ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೆಲವು ದಿನಗಳ ನಂತರ...' ಒಂದು ಥ್ರಿಲ್ಲರ್ ಸಿನಿಮಾ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇನ್ನು ಕೆಲವು ದಿನಗಳ ನಂತರ ಸಿನಿಮಾ ತೆರೆ ಮೇಲೆ ಹೊಸ ಥ್ರಿಲ್ಲರ್ ಚಿತ್ರವೊಂದು ಕಾಣಿಸಿಕೊಳ್ಳಲಿದೆ. ಆ ಚಿತ್ರದ ಹೆಸರು ‘ಕೆಲವು ದಿನಗಳ ನಂತರ’. ಇದನ್ನು ನಿರ್ದೇಶಿಸಿರುವವರು ಶ್ರೀನಿ. ನಟಿ ಶುಭಾ ಪೂಂಜಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆರಂಭದ ಮಾತು ಸಿನಿಮಾದ ನಾವಿಕ ಅರ್ಥಾತ್ ನಿರ್ದೇಶಕ ಶ್ರೀನಿ ಅವರದ್ದಾಗಿತ್ತು.

‘ಇವತ್ತಿನ ತಲೆಮಾರಿನ ಹುಡುಗರು ಅನುಭವಿಸುತ್ತಿರುವ ಕಷ್ಟಗಳಿಗೆ ಅವರೇ ಮಾಡಿಕೊಂಡಿರುವ ತಪ್ಪುಗಳು ಕಾರಣ ಎನ್ನುವುದನ್ನು ಈ ಸಿನಿಮಾ ಹೇಳುತ್ತದೆ. ಇಂದಿನ ತಲೆಮಾರಿನ ಯುವಕರು ಸೃಷ್ಟಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿನಿಮಾದಲ್ಲಿ ಉಲ್ಲೇಖ ಇದೆ’ ಎಂದರು ಶ್ರೀನಿ.

ಸಿನಿಮಾ ಚಿತ್ರೀಕರಣ ಬೆಂಗಳೂರು, ಚಿಕ್ಕಮಗಳೂರು, ಸಾವನದುರ್ಗದಲ್ಲಿ ನಡೆದಿದೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಕನ್ನಡ ವೀಕ್ಷಕರಿಗೆ ಪರಿಚಿತರಾದ ಲೋಕೇಶ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ನನ್ನದು ಇದರಲ್ಲಿ ಹಾಸ್ಯ ಪಾತ್ರ’ ಎಂದರು ಲೋಕೇಶ್.

ಜಗದೀಶ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಯುವಕರಿಗೆ ಒಂದು ಸಂದೇಶ ನೀಡುವ ಉದ್ದೇಶ ಸಿನಿಮಾಕ್ಕೆ ಇದೆ ಎಂದು ಜಗದೀಶ್ ಹೇಳಿದರು. ಖಡಕ್ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿದ ನಟಿ ಸೋನು ಪಾಟೀಲ್, ‘ಈ ಚಿತ್ರದಲ್ಲಿ ಹೀರೊ, ಹೀರೊಯಿನ್ ಇಲ್ಲ. ಆದರೆ ಪ್ರಮುಖ ಪಾತ್ರಗಳು ಮಾತ್ರವೇ ಇವೆ’ ಎಂದರು.

ಕೊನೆಯಲ್ಲಿ ಮಾತನಾಡಿದ ಶುಭಾ, ಚಿತ್ರೀಕರಣದ ವೇಳೆ ತಂಡಕ್ಕೆ ಆದ ಅನುಭವವೊಂದನ್ನು ಹೇಳಿದರು. ‘ಕಾರನ್ನು ವೇಗವಾಗಿ ಹಿಮ್ಮುಖವಾಗಿ ಚಾಲನೆ ಮಾಡುವ ದೃಶ್ಯವೊಂದರ ಚಿತ್ರೀಕರಣ ದೇವರಾಯನದುರ್ಗದಲ್ಲಿ ನಡೆಯುತ್ತಿತ್ತು. ಚಾಲಕ ಕಾರನ್ನು ಹಿಮ್ಮುಖವಾಗಿ ಚಾಲನೆ ಮಾಡುತ್ತಿದ್ದ. ಆಗ ಹೊರಗಿದ್ದ ಎಲ್ಲರೂ ಕಿರುಚಿಕೊಳ್ಳಲು ಆರಂಭಿಸಿದರು. ಚಾಲಕ ಬ್ರೇಕ್ ಹಾಕಿದ. ಹಿಂದಕ್ಕೆ ನೋಡಿದರೆ ಕಾರು ಬೆಟ್ಟದ ಅಂಚಿನಲ್ಲಿ ಬಂದು ನಿಂತಿತ್ತು. ಬ್ರೇಕ್ ಹಾಕುವುದು ಅರೆಕ್ಷಣ ತಡವಾಗಿದ್ದರೂ ಕಾರಿನಲ್ಲಿದ್ದ ಕಲಾವಿದರು ದುರ್ಘಟನೆಗೆ ತುತ್ತಾಗುತ್ತಿದ್ದರು’ ಎಂದರು ಶುಭಾ.

ಎಚ್.ಪಿ. ಮುತ್ತುರಾಜ್, ಬಿ.ಎಂ. ವಸಂತ್ ಕುಮಾರ್ ಹಾಗೂ ಚಂದ್ರಕುಮಾರ್ ಅವರು ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುರಳೀಧರ್ ಹಾಗೂ ನವೀನ್ ಕುಮಾರ್ ಛಾಯಾಗ್ರಹಣ, ರಾಕಿ ಸೋನು ಸಂಗೀತ ಈ ಚಿತ್ರಕ್ಕಿದೆ. 3ಡಿ ಗ್ರಾಫಿಕ್ಸ್‌ ಮೂಲಕ ಆರು ತಿಂಗಳ ಮಗುವಿನ ಪಾತ್ರವೊಂದನ್ನು ಈ ಸಿನಿಮಾಕ್ಕಾಗಿ ಸೃಷ್ಟಿಸಲಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT