ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ, ಜಲ ಮರುಪೂರಣಕ್ಕೆ ಮಹತ್ವ ನೀಡಿದ ಶಿಬಿರ

Last Updated 1 ಅಕ್ಟೋಬರ್ 2017, 7:12 IST
ಅಕ್ಷರ ಗಾತ್ರ

ಹಳೇಬೀಡು: ಮಳೆ ಕೊರತೆ, ಕುಸಿದ ಅಂತರ್ಜಲ ಹಾಗೂ ಕೃಷಿ ಪೂರಕ ವಾತಾವರಣದ ಕೊರತೆಯಿಂದ ರೈತರು ತತ್ತರಿಸಿರುವ ಕಾಲದಲ್ಲಿ ಹಾಸನ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಬೇಲೂರು ತಾಲ್ಲೂಕಿನ 6 ಗ್ರಾಮದಲ್ಲಿ 90 ದಿನಗಳ ಕಾಲ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ನಡೆಸಿ ರೈತರಲ್ಲಿ ಬೇಸಾಯದ ಬಗ್ಗೆ ಆಸಕ್ತಿ ಬೆಳೆಸಿತು.

ಕೃಷಿ ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಕೃಷಿ ಮಹತ್ವ ವಿವರಿಸಿದರು. ಅಡಗೂರು, ಸಂಪಿಗೆಮರದಕೊಪ್ಪಲು, ಮಲಯಪ್ಪನಕೊಪ್ಪಲು, ಕನಕೇನಹಳ್ಳಿ, ಗೊರೂರು, ಅಂದಾಲೆ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ರಾತ್ರಿ ವೇಳೆ ರೈತರೊಂದಿಗೆ ಆರೋಗ್ಯಕರ ಚರ್ಚೆ ನಡೆಸಿ ಕೃಷಿ ತಾಂತ್ರಿಕತೆ ಕುರಿತು ಮನವರಿಕೆ ಮಾಡಿದರು. ಕೃಷಿ, ಅರಣ್ಯ, ತೋಟಗಾರಿಕೆ, ಕೀಟಶಾಸ್ತ್ರ ಮೊದಲಾದ ವಿಚಾರಗಳ ತಜ್ಞರಿಂದ ಪ್ರತಿದಿನ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಸಹ ರೈತರಿಂದ ಕೃಷಿ ಮಾಹಿತಿ ಸಂಗ್ರಹಿಸಿದರು. ಕೃಷಿ ಭೂಮಿ ಹಾಗೂ ಗ್ರಾಮದ ಪ್ರಮುಖ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಿ ಪ್ರಾಯೋಗಿಕ ಜ್ಞಾನ ಪಡೆದ ವಿದ್ಯಾರ್ಥಿಗಳು ರೈತರಿಗೂ ಸಲಹೆ ನೀಡಿದರು ಎನ್ನುತ್ತಾರೆ ಚಂದ್ರಪ್ರಭ.

ಶಿಬಿರಗಳಲ್ಲಿ ತೆರದಿದ್ದ ಮಾಹಿತಿ ಕೇಂದ್ರವನ್ನು ರೈತರು ವಿಕ್ಷಿಸಿ ಮಾಹಿತಿ ಸಂಗ್ರಹಿಸಿದರು. ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಜಂಟಿ ಕೃಷಿ ನಿರ್ದೇಶಕ ಡಾ.ಟಿ.ರಾಮಚಂದ್ರಯ್ಯ ಹಾಗೂ ಸಹಾಯಕ ನಿರ್ದೇಶಕ ಭಾನುಪ್ರಕಾಶ್‌ ಅಡಗೂರು ಮಾಹಿತಿ ಕೇಂದ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ಎಂದು ವಿದ್ಯಾರ್ಥಿಗಳು ತಿಳಿಸಿದರು.

ನೀರಿನ ಕೊರತೆ ನಿಗೀಸಲು ಮಳೆ ನೀರು ಸಂಗ್ರಹ ಅತ್ಯುತ್ತಮ ವಿಧಾನ. ಅಂತರ್ಜಲ ಹೆಚ್ಚಿಸಲು ಕೊಳವೆ ಬಾವಿಗೆ ಇಂಗುಗುಂಡಿ ನಿರ್ಮಿಸಿ ಜಲಮರುಪೂರಣ ಮಾಡಬೇಕು ಎಂದು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಅರಣ್ಯಾಧಾರಿತ ಕೃಷಿಯಿಂದಾಗಿ ಭೂಮಿ ಫಲವತ್ತಾಗಿರುವುದರೊಂದಿಗೆ ಅಂತರ್ಜಲ ಕಾಪಾಡಿದಂತಾಗುತ್ತದೆ. ಕೃಷಿಯಲ್ಲಿ ತಾಂತ್ರಿಕತೆ ಬಳಸಿಕೊಳ್ಳುವುದರೊಂದಿಗೆ ಸುಧಾರಿತ ತಳಿಯ ಬೆಳೆ ತೆಗೆಯುವುದರಿಮದ ಉತ್ತಮ ಫಸಲು ತೆಗೆಯಬಹುದು.

ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣ ಹಾಗೂ ರಿಯಾಯಿತಿ ದರದ ಬಿತ್ತನೆ ಬೀಜವನ್ನು ಸರ್ಕಾರ ನೀಡುತ್ತಿದೆ, ಕೃಷಿ, ತೋಟಗಾರಿಕೆ ಮೊದಲಾದ ಕೃಷಿ ಪೂರಕ ಇಲಾಖೆಗಳಿಂದಲೂ ರೈತರಿಗೆ ಸೌಲಭ್ಯಗಳಿವೆ. ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ನೀಡಿದ ಸಲಹೆ ಅತ್ಯುಪಯುಕ್ತವಾಗಿದ್ದವು ಎನ್ನುತ್ತಾರೆ ರೈತ ಚಂದ್ರೇಗೌಡ.

ಕೃಷಿ ಕಾಲೇಜಿನ ಡೀನ್‌ ಡಾ.ಎನ್‌.ದೇವಕುಮಾರ್‌ ಸಲಹೆ–ಸಹಕಾರದೊಂದಿಗೆ ಪ್ರಾಧ್ಯಾಪಕರಾದ ಡಾ.ಜಿ.ನಾಗೇಶ್‌ ಶಿಬಿರಗಳ ಸಂಯೋಜಕರಾಗಿದ್ದರು. ಸಹ ಸಂಯೋಜಕರಾಗಿ ಡಾ.ಎಂ.ಎಚ್.ಮಂಜುನಾಥ್, ಡಾ.ಎಚ್‌.ಸಿ.ಗಿರೀಶ್‌, ಡಾ.ಅರವಿಂದ ಕುಮಾರ್‌, ಡಾ.ಶಿವಬಸಪ್ಪ, ಡಾ.ಅನಂತಕುಮಾರ್‌ ಹಾಗೂ ರಮ್ಯಾ ವಿದ್ಯಾರ್ಥಿಗಳಿಗೆ ಬೆನ್ನುಲುಬಾಗಿ ದುಡಿದರು.

ಬಿ.ಎಸ್‌.ಎಸ್‌ (ಕೃಷಿ) ವಿಭಾಗದ 76 ವಿದ್ಯಾರ್ಥಿಗಳಿಗೆ 90 ದಿನ, ಬಿ.ಎಸ್‌.ಎಸಿ(ಜೈವಿಕ ತಂತ್ರಜ್ಞಾನ) ವಿಭಾಗದ 52 ವಿದ್ಯಾರ್ಥಿಗಳಿಗೆ 10 ದಿನ, ಬಿ.ಟೆಕ್‌ (ಆಹಾರ ವಿಜ್ಞಾನ) ವಿಭಾಗದ 56 ವಿದ್ಯಾರ್ಥಿಗಳಿಗೆ 30 ದಿನ ಶಿಬಿರ ಆಯೋಜಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT