ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾ ಸದನವೆಂಬ ಗಾಂಧಿ ಅಂಗಳ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಕ್ಕಿತಿಮ್ಮನಹಳ್ಳಿ ಸ್ಟೇಡಿಯಂನಿಂದ ಕೂಗಳತೆಯಲ್ಲಿದೆ ಸರ್ದಾ ಸದನ. ಹಿಂದಿನ ಬಿಳಿಯರ ಕಾಲದಲ್ಲಿ ನಿರ್ಮಾಣಗೊಂಡ ರಿಚ್ಮಂಡ್ ಟೌನ್‌ನ ಭಾಗದಲ್ಲಿರುವ ಸರ್ದಾ ಸದನವನ್ನು ಗಾಂಧಿ ಅಂಗಳವೆಂದು ಕರೆದರೆ ಸರಿಯಾದೀತು. ಏಕೆಂದರೆ ಸರ್ದಾ ಕುಟುಂಬದವರು ಆ ಮನೆಯಲ್ಲಿ ವಾಸಿಸುತ್ತಾರೆ. ಆದರೆ ಅಲ್ಲಿರುವುದೆಲ್ಲ ಮಹಾತ್ಮಾ ಗಾಂಧಿ ಅವರಿಗೆ ಸಂಬಂಧಿಸಿದ ವಸ್ತು ವಿಶೇಷಗಳೇ.

ಜನರ ನಾಡಿಮಿಡಿತವನ್ನು ಅರಿತಿದ್ದ ಗಾಂಧೀಜಿ ಅದ್ಭುತ ಸಂವಹನಕಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿರುವಾಗಲೇ ವೃತ್ತಪತ್ರಿಕೆಗಳು ಎಷ್ಟು ಪ್ರಭಾವಶಾಲಿ ಎಂಬುದನ್ನು ಅರಿತುಕೊಂಡಿದ್ದ ಬಾಪೂ ಭಾರತದಲ್ಲಿ ಒಂದಲ್ಲ ಒಂದು ಪತ್ರಿಕೆಗಳನ್ನು ಹೊರಡಿಸುತ್ತಲೇ ಇದ್ದರು.

ಅವುಗಳಲ್ಲಿ ‘ಹರಿಜನ', 'ಯಂಗ್ ಇಂಡಿಯಾ’ ಪತ್ರಿಕೆಗಳು ಮುಖ್ಯವಾದವು. ಅವರು ‍ಪ್ರಕಟಿಸಿದ ಬಹಳಷ್ಟು ಪತ್ರಿಕೆಗಳ ಸಂಪುಟಗಳನ್ನು ಬೆಂಗಳೂರಿನಲ್ಲಿ ನೋಡಬೇಕೆಂದರೆ ಗಾಂಧಿ ಅಂಗಳ ಅರ್ಧಾಥ್ ‘ಸರ್ದಾ ಸದನ’ಕ್ಕೆ ಬರಬೇಕು.

ಸರ್ದಾ ಸದನದ ಮಾಲೀಕ ಜಯಪ್ರಕಾಶ್ ಐವತ್ತರ ಆಸುಪಾಸಿನ ಆಸಾಮಿ. ಸದಾ ಅಡಿಕೆ ಜಗಿಯುತ್ತಲೇ ಕಾಣಿಸಿಕೊಂಡರೂ ಅವರ ಕಣ್ಣುಗಳು ಸದಾ ಗಾಂಧೀಜಿ ಅವರನ್ನು ಅರಸುತ್ತಿರುತ್ತದೆ. ಮೊದ ಮೊದಲಿಗೆ ಗಾಂಧಿ ಇರುವ ಅಂಚೆ ಚೀಟಿಗಳನ್ನು ಸಂಗ್ರಹಿಸಲು ಶುರುವಿಟ್ಟ ಜಯಪ್ರಕಾಶ್ ನಂತರದ ದಿನಗಳಲ್ಲಿ ಗಾಂಧೀಜಿಗೆ ಸಂಬಂಧಿಸಿದ ವಿವಿಧ ಪದಾರ್ಥಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದರು. ಬಾಪು ಇರುವ ಛಾಯಾಚಿತ್ರ, ಕ್ಯಾಲೆಂಡರ್‌ಗಳಿಂದ ಹಿಡಿದು ಅವರ ಬಗ್ಗೆ ಬರೆದ ಕೃತಿಗಳು, ಬಾಪು ಅವರೇ ರಚಿಸಿದ ಪುಸ್ತಕಗಳನ್ನು ಒಟ್ಟು ಮಾಡಿ ತಮ್ಮ ಮನೆಯಲ್ಲಿಟ್ಟುಕೊಂಡರು.

ಶಾಂತಿನಗರದ ಹಾಕಿ ಸ್ಟೇಡಿಯಂ ಹತ್ತಿರದಲ್ಲಿರುವ ಜಯಪ್ರಕಾಶ್ ಅವರ ಮನೆಯ ಕಪಾಟುಗಳ ತುಂಬಾ ಗಾಂಧಿ ಗುರುತಿಸಿರುವ ವಸ್ತುಗಳೇ ತುಂಬಿವೆ. ಗಾಂಧೀಜಿ ಅವರ 280ಕ್ಕೂ ಹೆಚ್ಚು ನೈಜ ಛಾಯಾಚಿತ್ರಗಳನ್ನು ಸಂಗ್ರಹಿಸಿರುವ ಅವರು ಅದಕ್ಕೆ ತೆತ್ತಿರುವ ಮೊತ್ತದ ಗುಟ್ಟು ಬಿಟ್ಟುಕೊಡುವುದಿಲ್ಲ.

ರೇಖಾಚಿತ್ರಗಳು, ಚಿತ್ರಕಲಾಕೃತಿಗಳು, ಗಡಿಯಾರಗಳು, ಬೀಗಗಳು, ಕೈಚೀಲಗಳು, ನಾಣ್ಯಗಳು ಚರಕಗಳು ಹೀಗೆ ಎರಡು ಕೊಠಡಿಗಳ ತುಂಬಾ ಗಾಂಧಿಯನ್ನೇ ಕಾಪಿಟ್ಟಿದ್ದಾರೆ. ಅದರಲ್ಲಿ ಬಾಪೂಜಿ ಬಳಸಿದ ಡೈನಿಂಗ್ ಸೆಟ್ ಕೂಡಾ ಇದೆ.

ಮಹಾತ್ಮರ ಕೃತಿ ಸಂಚಯದ ಸುಮಾರು 1000ಕ್ಕೂ ಅಧಿಕ ಕೃತಿಗಳನ್ನು ಬಾಪು ರಚಿಸಿದ ಆರೋಗ್ಯ, ಪ್ರಕೃತಿ, ನವಜೀವನ ಕೃತಿಗಳು ಜಯಪ್ರಕಾಶ್ ಸಂಗ್ರಹದಲ್ಲಿವೆ. ಇವರಲ್ಲಿರುವ ಗಾಂಧಿ ಗೊಂಬೆಗಳಂತೂ ಒಂದಕ್ಕಿಂತ ಇನ್ನೊಂದು ಚಂದ.

ಇವುಗಳನ್ನು ಲಂಡನ್, ಮುಂಬೈಗಳಲ್ಲಿ ಹರಾಜುಗಳಿಂದ ತಂದಿರುವ ಜಯಪ್ರಕಾಶ್ ಅವರಿಗೆ ಸ್ನೇಹಿತರ ಬೆಂಬಲವೂ ಇದೆ. ಗಾಂಧಿ ವಸ್ತುಗಳು ಎಲ್ಲೇ ಕಂಡು ಬಂದರೂ ಅದನ್ನು ಇವರಿಗಾಗಿ ತೆಗೆದಿರಿಸುತ್ತಾರೆ, ಕೊಂಡು ಕಳಿಸುತ್ತಾರೆ. ಹೀಗಾಗಿ 1920 ರಿಂದ 1940ರ ವರೆಗೆ ಗಾಂಧೀಜಿ ಅವರಿಗೆ ಸೇರಿದ ಹಲವಾರು ವಸ್ತು ವಿಶೇಷಗಳು ಜಯಪ್ರಕಾಶ್ ಮನೆ ಸೇರಿದೆ.

ಬಾಪೂಜಿ ಹತ್ಯೆಕುರಿತು ದೇಶ ವಿದೇಶಗಳ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಪ್ರತಿಗಳನ್ನು ಸಂಗ್ರಹಿಸಿರುವ ಇವರು ಬಾಪೂಜಿ ಹೋರಾಟಗಳನ್ನು ಪೋಷಿಸಿದ ಸಂದರ್ಭಗಳಲ್ಲಿ ಮುದ್ರಣವಾದ ಪತ್ರಿಕೆಗಳನ್ನು ಕಾಯ್ದಿಟ್ಟಿದ್ದಾರೆ. ಇದರ ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸ್ವದೇಶಿ ಆಂದೋಲನ ಮೊದಲಾದ ಮಹತ್ವದ ಸುದ್ಧಿ ಶೀರ್ಷಿಕೆಗಳನ್ನು ಹೊತ್ತು ತಂದ ಪ್ರಮುಖ ಪತ್ರಿಕೆಗಳು ಇವರಲ್ಲಿವೆ.

ತಮ್ಮಲ್ಲಿರುವ ಲೆಕ್ಕವಿಲ್ಲದಷ್ಟು ಗಾಂಧಿ ವಸ್ತು ವಿಶೇಷಗಳನ್ನು ಒಪ್ಪ ಓರಣವಾಗಿ ಜೋಡಿಸಿಡಬೇಕೆಂಬ ಆಸೆ ಉದ್ಯಮಿ ಜಯಪ್ರಕಾಶ್‌ಗೆ ಜಾಗದ ಕೊರತೆ. ಹೀಗಾಗಿ ಸಧ್ಯಕ್ಕೆ ಮಹಾತ್ಮಾ ಗಾಂಧಿ ಅವರಿಗೆ ಸಂಬಂಧಿಸಿದ ಅಮೂಲ್ಯ ವಸ್ತುಗಳೆಲ್ಲ ಇವರ ಮನೆಯಲ್ಲಿ ಭದ್ರವಾಗಿವೆ.

ಸರ್ದಾ ಜಯಪ್ರಕಾಶ್ ಮೊಬೈಲ್ ಸಂಖ್ಯೆ: 9845183005 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT