ಭಾನುವಾರ, ಸೆಪ್ಟೆಂಬರ್ 22, 2019
22 °C

ಕೈಮಗ್ಗ ಉಳಿವಿಗಾಗಿ ‘ಕೊಡಿಯಾಲ ಗಾಂಧಿ’ಹೋರಾಟ

Published:
Updated:
ಕೈಮಗ್ಗ ಉಳಿವಿಗಾಗಿ ‘ಕೊಡಿಯಾಲ ಗಾಂಧಿ’ಹೋರಾಟ

ಮಂಡ್ಯ: ಖಾದಿ ಹಾಗೂ ಕೈಮಗ್ಗಕ್ಕೆ ಹೆಸರುವಾಸಿಯಾಗಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಈಗ ವಿದ್ಯುತ್‌ ಮಗ್ಗಗಳು ಸದ್ದು ಮಾಡುತ್ತಿವೆ. ಒಂದು ಕಾಲದಲ್ಲಿ ಸಾವಿರಾರು ಕೈಮಗ್ಗಗಳಿದ್ದ ಗ್ರಾಮದಲ್ಲಿ ಇಂದು ಕೇವಲ ಒಂದೇಒಂದು ಕೈಮಗ್ಗ ಜೀವ ಉಳಿಸಿಕೊಂಡಿದೆ. ಪಳಯುಳಿಕೆಯಂತಿರುವ ಕೈಮಗ್ಗವನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿರುವ ಗ್ರಾಮದ ವಿ.ಆರ್‌.ಗೋವಿಂದರಾಜು ‘ಕೊಡಿಯಾಲದ ಗಾಂಧಿ’ಯಂತೆ ಕಾಣುತ್ತಾರೆ.

ಕೊಡಿಯಾಲದಲ್ಲಿ ಉತ್ಪಾದನೆ ಯಾಗುತ್ತಿದ್ದ ಖಾದಿ ವಸ್ತ್ರ ಹಾಗೂ ಸಾಂಪ್ರದಾಯಿಕ ಸೀರೆಗಳನ್ನು ಮೈಸೂರು ದಸರಾ ಜಂಬೂಸವಾರಿಯಲ್ಲಿ ಬಳಸಲಾಗುತ್ತಿತ್ತು. ಮೈಸೂರು ಮಹಾರಾಜರೇ ಖುದ್ದಾಗಿ ಕೊಡಿಯಾಲಕ್ಕೆ ಭೇಟಿ ನೀಡಿ ಕೈಮಗ್ಗದ ಖಾದಿ ವಸ್ತ್ರ, ಸೀರೆ ಕೊಳ್ಳುತ್ತಿದ್ದರು. ಆದರೆ, ಇಂದು ಆಧುನಿಕತೆಯ ಪ್ರಭಾವದಿಂದಾಗಿ ಗ್ರಾಮವನ್ನು ವಿದ್ಯುತ್‌ ಮಗ್ಗಗಳು ಆವರಿಸಿಕೊಂಡಿವೆ. ಗ್ರಾಮದಲ್ಲಿ 600 ವಿದ್ಯುತ್‌ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಖಾದಿ ಕಣ್ಮರೆಯಾಗಿದ್ದರೂ ಇಲ್ಲಿಯ ರೇಷ್ಮೆ ಸೀರೆಗಳು ಇನ್ನೂ ತಮ್ಮ ಛಾಪು ಉಳಿಸಿಕೊಂಡಿವೆ.

ಗ್ರಾಮದಲ್ಲಿ ಪ್ರತಿ ಮನೆಯೂ ರೇಷ್ಮೆ ಸೀರೆಗಳ ಶೋರೂಂ. ಇಲ್ಲಿ ನಿತ್ಯ ₹ 70 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಯುತ್ತದೆ. ಮದುವೆ ಸಮಯದಲ್ಲಿ ವಹಿವಾಟು ಕೋಟಿಗೇರುತ್ತದೆ. ಕೊಡಿಯಾಲ ಸೀರೆ ಕೊಳ್ಳಲು ಹೊರರಾಜ್ಯಗಳಿಂದಲೂ ಗ್ರಾಹಕರು ಬರುತ್ತಾರೆ. ವಿದೇಶದಲ್ಲೂ ಗ್ರಾಹಕರಿದ್ದಾರೆ. ವಿದ್ಯುತ್‌ ಮಗ್ಗಕ್ಕೆ ರೂಪಾಂತರಗೊಂಡಿರುವ ಈ ಐತಿಹಾಸಿಕ ಗ್ರಾಮದಲ್ಲಿ ಅಪರೂಪ ಎಂಬಂತೆ ಗೋವಿಂದರಾಜು ಅವರು ಕೈಮಗ್ಗದಿಂದಲೇ ರೇಷ್ಮೆ ಸೀರೆ ನೇಯುತ್ತ ಮಹಾತ್ಮ ಗಾಂಧೀಜಿಯ ‘ಗ್ರಾಮ ಸ್ವರಾಜ್ಯ’ದ ಕನಸನ್ನು ಇನ್ನೂ ಜೀವಂತವಾಗಿರಿಸಿದ್ದಾರೆ.

ಗೋವಿಂದರಾಜು ಅವರ ಕುಟುಂಬ ಹಲವು ತಲೆಮಾರುಗಳಿಂದಲೂ ಖಾದಿ ನೇಯ್ಗೆಯಲ್ಲೇ ಜೀವನ ಕಟ್ಟಿಕೊಂಡಿದೆ. ಖಾದಿಯ ಜೊತೆಯಲ್ಲೇ ಅವರೂ ಜೀವನ ಆರಂಭಿಸಿದ್ದರು. ಆದರೆ, ಖಾದಿಯಿಂದ ಜೀವನ ನಿರ್ವಹಣೆ ಕಷ್ಟವಾದಾಗ ಸಾಂಪ್ರದಾಯಿಕ ಸೀರೆ ನೇಯುವತ್ತ ಮನಸ್ಸು ಹೊರಳಿಸಿದರು. ಗ್ರಾಮದಲ್ಲಿ ವಿದ್ಯುತ್‌ ಕ್ರಾಂತಿಯುಂಟಾಗಿ 24 ಗಂಟೆಗಳ ಕಾಲ ವಿದ್ಯುತ್‌ ಪಡೆದು ಎಲ್ಲರೂ ವಿದ್ಯುತ್‌ ಮಗ್ಗಗಳಿಗೆ ಪರಿವರ್ತನೆಯಾದಾಗ ಗೋವಿಂದರಾಜು ಮನಸ್ಸು ಬದಲಾಯಿಸದೆ ಕೈಮಗ್ಗದಲ್ಲೇ ಮುಂದುವರಿದರು. ಇಂದು ಗ್ರಾಮದಲ್ಲಿ ಕೈಮಗ್ಗಗಳು ಕಣ್ಮರೆಯಾಗಿವೆ. ಆದರೂ, ಗೋವಿಂದರಾಜು, ಕೈಮಗ್ಗದ ಜೊತೆಯಲ್ಲೇ ಜೀವನ ಮುಂದುವರಿಸಿದ್ದಾರೆ.

ಮೂರು– ನಾಲ್ಕು ದಿನಕ್ಕೆ ಒಂದು ರೇಷ್ಮೆ ಸೀರೆ ನೇಯುವ ಅವರು ಗ್ರಾಮದಲ್ಲಿ ಕೈಮಗ್ಗ ಉಳಿವಿಗಾಗಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಕೊಡಿಯಾಲ ರೇಷ್ಮೆ ಕೈಮಗ್ಗ ಸಂಘ ಸ್ಥಾಪಿಸಿ ಗ್ರಾಮದ ಯುವಕರನ್ನು ಕೈಮಗ್ಗದತ್ತ ಸೆಳೆಯುತ್ತಿದ್ದಾರೆ. ಕೈಮಗ್ಗ ಹಾಗೂ ಜವಳಿ ಇಲಾಖೆ ನೀಡುವ ಸೌಲಭ್ಯಗಳ ಬಗ್ಗೆ ಗ್ರಾಮದ ಯುವಕರಲ್ಲಿ ಅರಿವು ಮೂಡಿಸುತ್ತಿರುವ ಅವರು ಕೈಮಗ್ಗದಿಂದ ನಷ್ಟ ಇಲ್ಲದಂತೆ ವ್ಯವಹಾರ ನಡೆಸಬಹುದು ಎಂದು ತಿಳಿವಳಿಕೆ ಮೂಡಿಸುತ್ತಿದ್ದಾರೆ.

‘ಕೈಮಗ್ಗದಿಂದ ಉತ್ಪಾದನೆ ಕಡಿಮೆ ಇರಬಹುದು, ಆದರೆ, ಕೈಯಿಂದ ಉತ್ಪಾದಿಸಿದ ಸೀರೆಗಳಿಗೆ ಬೇಡಿಕೆ ಜಾಸ್ತಿ ಇದೆ. ನಮ್ಮಷ್ಟು ಸುಂದರ ವಿನ್ಯಾಸದ ಸೀರೆಗಳನ್ನು ವಿದ್ಯುತ್‌ ಮಗ್ಗಗಳಿಂದ ಉತ್ಪಾದಿಸಲು ಸಾಧ್ಯವಿಲ್ಲ. ವಸ್ತ್ರವನ್ನು ಧರಿಸಿದಾಗ ಕೈಮಗ್ಗದ ವಸ್ತ್ರ ನೀಡುವ ಅನುಭವವನ್ನು ವಿದ್ಯುತ್‌ ಮಗ್ಗದ ವಸ್ತ್ರ ನೀಡಲಾರವು. ನಮ್ಮ ಗ್ರಾಮದಲ್ಲಿ ವಿದ್ಯುತ್‌ ಮಗ್ಗಗಳಿಂದ ಹಲವರು ಸಾಲಗಾರರಾಗಿದ್ದಾರೆ. ಅವರೆಲ್ಲರಿಗೂ ಕೈಮಗ್ಗದಲ್ಲಿ ಜೀವನ ಕಟ್ಟಿಕೊಳ್ಳುವಂತೆ ಸಲಹೆ ನೀಡುತ್ತಿದ್ದೇನೆ’ ಎಂದು ಗೋವಿಂದರಾಜು ತಿಳಿಸಿದರು.

ಸಹಕಾರಿ ಸಂಘಕ್ಕಾಗಿ ಪಾದಯಾತ್ರೆ ಇಂದಿರಾಗಾಂಧಿ ಪ್ರಧಾನಮಂತ್ರಿ ಯಾಗಿದ್ದ ಕಾಲದಲ್ಲಿ ನೇಕಾರಿಕೆಗೆ ಪ್ರೋತ್ಸಾಹಿಸುವ ಸಹಕಾರ ಸಂಘ ಸ್ಥಾಪನೆಗಾಗಿ ಕೊಡಿಯಾಲ ಗ್ರಾಮಸ್ಥರು ದೆಹಲಿವರೆಗೆ ಪಾದಯಾತ್ರೆ ನಡೆಸಿದ್ದಾರೆ. ಇದು ಚರಿತ್ರೆಯಲ್ಲಿ ದಾಖಲಾಗಿದ್ದು, ಹೋರಾಟದ ಫಲವಾಗಿ ಗ್ರಾಮದಲ್ಲಿ ಪದ್ಮಶಾಲಿ ನೇಕಾರರ ಮಾರಾಟಮತ್ತು ಉತ್ಪಾದನಾ ಸಹಕಾರ ಸಂಘ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ನಮ್ಮ ಊರಿನಲ್ಲಿ ಸಹಕಾರ ಸಂಘ ಇದ್ದರೂ ಕೈಮಗ್ಗ ಉಳಿಸಲು ಸಾಧ್ಯವಾಗಿಲ್ಲ. ಈಗಲೂ ಸಹಕಾರ ಸಂಘದ ಆವರಣದಲ್ಲಿ 40 ಕೈಮಗ್ಗಗಳು ಬಿದ್ದಿವೆ. ಆದರೆ, ಅವುಗಳು ಜೀವಂತವಾಗಿಲ್ಲ. ಸದ್ಯಕ್ಕೆ ಗೋವಿಂದರಾಜು ಮಾತ್ರ ಕೈಮಗ್ಗವನ್ನು ಉಳಿಸಿಕೊಂಡು ಬಂದಿದ್ದಾರೆ’ ಎಂದು ಗ್ರಾಮದ ಹಿರಿಯರಾದ ಶಿವಣ್ಣ ಹೇಳಿದರು.

Post Comments (+)