ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ

ಗುರುವಾರ , ಜೂನ್ 27, 2019
26 °C

ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ

Published:
Updated:
ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಕೆಲ ಯೋಜನೆಗಳು ಹಾಗೂ ಸೌಲಭ್ಯಗಳು ನಿಷ್ಪ್ರಯೋಜಕವಾಗುತ್ತವೆ. ಇದಕ್ಕೆ ಪಟ್ಟಣ ಸಮೀಪ ಬುಕ್ಕಾಂಬುಧಿಯಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಉತ್ತಮ ಉದಾಹರಣೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಸಕರ ನಿಧಿ ಮತ್ತು ಗ್ರಾಮ ಪಂಚಾಯಿತಿ ಸ್ವಂತ ನಿಧಿಯಿಂದ ಸುಮಾರು ₹ 6 ಲಕ್ಷ ವೆಚ್ಚದಲ್ಲಿ 2014ರ ಸೆಪ್ಟೆಂಬರ್ 20ರಂದು ಪಂಚಾಯಿತಿ ಅಧ್ಯಕ್ಷೆ ಸಿ.ಎಸ್ ಸುಧಾ ಹಾಗೂ ಶಾಸಕ ಜಿ.ಎಚ್.ಶ್ರೀನಿವಾಸ್ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿದ್ದರು.

ಇದಾದ ಎರಡು ವರ್ಷಗಳ ಬಳಿಕ ಅಂದರೆ 2016 ರ ಆಗಸ್ಟ್‌ 15ರಂದು ಅಧ್ಯಕ್ಷೆ ಹಾಗೂ ಶಾಸಕರು ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಿದ್ದರು. ಆದರೆ, ಸಾರ್ವಜನಿಕ ಸೇವೆಗೆ ಮಾತ್ರ ಉದು ಲಭ್ಯವಾಗಿಲ್ಲ. ಅಂದಿನಿಂದಲೂ ಬಾಗಿಲಿಗೆ ಹಾಗೂ ಹೊರಗಿನ ತಂತಿ ಬೇಲಿ ಗೇಟ್‌ಗೆ ಬೀಗ ಹಾಕಲಾಗಿದೆ.

ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕ ಶೌಚಾಲಯಕ್ಕೆ ಹಾಕಲಾಗಿರುವ ಬೀಗವನ್ನು ಈವರೆಗೂ ತೆರವುಗೊಳಿಸಿಲ್ಲ. ಇದರಿಂದಾಗಿ ದಿನನಿತ್ಯ ವಿವಿಧ ಕಡೆ ಸಾಗಲು ಬಸ್ ನಿಲ್ದಾಣಕ್ಕೆ ಬರುವ ಪುರುಷ ಮತ್ತು ಮಹಿಳಾ ಪ್ರಯಾಣಿಕರು ಶೌಚಾಲಯವಿಲ್ಲದೇ ತೊಂದರೆಗೊಳಗಾಗಿದ್ದಾರೆ. ಅನೇಕ ಪ್ರಯಾಣಿಕರು ಬಯಲು ಶೌಚಾಲಯನ್ನೇ ಆಶ್ರಯಿಸುವಂತಾಗಿದೆ.

ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಹಣ ನೀಡುತ್ತಿದೆ. ಇನ್ನು ಬಯಲು ಮುಕ್ತ ಜಿಲ್ಲೆಯನ್ನು ಘೋಷಿಸಲು ಜಿಲ್ಲಾಡಳಿತ ಪ್ರತೀ ಮನೆ ಮನೆಗೂ ತೆರಳಿ ಜಾಗೃತಿ ಮೂಲಕ ಶೌಚಾಲಯ ಹೊಂದುವಂತೆ ಪ್ರೇರೇಪಿಸಲು ಸ್ಥಳೀಯ ಪಂಚಾಯಿತಿ ಜನಪ್ರತಿನಿಧಿ, ಅಧಿಕಾರಿಗಳಿಗೆ ಸೂಚಿಸಿದೆ. ಅದರಂತೆ ಕಾರ್ಯೋನ್ಮುಖವಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಮಾಣವಾಗಿರುವ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸದಿರುವುದು ದುರಾದೃಷ್ಟಕರ.

ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ನಿರ್ವಹಣೆಯನ್ನು ದಾವಣಗೆರೆಯ ಸುಭಾಶ್ ಬಾತ್ ರೂಮ್ ಏಜೆನ್ಸಿಗೆ ವಹಿಸಲಾಗಿದೆ. ಸ್ಥಳೀಯ ಸದಸ್ಯರ ನಾಮಫಲಕ ಅಳವಡಿಕೆ ಬಳಿಕ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಲಾಗುವುದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ವರಪ್ಪ.

ಕೂಡಲೇ ಗ್ರಾಮದ ಬಸ್‌ ನಿಲ್ದಾಣ ಸಮೀಪವೇ ಇರುವ ಸಾರ್ವಜನಿಕ ಶೌಚಾಲಯದ ಬೀಗ ತೆರವುಗೊಳಿಸಿ, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತ ಸ್ಥಳೀಯ ಪಂಚಾಯಿತಿಗೆ ಆದೇಶಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry