ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಭರ್ಜರಿ ಮಳೆ

Last Updated 1 ಅಕ್ಟೋಬರ್ 2017, 7:00 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರ, ಮುಂಡರಗಿ, ಡಂಬಳ, ನರೇಗಲ್, ರೋಣದಲ್ಲಿ ಶುಕ್ರವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಗದುಗಿನಲ್ಲಿ ಶನಿವಾರ ಸಂಜೆ ಕೂಡ ಒಂದು ಗಂಟೆ ಕಾಲ ಭರ್ಜರಿ ಮಳೆಯಾಗಿದೆ. 

ಕೊಚ್ಚಿ ಹೋದ ಗುಡಿಸಲುಗಳು
ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಹಾಗೂ ಶನಿವಾರ ಭಾರಿ ಮಳೆಯಾಗಿದೆ. ಶನಿವಾರ ಬೆಳಗಿನಜಾವ ಹಿರೇಹಳ್ಳ ತುಂಬಿ ಹರಿದಿದ್ದು, ಹಳ್ಳ ದಂಡೆಯ ಮೇಲೆ ಇದ್ದ 15ಕ್ಕೂ ಹೆಚ್ಚು ಗುಡಿಸಲುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ಕೊರವರ ಸಮುದಾಯದ ಕುಟುಂಬಗಳು ಹಳ್ಳದ ದಂಡೆಯ ಮೇಲೆ ಹಲವು ವರ್ಷಗಳ ಹಿಂದೆ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಗುಡಿಸಲುಗಳು ಕೊಚ್ಚಿಕೊಂಡು ಹೋಗಿವೆ’ ಎಂದು ಗುಡಸಲು ನಿವಾಸಿ ಹನುಮಂತಪ್ಪ ಕೊರವರ ತಿಳಿಸಿದರು.

ಗುಡಿಸಲಿನಲ್ಲಿ ವಾಸುತ್ತಿದ್ದ ಗಂಗಪ್ಪ ಕೊರವರ, ಗಾಳೆಪ್ಪ ಕೊರವರ, ಹನುಮಂತಪ್ಪ ಕೊರವರ, ನಿಂಗಪ್ಪ ಕೊರವರ, ಲಕ್ಷ್ಮಣ ಕೊರವರ, ಗಾಳೆಪ್ಪ ಮಳ್ಡಿ, ದುರುಗಪ್ಪ ತಳವಾರ, ದ್ಯಾಮಪ್ಪ, ಯಲ್ಲಪ್ಪ, ಮಂಜುನಾಥ, ಮಹೇಶ ಸೇರಿದಂತೆ ಹಲವು ನಿವಾಸಿಗಳ ಬದುಕು ಬೀದಿ ಪಾಲಾಗಿದ್ದಾರೆ. ಕಂದಾಯ ನಿರೀಕ್ಷಕ ಎಂ.ಎ.ನದಾಫ್ ಹಾಗೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾರಿ ಮಳೆಯಿಂದ ಪಟ್ಟಣದ ಅಂಬೇಡ್ಕರ್ ನಗರ, ಗೊಂದಳಿ ಓಣಿ, ಕಡ್ಲಿಪೇಟೆ, ಕೋಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಕುಸಿದಿವೆ. ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಪಾದಚಾರಿಗಳು ಹಾಗೂ ವಾಹನ ಸವಾರರು ರಸ್ತೆ ಸಂಚಾರಕ್ಕೆ ಪಡುತ್ತಿದ್ದಾರೆ. ಮಳೆಯಿಂದಾಗಿ ದಸರಾ ಹಾಗೂ ಮೂಹರಂ ಹಬ್ಬ ಆಚರಣೆಗೆ ತೀವ್ರ ತೊಂದರೆಯಾಯಿತು.

‘ಹಳ್ಳದ ದಂಡೆಯ ಮೇಲೆ ಮನೆಗಳನ್ನು ನಿರ್ಮಿಸಿಕೊಂಡಿದ್ದ ನಿವಾಸಿಗಳ ಗುಡಿಸಲುಗಳೆಲ್ಲ ನೀರಿ ನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. ಶೀಘ್ರವೇ ಸೂಕ್ತ ಪರಿಹಾರ ನೀಡಬೇಕು’ ಎಂದು ಕೃಷ್ಣ ಕೊಪ್ಪಳ ಒತ್ತಾಯಿಸಿದರು.

ಉತ್ತಮ ಮಳೆ
ನರೇಗಲ್: ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ಮೂರು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಶನಿವಾರ ಬೆಳಿಗ್ಗೆ 5 ಗಂಟೆವರೆಗೆ ತುಂತು ಮಳೆಯಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸಮೀಪದ ಅಬ್ಬಿಗೇರಿ ಗ್ರಾಮದ ಕೆಂಪ ಕೆರೆ, ಕೋಡಿಕೊಪ್ಪದ ಕೆರೆ, ಮಾರನಬಸರಿಯ ಕೆರೆ, ನಿಡಗುಂದಿಯ ಕೆರೆ ಹಾಗೂ ನಾಗರ ಕೆರೆಗೆ ತುಂಬಿ ಹರಿದಿದೆ. ಪಟ್ಟಣದ 6ನೇ ವಾರ್ಡ್‌ನಲ್ಲಿರುವ ಮಣ್ಣಿನ ಮನೆಯೊಂದು ಕುಸಿದು ಬಿದ್ದಿದೆ.

ಹಲವು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ಸಮೀಪದ ಅಬ್ಬಿಗೇರಿ ಗ್ರಾಮದ ಕೆಂಪ ಕೆರೆ, ಕೋಡಿಕೊಪ್ಪ ಕೆರೆ, ಮಾರನಬಸರಿ ಕೆರೆ, ನಿಡಗುಂದಿ ಕೆರೆ ಹಾಗೂ ಪಟ್ಟಣದ ನಾಗರ ಕೆರೆಗೆ ನೀರು ಹರಿದು ಬಂದಿದೆ. ಹಲವು ವರ್ಷಗಳ ನಂತರ ಹೋಬಳಿ ವ್ಯಾಪ್ತಿಯ ಹಲವು ಕೆರೆಗಳು ಭರ್ತಿ ಆಗಿದ್ದು, ಅಂತರ್ಜಲ ಮಟ್ಟ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ನಾಗರಿಕರು ಸಂತಸಗೊಂಡಿದ್ದಾರೆ.

ತುಂಬಿ ಹರಿದ ಬೆಣ್ಣೆಹಳ್ಳ
ಬೆಳವಣಿಕಿ (ರೋಣ ತಾ.): ಸಮೀಪದ ಬೆಣ್ಣೆಹಳ್ಳ ತುಂಬಿ ಹರಿದಿದ್ದರಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಉಳ್ಳಗಡ್ಡಿ, ಹತ್ತಿ, ಶೇಂಗಾ, ಮೆಣಸಿಕಾಯಿ ಬೆಳೆಗಳು ಹಾನಿಯಾಗಿವೆ. ಹಳ್ಳದ ಸಮೀಪದ ಜಮೀನಿನಲ್ಲಿರುವ ಹಂಪ್‌ಸೆಟ್‌ಗಳು ಕೊಚ್ಚಿಕೊಂಡು ಹೋಗಿವೆ. ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಡಂಬಳದಲ್ಲಿ ಬೆಳೆಹಾನಿ
ಡಂಬಳ: ಗ್ರಾಮದಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದ್ದರಿಂದ ಸೂರ್ಯಕಾಂತಿ, ಹತ್ತಿ ಬೆಳೆಗಳು ಹಾನಿಯಾಗಿವೆ. ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಜಮೀನಿನಲ್ಲಿ ನೀರು ನಿಂತಿದೆ. ಪರಿಣಾಮ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಹೋಬಳಿ ವ್ಯಾಪ್ತಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಚೆಕ್‌ ಡ್ಯಾಂ, ಕೆರೆಗಳು, ಕೃಷಿ ಹೊಂಡ ಭರ್ತಿಯಾಗಿವೆ.

ಹೋಬಳಿಯ ಮೇವುಂಡಿ, ಜಂತ್ಲಿಶಿರೂರ, ಶಿಂಗಟಾಲೂರ, ಮುರಡಿ, ಹಾರೂಗೇರಿ, ಕದಾಂಪುರ, ಹಿರೇವಡ್ಡಟ್ಟಿ. ವೆಂಕಟಾಪುರ, ಯಕ್ಲಾಸಪುರ, ಹಳ್ಳಿಕೇರಿ, ಬರದ್ದೂರ, ಗುಡ್ಡದಬೂದಿಹಾಳ, ಚಿಕ್ಕವಡ್ಡಟ್ಟಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT