ಶಿವ ಥಾಪಾ, ಮನೋಜ್‌ಕುಮಾರ್‌ಗೆ ಚಿನ್ನ

7
ಜೆಕ್ ಗ್ರ್ಯಾನ್‌ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸ್‌ರ್‌ಗಳಿಗೆ ಐದು ಚಿನ್ನ

ಶಿವ ಥಾಪಾ, ಮನೋಜ್‌ಕುಮಾರ್‌ಗೆ ಚಿನ್ನ

Published:
Updated:
ಶಿವ ಥಾಪಾ, ಮನೋಜ್‌ಕುಮಾರ್‌ಗೆ ಚಿನ್ನ

ನವದೆಹಲಿ: ಶಿವಥಾಪಾ ಮತ್ತು ಮನೋಜ್‌ ಕುಮಾರ್ ಸೇರಿದಂತೆ ಭಾರತದ ಐವರು ಬಾಕ್ಸರ್‌ಗಳು ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ 48ನೇ ಗ್ರ್ಯಾನ್‌ಪ್ರಿ ಉಸ್ತಿನಾಡ್ ಲೆಬೆಮ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನದ ಪದಕ ಗೆದ್ದಿದ್ದಾರೆ.

ಪುರುಷರ 60 ಕೆ.ಜಿ. ವಿಭಾಗದಲ್ಲಿ ಶಿವಥಾಪಾ, 69 ಕೆ.ಜಿ. ಮನೋಜಕುಮಾರ್, 52 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಗಲ್, 56 ಕೆ.ಜಿ. ವಿಭಾಗದಲ್ಲಿ ಗೌರವ್ ಬಿಧುರಿ ಮತ್ತು 91 ಕೆ.ಜಿ. ಮೇಲಿನವರ ವಿಭಾಗದಲ್ಲಿ ಸತೀಶ್‌ ಕುಮಾರ್ ಚಿನ್ನದ ಸಾಧನೆ ಮಾಡಿದರು. ಅಲ್ಲದೇ ಕವೀಂದರ್ ಬಿಷ್ತ್ (52ಕೆ.ಜಿ.), ಮನೀಷ್ ಪನ್ವಾರ್ (81 ಕೆ.ಜಿ.) ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸುಮಿತ್ ಸಂಗ್ವಾನ್ (91 ಕೆ.ಜಿ.) ಅವರು ಕಂಚಿನ ಪದಕ ಪಡೆದರು.

ದಿನದ ಆರಂಭದಲ್ಲಿ ನಡೆದ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಭಾರತದವರೇ ಆದ ಅಮಿತ್ ಪಂಗಲ್ ಮತ್ತು ಕವಿಂದರ್ ಬಿಷ್ತ್ ಅವರು ಮುಖಾಮುಖಿಯಾದರು. ಫ್ಲೈವೇಟ್ (49 ಕೆ.ಜಿ.) ಬಾಕ್ಸರ್‌ ಅಮಿತ್ ಅವರು ಈ ಬಾರಿ ಹೆಚ್ಚಿನ ತೂಕ ವಿಭಾಗದಲ್ಲಿ ಭಾಗವಹಿಸಿದ್ದಾರೆ. ರೋಚಕ ಹೋರಾಟದಲ್ಲಿ ಅಮಿತ್ 3–2 ಅಂಕಗಳಿಂದ ಎದುರಾಳಿ ಕವೀಂದರ್‌ ಅವರನ್ನು ಸೋಲಿಸಿದರು.

ನಂತರ ನಡೆದ 56 ಕೆ.ಜಿ. ವಿಭಾಗದಲ್ಲಿ ಗೌರವ್ ಬಿಧುರಿ 5–0ಯಿಂದ ಪೊಲೆಂಡ್‌ನ ಇವಾನೊವ್ ಜರಸ್ಲಾವ್ ವಿರುದ್ಧ ಗೆದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಶಿವ ಥಾಪಾ ಅವರು 60 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 5–0ಯಿಂದ ಸ್ಲೊವಾಕಿಯಾದ ಫಿಲಿಪ್ ಮೆಸ್ಜರೊಸ್‌ ವಿರುದ್ಧ ಗೆದ್ದರು. ಈಚೆಗಷ್ಟೇ ಥಾಪಾ ಅವರು ಏಷ್ಯನ್ ಬಾಕ್ಸಿಂಗ್‌ನಲ್ಲಿ ಬೆಳ್ಳಿಪದಕ ಗೆದ್ದಿದ್ದರು.

ಅನುಭವಿ ಬಾಕ್ಸರ್‌ ಮನೋಜ್ ಕುಮಾರ್  69 ಕೆ.ಜಿ. ವಿಭಾಗದಲ್ಲಿ 5–0 ಯಿಂದ ಸ್ಥಳೀಯ ಬಾಕ್ಡರ್‌ ಡೇವಿಡ್ ಕೊಟ್ಚ್ ವಿರುದ್ಧ ನಿರಾಯಾಸ ಜಯ ಸಾಧಿಸಿದರು.

91 ಕೆ.ಜಿ. ಮೇಲಿನವರ ವಿಭಾಗದಲ್ಲಿ ಸತೀಶ್ ಕುಮಾರ್ ಅವರು ಜರ್ಮನಿಯ  ಮ್ಯಾಕ್ಸ್‌ ಕೆಲ್ಲರ್ ಅವರಿಂದ ಕಠಿಣ ಪೈಪೋಟಿ ಎದುರಿಸಿದರು. ಆದರೂ ನಿಖರವಾದ ಪಂಚ್‌ಗಳಿಂದ ಎದುರಾಳಿಯ ಆತ್ಮವಿಶ್ವಾಸ  ಕುಂದಿಸುವಲ್ಲಿ ಯಶಸ್ವಿಯಾದರು. ಚಿನ್ನದ ಪದಕ ಜಯಿಸಿದರು.

81 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮನೀಷ್ ಅವರು ಜರ್ಮನಿಯ ಇಬ್ರಾಗಿಮ್ ಬೆಜುವೆ ವಿರುದ್ಧ ಸೋತರು.

ಆಗಸ್ಟ್ 25 ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್, ಕವಿಂದರ್, ಗೌರವ್, ಶಿವ ಥಾಪಾ, ಮನೋಜಕುಮಾರ್, ಸುಮಿತ್ ಮತ್ತು ಸತೀಶ್ ಅವರು ಸ್ಪರ್ಧಿಸಲಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ವಿಕಾಸ್ ಕೃಷ್ಣನ್ ಅವರೂ ಸ್ಪರ್ಧಿಸಲಿದ್ದಾರೆ. ಆದರೆ ಅವರು ಜೆಕ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರಲಿಲ್ಲ. ಅವರು ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry