ನಿಮ್ಹಾನ್ಸ್ ನಲ್ಲಿ ಹಿರಿಯ ನಾಗರಿಕರ ಸಂಪನ್ಮೂಲ ಕೇಂದ್ರ

ಶುಕ್ರವಾರ, ಮೇ 24, 2019
°C

ನಿಮ್ಹಾನ್ಸ್ ನಲ್ಲಿ ಹಿರಿಯ ನಾಗರಿಕರ ಸಂಪನ್ಮೂಲ ಕೇಂದ್ರ

Published:
Updated:
ನಿಮ್ಹಾನ್ಸ್ ನಲ್ಲಿ ಹಿರಿಯ ನಾಗರಿಕರ ಸಂಪನ್ಮೂಲ ಕೇಂದ್ರ

ಬೆಂಗಳೂರು: ‘ಹಿರಿಯ ನಾಗರಿಕರಿಗೆ ಒಂದೇ ಸೂರಿನಡಿ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ(ನಿಮ್ಹಾನ್ಸ್) ಹಿರಿಯ ನಾಗರಿಕರ ಸಂಪನ್ಮೂಲ ಕೇಂದ್ರ ತೆರೆಯಲಾಗುತ್ತಿದೆ’ ಎಂದು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ತಿಳಿಸಿದರು.

ಅಂಗವಿಕರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಇದೇ 4ರಿಂದ ಕೇಂದ್ರ ಆರಂಭವಾಗಲಿದ್ದು, ಹಿರಿಯರ ಮಾನಸಿಕ ತೊಳಲಾಟ, ಆರೋಗ್ಯ ಸಮಸ್ಯೆ, ಕಾನೂನಾತ್ಮಕ ಸಮಸ್ಯೆಗಳಿಗೂ ಈ ಕೇಂದ್ರದಲ್ಲಿ ತಜ್ಞರು ಪರಿಹಾರ ಸೂಚಿಸಲಿದ್ದಾರೆ ಎಂದು ಹೇಳಿದರು.

ವೃದ್ಧಾಶ್ರಮಗಳಿಗೆ ಸರ್ಕಾರ ನೀಡುತ್ತಿದ್ದ ₹ 1.96 ಲಕ್ಷ ಅನುದಾನವನ್ನು ಕಾಂಗ್ರೆಸ್ ಅವಧಿಯಲ್ಲಿ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರು, ಕಲಬುರ್ಗಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ ಹಗಲು ಯೋಗ ಕ್ಷೇಮ ಕೇಂದ್ರಗಳನ್ನು  ತೆರೆಯಲಾಗಿತ್ತು. ಇವುಗಳನ್ನುಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಈ ಕೇಂದ್ರಗಳಿಗೆ ನೀಡುತ್ತಿದ್ದ ಅನುದಾನವನ್ನು ₹ 4.15 ಲಕ್ಷದಿಂದ ₹ 11.20ಕ್ಕೆ ಹೆಚ್ಚಿಸಲಾಗಿದೆ ಎಂದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹಿರಿಯ ನಾಗರಿಕರಿಗೆ ಸ್ಪಂದಿಸಲು ತೆರೆದಿರುವ ಸಹಾಯವಾಣಿ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಜಿಲ್ಲೆಗಳಲ್ಲೂ ತೆರೆಯುವ ಆಲೋಚನೆ ಇದೆ ಎಂದು ಹೇಳಿದರು.

**

ಜನಪ್ರತಿನಿಧಿಗಳು ಗೈರು: ಹಿರಿಯರಿಗೆ ಅಗೌರವ

‘ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಂಡಿರುವ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಹಿರಿಯರಿಗೆ ತೋರುವ ಅಗೌರವ’ ಎಂದು ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ, ಇಬ್ಬರು ಕೇಂದ್ರ ಸಚಿವರು, ರಾಜ್ಯದ 8 ಸಚಿವರು, ರಾಜ್ಯಸಭೆಯ 6 ಸದಸ್ಯರು, ವಿಧಾನಸಭೆಯ 20 ಸದಸ್ಯರು, ವಿಧಾನ ಪರಿಷತ್ತಿನ 18 ಸದಸ್ಯರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಆದರೆ, ಇಬ್ಬರು ಸಚಿವರು ಮಾತ್ರ ಕಾರ್ಯಕ್ರಮದಲ್ಲಿ ಹಾಜರಿದ್ದಾರೆ. ಹಿರಿಯರಿಗೆ ಗೌರವ ಕೊಡುವುದು ಎಂದರೆ ಇದೇನಾ’ ಎಂದು ಪ್ರಶ್ನಿಸಿದರು.

ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿಯನ್ನು 6 ಜನರಿಗೆ ನೀಡಲಾಗಿದೆ. ಸೌಜನ್ಯಕ್ಕೆ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ₹ 1 ಲಕ್ಷ ಮೊತ್ತದ ಪ್ರಶಸ್ತಿ ನೀಡಿದೆ. ತಿಂಗಳಿಗೆ ₹ 50,000 ನಿವೃತ್ತಿ ವೇತನ ಬರುತ್ತಿದೆ. ಅದನ್ನು ಹೇಗೆ ಖರ್ಚು ಮಾಡುವುದು ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಈ ಹಣವನ್ನು ವೃದ್ಧಾಶ್ರಮ ಮತ್ತು ಕನ್ನಡ ಶಾಲೆಗಳಿಗೆ ದೇಣಿಗೆಯಾಗಿ ನೀಡುವುದಾಗಿ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry