7

ಫೇಸ್‌ಬುಕ್‌ ಸಹಾಯವಾಣಿ ಸಂಖ್ಯೆ ಏಕಿಲ್ಲ?

Published:
Updated:
ಫೇಸ್‌ಬುಕ್‌ ಸಹಾಯವಾಣಿ ಸಂಖ್ಯೆ ಏಕಿಲ್ಲ?

ವಿಶ್ವದ ಬಹುತೇಕ ಸೇವಾ ಕಂಪೆನಿಗಳು ಸಹಾಯವಾಣಿ ಸಂಖ್ಯೆಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ನೀಡುವುದು ಸಾಮಾನ್ಯ. ನಿರ್ದಿಷ್ಟ ಸೇವೆಯೊಂದನ್ನು ಪಡೆಯುವ ವೇಳೆ ಬಳಕೆದಾರರಿಗೆ ಯಾವುದೇ ತಾಂತ್ರಿಕ ತೊಡಕು ಎದುರಾದರೂ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಿಹಾರ ಪಡೆಯಬಹುದು. ಆದರೆ, ಫೇಸ್‌ಬುಕ್‌ನಂತಹ ದೊಡ್ಡ ಸಾಮಾಜಿಕ ಜಾಲತಾಣ ಸಂಸ್ಥೆ ಸಹಾಯವಾಣಿ ಸಂಖ್ಯೆಯನ್ನು ನೀಡಿಲ್ಲ. ಅಲ್ಲದೆ ಫೇಸ್‌ಬುಕ್‌ ದೂರವಾಣಿ ಕರೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ.

ಅರೆ!, ಫೇಸ್‌ಬುಕ್‌ನಂತಹ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ದೈತ್ಯ ಸಂಸ್ಥೆ ಸಹಾಯವಾಣಿ / ದೂರವಾಣಿ ಕರೆಯ ಮೂಲಕ ತಾಂತ್ರಿಕ ತೊಡಕುಗಳನ್ನು ಏಕೆ ನಿವಾರಿಸುವುದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡಬಹುದು. ಆದರೆ, ಅದು ಫೇಸ್‌ಬುಕ್‌ನ ನೀತಿ ನಿಯಮಗಳ ವಿಷಯ. ‘ಕರೆಗಳ ಮೂಲಕ ಯಾವುದೇ ಸಮಸ್ಯೆಗೆ ನಾವು ಪರಿಹಾರ ಸೂಚಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿಕೊಂಡಿದೆ ಫೇಸ್‌ಬುಕ್‌.

ನೀವು ಒಂದು ವೇಳೆ ಗೂಗಲ್‌ನಲ್ಲಿ ಫೇಸ್‌ಬುಕ್‌ ಸಹಾಯವಾಣಿಗಾಗಿ ಹುಡುಕಾಟ ನಡೆಸಿದರೆ ಅಲ್ಲಿ ನಿಮಗೆ ಮೊದಲು ಫೇಸ್‌ಬುಕ್‌ ಸಹಾಯ ಕೇಂದ್ರದ (ಹೆಲ್ಪ್‌ ಸೆಂಟರ್‌) ಮಾಹಿತಿ ಸಿಗುತ್ತದೆ. ಈ ಹೆಲ್ಪ್‌ ಸೆಂಟರ್‌ನಲ್ಲಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಸಾಮಾನ್ಯವಾಗಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಪ್ರಶ್ನೆಗಳು ಹಾಗೂ ಅದಕ್ಕೆ ಫೇಸ್‌ಬುಕ್‌ ತಂಡದ ತಜ್ಞರು ನೀಡಿರುವ ಉತ್ತರಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇಲ್ಲಿ ಕರೆ ಮಾಡಿ ಮಾಹಿತಿ ಪಡೆಯುವ ವ್ಯವಸ್ಥೆ ಇಲ್ಲವೇ ಇಲ್ಲ.

ಹಾಗೂ ಒಂದುವೇಳೆ ನೀವು ಮುಂದುವರಿದು ‘ಫೇಸ್‌ಬುಕ್‌ ಹೆಲ್ಪ್‌ ಲೈನ್‌ ನಂಬರ್‌’ ಎಂದು ಗೂಗಲ್‌ ಮಾಡಿದರೆ ಅಲ್ಲಿ ಒಂದಷ್ಟು ಜಾಲತಾಣಗಳು, ಅವುಗಳಲ್ಲಿ ಒಂದಷ್ಟು ದೂರವಾಣಿ ಸಂಖ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ದೂರವಾಣಿ ಸಂಖ್ಯೆಗಳು ನಿಜವಾಗಿ ಫೇಸ್‌ಬುಕ್‌ ತಂಡದ ಸಂಖ್ಯೆಗಳಲ್ಲ. ಒಂದು ವೇಳೆ ನೀವು ಈ ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಮಾಹಿತಿ ನೀಡಿದರೆ ನೀವು ಹಳ್ಳಕ್ಕೆ ಬಿದ್ದಿರೆಂದೇ ಅರ್ಥ.

ಫೇಸ್ ಬುಕ್‌ ತಂಡದವರೆಂದು ಹೇಳಿಕೊಂಡು ಸಹಾಯವಾಣಿ ಸಂಖ್ಯೆಗಳನ್ನು ನೀಡುವ ಈ ಇಂತಹ ಜಾಲಗಳು ಫೇಸ್‌ಬುಕ್‌ ಬಳಕೆದಾರರನ್ನು ಮೋಸ ಮಾಡುತ್ತವೆ. ಫೇಸ್‌ಬುಕ್‌ನ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆಂದು ಕರೆ ಮಾಡುವ ನೀವು ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ನೀವು ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಲು ಕರೆ ಮಾಡಿ ನಿಮ್ಮ ಖಾತೆಯ ವಿವರಗಳನ್ನೆಲ್ಲಾ ನೀಡಿದರೆ ಈ ಕುತಂತ್ರಿಗಳು ನೀವು ಕೊಟ್ಟ ಮಾಹಿತಿಯನ್ನು ಇಟ್ಟುಕೊಂಡು ನಿಮ್ಮ ಖಾತೆಯನ್ನು ಹ್ಯಾಕ್‌ ಮಾಡಬಹುದು. ನಿಮ್ಮ ಖಾತೆಯನ್ನು ಬ್ಲಾಕ್‌ ಮಾಡಿ, ರಿವೋಕ್‌ ಮಾಡಲು ನಿಮ್ಮಿಂದ ಹಣ ಕೇಳಬಹುದು. ನೀವು ಹಣ ನೀಡಲು ಒಪ್ಪದಿದ್ದರೆ ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗ ಪಡಿಸಬಹುದು. ನಿಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳಬಹುದು.

ಹಾಗಾದರೆ ಫೇಸ್‌ಬುಕ್‌ನಲ್ಲಿ ಸಮಸ್ಯೆ ಎದುರಾದರೆ ಮಾಡುವುದೇನು ಎಂದು ತಲೆ ಕೆಡಿಸಿಕೊಳ್ಳಬೇಡಿ. ಫೇಸ್‌ಬುಕ್‌ನ ಸಹಾಯವಾಣಿ ಸಂಖ್ಯೆಗಾಗಿ ಹುಡುಕಾಡುವ ಬದಲು ಯಾವ ಸಮಸ್ಯೆಗೆ ಹೇಗೆ ಪರಿಹಾರ ಎಂದು ಗೂಗಲ್‌ನಲ್ಲಿ ಕೇಳಿ.

ಗೂಗಲ್‌ ರಿಸಲ್ಟ್‌ನಲ್ಲಿ ಕಾಣುವ ಫೇಸ್‌ಬುಕ್‌ ಹೆಲ್ಪ್‌ ಸೆಂಟರ್‌ನ ರಿಸಲ್ಟ್‌ನಲ್ಲಿ ನಿಮ್ಮಂತೆಯೇ ಈ ಹಿಂದೆ ಸಮಸ್ಯೆ ಕಾಣಿಸಿಕೊಂಡವರಿಗೆ ಫೇಸ್‌ಬುಕ್‌ ತಂಡ ನೀಡಿರುವ ಉತ್ತರವನ್ನು ಪರಿಶೀಲಿಸಿ. ಅದರಂತೆ ಮುಂದುವರಿಯಿರಿ. ನಿಮ್ಮ ಸಮಸ್ಯೆ ಅದಕ್ಕಿಂತ ಭಿನ್ನವಾಗಿದ್ದರೆ ಆ ಪೇಜ್‌ನಲ್ಲಿ ಕಾಣುವ ಫೀಡ್‌ ಬ್ಯಾಕ್‌ ಆಯ್ಕೆಗಳಲ್ಲಿ ನಿಮ್ಮ ಸಮಸ್ಯೆಯನ್ನು ನಮೂದಿಸಿ ಸಬ್ಮಿಟ್‌ ಮಾಡಬಹುದು.

ಫೇಸ್‌ಬುಕ್‌ ನ community discussion ನಲ್ಲಿ ಈ ಹಿಂದೆ ಬಳಕೆದಾರರಿಗೆ ಎದುರಾಗಿರುವ ಹಲವು ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರದ ಪ್ರಶ್ನೋತ್ತರಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಈಗಾಗಲೇ ನೀಡಿರುವ ಪರಿಹಾರದ ಉತ್ತರಗಳು ಸಿಗುತ್ತವೆ. ಇಷ್ಟೆಲ್ಲಾ ಜಾಲಾಡಿಯೂ ನಿಮ್ಮ ಸಮಸ್ಯೆಗೆ ಸೂಕ್ತ ಉತ್ತರ ಸಿಗದಿದ್ದರೆ ನೀವು ಫೇಸ್‌ಬುಕ್ ಸೆಟ್ಟಿಂಗ್ಸ್‌ ಆಯ್ಕೆಗಳಲ್ಲಿ ಕಾಣುವ Report a problem ಆಯ್ಕೆಯ ಮೂಲಕ ನಿಮ್ಮ ಸಮಸ್ಯೆಯನ್ನು ಫೇಸ್‌ಬುಕ್‌ ತಂಡಕ್ಕೆ ಕಳಿಸಬಹುದು.

ನಿಮ್ಮ ಸಮಸ್ಯೆಯನ್ನು ವಿವರಿಸುವುದರ ಜತೆಗೆ ಅದರ ಸ್ಕ್ರೀನ್ ಷಾಟ್‌ ತೆಗೆದು ಅಟ್ಯಾಚ್‌ ಮಾಡಿ ಕಳಿಸಲು ಇಲ್ಲಿ ಅವಕಾಶವಿದೆ. ನಿಮ್ಮ ಸಮಸ್ಯೆ ಸ್ವೀಕರಿಸಿದನ್ನು ಖಚಿತಪಡಿಸುವ ಫೇಸ್‌ಬುಕ್‌ ತಜ್ಞರ ತಂಡ ಆದಷ್ಟು ಬೇಗ ಅದಕ್ಕೆ ಉತ್ತರ ನೀಡುತ್ತದೆ.

–ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry