7
ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ

ಬದಲಾವಣೆ ಒಳಗಿನಿಂದಲೇ ಬರಬೇಕು

Published:
Updated:
ಬದಲಾವಣೆ ಒಳಗಿನಿಂದಲೇ ಬರಬೇಕು

ಚಿತ್ರರಂಗದಲ್ಲಿ ‘ಕ್ಯಾಸ್ಟಿಂಗ್‌ ಕೌಚ್‌’ ಸೇರಿ ಮಹಿಳೆಯರ ಮೇಲೆ ಅನೇಕ ಬಗೆಯ ದೌರ್ಜನ್ಯಗಳು ನಡೆಯುತ್ತಿವೆ. ಚಿತ್ರರಂಗದಲ್ಲಿಯೂ ಒಂದು ವರ್ಗವ್ಯವಸ್ಥೆ ಇದೆ. ಅಲ್ಲಿ ನಟಿಯರ ಮೇಲಿನ ದೌರ್ಜನ್ಯಗಳನ್ನು ಒಂದು ಮಟ್ಟಿಗಾದರೂ ನಾವು ಗುರುತಿಸುತ್ತೇವೆ. ಅದರ ಕುರಿತು ಚರ್ಚಿಸುತ್ತೇವೆ. ಆದರೆ ಎಷ್ಟೋ  ಕಾರ್ಮಿಕರಿಗೆ, ಬರಹಗಾರರಿಗೆ, ತಂತ್ರಜ್ಞರಿಗೆ ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೂ ಇಂಥ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ.ನಿರ್ದಿಷ್ಟವಾಗಿ ‘ಕ್ಯಾಸ್ಟಿಂಗ್‌ ಕೌಚ್‌’ ಬಹಳ ವರ್ಷಗಳಿಂದ ನಡೆದುಂಬಂದಿದೆ. ಅದನ್ನು ಬದಲಾಯಿಸುವುದು ಸುಲಭ ಅಲ್ಲ. ಸಿನಿಮಾ ಅಂದಮೇಲೆ ಇದೆಲ್ಲ ಸಹಜ, ನಟಿ ಆಗಬೇಕು ಎಂದರೆ ಈ ದೌರ್ಜನ್ಯವನ್ನು ಒಪ್ಪಿಕೊಳ್ಳಲೇಬೇಕು ಎಂಬ ಸ್ಥಾಪಿತ ಹಿತಾಸಕ್ತಿಗಳನ್ನು ಹಾಗೆಯೇ ಉಳಿಸುವುದೂ ಖಂಡಿತ ಸರಿಯಲ್ಲ.

ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಎಂದರೆ ಅದು ಆ ಕ್ಷೇತ್ರದ ಒಳಗಡೆಯಿಂದಲೇ ಆಗಬೇಕು. ಬದಲಾಗಿ ಸರ್ಕಾರ, ಸಾಮಾಜಿಕ ಸಂಘ ಸಂಸ್ಥೆಗಳು ಹೀಗೆ ಸಿನಿಮಾ ಕ್ಷೇತ್ರದ ಹೊರಗಿನವರು ಮಾಡುವ ಪ್ರಯತ್ನದಿಂದ ಬದಲಾಯಿಸುವುದು ಕಷ್ಟ. ಆದರೆ ಹೀಗೆ ಒಳಗಡೆಯಿಂದಲೇ ಬದಲಾವಣೆಯನ್ನು ಬಯಸುವವರು– ಅದಕ್ಕಾಗಿ ಪ್ರಯತ್ನಿಸುವವರು ಬಹಳ ಕಡಿಮೆ.ಒಮ್ಮೆ ಚಿತ್ರರಂಗದಲ್ಲಿ ನೆಲೆಯೂರಿ, ಹೆಸರು ಗಳಿಸಿದ ಮೇಲೆ ಇಂಥ ದೌರ್ಜನ್ಯಗಳು ಅವರನ್ನು ಅಷ್ಟು ತಾಕುವುದಿಲ್ಲ. ಅಂಥವರು ನನಗೂ ಈ ಸಮಸ್ಯೆಗೂ ಯಾವ ಸಂಬಂಧವೂ ಇಲ್ಲ, ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ.ಚಿತ್ರರಂಗದ ಆಯಕಟ್ಟಿನ ಸ್ಥಳಗಳಲ್ಲಿ– ವಿಭಾಗಗಳಲ್ಲಿ ಇರುವವರು ಪುರುಷರು. ಅವರೇ ಇಡೀ ಉದ್ಯಮವನ್ನು ನಿಯಂತ್ರಿಸುತ್ತಿರುತ್ತಾರೆ. ಹಾಗೆಯೇ ಯಾರಿಗಾಗಿ ಕಥೆ ಬರೆಯಲಾಗುತ್ತಿದೆ, ಯಾರನ್ನು ಪ್ರಧಾನವಾಗಿಟ್ಟುಕೊಂಡ ಸಿನಿಮಾಗಳು ಹಣ ಗಳಿಸುತ್ತವೆ ಎಂಬ ನಂಬಿಕೆ ಇದೆಯೋ ಅವರೂ ಪುರುಷರೇ. ಆದರೆ ಕೌಟುಂಬಿಕ ಸಿನಿಮಾಗಳು, ಮಹಿಳಾ ಪ್ರಧಾನ ಚಿತ್ರಗಳೂ ಬರುತ್ತಿವೆ. ಆದರೆ ಈವತ್ತಿಗೂ ಹೆಚ್ಚು ಹಣ ಗಳಿಸುವ, ಜನರು ಚಿತ್ರಮಂದಿರ ತುಂಬಿಕೊಂಡು ಶಿಳ್ಳೆ ಚಪ್ಪಾಳೆ ಹೊಡೆಯುವುದು ಸ್ಟಾರ್‌ ನಟರ ಸಿನಿಮಾಗಳಿಗೆ. ಇಂಥ ವ್ಯವಸ್ಥೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತದೆಯೇ ಹೊರತು, ಅದನ್ನು ಪ್ರಶ್ನಿಸುವ ಧ್ವನಿಗಳು ಹುಟ್ಟುವುದು ವಿರಳ.ಈಗ ಎರಡು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ‘ಕಾಸ್ಟಿಂಗ್‌ ಕೌಚ್‌’ ವ್ಯವಸ್ಥೆ ಇದೆ ಎಂದು ಒಂದು ವರದಿ ಮಾಧ್ಯಮಗಳಲ್ಲಿ ಬಂದಿತ್ತು. ಅದನ್ನು ನೋಡಿ, ಈ ವ್ಯವಸ್ಥೆಯ ವಿರುದ್ಧ ನಾವು ಚಿತ್ರರಂಗದ ಒಳಗಿರುವವರೇ ಪ್ರತಿಭಟಿಸಬೇಕು ಎಂದು ನಾನು ಒಂದು ಲೇಖನ ಬರೆದಿದ್ದೆ. ಆದರೆ ಯಾರೂ  ಅದಕ್ಕೆ ಧ್ವನಿಗೂಡಿಸಲೇ ಇಲ್ಲ. ಅದೇ ಸಂದರ್ಭದಲ್ಲಿ ನಾನು ಚಿತ್ರರಂಗದ ಮುಖ್ಯರೊಬ್ಬರ ಬಳಿ ಈ ವಿಷಯ ಪ್ರಸ್ತಾಪಿಸಿದೆ. ಅವರು ತಕ್ಷಣ ‘ಅವೆಲ್ಲ ನಮ್ಮ ಚಿತ್ರರಂಗದಲ್ಲಿ ಇಲ್ಲವೇ ಇಲ್ಲ’ ಎಂದು ತಳ್ಳಿಹಾಕಿಬಿಟ್ಟರು. ‘ಕ್ಯಾಸ್ಟಿಂಗ್‌ ಕೌಚ್‌’ನಂಥ ಕೆಟ್ಟ ವ್ಯವಸ್ಥೆಯನ್ನು ಗುರುತಿಸಿದರೆ ಚಿತ್ರರಂಗಕ್ಕೆ ಅಪಮಾನ, ಅದನ್ನು ಅದರ ಪಾಡಿಗೆ ಬಿಟ್ಟುಬಿಡಬೇಕು ಎಂಬ ಮನೋಭಾವ ತುಂಬ ಜನರಲ್ಲಿದೆ. ನಾವು ಯಾವುದೇ ಸಮಸ್ಯೆಯನ್ನು ಪರಿಹರಿಸಬೇಕು ಎಂದರೆ ಮೊದಲು ಅದನ್ನು ಗುರುತಿಸಬೇಕು. ಸಮಸ್ಯೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಗುರುತಿಸುವ ಗೋಜಿಗೇ ಹೋಗದಿದ್ದರೆ ಪರಿಹಾರದ ಮಾತೆಲ್ಲಿಂದ ಬಂತು?ಚಿತ್ರರಂಗದಲ್ಲಿ ಪಳಗಿದವರಿಗೆ ಇಂಥ ಸಮಸ್ಯೆಗಳನ್ನು ನಿಭಾಯಿಸುವ ಕಲೆಯೂ ತಿಳಿದಿರುತ್ತದೆ. ಆದರೆ ಹೊಸಬರಿಗೆ ಯಾವ ದಾರಿಯೂ ಇಲ್ಲ.‘ಕ್ಯಾಸ್ಟಿಂಗ್‌ ಕೌಚ್’ ಎಂಬ ಕೆಟ್ಟ ವ್ಯವಸ್ಥೆ ಮಹಿಳೆಯರಿಗೆ ಸೀಮಿತವಾದದ್ದಲ್ಲ; ಇದು ಚಿತ್ರರಂಗದ ಕಾಯಿಲೆ. ಈ ಕಾಯಿಲೆಯನ್ನು ಎಲ್ಲರೂ ಸೇರಿ ವಾಸಿಗೊಳಿಸಬೇಕು. ಆದರೆ ‘ಈ ಕಾಯಿಲೆ ಎಲ್ಲ ಚಿತ್ರರಂಗದಲ್ಲಿಯೂ ಇರುವಂಥದ್ಧೇ’ ಎಂದು ಸುಮ್ಮನಾಗಿಬಿಡುವವರೇ ಹೆಚ್ಚು. ಎಲ್ಲ ಕಡೆಯೂ ಇರುವುದರಿಂದಲೇ ನಾವು ಬದಲಾಯಿಸಬೇಕಾಗಿದೆ. ‘ಕ್ಯಾಸ್ಟಿಂಗ್‌ ಕೌಚ್‌’ ತೊಡೆದುಹಾಕಿ ನಾವು ಉಳಿದವರಿಗೆ ಮಾದರಿಯಾಗಬೇಕಾಗಿದೆ.ನಿರೂಪಣೆ: ಪದ್ಮನಾಭ ಭಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry