ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಂಡಿ ಬಲೆಗೆ ಬಿದ್ದ ಭರಪೂರ ಮೀನು

Last Updated 1 ಅಕ್ಟೋಬರ್ 2017, 8:41 IST
ಅಕ್ಷರ ಗಾತ್ರ

ಕಾರವಾರ (ಉತ್ತರ ಕನ್ನಡ): ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಏಂಡಿ ಬಲೆಗೆ ಭರಪೂರ ಮೀನುಗಳು ಬಿದ್ದಿದ್ದು, ಸಾಂಪ್ರದಾಯಿಕ ಮೀನುಗಾರರ ಪಾಲಿಗೆ ದಸರೆಯ ಬೋನಸ್‌ ಸಿಕ್ಕಿದೆ.

ಮೀನುಗಳ ಗುಂಪು ತೀರದತ್ತ ಬಂದಿರುವುದನ್ನು ಅರಿತ ಮೀನುಗಾರರು ಬೆಳಿಗ್ಗೆಯೇ ಏಂಡಿ ಬಲೆ ಹಾಕಿದ್ದರು. ಆದರೆ, ಆ ಬಲೆಯನ್ನು ಎಳೆದುತರುವ ಮುನ್ನವೇ ರಾಶಿ ರಾಶಿ ಮೀನುಗಳು ತೀರಕ್ಕೆ ಬಂದು ಬಿದ್ದಿದ್ದು, ಮೀನುಗಾರರಲ್ಲಿ ಮೊಗದಲ್ಲಿ ಹರ್ಷ ಮೂಡಿಸಿತು.

ತರಹೇವಾರಿ ಮೀನು: ಲೆಪ್ಪೆ, ಬಣಗು, ನೊಗ್ಲಿ, ಸೌಂದಾಳೆ, ಬೆಣಕೆ, ಸೀಗಡಿ (ಶೆಟ್ಲಿ), ಬನಾಸೆ, ಪೇಡಿ, ಸಣ್ಣ ಕೊಕ್ಕರೆ, ದೊಡ್ಡ ಕೊಕ್ಕರೆ, ಏಡಿ, ಪಾಪ್ಲೆಟ್‌... ಹೀಗೆ ಬಲೆಗೆ ಬಿದ್ದಿದ್ದ ನಾನಾ ಪ್ರಭೇದದ ಮೀನುಗಳನ್ನು ತೀರದ ಸಮೀಪ ರಾಶಿ ಹಾಕಲಾಯಿತು. ಅವುಗಳನ್ನು ಉತ್ತಮವಾದುವುಗಳನ್ನು ಆಯ್ದು ವಾಹನದ ಮೂಲಕ ಮಾರುಕಟ್ಟೆಗೆ ಕೊಂಡೊಯ್ಯಲಾಯಿತು. ತಿನ್ನಲು ಯೋಗ್ಯವಲ್ಲದ ಮೀನನ್ನು ಫಿಶ್‌ಮಿಲ್‌ಗೆ ರವಾನಿಸಲಾಯಿತು.

ಜನಜಂಗುಳಿ: ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಜನರು ಸ್ಥಳಕ್ಕೆ ದಾಂಗುಡಿ ಇಟ್ಟರು. ತೀರದಲ್ಲಿ ಬಿದ್ದ ಮೀನಿನ ರಾಶಿಯಲ್ಲಿ ಚೆನ್ನಾಗಿರುವುದನ್ನು ಆಯ್ದು ಚೀಲಕ್ಕೆ ತುಂಬಿಕೊಂಡರು. ಜನರನ್ನು ನಿಯಂತ್ರಿಸಲು ಮೀನುಗಾರರು ಹರಸಾಹಸಪಟ್ಟರು. ಮೀನುಗಾರರು ತಮ್ಮ ಪರಿಚಯಸ್ಥರಿಗೆ ಸ್ವತಃ ಕರೆದು ಬೊಗಸೆಗಟ್ಟಲೇ ನೀಡಿದರು. ಇನ್ನು ಕೆಲವರು ಹಣ ನೀಡಿ ಖರೀದಿಸಿದರು. ರಾತ್ರಿಯಾದರೂ ಮೀನನ್ನು ವಾಹನಕ್ಕೆ ತುಂಬುವ ಕಾರ್ಯ ಮುಂದುವರಿದಿತ್ತು.

ಅಪರೂಪ: ‘ಏಂಡಿ ಬಲೆಗೆ ಭರಪೂರ ಮೀನು ಬಿದ್ದಿರುವುದು ಅಪರೂಪ. ಸುಮಾರು 15 ವರ್ಷಗಳ ಹಿಂದೆ ಸಾಂಪ್ರದಾಯಿಕ ಮೀನುಗಾರರಿಗೆ ಈ ರೀತಿ ಬಂಪರ್‌ ಮೀನು ದೊರೆತಿತ್ತು. ಬಲೆಯನ್ನು ಎಳೆದು ತರುವಾಗ ನೀರಿನ ಉಬ್ಬರ ಕಡಿಮೆಯಾಗಿದ್ದರಿಂದ ಮೀನುಗಳಿಗೆ ಉಸಿರಾಟದ ಸಮಸ್ಯೆಯಾಗಿ ತೀರಕ್ಕೆ ಬಂದು ಬಿದ್ದಿದ್ದು, ಸುಮಾರು ₹ 5–6 ಲಕ್ಷ ಮೌಲ್ಯದ ಮೀನು ದೊರೆತಿವೆ’ ಎಂದು ಮೀನುಗಾರ ಪಾಂಡುರಂಗ ಹರಿಕಂತ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT