ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರುಗು ತುಂಬಿದ ಕಲಾತಂಡಗಳು

Last Updated 1 ಅಕ್ಟೋಬರ್ 2017, 9:26 IST
ಅಕ್ಷರ ಗಾತ್ರ

ಮೈಸೂರು: ನಗಾರಿ, ಡೋಲು, ತಮಟೆಯಿಂದ ಹೊರಹೊಮ್ಮುತ್ತಿದ್ದ ನಾದ ಜನರ ಎದೆಬಡಿತ ಹೆಚ್ಚಿಸಿದರೆ, ಕೊಂಬು ಕಹಳೆಯ ಸದ್ದು ಎಲ್ಲರ ಮೈನವಿರೇಳಿಸುವಂತೆ ಮಾಡಿತು. ಓಹ್‌... ಎಂಬ ಉದ್ಗಾರ ಪ್ರೇಕ್ಷಕರ ಕಡೆಯಿಂದ ಆಗಾಗ ಕೇಳಿಬಂದವು.

ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾಗಿರುವ ಕಲಾವಿದರ ತಂಡಗಳು ನೀಡಿದ ಪ್ರದರ್ಶನ ಅರಮನೆಯ ಆವರಣ ಮತ್ತು ಮೆರವಣಿಗೆ ಹಾದಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮನಸೂರೆಗೊಂಡವು.

ಕರ್ನಾಟಕದ ಶ್ರೀಮಂತ ಸಂಸ್ಕೃತಿಯು ಅಲ್ಲಿ ಒಂದೊಂದಾಗಿ ಅನಾವಣರಗೊಂಡಿತು. ಹಾದಿಯುದ್ದಕ್ಕೂ ನೆರೆದ ಜನರು ಪುಳಕಗೊಂಡರು, ಚಪ್ಪಾಳೆ ತಟ್ಟಿದರು, ಕುಣಿದು ಕುಪ್ಪಳಿಸಿದರು. ಕಲಾವಿದರ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಈ ಬಾರಿಯ ದಸರಾ ಮೆರವಣಿಗೆ ನೋಡಿದವರಿಗೆ ಒಂದಲ್ಲ, ಎರಡಲ್ಲ, ಐವತ್ತಕ್ಕೂ ಅಧಿಕ ಕಲಾ ಪ್ರಕಾರಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಿತು. ಮೊದಲ ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿದ ಬುಡುಬಡುಕೆಯವರು, ಅಸಲರು, ಮಲೆಕುಡಿಯ ಕಲಾವಿದರು ಮೆರವಣಿಗೆಯ ವೈವಿಧ್ಯ ಹೆಚ್ಚಿಸಿದರು.

ಮೈಸೂರಿನ ವೀರಗಾಸೆ ತಂಡ, ಪೊಲೀಸ್‌ ಇಲಾಖೆಯ ವಾದ್ಯವೃಂದ, ಕೊಂಬು ಕಹಳೆ ಕಲಾವಿದರು ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು. ಆ ಬಳಿಕ ಸ್ತಬ್ಧಚಿತ್ರಗಳ ನಡುವೆ ಒಂದೊಂದೇ ಕಲಾತಂಡಗಳು ತಮ್ಮ ಕಲೆಯನ್ನು ಅನಾವರಣಗೊಳಿಸುತ್ತಾ ಸಾಗಿದವು. ಹಳದಿ, ಬಿಳಿ ಮತ್ತು ನಸುಗೆಂಪು ಬಣ್ಣದ ಸಮವಸ್ತ್ರ ತೊಟ್ಟಿದ್ದ ಚಿತ್ರದುರ್ಗ, ಮಂಡ್ಯ ಮತ್ತು ತುಮಕೂರಿನ ಕಲಾವಿದರು ಕೊಂಬು ಕಹಳೆ ಊದಿ ಅಲ್ಲಿದ್ದವರಿಗೆ ಸ್ಫೂರ್ತಿ ತುಂಬಿದರು.

ಡೊಳ್ಳುಕುಣಿತ ಮತ್ತು ಮೈಸೂರಿನ ಮಂಜುನಾಥ್‌ ನೇತೃತ್ವದ ನಗಾರಿ ತಂಡ ಮೆರವಣಿಗೆಯಲ್ಲಿ ಸಾಗಿದಾಗ ರೋಮಾಂಚನಗೊಳ್ಳದವರೇ ಇಲ್ಲ. ಹಲವರು ಸಿಳ್ಳೆ, ಕೇಕೆ ಹಾಕಿದರು. ಮಂಜುನಾಥ್‌, ಶಂಕರಮಣಿ, ದಿನೇಶಕುಮಾರ್‌, ಸುನೀಲಕುಮಾರ್‌ ಅವರ ತಂಡಗಳು ಹಾಗೂ ಕತ್ತಿಮುನೇಶ್ವರ ಯುವಕರ ಕಲಾ ತಂಡ, ಮೂಕಾಂಬಿಕಾ ತಂಡಗಳಿಗೆ ಈ ಬಾರಿ ಅವಕಾಶ ದೊರೆತವು.

ಹತ್ತಾರು ನಗಾರಿಗಳನ್ನು ಒಟ್ಟಾಗಿ ಲಯ ಮತ್ತು ತಾಳಬದ್ಧವಾಗಿ ಬಡಿದಾಗ ಹೊರಹೊಮ್ಮುವ ನಾದಕ್ಕೆ ಎಲ್ಲರೂ ತಲೆದೂಗಿದರು. ನಗಾರಿ ಕಲಾವಿದರು ತಲೆಗೂದಲನ್ನು ಮೇಲೆ ಕೆಳಕ್ಕೆ ಹಾರಿಸುತ್ತಾ ತಮ್ಮದೇ ಶೈಲಿಯಲ್ಲಿ ಮನರಂಜನೆ ನೀಡಿದರು. ಡೊಳ್ಳುಕುಣಿತದಲ್ಲಿ ಪಾಲ್ಗೊಂಡ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಮತ್ತು ಯಾದಗಿರಿಯ ಕಲಾವಿದರು ಗಾಢ ಹಳದಿ ಬಣ್ಣದ ಮುಂಡಾಸು ಧರಿಸಿ ಕಂಗೊಳಿಸುತ್ತಿದ್ದರು.

ಬೆಳಗಾವಿ ಮತ್ತು ಧಾರವಾಡದ ಕಲಾವಿದರು ಜಗ್ಗಲಗಿ ಮೇಳದ ಮೂಲಕ ಗಮನ ಸೆಳೆದರು. ಎತ್ತಿನಗಾಡಿಯ ಚಕ್ರದಷ್ಟೇ ಗಾತ್ರದ ಜಗ್ಗಲಿಗೆ ಬಾರಿಸಿದ ಕಲಾವಿದರು, ಅದರ ಮೇಲೇರಿ ನಿಂತು ಪ್ರದರ್ಶನ ನೀಡಿದರು. ಝಾಂಜ್ ಪಥಕ್‌. ಚೆಂಡೆ ಮೇಳದ ಕಲಾ ತಂಡಗಳೂ ಇದ್ದವು. ಝಾಂಜ್ ಪಥಕ್‌ ತಂಡದವರು ಬೃಹತ್‌ ಗಾತ್ರದ ಕನ್ನಡದ ಧ್ವಜ ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆದರು. ಲಯಕ್ಕೆ ತಕ್ಕಂತೆ ಕುಣಿದು, ಪಿರಮಿಡ್‌ ನಿರ್ಮಿಸುತ್ತಾ ಮುನ್ನಡೆದರು.

ಸ್ಕೌಟ್‌ ಮತ್ತು ಗೈಡ್ ತಂಡ ಶಿಸ್ತಿನಿಂದ ಹೆಜ್ಜೆ ಹಾಕಿದರೆ, ಶಿವಮೊಗ್ಗ ಜಿಲ್ಲೆಯ ಗೊಂಡರಾದ ಸಂಕಯ್ಯ ಮತ್ತು ತಂಡ ಡಕ್ಕೆಯೊಂದಿಗೆ ಕುಣಿದರೆ, ಚಿಕ್ಕಮಗಳೂರಿನ ಎಲ್‌.ಎನ್‌. ಅರುಣಕುಮಾರ್‌ ತಂಡದವರು ಅಸಾದಿ ತಮಟೆ ಬಾರಿಸಿದರು.

ಪಟ ಕುಣಿತದ ಕಲಾವಿದರು ಬಣ್ಣಬಣ್ಣದ ಬಟ್ಟೆಯನ್ನು ಸುತ್ತಿದ 15ರಿಂದ 20 ಅಡಿ ಎತ್ತರದ ಬಿದಿರಿನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ವಾದ್ಯದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಉಡುಪಿಯ ಗಣೇಶ ಮತ್ತು ತಂಡದವರ ಕೊರಗರ ಡೋಲು ಪ್ರದರ್ಶನವು ಸಮಾಜದ ಅತ್ಯಂತ ತಳಮಟ್ಟದ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಕಲೆಯನ್ನು ಅನಾವರಣಗೊಳಿಸಿತು.

ಬೀಸು ಕಂಸಾಳೆ, ಯಕ್ಷಗಾನ, ಮಲೆನಾಡ ಸುಗ್ಗಿ ಕುಣಿತ, ಪೂಜಾ ಕುಣಿತ, ಕರಡಿ ಮಜಲು, ಕೋಲಾಟ, ಗಾರುಡಿ ಗೊಂಬೆ, ಗೊರವರ ಕುಣಿತ, ದಟ್ಟಿ ಕುಣಿತ, ವೀರಮಕ್ಕಳ ಕುಣಿತ... ಹೀಗೆ ಕಲಾತಂಡಗಳು ಒಂದರ ಹಿಂದೆ ಒಂದರಂತೆ ನೆರೆದವರನ್ನು ರಂಜಿಸುತ್ತಾ ಮುನ್ನಡೆದವು.

ಹಗಲುವೇಷದ ಕಲಾವಿದರು ತಮ್ಮ ವೇಷಭೂಷಣದಿಂದ ಮಕ್ಕಳಲ್ಲಿ ಭಯ ಮೂಡಿಸಿದರೆ, ಗೊಂಬೆ ವೇಷಧಾರಿಗಳು ಮತ್ತು ಮರಗಾಲು ಕುಣಿತದವರು ಮಕ್ಕಳ ಮನ ಗೆದ್ದರು. ಕತ್ತಿವರಸೆ, ದೊಣ್ಣೆ ವರಸೆಯವರು ಮೈಜುಮ್ಮೆನ್ನುವ ಕಸರತ್ತು ನೀಡಿದರು.

ಕಲಾವಿದನಿಗೆ ಎದೆನೋವು: ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದನಿಗೆ ಎದೆನೋವು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಅರಮನೆ ಆವರಣದಲ್ಲಿದ್ದಾಗಲೇ ಅಸ್ವಸ್ಥಗೊಂಡ ಅವರನ್ನು ಪೊಲೀಸ್‌ ವಾಹನದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರತಿ ಬಾರಿ ದಸರಾ ಮೆರವಣಿಯಲ್ಲಿ ಸಾಮಾನ್ಯವಾಗಿ 30ರಿಂದ 40 ತಂಡಗಳು ಭಾಗವಹಿಸುತ್ತಿದ್ದವು. ಈ ಬಾರಿ 54 ಕಲಾ ಪ್ರಕಾರಗಳ 1,600 ಕಲಾವಿದರು ಮೆರವಣಿಗೆಯ ಸೊಬಗು ಹೆಚ್ಚಿಸಿದರು. ಈ ಬಾರಿ ಪ್ರತಿ ತಂಡದಲ್ಲಿ ತಲಾ 40 ಕಲಾವಿದರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT