೇ ಹಂಚಿಕೆ ಮಾಡಿತು ಎಂದರು.

ಶಬ್ದಗಳಲ್ಲೇ ತಿಳಿಸಿ: ನ್ಯಾಯಮೂರ್ತಿ ಮಿಶ್ರಾ

‘ಅಚ್ಚುಕಟ್ಟು ಪ್ರದೇಶ, ನೀರಿನ ಲಭ್ಯತೆ, ಮಳೆಯ ಪ್ರಮಾಣ, ಜಲಾಶಯಗಳ ಸ್ಥಿತಿಗತಿಯನ್ನು ನಕ್ಷೆ ಮೂಲಕ, ಗ್ರಾಫ್‌ ಮೂಲಕ ತಿಳಿಸಲು ಯತ್ನಿಸದೆ ಶಬ್ದಗಳಲ್ಲೇ ತಿಳಿಸಿ’

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಣಿವೆ ವ್ಯಾಪ್ತಿಯ ರಾಜ್ಯಗಳ ಸಿವಿಲ್‌ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಕರ್ನಾಟಕದ ಪರ ವಾದ ಮಂಡಿಸಿದ ವಕೀಲರಿಗೆ ಈ ರೀತಿ ಸಲಹೆ ಮಾದರಿಯ ಸೂಚನೆ ನೀಡಿದರು.

‘ನೀವು ವಿವರವನ್ನೆಲ್ಲ ನಕ್ಷೆ ಅಥವಾ ಗ್ರಾಫ್‌ ಮೂಲಕ ವಿವರಿಸಲು ಪ್ರಯತ್ನಿಸಿದ್ದೀರಿ. ಆದರೆ, ಅರ್ಥ ಮಾಡಿಕೊಳ್ಳಲು ಸುಲಭವಾಗುವಂತೆ ಶಬ್ದಗಳಲ್ಲೇ ವಿವರಿಸಿ. ವಿವರವನ್ನೆಲ್ಲ ಬರೆದು ಕೊಡಿ. ಅಂದರೆ ನಮಗೂ ಸುಲಭವಾಗುತ್ತದೆ’ ಎಂದು  ಹೇಳಿದರು.

ಆಗ ರಾಜ್ಯದ ಪರ ವಕೀಲ ಮೋಹನ್‌ ಕಾತರಕಿ ವಾದ ಮಂಡಿಸುತ್ತಿದ್ದರಾದರೂ, ಹಿಂದಿನ ಸಾಲಿನಲ್ಲಿ ಕುಳಿತು ಕೇಳುತ್ತಿದ್ದ ಫಾಲಿ ನಾರಿಮನ್‌ ಥಟ್ಟನೇ ಮೇಲೆದ್ದು, ‘ಎಲ್ಲ ಅಂಶಗಳನ್ನೂ ಒಳಗೊಂಡ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಆದಷ್ಟು ನಕ್ಷೆ, ಗ್ರಾಫ್‌ ಇಲ್ಲದಂತೆ ನೋಡಿಕೊಂಡು, ವಿವರಗಳನ್ನೆಲ್ಲ ಬರೆದು ಕೊಡಲು ಯತ್ನಿಸುತ್ತೇವೆ’ ಎಂದು ಹೇಳಿದರು.

ಮೋಹನ್‌ ಕಾತರಕಿ ಅವರು ಮಂಡಿಸುತ್ತಿದ್ದ ವಾದವನ್ನು ಕಿವಿಗೊಟ್ಟು ಆಲಿಸುತ್ತಿದ್ದ ನಾರಿಮನ್‌, ನಡುನಡುವೆ ತಮ್ಮ ಕಿರಿಯ ಸಹೋದ್ಯೋಗಿಯ ಬೆನ್ನು ತಿವಿದು, ಕೆಲ ಅಂಶಗಳನ್ನು ಪ್ರಸ್ತಾಪಿಸುವಂತೆ ಮೆಲುದನಿಯಲ್ಲೇ ಹೇಳುತ್ತಿದ್ದುದು ಗಮನ ಸೆಳೆಯಿತು.

ಪ್ರತಿಕ್ರಿಯಿಸಿ (+)