ಶನಿವಾರ, ಸೆಪ್ಟೆಂಬರ್ 21, 2019
24 °C

ಅಮೆರಿಕ–ಅಫ್ಗಾನಿಸ್ತಾನ ಸೇನೆ ಜಂಟಿ ಕಾರ್ಯಾಚರಣೆ: 22 ಪಾಕಿಸ್ತಾನಿ ಐಎಸ್‌ ಉಗ್ರರ ಹತ್ಯೆ

Published:
Updated:
ಅಮೆರಿಕ–ಅಫ್ಗಾನಿಸ್ತಾನ ಸೇನೆ ಜಂಟಿ ಕಾರ್ಯಾಚರಣೆ: 22 ಪಾಕಿಸ್ತಾನಿ ಐಎಸ್‌ ಉಗ್ರರ ಹತ್ಯೆ

ಕಾಬೂಲ್‌: ಅಮೆರಿಕ ಮತ್ತು ಅಫ್ಗಾನಿಸ್ತಾನ ಸೇನೆ ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದ್ದು, ಪಾಕಿಸ್ತಾನ ಮತ್ತು ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಸಂಘಟನೆಗೆ ಸೇರಿಗೆ 22 ಉಗ್ರರನ್ನು ಹೊಡೆದುರುಳಿಸಿವೆ.

ಅಫ್ಗಾನಿಸ್ತಾನದ ಪೂರ್ವ ನಂಗಾಹಾರ್‌ ಪ್ರಾಂತ್ಯದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಐಎಸ್‌ಗೆ ಸೇರಿದ 22 ಉಗ್ರರನ್ನು ಹತ್ಯೆ ಮಾಡಲಾಗಿದೆ. ನಾಜಿಯಾನ್ ಮತ್ತು ಲಾಲ್ಪುರ್ ಜಿಲ್ಲೆಗಳಲ್ಲಿ ಉಗ್ರರು ಹತ್ಯೆಯಾಗಿದ್ದಾರೆ ಎಂದು ಅಫ್ಗಾನಿಸ್ತಾನದ ಪ್ರಾಂತೀಯ ಸರ್ಕಾರಿ ಮಾಧ್ಯಮ ಕಚೇರಿಯನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

ಲಾಲ್ಪುರ್ ಜಿಲ್ಲೆಯ ಬಿಲಾ ಪ್ರದೇಶದಲ್ಲಿ ಅಫ್ಗಾನ್‌ನ ವಿಶೇಷ ಪಡೆ ನಡೆಸಿದ ದಾಳಿಯಲ್ಲಿ ಏಳು ಪಾಕಿಸ್ತಾನಿ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ನಾಝಿನ್ ಜಿಲ್ಲೆಯ ಸ್ಪಿನ್ಝೈ ಪ್ರದೇಶದಲ್ಲಿ ಅಮೆರಿಕದ ಪಡೆ ನಡೆಸಿದ ವಾಯುಪಡೆ ದಾಳಿಯಲ್ಲಿ ಹದಿನೈದು ಐಎಸ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ವಾಯುಪಡೆ ದಾಳಿಯಲ್ಲಿ ಐಎಸ್ ಸಂಘಟನೆಯ ಎರಡು ಅಡಗುತಾಣಗಳು ಕೂಡ ನಾಶವಾಗಿವೆ ಎಂದು ವರದಿಯಾಗಿದೆ.

ನಂಗಾಹಾರ್‌ ಪ್ರಾಂತ್ಯದಲ್ಲಿರುವ ಉಗ್ರರನ್ನು ಮಟ್ಟಹಾಕಲು ಐಎಸ್ ವಿರುದ್ಧ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಕಾರ್ಯಾಕ್ಕೆ ಅಫ್ಗಾನಿಸ್ತಾನ ಪಡೆಗಳಿಗೆ ಅಮೆರಿಕ ವೈಮಾನಿಕ ಬೆಂಬಲ ಒದಗಿಸುತ್ತಿದೆ.

Post Comments (+)